ಆಡಿಯೋ ಪ್ರಕರಣ: ನಾಳೆ ಬೆಳಗ್ಗೆ 10:30ಕ್ಕೆ ಸ್ಪೀಕರ್ ಜೊತೆ 3 ಪಕ್ಷಗಳ ನಾಯಕರ ಸಭೆ

ವಿಪಕ್ಷ ನಾಯಕರ ಒತ್ತಾಯದ ಮೇರೆಗೆ ಸ್ಪೀಕರ್ ರಮೇಶ್ ಕುಮಾರ್ ಅವರು ಕಲಾಪ ಆರಂಭಕ್ಕೆ ಮುನ್ನ 3 ಪಕ್ಷಗಳ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.

Vijayasarthy SN | news18
Updated:February 12, 2019, 7:22 PM IST
ಆಡಿಯೋ ಪ್ರಕರಣ: ನಾಳೆ ಬೆಳಗ್ಗೆ 10:30ಕ್ಕೆ ಸ್ಪೀಕರ್ ಜೊತೆ 3 ಪಕ್ಷಗಳ ನಾಯಕರ ಸಭೆ
ರಮೇಶ್ ಕುಮಾರ್
Vijayasarthy SN | news18
Updated: February 12, 2019, 7:22 PM IST
ಬೆಂಗಳೂರು(ಫೆ. 12): ಆಪರೇಷನ್ ಕಮಲದ ಆಡಿಯೋ ಪ್ರಕರಣ ಸಂಬಂಧ ಸ್ಪೀಕರ್ ಅವರು ನಾಳೆ ಮೂರು ಪಕ್ಷಗಳ ಸದನ ನಾಯಕರ ಜೊತೆ ಸಭೆ ನಡೆಸಲಿದ್ದಾರೆ. ಈ ಅನೌಪಚಾರಿಕ ಭೇಟಿಯ ನಂತರ ಸಭಾಧ್ಯಕ್ಷರು ಮುಂದಿನ ನಡೆಯ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಇವತ್ತು ನಡೆದ ಅಧಿವೇಶನ ಕಲಾಪದಲ್ಲಿ ಬಿಜೆಪಿಯ ಕೆಲ ನಾಯಕರು, ಸದನದಲ್ಲಿ ಚರ್ಚೆ ನಡೆಸುವ ಬದಲು ಸ್ಪೀಕರ್ ಕೊಠಡಿಗೆ ಕರೆದು ಮಾತುಕತೆ ನಡೆಸಬಹುದಿತ್ತು ಎಂಬ ಸಲಹೆಗಳನ್ನು ನೀಡಿದ್ದರು. ಕಲಾಪದ ಅಂತ್ಯದಲ್ಲಿ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಈ ಸಲಹೆಯನ್ನು ಸ್ವೀಕರಿಸಿದರು. ಬುಧವಾರ ಬೆಳಗ್ಗೆ 10:30ಕ್ಕೆ, ಅಂದರೆ ಕಲಾಪ ಆರಂಭಕ್ಕೆ ಅರ್ಧ ಗಂಟೆ ಮುಂಚೆ ತಮ್ಮ ಕೊಠಡಿಯಲ್ಲಿ ಸಭೆ ನಡೆಸುತ್ತೇನೆಂದು ಹೇಳಿದರು. ಮೂರು ಪಕ್ಷಗಳಿಂದ ಯಾರ್ಯಾರು ಬರಬೇಕು ಎಂಬುದನ್ನು ತಾವೇ ತೀರ್ಮಾನಿಸಿಕೊಂಡು ಬನ್ನಿ ಎಂದೂ ತ್ರಿಪಕ್ಷಗಳಿಗೆ ತಿಳಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ತಪ್ಪೇನಿದೆ, ಅವರೇ ನಮ್ಮ ನಾಯಕರು ಎಂದ ಕುಮಾರಸ್ವಾಮಿ

ಇದಕ್ಕೆ ಮುನ್ನ, ನಿನ್ನೆಯ ಕಲಾಪದಲ್ಲಾದಂತೆ ಬಿಜೆಪಿಯವರು ಎಸ್​ಐಟಿ ತನಿಖೆಯನ್ನು ಬಲವಾಗಿ ವಿರೋಧಿಸಿದರು. ಆದರೆ, ಮೈತ್ರಿ ಸರಕಾರದ ನಾಯಕರು ಎಸ್​ಐಟಿಯಿಂದಲೇ ತನಿಖೆ ನಡೆಯಬೇಕೆಂದು ಪಟ್ಟು ಹಿಡಿದರು. ಹಾಗೆಯೇ ಕುಮಾರಸ್ವಾಮಿ ಅವರು ಎಸ್​ಐಟಿ ತನಿಖೆಯಲ್ಲಿ ಸರಕಾರದ ಪ್ರಭಾವ ಇರುವುದಿಲ್ಲ. ತಾನೂ ಕೂಡ ತನಿಖೆಗೆ ಒಳಪಡಲು ಸಿದ್ದನಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಇನ್ನು, ಸಿದ್ದರಾಮಯ್ಯ ಅವರು ಈ ಆಡಿಯೋ ಪ್ರಕರಣದ ತನಿಖೆ ನಡೆಯಲೇಬೇಕೆಂದು ವಾದಿಸಿದರು. ಇಷ್ಟೊಂದು ಗಂಭೀರ ಅಪರಾಧವಾಗಿದೆ. ಇದನ್ನು ತನಿಖೆ ನಡೆಸಲೇ ಬೇಕಾಗುತ್ತದೆ. ಮರ್ಡರ್ ಮಾಡಿ ತಪ್ಪೊಪ್ಪಿಕೊಂಡರೆ ಅಪರಾಧಿಯನ್ನು ಸುಮ್ಮನೆ ಬಿಡಲು ಆಗುತ್ತದಾ? ಎಂದು ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ಖಾರವಾಗಿ ಪ್ರಶ್ನಿಸಿದರು. ಹಾಗೆಯೇ, ತನಿಖಾ ಸಂಸ್ಥೆಗಳ ಬಗ್ಗೆ ಯಾರೂ ಸಂಶಯ ಪಡಬಾರದು. ಅವನ್ನು ತಮ್ಮಷ್ಟಕ್ಕೆ ಕೆಲಸ ಮಾಡಲು ಬಿಡಬೇಕು. ಎಸ್​ಐಟಿಯಿಂದ ನ್ಯಾಯ ಸಿಕ್ಕೋದಿಲ್ಲ ಎಂಬ ಮಾತಿನಲ್ಲಿ ಹುರುಳಿಲ್ಲ ಎಂದೂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಕೋಟ್ಯಧಿಪತಿಯಾಗುವ ಆಸೆಯಿಂದ ಶಂಖ-ಜಾಗಟೆ ಕದ್ದ ಮೂಢರು..!

ದೂರು ದಾಖಲಾಗದೆಯೇ ಎಸ್​ಐಟಿ ತನಿಖೆಗೆ ಆದೇಶಿಸುವುದು ಎಷ್ಟು ಸರಿ ಎಂಬುದು ಬಿಜೆಪಿಯವರ ಮತ್ತೊಂದು ಆಕ್ಷೇಪ. ಇದಕ್ಕೆ ಸಮಜಾಯಿಷಿ ನೀಡಿದ ಸಚಿವ ಕೃಷ್ಣ ಬೈರೇಗೌಡ, ಎಸ್​ಐಟಿ ರಚನೆಯಾಗುವಾಗಲೇ ದೂರು ದಾಖಲಿಸಿಕೊಳ್ಳಲಾಗುತ್ತದೆ. ತನಿಖಾಧಿಕಾರಿಗೆ ಸ್ಟೇಷನ್ ಹೌಸ್ ಆಫೀಸರ್​ನ ಅಧಿಕಾರ ಕೊಡಲಾಗುತ್ತದೆ. ಎಸ್​ಐಟಿಯವರು ತನಿಖೆ ನಡೆಸಿ ಚಾರ್ಜ್​ಶೀಟ್ ಸಲ್ಲಿಸುತ್ತಾರೆ. ನ್ಯಾಯಾಲಯ ವಿಚಾರಣೆ ನಡೆಸಿ ತೀರ್ಪು ಕೊಡುತ್ತದೆ. ಇಲ್ಲಿ ಯಾವುದೇ ಪ್ರಭಾವ ಕೆಲಸ ಮಾಡುವುದಿಲ್ಲ. ವ್ಯವಸ್ಥೆಯಲ್ಲಿ ನಂಬಿಕೆ ಇಡಬೇಕು ಎಂದು ಕೃಷ್ಣಬೈರೇಗೌಡರು ಬಿಜೆಪಿಯವರಿಗೆ ತಿಳಿಹೇಳುವ ಪ್ರಯತ್ನ ಮಾಡಿದರು.
Loading...

First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...