ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ (Sonia Gandhi) ಅಬ್ಬರಿಸಿದರು. ಹುಬ್ಬಳ್ಳಿಯ ಸೆಟಲ್ಮೆಂಟ್ ಪ್ರದೇಶದ ಹಾಕಿ ಮೈದಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ರಾಹುಲ್ ಗಾಂಧಿ (Rahul Gandhi), ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ (KC Venugopal) ಸೇರಿ ಅನೇಕ ನಾಯಕರು ಉಪಸ್ಥಿತರಿದ್ದರು. ಅಭ್ಯರ್ಥಿಗಳಾದ ಜಗದೀಶ್ ಶೆಟ್ಟರ್, ಪ್ರಸಾದ್ ಅಬ್ಬಯ್ಯ, ಎನ್.ಎಚ್.ಕೋನರೆಡ್ಡಿ, ದೀಪಕ್ ಚಿಂಚೋರೆ ಪರ ಸೋನಿಯಾ ಪ್ರಚಾರ ಕೈಗೊಂಡರು.
ಈ ವೇಳೆ ಮಾತನಾಡಿದ ಸೋನಿಯಾ ಗಾಂಧಿ, ಡಕಾಯಿತ ಕೆಲಸವೇ ಬಿಜೆಪಿಯ ದಂಧೆಯಾಗಿದೆ. 40 ಪರ್ಸೆಂಟ್ ಸರ್ಕಾರ ಲೂಟಿಗೆ ಇಳಿದಿದೆ. ಸಂವಿಧಾನಿಕ ಸಂಸ್ಥೆಗಳನ್ನು ತಮ್ಮ ಜೇಬಿನಲ್ಲಿಟ್ಟುಕೊಂಡಿದ್ದಾರೆ. ಈ ರೀತಿಯ ಸ್ಥಿತಿಯನ್ನು ಎಂದದ್ರೂ ನೋಡಿದ್ರಾ ಎಂದು ಪ್ರಶ್ನಿಸಿದರು.
ಕರ್ನಾಟಕದ ಜನ ಹೆದರುಪುಕ್ಕಲರಲ್ಲ
ಪ್ರಜಾಪ್ರಭುತ್ವ ವ್ಯವಸ್ಥೆ ಹೀಗೆ ನಡೆಯಲು ಸಾಧ್ಯವೇ? ಕರ್ನಾಟಕದ ಆಶೀರ್ವಾದ ಸಿಗಲಿಲ್ಲವೆಂದರೆ ತೊಂದರೆ ಆಗುತ್ತೆ ಅಂತ ಮೋದಿ ಧಮ್ಕಿ ಹಾಕ್ತಾರೆ. ಆದ್ರೆ ಕರ್ನಾಟಕದ ಜನ ಹೆದರುಪುಕ್ಕಲರಲ್ಲ. ಕರ್ನಾಟಕದ ಜನ ತಮ್ಮ ಅಸ್ಮಿತೆ ಬಿಟ್ಟುಕೊಡಲ್ಲ. ನಂದಿನಿಯಂತಹ ಸಂಸ್ಥೆಗಳನ್ನು ಮುಚ್ಚುವ ಷಡ್ಯಂತ್ರ ನಡೆದಿದೆ ಎಂದು ವಾಗ್ದಾಳಿ ನಡೆಸಿದರು.
ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದ ಸ್ಥಿತಿಯನ್ನು ಯಾವ ಮಟ್ಟಕ್ಕೆ ತಂದಿದ್ದಾರೆ ಎಂದು ನಿಮಗೆ ಗೊತ್ತಿದೆ. ಸಾಮಾಜಿಕ ನ್ಯಾಯಕ್ಕಾಗಿ ನೀವು ಕಾಂಗ್ರೆಸ್ನ್ನು ಭರವಸೆ ಮಾಡಿ. ರಾಜಸ್ತಾನ, ಛತ್ತೀಸ್ಗಢ, ಹಿಮಾಚಲದಲ್ಲಿ ಕಾಂಗ್ರೆಸ್ ತನ್ನ ಭರವಸೆ ಈಡೇರಿಸ್ತಿದೆ. ಕರ್ನಾಟಕದಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಿಮ್ಮ ವಿಶ್ವಾಸ ಉಳಿಸಿಕೊಳ್ಳುತ್ತೆ. ಎಲ್ಲಾ ಭರವಸೆ ಈಡೇರಿಸ್ತೇವೆ. ಬಿಜೆಪಿಯ ಲೂಟಿಯಿಂದ ಬಚಾವ್ ಮಾಡಲು ಕಾಂಗ್ರೆಸ್ ಬೆಂಬಲಿಸಿ. ಪ್ರಗತಿ ಪೂರಕವಾದ ಸರ್ಕಾರ ರಚಿಸಿ, ನಿಮ್ಮ ಭವಿಷ್ಯ ಉಜ್ವಲಗೊಳಿಸಿಕೊಳ್ಳಿ ಎಂದು ಸೋನಿಯಾ ಗಾಂಧಿ ಕರೆ ನೀಡಿದರು.
ಜೈ ಭಜರಂಗ ಬಲಿ ಎಂದ ಖರ್ಗೆ
ನಂತರ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜೈ ಭಜರಂಗ ಬಲಿ, ತೋಡ್ ದೊ ಭ್ರಷ್ಟಾಚಾರ್ ಕಿ ನಲಿ ಎಂದರು. ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ. ಇಡೀ ದೇಶದಲ್ಲಿ ನಾವು ಒಗ್ಗಟ್ಟಾಗಬೇಕಿದೆ. ಜೈ ಭಜರಂಗ ಬಲಿ, ತೋಡ್ ದೋ ಭ್ರಷ್ಟಾಚಾರಕಿ ನಲಿ(ಭ್ರಷ್ಟಾಚಾರದ ಮೂಳೆ ಮುರಿ). ಇದು ನಮ್ಮ ಧ್ಯೇಯ ವಾಕ್ಯ ಎಂದು ಗುಡುಗಿದರು.
ಭ್ರಷ್ಟಾಚಾರ ಮಿತಿಮೀರಿದೆ. 40 ಪರ್ಸೆಂಟ್ ಭ್ರಷ್ಟಾಚಾರ ರಾಜ್ಯದಲ್ಲಿ ನಡೆದಿದೆ. ನಾ ಖಾವೂಂಗ, ನಾ ಖಾನೇ ದೋಂಗಾ ಅಂತಾರೆ. ಆದರೆ ಭ್ರಷ್ಟಾಚಾರ ನಡೆದಾಗ ಕಣ್ಣುಮುಚ್ಚಿ ಕೂಡ್ತಾರೆ ಎಂದು ಮೋದಿ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದರು.
ಕೆಟ್ಟ ಸರ್ಕಾರವನ್ನು ಕಿತ್ತೊಗೆಯಬೇಕು
ದೇಶದಲ್ಲಿ ನಿರುದ್ಯೋಗ ತೀವ್ರಗೊಂಡಿವೆ. ರೈತರ ಆದಾಯ ದ್ವಿಗುಣ ಮಾಡ್ತೇವೆ ಅಂದರು. ಹೇಳಿದ್ದನ್ನು ಯಾವುದನ್ನೂ ಮಾಡಿಲ್ಲ. ಒಬ್ಬ ಸುಳ್ಳು ಸರ್ಕಾರವನ್ನು ಬೆಂಬಲಿಸ್ತೀರಾ? ಸತ್ಯ ಹೇಳುವವರನ್ನು ಬೆಂಬಲಿಸ್ತೀರಾ? ಕೆಟ್ಟ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು.
ಮತದಾನದ ದಿನ ನಿದ್ರೆಗೆ ಹೋಗಬೇಡಿ
ಈ ಸರ್ಕಾರ ಮೇ10 ರಂದು ಮನೆಗೆ ಹೋಗುತ್ತದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ. ನಾವು ಐದು ವಚನಗಳನ್ನು ಕೊಟ್ಟಿದ್ದೇವೆ. ಅದನ್ನು ಜಾರಿಗೆ ತಂದೇ ತರ್ತೇವೆ. ಕಾಂಗ್ರೆಸ್ ನವರು ಎಂದೂ ವಚನ ಭ್ರಷ್ಟರಾಗಿಲ್ಲ. ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ನೀವು ಸಹಕರಿಸಿ. ದಿನಾ ಜೈಕಾರ ಹೊಡೆದು ಮತದಾನದ ದಿನ ನಿದ್ರೆಗೆ ಹೋಗಬೇಡಿ. ಪ್ರೀತಿ ನಮ್ಮ ಮೇಲೆ, ಇನ್ನೊಬ್ಬರ ಜೊತೆ ಲಗ್ನ ಅನ್ನುವಂತಾಗಬಾರದು. ಯಾರನ್ನು ಪ್ರೀತಿಸ್ತಿರೊ ಅವರಿಗೆ ಮೊದಲು ಮತ ಹಾಕಿ ಎಂದು ಖರ್ಗೆ ಕರೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ