ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಗವಿಸಿದ್ದೇಶ್ವರ ಜಾತ್ರೆಗೆ ಚಾಲನೆ; ಸಾಗರದಂತೆ ಸೇರಿದ ಜನಸ್ತೋಮ

ಕೊಪ್ಪಳದ ಅಜ್ಜನ ಜಾತ್ರೆ ಇದೇ ಮೊದಲ ಬಾರಿಗೆ ಬೆಳಗಿನ 8 ಗಂಟೆಗೆ ರಥೋತ್ಸವ ನಡೆಸುವ ಮೂಲಕ ವಿಶಿಷ್ಟ ದಾಖಲೆ ಸೃಷ್ಟಿಯಾಯಿತು. ರಥೋತ್ಸವದ ಸಮಯವನ್ನು ಹಿಂದಿನ ರಾತ್ರಿ ತಿಳಿಸಿದರೂ ಲಕ್ಷಾಂತರ ಜನ ಭಕ್ತರು ಜಮಾಯಿಸಿದ್ದರು

ಗವಿಸಿದ್ದೇಶ್ವರ ಜಾತ್ರೆ

ಗವಿಸಿದ್ದೇಶ್ವರ ಜಾತ್ರೆ

  • Share this:
ಕೊಪ್ಪಳ(ಜ.30): ಕೊರೋನಾ ಇರುವ ಕಾರಣ ಈ ವರ್ಷ ಅಜ್ಜನ ಜಾತ್ರೆ ನಡೆಯುತ್ತದೆಯೋ ಇಲ್ಲವೋ ಎನ್ನುವ ಬಗ್ಗೆ ಬಹಳಷ್ಟು ಚರ್ಚೆಯಾಗಿತ್ತು. ಭಕ್ತರ ಆರೋಗ್ಯಕ್ಕಿಂತ ದೊಡ್ಡ ಜಾತ್ರೆ ಬೇರೊಂದಿಲ್ಲ. ಆದ್ದರಿಂದ ಈ ವರ್ಷದ ಜಾತ್ರೆ ಸರಳ ಜಾತ್ರೆ ಸಮಾಜಮುಖಿ ಸೇವೆಗೆ ಅರ್ಪಣೆಯಾಗಿದೆ ಎಂದು ಕೊಪ್ಪಳದ ಶ್ರೀ ಸಂಸ್ಥಾನ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ನುಡಿದರು.

ನಗರದ ಗವಿಮಠ ಆವರಣದಲ್ಲಿ ಶನಿವಾರ ಈ ವರ್ಷದ ಅಜ್ಜನ ಜಾತ್ರೆ ರಥೋತ್ಸವ ಸಂಪನ್ನಗೊಂಡ ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ನನ್ನ ಮನಸಿನಲ್ಲಿ ಏನಿದೆ ಎಂದರೆ ಜಾತ್ರೆ ನಡೆಸುತ್ತೇನೆ ಎನ್ನುವವ ನಾನಲ್ಲ, ನಡೆಸುವುದಿಲ್ಲ ಎನ್ನುವವ ನಾನಲ್ಲ. ಯಾಕಂದ್ರೆ ಇದು ಭಕ್ತರ ಭಕ್ತಿಯ ಶಕ್ತಿ ಹಾಗೂ ದೈವೀಶಕ್ತಿಯ ಸಂಗಮ. ಗವಿಸಿದ್ಧನ ಪ್ರೇರಣೆ ಏನಿರುತ್ತೋ ಅದೇ ಆಗುತ್ತದೆ ಎಂದರು.

ಈ ಎರಡು ಶಕ್ತಿಗಳನ್ನು ಮೀರಿ ನಡೆಸುತ್ತೇನೆ ಅಥವಾ ಜಾತ್ರೆ ನಡೆಸುವುದಿಲ್ಲ ಎನ್ನಲು ನಾನ್ಯಾರು. ಹಾಗೆಂದರೆ ಅದು ಅಹಂಕಾರದ ಮಾತಾದೀತು. ನಾನು ನಿಮ್ಮಂತೆ ಭಕ್ತನಾಗಿ ಜಾತ್ರೆಯನ್ನು ನೋಡುತ್ತೇನೆಯೇ ಹೊರತು ಸನ್ಯಾಸಿಯಾಗಿ ಜಾತ್ರೆ ಮಾಡುವವನಲ್ಲ. ಪ್ರತಿ ವರ್ಷದ ಸಮಾಜಮುಖಿ ಜಾತ್ರೆ ನೋಡಲು ಭಕ್ತರೆಲ್ಲ ಗವಿಸಿದ್ಧನ ಸನ್ನಿಧಾನಕ್ಕೆ ಬರುತ್ತಿದ್ದರು. ಈ ವರ್ಷ ಭಕ್ತರ ಮನೆಮನೆಗೆ ಗವಿಸಿದ್ಧನೇ ಹೋಗಿದ್ದಾನೆ ಎಂದು ಹೇಳಿದರು.

ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಗವಿಸಿದ್ದೇಶ್ವರ ಜಾತ್ರೆಗೆ ಚಾಲನೆ; ಸಾಗರದಂತೆ ಸೇರಿದ ಜನಸ್ತೋಮ

ಸಮಾಜಮುಖಿ ಕಾರ್ಯ ಪ್ರತಿ ವರ್ಷದಂತೆ ಈ ವರ್ಷವೂ ನಡೆಯುತ್ತಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಆಕಾಂಕ್ಷಿಗಳಿಗೆ ಅನುಕೂಲವಾಗಲಿ ಎನ್ನುವ ಸದುದ್ದೇಶದಿಂದ ಡಿಜಿಟಲ್ ಗ್ರಂಥಾಲಯ ಉದ್ಘಾಟನೆಗೊಳ್ಳಲಿದೆ. ಇದು ದಿನದ 24 ಗಂಟೆಯೂ ತೆರೆದಿರುತ್ತದೆ. ಜ್ಞಾನದ ಹರಿವಿಗೆ, ಹಸಿವಿಗೆ ಬಾಗಿಲು ಬಂದ್ ಆಗಿರಬಾರದು. ಹಾಗೆಯೇ ಫೆಬ್ರವರಿಯಲ್ಲಿ ಕುಕನೂರು ತಾಲೂಕಿನ ಕಟ್ಟ ಕಡೆಯ ಹಳ್ಳಿ ಅಡವಿ ಹಳ್ಳಿಯನ್ನು ದತ್ತು ತೆಗೆದುಕೊಂಡಿದ್ದು, ಸ್ಮಾರ್ಟ್ ಸಿಟಿಯಂತೆ, ಸ್ಮಾರ್ಟ್ ವಿಲೇಜ್ ಮಾಡುವ ಪರಿಕಲ್ಪನೆ ಸಾಕಾರಗೊಳ್ಳಲಿದೆ. ನಗರಗಳಂತೆ ಹಳ್ಳಿಗಳು ಅಭಿವೃದ್ಧಿಯಾದರೆ ಭಾರತ ಪ್ರಕಾಶಿಸುತ್ತದೆ. ಜೊತೆಗೆ ಈಗಾಗಲೇ ಕೆರೆಗಳ ಜೀರ್ಣೋದ್ಧಾರದ ಕೆಲಸ ಎರಡು ವರ್ಷಗಳ ಹಿಂದೆ ಆರಂಭಗೊಂಡಿದ್ದು, ಈ ವರ್ಷ ಸುಮಾರು 300 ಎಕರೆ ವಿಸ್ತಾರದ ಗಿಣಗೇರಾ ಕೆರೆಯನ್ನು ಸಂವರ್ಧನಗೊಳಿಸುವ ಸಂಕಲ್ಪ ಮಾಡಲಾಗಿದೆ ಎಂದು ಭಕ್ತಗಣಕ್ಕೆ ತಿಳಿಸಿದರು.

ಈ ಸಲ ಜಾತ್ರೆಗೆ ಬರಬೇಡಿ ಎಂದರೂ ಇಷ್ಟೊಂದು ಸಂಖ್ಯೆಯಲ್ಲಿ ಬಂದಿದ್ದೀರಿ. ಇನ್ನು ಬನ್ನಿ ಎಂದಿದ್ದರೆ ಇನ್ನೂ ಎಷ್ಟು ಮಂದಿ ಸೇರುತ್ತಿದ್ದಿರೋ ಎಂದು ಅಚ್ಚರಿ ವ್ಯಕ್ತಪಡಿಸಿದ ಶ್ರೀಗಳು, ನಿಮ್ಮ ಭಕ್ತಿ, ಪ್ರೀತಿ ಸದಾ ಹೀಗೆ ಇರಲಿ, ಗವಿಸಿದ್ಧೇಶನ ಆಶೀರ್ವಾದ ನಿಮ್ಮೆಲ್ಲರ ಮೇಲಿರಲಿ. ಪರಿಸರ ಸ್ನೇಹಿ ಜಾತ್ರೆ ಜೊತೆಗೆ ಪರಿಸ್ಥಿತಿ ಸ್ನೇಹಿ ಜಾತ್ರೆಯೂ ನಡೆದಿದ್ದು ಅರ್ಥಪೂರ್ಣವಾಗಿ ನೆರವೇರಿದೆ. ಮುಂದಿನ ವರ್ಷ ಈ ವರ್ಷದ ಎರಡು ಪಟ್ಟು ಅದ್ಧೂರಿಯಾಗಿ ಜಾತ್ರೆ ನೆರವೇರುತ್ತದೆ ಎಂದು ಶ್ರೀಗಳು ನುಡಿದರು.

ವಿರಳ ರಥೋತ್ಸವ:

ಕೊಪ್ಪಳದ ಅಜ್ಜನ ಜಾತ್ರೆ ಇದೇ ಮೊದಲ ಬಾರಿಗೆ ಬೆಳಗಿನ 8 ಗಂಟೆಗೆ ರಥೋತ್ಸವ ನಡೆಸುವ ಮೂಲಕ ವಿಶಿಷ್ಟ ದಾಖಲೆ ಸೃಷ್ಟಿಯಾಯಿತು. ರಥೋತ್ಸವದ ಸಮಯವನ್ನು ಹಿಂದಿನ ರಾತ್ರಿ ತಿಳಿಸಿದರೂ ಲಕ್ಷಾಂತರ ಜನ ಭಕ್ತರು ಜಮಾಯಿಸಿದ್ದರು. ಆದರೂ ರಥೋತ್ಸವದ ಜಾಗಕ್ಕೆ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಸರಳ, ಅರ್ಥಪೂರ್ಣ ಹಾಗೂ ಸಮಾಜಮುಖಿ ಸೇವೆಗೆ ಈ ವರ್ಷದ ವಿಭಿನ್ನ, ವಿಶಿಷ್ಟ ಜಾತ್ರೆ ಸಾಕ್ಷಿಯಾಯಿತು.
Published by:Latha CG
First published: