ಬೆಂಗಳೂರು (ಮಾ. 12): ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ವಹಿಸಿ ಕಳೆದ ಎರಡು ದಿನಗಳ ಹಿಂದೆ ಆದೇಶ ಹೊರಡಿಸಿತ್ತು. ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೆಂದು ಮುಖರ್ಜಿ ನೇತೃತ್ವದಲ್ಲಿ ಎಸ್ಐಟಿ ತನಿಖೆ ರಚಿಸಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಯಿ ತಿಳಿಸಿದ್ದರು. ಈ ಎಸ್ಐಟಿ ತಂಡದಲ್ಲಿ ಯಾವೆಲ್ಲ ಅಧಿಕಾರಿಗಳು ಇರಲಿದ್ದಾರೆ. ಈ ಸಿಡಿ ತನಿಖೆ ಯಾವ ರೀತಿ ನಡೆಸಬೇಕು ಎಂಬ ಕುರಿತು ಇಂದು ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಇಂದು ಚರ್ಚೆ ನಡೆಸಿದರು. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ,ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದು, ಏಳು ಜನರ ತಂಡವನ್ನು ಒಳಗೊಂಡ ಪಟ್ಟಿಯೊಂದನ್ನು ಸಿದ್ಧಪಡಿಸಿದ್ದಾರೆ.
ಅಧಿಕಾರಿ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಸಂದೀಪ್ ಪಾಟೀಲ್ (ಜಂಟಿ ಪೊಲೀಸ್ ಆಯುಕ್ತ), ರವಿಕುಮಾರ್(ಡಿಸಿಪಿ), ಅನುಚೇತ್ ( ಡಿಸಿಪಿ), ಎಸಿಪಿ ಧರ್ಮೇದ್ರ ಕುಮಾರ್, ಕಬ್ಬನ್ ಪಾರ್ಕ್ ಠಾಣೆ ಇನ್ಸ್ಪೆಕ್ಟರ್ ಮಾರುತಿ, ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು ಒಳಗೊಂಡ ತಂಡ ರಚನೆ ಮಾಡಲಾಗಿದೆ. ತನಿಖೆಗೆ ಹೆಚ್ಚಿನ ಸಿಬ್ಬಂದಿ ಬೇಕಾದ್ರೆ ಬಳಸಿಕೊಳ್ಳಲು ನಿರ್ಧಾರ ಮಾಡಲಾಗಿದೆ.
ಪ್ರಕರಣದ ಕುರಿತು ಕಾನೂನಿನ ಚೌಕಟ್ಟಿನಲ್ಲಿ ಎಸ್ಐಟಿ ಪ್ರಾಥಮಿಕವಾಗಿ ತನಿಖೆ ನಡೆಸಿದ ಬಳಿಕ ಕಮಿಷನರ್ಗೆ ವರದಿ ಸಲ್ಲಿಸಲಿದೆ. ಈ ತಂಡ ಯಾವ ರೀತಿಯ ತನಿಖೆ ಎಂದು ಸದ್ಯಕ್ಕೆ ಚರ್ಚೆ ನಡೆಸಲ್ಲ. ಆದರೆ ತಂಡದಲ್ಲಿರುವ ಅಧಿಕಾರಿಗಳು ತನಿಖೆಗೆ ಸೂಕ್ತರಾಗಿದ್ದು, ಈ ಹಿಂದೆ ಒಳ್ಳೆಯ ಕೇಸ್ಗಳ ತನಿಖೆ ನಡೆಸಿದ್ದಾರೆ ಎಂದು ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ದಿನೇಶ್ ಕಲ್ಲಹಳ್ಳಿಗೆ ವಿಚಾರಣೆಗೆ ನೊಟೀಸ್ ಸಾಧ್ಯತೆ
ರಮೇಶ್ ಜಾರಕಿಹೊಳಿ ಕೆಲಸ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಕಬ್ಬನ್ ಪಾರ್ಕ್ ಠಾಣೆಯಲ್ಲಿ ನೊಂದ ಯುವತಿ ಪರವಾಗಿ ದಿನೇಶ್ ಕಲ್ಲಹಳ್ಳಿ ದೂರು ದಾಖಲಿಸಿದ್ದರು. ಬಳಿಕ ದೂರು ಅರ್ಜಿಯನ್ನು ಅವರೇ ವಾಪಸ್ ಪಡೆದಿದ್ದರು. ಇನ್ನೂ ಕೂಡ ಜಾರಕಿಹೊಳಿ ಸಿಡಿ ಸಂಬಂಧ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಈ ಹಿನ್ನಲೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿಗೆ ಎಸ್ಐಟಿ ನೊಟೀಸ್ ನೀಡುವ ಸಾಧ್ಯತೆ ಇದೆ. ಈ ವೇಳೆ ದಿನೇಶ್ ಕಲ್ಲಹಳ್ಳಿ ಬಳಿ ಇರುವ ಅಸಲಿ ವಿಡಿಯೋದ ಬಗ್ಗೆ ವಿಚಾರಣೆ ನಡೆಸುವ ಸಾಧ್ಯತೆ ಇದೆ. ದೂರಿನ ವೇಳೆ ದಿನೇಶ್ ಕಲ್ಲಹಳ್ಳಿ ಎಡಿಟೆಡ್ ವಿಡಿಯೋವನ್ನು ನೀಡಿದ್ದರು. ಅಲ್ಲದೇ, ಸಂತ್ರಸ್ತೆ ಯುವತಿ ಬಗ್ಗೆ ಕೂಡ ಇದುವರೆಗೂ ಅವರು ತಿಳಿಸಿಲ್ಲ. ಈ ಹಿನ್ನಲೆ ದಿನೇಶ್ ಕಲ್ಲಹಳ್ಳಿ ವಿಚಾರಣೆ ನಡೆಸಲಿದ್ದಾರೆ.
ರಮೇಶ್ ಜಾರಕಿಹೊಳಿ ಅವರಿಂದಲೂ ದೂರು ಸಾಧ್ಯತೆ
ದಿನೇಶ್ ಕಲ್ಲಹಳ್ಳಿ ಆರೋಪಕ್ಕೆ ಪ್ರತಿಯಾಗಿ ರಮೇಶ್ ಜಾರಕಿಹೊಳಿ ಇದುವರೆಗೂ ಯಾವುದೇ ದೂರು ದಾಖಲಿಸಿಲ್ಲ. ಅಲ್ಲದೇ ಪ್ರಕರಣದ ಕುರಿತು ಸದ್ಯ ಯಾವುದೇ ಎಫ್ಐಆರ್ ದಾಖಲಾಗದ ಹಿನ್ನಲೆ ರಮೇಶ್ ಜಾರಕಿಹೊಳಿ ಅವರಿಂದ ಕೂಡ ದೂರು ದಾಖಲಿಸುವಂತೆ ಸೂಚನೆ ನೀಡುವ ಸಾಧ್ಯತೆ ಇದೆ.
(ಮಾಹಿತಿ: ಗಂಗಾಧರ್) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ