ಪಬ್​ ಜಿ ಆಡಬೇಡ ಎಂದದ್ದಕ್ಕೆ ತಂದೆಯನ್ನೇ ಭೀಕರವಾಗಿ ಕೊಲೆಗೈದ ಮಗ; ಬೆಳಗಾವಿಯಲ್ಲೊಂದು ದಾರುಣ ಘಟನೆ!

ಮಗ ರಘುವೀರ್ ಪ್ರತಿನಿತ್ಯ ಮೊಬೈಲ್ ಬಳಸುತ್ತಿದ್ದ, ಪಬ್-ಜಿ ಗೇಮ್ ಆಡುತ್ತಿದ್ದ. ಹೀಗಾಗಿ ತಂದೆ ಶಂಕ್ರಪ್ಪ ರಾತ್ರಿ ಹೊತ್ತಿನಲ್ಲಿ ಹೆಚ್ಚು ಮೊಬೈಲ್ ಬಳಸದಂತೆ ಮಗನಿಗೆ ಆಗಿಂದಾಗ್ಗೆ ಬುದ್ಧಿವಾದ ಹೇಳುತ್ತಿದ್ದರು. ಆದರೆ, ಈ ವಿಚಾರವೇ ಅವರಿಗೆ ಮೃತ್ಯವಾಗಿ ಪರಿಣಮಿಸಿದೆ.

MAshok Kumar | news18-kannada
Updated:September 9, 2019, 12:37 PM IST
ಪಬ್​ ಜಿ ಆಡಬೇಡ ಎಂದದ್ದಕ್ಕೆ ತಂದೆಯನ್ನೇ ಭೀಕರವಾಗಿ ಕೊಲೆಗೈದ ಮಗ; ಬೆಳಗಾವಿಯಲ್ಲೊಂದು ದಾರುಣ ಘಟನೆ!
ಸಾಂದರ್ಭಿಕ ಚಿತ್ರ
  • Share this:
ಬೆಳಗಾವಿ (ಸೆಪ್ಟೆಂಬರ್​.09); ಪಬ್-ಜಿ ಗೇಮ್ ಆಡಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಮಗನೇ ತನ್ನ ತಂದೆಯ ಕೈಕಾಲು ಹಾಗೂ ರುಂಡವನ್ನು ಕತ್ತರಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಸಿದ್ದೇಶ್ವರ ನಗರದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಶಂಕ್ರಪ್ಪ ಕುಂಬಾರ (60) ಎಂದು ಗುರುತಿಸಲಾಗಿದೆ. ರಘುವೀರ್ (25) ತಂದೆಯನ್ನೇ ಹತ್ಯೆಗೈದ ವ್ಯಕ್ತಿ. ಪೊಲೀಸ್ ಇಲಾಖೆಯಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸಿದ್ದ ಶಂಕ್ರಪ್ಪ ಮೂರು ತಿಂಗಳ ಹಿಂದೆ ನಿವೃತ್ತಿ ಹೊಂದಿದ್ದರು.

ಮಗ ರಘುವೀರ್ ಪ್ರತಿನಿತ್ಯ ಮೊಬೈಲ್ ಬಳಸುತ್ತಿದ್ದ, ಪಬ್-ಜಿ ಗೇಮ್ ಆಡುತ್ತಿದ್ದ. ಹೀಗಾಗಿ ತಂದೆ ಶಂಕ್ರಪ್ಪ ರಾತ್ರಿ ಹೊತ್ತಿನಲ್ಲಿ ಹೆಚ್ಚು ಮೊಬೈಲ್ ಬಳಸದಂತೆ ಮಗನಿಗೆ ಆಗಿಂದಾಗ್ಗೆ ಬುದ್ಧಿವಾದ ಹೇಳುತ್ತಿದ್ದರು. ಈ ಸಂದರ್ಭದಲ್ಲಿ ಆತ ಕುಪಿತಗೊಂಡು ಅಕ್ಕಪಕ್ಕದ ಮನೆಯವರ ಕಿಟಕಿ ಗಾಜುಗಳನ್ನು ಒಡೆದುಹಾಕಿದ್ದ. ಹೀಗಾಗಿ ಆತನನ್ನು ಠಾಣೆಗೆ ಕರೆದೊಯ್ದಿದ್ದ ಕಾಕತಿ ಪೊಲೀಸರು ತಂದೆಯ ಸಮ್ಮುಖದಲ್ಲಿ ಬುದ್ಧಿವಾದ ಹೇಳಿ ಕಳುಹಿಸಿದ್ದರು.

ಇದನ್ನೂ ಓದಿ : ಸುಂಕದಕಟ್ಟೆ ಸಮೀಪ ಯುವಕನ ಬರ್ಬರ ಕೊಲೆ; ಬೆಚ್ಚಿಬಿದ್ದ ಸಿಲಿಕಾನ್​ ಸಿಟಿ

ಆದರೂ, ಆತ ಮೊಬೈಲ್ ಬಿಟ್ಟಿರಲಿಲ್ಲ. ನಿನ್ನೆ ರಾತ್ರಿಯೂ ಮೊಬೈಲ್​ನಲ್ಲಿ ಮಗ್ನನಾಗಿದ್ದ. ಹೀಗಾಗಿ ತಂದೆ ಶಂಕ್ರಪ್ಪ ಮಗನನನ್ನು ಕಟುವಾಗಿ ಬೈದಿದ್ದರು. ಆದರೆ, ಇದೇ ಅವರಿಗೆ ಮೃತ್ಯುವಾಗಿ ಪರಿಣಮಿಸಿದೆ.

ತಂದೆ ಬೈದಿದ್ದಕ್ಕೆ ಕೆರಳಿದ ಹಂತಕ ರಘುವೀರ್ ತಾಯಿಯನ್ನು ಕೋಣೆಯೊಂದರಲ್ಲಿ ಕೂಡಿಹಾಕಿ ಇಳಿಗೆಮಣೆಯಿಂದ ಶಂಕ್ರಪ್ಪನವರ ಕೈಕಾಲು ಹಾಗೂ ಕುತ್ತಿಗೆ ಭಾಗವನ್ನು ಕತ್ತರಿಸಿ ಭೀಕರವಾಗಿ ಕೊಲೆಗೈದಿದ್ದಾನೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ.

First published:September 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ