ಬೆಂಗಳೂರು: ಹೆತ್ತ ತಂದೆ-ತಾಯಿಯನ್ನು (Father-Mother) ವೃದ್ಧಾಪ್ಯದಲ್ಲಿ (Old Age) ನೋಡಿಕೊಳ್ಳಲು ಆಗುವುದಿಲ್ಲ ಅಂತ ಅದೆಷ್ಟೋ ಮಕ್ಕಳು (Children) ತಮ್ಮ ಪೋಷಕರನ್ನು ಅನಾಥ ಆಶ್ರಮಕ್ಕೆ ದಾಖಲಿಸುವುದನ್ನು ನೋಡಿರುತ್ತೇವೆ. ಬೆಂಗಳೂರಿನಿಂತಹ (Bengaluru) ಮಹಾನಗರಗಳು ಮಾತ್ರವಲ್ಲದೆ ಗ್ರಾಮೀಣ ಪ್ರದೇಶದಲ್ಲೂ ಇಂತಹ ಘಟನೆಗಳು ಸಾಕಷ್ಟು ವರದಿಯಾಗುತ್ತದೆ. ತಂದೆ-ತಾಯಿ ಆಸ್ತಿ (Property) ಮಾತ್ರ ಬೇಕು ಆದರೆ ಅವರು ಬೇಡ ಅಂತ ಅಂದುಕೊಳ್ಳುವ ಹಲವು ಮಕ್ಕಳನ್ನು ಕಂಡಿರುತ್ತೇವೆ. ಆದರೆ ಸದ್ಯ ನಾವು ಹೇಳಲು ಹೊರಟಿರುವ ಘಟನೆ ಮಾತ್ರ ಅಮಾನವೀಯವಾಗಿದೆ.
ತಂದೆ ತನಗೆ ಆಸ್ತಿ ಕೊಡಲಿಲ್ಲ ಅಂತ ಅಸಮಾಧಾನಗೊಂಡಿದ್ದ ಮಗನೋರ್ವ ತಂದೆಯ ಕೊಲೆಗೆ ಕೋಟಿ ಕೋಟಿ ರೂಪಾಯಿ ಸುಪಾರಿ ನೀಡಿ, ತಂದೆಯ ಕಥೆಯನ್ನೇ ಮುಗಿಸಿದ್ದಾನೆ. ಹೌದು, ಇಂತಹ ಭೀಕರ ಘಟನೆ ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಂದೆಯ ಕೊಲೆಗೆ ಸುಪಾರಿ ನೀಡಿ ಕೊಲೆ ಮಾಡಿದ್ದ ಆರೋಪಿ ಮಣಿಕಂಠ ಎಂಬಾತನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಜೊತೆಗೆ ಸುಪಾರಿ ಪಡೆದು ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಬಲೆಗೆ ಕೆಡವಿದ್ದಾರೆ.
ಇದನ್ನೂ ಓದಿ: RBI Restrictions: ಗ್ರಾಹಕರಿಗೆ ಬಿಗ್ ಶಾಕ್! ಕರ್ನಾಟಕದ ಈ ಬ್ಯಾಂಕ್ ಇಂದಿನಿಂದ ಬಂದ್
ಏನಿದು ಪ್ರಕರಣ?
ಮಾರತ್ತಹಳ್ಳಿಯಲ್ಲಿ ನಿವಾಸಿಯಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ನಾರಾಯಣಸ್ವಾಮಿ ಎಂಬವರನ್ನು ಫೆಬ್ರವರಿ 13 ರಂದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್ ಬಳಿ ದುಷ್ಕರ್ಮಿಗಳಾದ ನಾರಾಯಣಸ್ವಾಮಿ ಅವರನ್ನು ಕೊಲೆ ಮಾಡಿದ್ದರು. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಕೊಲೆ ಮಾಡಿದ್ದ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳಾದ ನಡವತ್ತಿ ಶಿವ ಹಾಗೂ ಆದರ್ಶ್ ಎಂಬವರನ್ನು ಬಂಧಿಸಿದ್ದರು.
ಆರೋಪಿಗಳನ್ನು ಬಂಧನ ಮಾಡಿ ವಿಚಾರಣೆ ನಡೆಸಿದ್ದ ಪೊಲೀಸರಿಗೆ ಶಾಕ್ ಎದುರಾಗಿತ್ತು. ಏಕೆಂದರೆ ಕೊಲೆಯಾದ ನಾರಾಯಣಸ್ವಾಮಿ ಪುತ್ರ ಮಣಿಕಂಠನೇ ತಂದೆಯ ಕೊಲೆಗೆ ಸುಪಾರಿ ನೀಡಿದ್ದಾಗಿ ಆರೋಪಿಗಳು ಬಾಯ್ಬಿಟ್ಟಿದ್ದರು. ತಂದೆ ಕೊಲೆಗೆ ಮಗನೇ ಆರೋಪಿಗಳಿಗೆ ಕೋಟಿ ಕೋಟಿ ರೂಪಾಯಿಗೆ ಸುಪಾರಿ ನೀಡಿದ್ದ.
ತಂದೆಯ ಕಥೆಯನ್ನು ಮುಗಿಸಿದರೆ ಆರೋಪಿಗಳಿಗೆ ಒಂದು ಕೋಟಿ ರೂಪಾಯಿ ಹಣ, ಒಂದು ಫ್ಲ್ಯಾಟ್ ಹಾಗೂ ಒಂದು ಐಷಾರಾಮಿ ಕಾರು ನೀಡುವುದಾಗಿ ಆರೋಪಿ ಮಣಿಕಂಠ ಹೇಳಿದ್ದನಂತೆ. ಅಲ್ಲದೆ ಕೊಲೆ ಮಾಡುತ್ತಿದ್ದಂತೆ ಅಡ್ವಾನ್ಸ್ ಆಗಿ 15 ಲಕ್ಷ ರೂಪಾಯಿ ಹಣವನ್ನು ನೀಡುವುದಾಗಿ ಹೇಳಿದ್ದನಂತೆ. ಸದ್ಯ ಮಾರತ್ತಹಳ್ಳಿ ಪೊಲೀಸರು ಸುಪಾರಿ ನೀಡಿದ ಮಗ ಮಣಿಕಂಠನನ್ನು ಬಂಧನ ಮಾಡಿದ್ದಾರೆ.
ಡೀಲ್ ಪಡೆದ ಆರೋಪಿಗಳು ಫೆಬ್ರವರಿ 13ರಂದು ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್ ಮಾಲೀಕರಾಗಿದ್ದ ನಾರಾಯಣಸ್ವಾಮಿ ಅವರನ್ನು ಅಲ್ಲಿಯೇ ಕೊಲೆ ಮಾಡಿ ಪರಾರಿಯಾಗಿದ್ದರು. ಅಂದಹಾಗೇ, ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ನಾರಾಯಣಸ್ವಾಮಿ ಅವರು ಹಲವು ಕಡೆ ಭೂಮಿ, ಅಪಾರ್ಟ್‌ಮೆಂಟ್ ಹೊಂದಿದ್ದರಂತೆ.
ಆದರೆ ಆರೋಪಿ ಮಣಿಕಂಠನ ಹೆಸರಲ್ಲಿ ಯಾವುದೇ ಆಸ್ತಿ ಇರಲಿಲ್ಲವಂತೆ. ಈ ನಡುವೆ ಕೊಲೆಯಾದ ನಾರಾಯಣಸ್ವಾಮಿ ಅವರು ಅಪಾರ್ಟ್ಮೆಂಟ್ನಲ್ಲಿ ಫ್ಲ್ಯಾಟ್ಗಳನ್ನು ಇಷ್ಟ ಬಂದವರಿಗೆ ಕೊಡುತ್ತಿದ್ದದ್ದು ಮಗನ ನಿದ್ದೆ ಕೆಡಿಸಿತ್ತಂತೆ. ಹೀಗೆ ಬಿಟ್ಟರೆ ಆಸ್ತಿಯೆಲ್ಲಾ ಕಂಡಕಂಡವರಿಗೆ ದಾನ ಮಾಡುತ್ತಾನೆ ಎಂದು ತಂದೆಯನ್ನೇ ಕೊಲೆ ಮಾಡುವ ಸಂಚನ್ನು ಮಣಿಕಂಠ ಮಾಡಿದ್ದ ಎನ್ನಲಾಗಿದೆ.
ಇದರಂತೆ ತನಗೆ ಜೈಲಿನಲ್ಲಿ ಪರಿಚಯವಾಗಿದ್ದ ನಡವತ್ತಿ ಶಿವ ಮತ್ತು ಆದರ್ಶ್ಗೆ ಸುಪಾರಿ ನೀಡಿದ್ದ ಪಾಪಿ ಮಗ, ತಂದೆಯ ಹತ್ಯೆ ಬಳಿಕ ತಾನೇ ಪೊಲೀಸ್ ಠಾಣೆಗೆ ಹೋಗಿ ಕೊಲೆ ಬಗ್ಗೆ ದೂರು ನೀಡಿದ್ದನಂತೆ. ಸದ್ಯ ಮೂವರನ್ನ ಬಂಧಿಸಿರುವ ಮಾರತ್ತಹಳ್ಳಿ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.
ಇನ್ನು, ಆರೋಪಿ ಮಣಿಕಂಠ ಮೊದಲ ಪತ್ನಿಯನ್ನು ಕೊಲೆಗೈದು ಜೈಲು ಸೇರಿದ್ದನಂತೆ. ಇದೇ ವೇಳೆ ಆರೋಪಿಗಳು ಆತನಿಗೆ ಪರಿಚಯವಾಗಿದ್ದರಂತೆ. ಜೈಲಿನಿಂದ ಹೊರ ಬಂದ ಬಳಿಕ ಮೊದಲ ಪತ್ನಿಯನ್ನು ಕೊಲೆ ಮಾಡಿದ್ದನ್ನು ಮುಚ್ಚಿಟ್ಟು ಎರಡನೇ ಮದುವೆಯಾಗಿದ್ದನಂತೆ. ಅಲ್ಲದೆ ಎರಡನೇ ಮದುವೆಯಾದರೂ ಕೂಡ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದನಂತೆ.
ಇದೇ ವಿಚಾರವಾಗಿ ಮನೆಯಲ್ಲಿ ಗಲಾಟೆ ಕೂಡ ನಡೆದಿತ್ತು ಎನ್ನಲಾಗಿದೆ. ಈ ವೇಳೆ ಮಧ್ಯ ಪ್ರವೇಶ ಮಾಡಿದ್ದ ಮಾವ ನಾರಾಯಣಸ್ವಾಮಿ ಅವರು ಮಗನಿಗೆ ವಿಚ್ಛೇದನ ನೀಡದಂತೆ ಮನವೊಲಿಕೆ ಮಾಡಿದ್ದರಂತೆ. ಅಲ್ಲದೇ ಪತ್ನಿಗೆ ಡಿವೋರ್ಸ್ ನೀಡದರೆ ಸೊಸೆ ಹಾಗೂ ಮೊಮ್ಮಗಳಿಗೆ ಕಷ್ಟ ಎದುರಾಗದಂತೆ ಅವರ ಹೆಸರಿಗೆ ಒಂದು ಫ್ಲ್ಯಾಟ್ ಬರೆದುಕೊಡುವುದಾಗಿ ಮಗನಿಗೆ ಹೇಳಿದ್ದರಂತೆ.
ಪ್ರಕರಣದ ಸಂಬಂಧ ಮಾಹಿತಿ ನೀಡಿರುವ ವೈಟ್ ಫೀಲ್ಡ್ ಡಿಸಿಪಿ ಗಿರೀಶ್ ಅವರು, ಇಂದ್ರಪ್ರಸ್ಥ ಅಪಾರ್ಟ್ ಮೆಂಟ್ ನಲ್ಲಿ ತಲೆಗೆ ಮಚ್ಚಿನಿಂದ ಹೊಡೆದು ಹತ್ಯೆ ನಾರಾಯಣಸ್ವಾಮಿ ಎಂಬವರನ್ನು ಆರೋಪಿಗಲು ಹತ್ಯೆ ಮಾಡಿದ್ದರು. ತನಿಖೆ ವೇಳೆ ಮಗನ ಮೇಲೆಯೇ ಡೌಟ್ ಬಂದಿತ್ತು. 2013 ರಲ್ಲಿ ತನ್ನ ಮೊದಲ ಪತ್ನಿಯನ್ನ ಕೊಲೆ ಮಾಡಿದ್ದ ಮಣಿಕಂಠ, ಕಳೆದ ಐದು ತಿಂಗಳ ಎರಡನೇ ಪತ್ನಿ ಕೊಲೆಗೆ ಯತ್ನಿಸಿದ್ದ. ಈ ಬಗ್ಗೆ ಆತನ ವಿರುದ್ಧ ಮಾರತ್ತಹಳ್ಳಿ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.
ಫೆಬ್ರವರಿ 13ರಿಂದ ಇಲ್ಲಿವರೆಗೂ ಪೊಲೀಸರು ಸಾಕಷ್ಟು ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ. ಪ್ರಕರಣದಲ್ಲಿ ಮೊದಲು ಆದರ್ಶ್ ಅನ್ನುವವನ ಮೇಲೆ ಡೌಟ್ ಬರುತ್ತೆ. ಆದರ್ಶ್ ಮೂಲತಃ ಹೊಸಕೋಟೆ ಕಡೆಯವನು. ಆತನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ ಸಂದರ್ಭದಲ್ಲಿ ಮೊದಲು, ಆತನ ಮೇಲೂ ಬೆಂಗಳೂರು ಹೊರವಲಯದಲ್ಲಿ ಕೊಲೆ ಯತ್ನ ಕೇಸ್ ದಾಖಲಾಗಿತ್ತು. ಅಲ್ಲದೆ ಮತ್ತೋರ್ವನ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಅನ್ವಯ ನಡವತ್ತಿ ಶಿವ ಎಂಬಾತನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದೇವು. ಈತನ ವಿರುದ್ಧವೂ ರಾಮಮೂರ್ತಿನಗರ, ಹನುಮಂತನಗರ ಸೇರಿ ಹಲವು ಠಾಣೆಯಲ್ಲಿ ಕೇಸ್ ಇದೆ.
ಇದನ್ನೂ ಓದಿ: Bengaluru: ಅಪಾರ್ಟ್ಮೆಂಟ್ನ 11ನೇ ಮಹಡಿಯಿಂದ ಜಿಗಿದ ಯುವತಿ; ಮೊಬೈಲ್ನಲ್ಲಿ ಮಾತನಾಡುತ್ತಾ ಆತ್ಮಹತ್ಯೆಗೆ ಶರಣು!
ಮಣಿಕಂಠನ ವಿಚಾರಣೆ ವೇಳೆ ಕೊಲೆ ಕೇಸ್ ಹಿಂದಿನ ಸತ್ಯ ಬೆಳಕಿಗೆ ಬಂದಿತ್ತು. ನಡವತ್ತಿ ಶಿವನೇ ಈ ಕೇಸ್ ನ ಮೈನ್ ಆರೋಪಿ. 28 ಪ್ಲ್ಯಾಟ್ ಗಳಲ್ಲಿ 1 ಪ್ಲ್ಯಾಟ್ ಜೊತೆಗೆ ಒಂದು ಕಾರನ್ನ ಕೊಡುವುದಾಗಿ ಆರೋಪಿಗಳಿಗೆ ಮಗ ಮಣಿಕಂಠ ಹೇಳಿರುತ್ತಾನೆ. ಮೃತ ವ್ಯಕ್ತಿಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದರೂ ಮಣಿಕಂಠ ಕೊನೆಯ ಒಬ್ಬನೇ ಮಗ. ಬಿಬಿಎಂ ವ್ಯಾಸಾಂಗ ಮುಗಿಸಿದ್ದ ಮಣಿಕಂಠ ನಡವಳಿಕೆ ಬಗ್ಗೆ ತಂದೆಗೆ ಅಸಮಾಧಾನವಿತ್ತು.
ಸುಮಾರು ಎರಡು ತಿಂಗಳಿನಿಂದ ಹತ್ಯೆಗೆ ಪ್ಲಾನ್ ಮಾಡಿದ್ದರು. ತಂದೆ ಕೊಲೆ ವೇಳೆ ಕೂಡ ಆರೋಪಿ ನೋಡಿಕೊಂಡು ಸುಮ್ಮನೆ ನಿಂತಿದ್ದ. ಮೃತರ ಹೆಸರಲ್ಲಿ ಸುಮಾರು ಪ್ರಾಪರ್ಟಿ, ಕಾಂಪ್ಲೆಕ್ಸ್ ಇದೆ. ನಾರಾಯಣಸ್ವಾಮಿ ಎರಡನೇ ಸೊಸೆಗೆ ಫ್ಲ್ಯಾಟ್ ಕೊಡುವ ಬಗ್ಗೆ ಮಾತು ಕೊಟ್ಟಿದ್ದರು. ಕೊಲೆಯಾದ ದಿನ ಫ್ಲ್ಯಾಟ್ ರಿಜಿಸ್ಟ್ರೇಷನ್ಗೆ ಹೋಗುವಾಗ ಮನೆ ಬಳಿಯೇ ಹತ್ಯೆ ಮಾಡಲಾಗಿತ್ತು ಎಂದು ವಿವರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ