ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದರು. ಜೊತೆಗೆ ಹಿಂದೆ ಇದ್ದಂತಹ ಆಡಳಿತದ ವಿರುದ್ದ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದರು.
ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ವಿರೋಧ ಪಕ್ಷವಾದ ಕಾಂಗ್ರೆಸ್ ರಚನಾತ್ಮಕವಾಗಿ ಸಹಕಾರ ನೀಡುತ್ತದೆ, ರಾಜ್ಯದ ಅಭಿವೃದ್ದಿಯ ವಿಚಾರದಲ್ಲಿ ನಿಮ್ಮಪಕ್ಷದಿಂದಲೂ ಸಹಕಾರ ಸಿಗಲಿ ಎಂದು ಕಿವಿಮಾತು ಹೇಳಿದ ಸಿದ್ದರಾಮಯ್ಯ ಅವರು ಕಳೆದೆರಡು ವರ್ಷಗಳಿಂದಲೂ ಒಕ್ಕೂಟ ಸರ್ಕಾರದಿಂದ ರಾಜ್ಯಕ್ಕೆ ನಿರಂತರ ಅನ್ಯಾಯ ಎಸಗುತ್ತಿದೆ, ನಮ್ಮ ಪಾಲಿನ ಜಿಎಎಸ್ಟಿ ಬಾಕಿ, ಅಸಮರ್ಪಕ ನೆರೆ ಪರಿಹಾರ ಸೇರಿದಂತೆ ಯಾವ ರೀತಿಯಿಂದಲೂ ಕರ್ನಾಟಕದ ಪರವಾಗಿ ಕೇಂದ್ರ ಸರ್ಕಾರ ನಿಂತಿಲ್ಲ. ಅಲ್ಲದೇ ಈ ಅನ್ಯಾಯದ ವಿರುದ್ದ ಯಾರೂ ಸೊಲ್ಲೆತ್ತಲೇ ಇಲ್ಲ, ಯಡಿಯೂರಪ್ಪ ಅವರಂತೂ ಕೇಂದ್ರ ಸರ್ಕಾರದ ಅಡಿಯಾಳಿನಂತೆ ಕೆಲಸ ಮಾಡಿದರೇ ಹೊರತು ಮಾತನಾಡುವ ಧೈರ್ಯ ಮಾಡಲಿಲ್ಲ ಎಂದು ಇದೇ ವೇಳೆ ಹಿಂದಿನ ಮುಖ್ಯಮಂತ್ರಿಗಳನ್ನು ಕುಟುಕಿದ್ದಾರೆ.
https://twitter.com/siddaramaiah/status/1420304567061733376
ಅವರಾದರೂ ಅನ್ಯಾಯದ ವಿರುದ್ಧ ಸೊಲ್ಲೆತ್ತುತ್ತಿಲ್ಲ, ನೀವಾದರೂ (ಬಸವರಾಜ ಬೊಮ್ಮಾಯಿ) ಆ ಧೈರ್ಯ ನೀವು ತೋರಿಸುತ್ತೀರಿ ಎಂಬ ನಂಬಿಕೆಯಿದೆ. ಬರಪರಿಹಾರ, ಜಿಎಸ್ಟಿ ಪಾಲು ತೆರಿಗೆ ಹಂಚಿಕೆ, ಕೊರೊನಾ ನೆರವಿನಲ್ಲಿ ಅನ್ಯಾಯವಾಗಿದೆ ಈ ಎಲ್ಲಾ ವಿಷಯಗಳನ್ನು ಕೇಂದ್ರದ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ತಂದು ರಾಜ್ಯಕ್ಕೆ ನ್ಯಾಯ ಒದಗಿಸಿ, ಅನ್ಯಾಯವಾದಾಗ ಸರ್ವಪಕ್ಷ ಸಭೆ ಕರೆಯಿರಿ, ಸರ್ವ ಪಕ್ಷಗಳ ನಿಯೋಗ ರಚಿಸಿರಿ, ಏಕೆಂದರೆ ಈ ನಿಯೋಗದ ಮೂಲಕ ನ್ಯಾಯ ಪಡೆಯುವ ಪರಂಪರೆಯಿದೆ, ಇತ್ತೀಚಿನ ದಿನಗಳಲ್ಲಿ ಸಂಸದೀಯ ಸಂವಾದಗಳೇ ನಿಂತು ಬಿಟ್ಟಿವೆ, ಇದಕ್ಕೆ ನೀವು ಮರುಚಾಲನೆ ನೀಡಿ ಎಂದು ನೂತನ ಸಿಎಂಗೆ ಒಂದಷ್ಟು ಸಲಹೆ ನೀಡಿದ್ದಾರೆ ಮಾಜಿ ಸಿಎಂ.
https://twitter.com/siddaramaiah/status/1420304383485431815
ಮುಖ್ಯಮಂತ್ರಿ ಸ್ಥಾನ ಎನ್ನುವುದು ಯಾವುದೇ ಪಕ್ಷ ನೀಡುವ ಸ್ಥಾನವಲ್ಲ, ಈ ಹುದ್ದೆ ಇಡೀ ರಾಜ್ಯಕ್ಕೆ ಸಂಬಂದಿಸಿದ್ದು, ಇದಕ್ಕೆ ಮೊದಲು ನಾವು ಗೌರವ ಕೊಡಬೇಕು, ಅಲ್ಲದೇ ವಿರೋಧ ಪಕ್ಷವಾಗಿ ನಮ್ಮದು ಸೈದ್ಧಾಂತಿಕ ಸಂಘರ್ಷ ಇದ್ದೇ ಇರುತ್ತದೆ, ಆದರೆ ಅಭಿವೃದ್ಧಿ ವಿಚಾರದಲ್ಲಿ ಸಹಕಾರವಿದೆ. ನಾವೆಲ್ಲ ಒಂದು ತಂಡವಾಗಿ ಕೆಲಸ ಮಾಡಬೇಕಿದೆ ಅನುಭವದಲ್ಲಿ ಹಿರಿಯನಾದ ನನ್ನ ಸಲಹೆಯಿದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: ’’ನಾನು ರಬ್ಬರ್ ಸ್ಟಾಂಪ್ ಅಲ್ಲ ಜನರ ಸ್ಟಾಂಪ್’’; ಅಧಿಕಾರಿಗಳ ಸಭೆಯಲ್ಲಿ ನೂತನ ಸಿಎಂ ಯಾರಿಗೆ ಕೊಟ್ಟರು ಈ ಸಂದೇಶ!?
ಭ್ರಷ್ಟಾಚಾರ ರಹಿತವಾದ ಆಡಳಿತ ಹಾಗೂ ಪಾರದರ್ಶಕತೆ ಪ್ರಜಾಪ್ರಭುತ್ವದ ಆತ್ಮವಾಗಿದೆ. ಈ ಹಿಂದೆ ಇದ್ದಂತಹ ಮುಖ್ಯಮಂತ್ರಿಗಳಿಗೆ ಸಾರ್ವಜನಿಕವಾಗಿ ಹತ್ತಾರು ಪತ್ರ ಬರೆದಿದ್ದೇನೆ. ಆದರೆ ಅವರು ಒಂದಕ್ಕೂ ಉತ್ತರಿಸುವ ಸೌಜನ್ಯ ತೋರಲಿಲ್ಲ, ನಿಮ್ಮ ಮೇಲೆ ನನಗೆ ನಂಬಿಕೆ ಇದ್ದು, ಈಗಲಾದರೂ ಮಾಹಿತಿ ವಿನಿಮಯ ಸುಗಮವಾಗಿರಲಿ ಎಂದು ಮಾಜಿ ಸಿಎಂ ನೂತನ ಸಿಎಂ ಅವರಿಗೆ ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ