ತೆಲುಗಿನಲ್ಲಿ ಹುಟ್ಟಿ ಬೆಳೆದ ಎಸ್ಬಿ ಬಾಲಸುಬ್ರಹ್ಮಣ್ಯಂಗೆ ಕನ್ನಡಿಗರ ಬಗ್ಗೆ ವಿಶೇಷ ಅಭಿಮಾನ, ಗೌರವ . ಇದೇ ಕಾರಣಕ್ಕೆ ಇವರು ವೇದಿಕೆಗಳ ಮೇಲೆ 'ನನಗೆ ಪುನರ್ಜನ್ಮ ಸಿಕ್ಕರೆ, ಕನ್ನಡಿಗನಾಗಿ ಹುಟ್ಟುಬೇಕು' ಎನ್ನುತ್ತಿದ್ದರು. ಆ ಪರಿ ಅಭಿಮಾನ ಅವರಿಗೆ ಕನ್ನಡಿಗರ ಮೇಲಿತ್ತು. ಇದಕ್ಕೆ ಕಾರಣ ಕನ್ನಡಿಗರು ಅವರನ್ನು ಒಪ್ಪಿಕೊಂಡ ಬಗೆ. ಬಾಲಸುಬ್ರಹ್ಮಣ್ಯಂ ತೆಲುಗಿನ ಜೊತೆ ಕನ್ನಡದಲ್ಲಿಯೂ ತಮ್ಮ ಗಾಯನದ ವೃತ್ತಿ ಆರಂಭಿಸಿದರು. ತೆಲುಗಿನಲ್ಲಿ ಮೊದಲ ಬಾರಿಗೆ ಹಾಡಿದ ಬಳಿಕ ಅವರು ಕನ್ನಡದಲ್ಲಿ ಗಾಯನ ಆರಂಭಿಸಿದರು. ಇದಾದ ಎರಡು ವರ್ಷದ ಬಳಿಕ ತಮಿಳು, ಇತರೆ ಭಾಷೆಗಳಲ್ಲಿ ಅವರು ಹಾಡಲು ಶುರುಮಾಡಿದರು. ಕನ್ನಡದಲ್ಲಿ ಹಾಡುವ ಸಂದರ್ಭದಲ್ಲಿ ಅವರಿಗೆ ಕನ್ನಡ ಭಾಷೆ ಒಗ್ಗೆ ಕಿಂಚಿತ್ತು ಜ್ಞಾನವಿರಲಿಲ್ಲ. ಕನ್ನಡ ಪದ ಬಳಕೆ ಪ್ರಯೋಗ ತಿಳಿಯದ ಅವರು ಗಾಯನ ಶುರುಮಾಡಿದರು. ಇದೇ ಅಳಕನ್ನು ಅವರು ಪಿಬಿ ಶ್ರೀನಿವಾಸ್ ಮುಂದೆ ಕೂಡ ತೊಡಿಕೊಂಡಿದ್ದರು. ಸಂಗೀತ ಗಾರುಡಿಗ ಶ್ರೀನಿವಾಸ್ ನಾವು ಹೇಳಿಕೊಡುತ್ತೇವೆ ಎಂಬ ಅಭಯವಿಟ್ಟಿದ್ದರು. ಇದಾದ ಬಳಿಕ ಕನ್ನಡದಲ್ಲಿ ಹೊಸ ಇತಿಹಾಸ ಸೃಷ್ಟಿಸಿದರು ಎಸ್ಪಿಬಿ.
ಪಿಬಿ ಶ್ರೀನಿವಾಸ್ ಸಂಗೀತ ನಿರ್ದೇಶನದಲ್ಲಿ ಮೊದಲ ಬಾರಿಗೆ 1966ರಲ್ಲಿ ನಕ್ಕರೆ ಅದೇ ಸ್ವರ್ಗ ಚಿತ್ರದ ಮೂಲಕ ತಮ್ಮ ಪಯಣವನ್ನು ಕನ್ನಡದಲ್ಲಿ ಆರಂಭಿಸಿದರು. ಕನ್ನಡಿಗರು ಕೂಡ ಅವರನ್ನು ಮೆಚ್ಚಿ ಒಪ್ಪಿಕೊಂಡರು. ಡಾ.ರಾಜ್ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಅನೇಕ ಯುವ ಕಲಾವಿದರಿಗೂ ಹಾಡಿದ ಖ್ಯಾತಿ ಅವರದು. ಅದರಲ್ಲಿಯೂ ವಿಷ್ಣವರ್ಧನ್ ಚಿತ್ರ ಎಂದರೇ ಎಸ್ಪಿಬಿ ದನಿ ಎಂಬುವಷ್ಟರ ಮಟ್ಟಿಗೆ ಅವರ ಛಾಪು ಮೂಡಿತು. . ಕನ್ನಡ ಸ್ಟಾರ್ ನಟ ಇರಲಿ, ಹೊಸಬರಿರಲಿ ಅವರಿಗೆ ಎಸ್ಪಿಬಿ ದನಿಯಾಗುತ್ತಿದ್ದರು.
ತಮ್ಮ ಗಾಯನ ಪಯಣದಲ್ಲಿ ಒಟ್ಟಾರೆಯಾಗಿ 40 ಸಾವಿರ ಹಾಡಿದ್ದು, ಇದರಲ್ಲಿ 19 ಸಾವಿರ ಹಾಡುಗಳನ್ನು ಅವರು ಕನ್ನಡದಲ್ಲಿಯೇ ಹಾಡಿದ್ದಾರೆ. ಅಷ್ಟೇ ಅಲ್ಲದೇ ಅವರನ್ನು ಕನ್ನಡಿಗರೇ ಎನ್ನುವಷ್ಟರ ಮಟ್ಟಿಗೆ ಕರ್ನಾಟಕದ ಜನತೆ ಕಂಡಿದೆ. ಎಸ್ಪಿಗೆ ಕನ್ನಡಿಗರ ಮೇಲಿ ಅಭಿಮಾನ ಹೆಚ್ಚಲು ಕೂಡ ಇದೇ ಕಾರಣ.
'ಈ ಮಟ್ಟಿಗೆ ಕನ್ನಡಿಗರು ನನಗೆ ಅಭಿಮಾನ ತೋರುವುದು ನನಗೆ ಪುಣ್ಯ. ಕನ್ನಡ ಬಾರದ ನನಗೆ ಅವಕಾಶಗಳನ್ನು ನೀಡಿ ಬೆಳೆಸಿದವರು. ಆಂಧ್ರದಲ್ಲಿ ಹುಟ್ಟಿದರೂ ನಾನು ಕನ್ನಡಿಗ. ಕನ್ನಡಿಗರ ಈ ಅಭಿಮಾನ ತೀರಿಸಲು ಮುಂದಿನ ಜನ್ಮದಲ್ಲಿ ನಾನು ಕನ್ನಡಿಗನಾಗೆ ಹುಟ್ಟುಬೇಕು' ಎಂದವರು ಎಸ್ಪಿಬಿ.
ಸಾಯಿ ಕುಮಾರ್ ಮಗಳ ಮದುವೆಯಲ್ಲಿ ಕನ್ನಡ ಗಾಯನ
ನಟ ಸಾಯಿಕುಮಾರ್ ಕೂಡ ತೆಲುಗಿನವರಾದರು ಕನ್ನಡದಲ್ಲಿ ಹಿಟ್ ಆದ ನಟ. ಅವರ ಮಗಳ ಮದುವೆ ಆಂಧ್ರದಲ್ಲಿ ಅದ್ದೂರಿಯಾಗಿ ನಡೆಯುತಿತ್ತು. ಈ ವೇಳೆ ವಧು ವರರ ಆಶೀರ್ವಾದ ಮಾಡಲು ಹೋಗಿದ್ದ ಎಸ್ಪಿಬಿ, ಹಲವು ವರ್ಷಗಳ ಬಳಿಕ ವೇದಿಕೆ ಹತ್ತಿ ನೆರದ ಪ್ರೇಕ್ಷಕರೆದುರು ಹಾಡಿದ್ದರು.
ವಿಶೇಷವೆಂದರೆ ಅವರು, 'ಇದೇ ನಾಡು, ಇದೇ ನುಡಿಯು ಎಂದೆಂದಿಗೂ ನನ್ನದಾಗಿರಲಿ' ಹಾಡನ್ನು ಕನ್ನಡದಲ್ಲಿ ಹಾಡಿದರು. ಈ ವೇಳೆ ಹಾಡುತ್ತಿದ್ದ ಸಹ ಗಾಯಕರು ತೆಲುಗಿನಲ್ಲಿ ಹಾಡಿದರೂ ಎಸ್ಪಿಬಿ ಮಾತ್ರ ಕನ್ನಡದಲ್ಲಿ ಹಾಡುವ ಮೂಲಕ ತಮ್ಮ ಅಭಿಮಾನ ತೋರಿದ್ದರು. ಇದು ಅವರಿಗೆ ಇದ್ದ ಕನ್ನಡ ಅಭಿಮಾನದ ಬಗ್ಗೆ ಇದ್ದ ಗೌರವ ತೋರಿಸುತ್ತಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ