ಯಲಹಂಕ (ಜು.16): ಅದ್ಯಾಕೋ ಹುಣಸಮಾರನಹಳ್ಳಿ ಮಠದ ಆಸ್ತಿಗೂ ಭೂಗಳ್ಳರಿಗೂ ಅದೇನೊ ಅವಿನಾಭಾವ ಸಂಭಂಧ ಇದ್ದಹಾಗಿದೆ. ಬೆಂಗಳೂರಿನ ಯಲಹಂಕ ತಾಲ್ಲೂಕಿನ ಹುಣಸಮಾರನಹಳ್ಳಿ ಮಠದ ಹೆಸರಲ್ಲಿ ನೂರಾರು ಕೋಟಿ ಬೆಲೆ ಬಾಳುವ ಆಸ್ತಿ ಇದ್ದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿದೆ. ಈಗ ಈ ಆಸ್ತಿ ಮೇಲೆ ಭೂಗಳ್ಳರು ಮತ್ತೆ ಕಣ್ಣಿಟ್ಟಿದ್ದಾರೆ.
ಮಠದ ಸುತ್ತ ಮುತ್ತ ನೂರಾರು ಎಕರೆ ಜಮೀನಿದೆ. ಇದೇ ಜಮಿನಿನ ವಿವಾದ ಈಗ ಮಟಕ್ಕೆ ತಲೆನೋವಾಗಿ ಪರಿಣಮಿಸಿದೆ. ಹುಣಸಮಾರನಹಳ್ಳಿ ಸುತ್ತಮತ್ತಲು ನೂರಾರು ಎಕರೆ ಜಮೀನಿನ ಮೇಲೆ ಭೂಗಳ್ಳರ ಕಣ್ಣು ಬಿದ್ದಿದ್ದು, ಎಗ್ಗಿಲ್ಲದೆ ಬೇಲಿ ಹಾಕಿಕೊಳ್ಳುತ್ತಿದ್ದಾರೆ. ಲಾಕ್ ಡೌನ್ ಇರುವುದರಿಂದ ಇತ್ತ ಕಂದಾಯ ಇಲಾಖೆ ಅಧಿಕಾರಿಗಳು ಸಿಗುತ್ತಿಲ್ಲ, ಪೊಲೀಸರು ಬರುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಭೂಗಳ್ಳರು ಈ ಜಾಗಕ್ಕೆ ಬೇಲಿ ಹಾಕುತ್ತಲೇ ಇದ್ದಾರೆ. ಈ ಬಗ್ಗೆ ಅಧಿಕಾರಿಗಳು ಕಣ್ಮುಚ್ಚಿ ಕೂತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ಮಠಕ್ಕೆ ಸೇರಿದ ಸರ್ವೆ ನಂಬರ್ 148ರಲ್ಲಿ 9.5 ಎಕರೆ ಜಮೀನು ಇದೆ. ಇದರಲ್ಲಿ ನೀಲಗಿರಿ ತೋಪು ಇದ್ದು ಮಠದ ಆಸ್ತಿ ದುರ್ಬಳಕೆ ಆಗದಂತೆ ತಡೆಯಲು ಮರ ಕಟಾವು ಮಾಡದೆ ಹಾಗೆ ಉಳಿಸಿಕೊಳ್ಳಲಾಗಿತ್ತು. ಜಮೀನಿಗೆ ಕೋಟಿ ಕೋಟಿ ಬೆಲೆ ಇದ್ದು ಭೂಗಳ್ಳರ ಕಣ್ಣು ಬೀಳ ಬಹುದೆಂಬ ಆತಂಕದಲ್ಲೆ ಇದ್ದ ಮಠಕ್ಕೆ ಒಮ್ಮೆಲೆ ದಿಡೀರ್ ಶಾಕ್ ಆಗಿತ್ತು.
ಸ್ಥಳಕ್ಕೆ ಆಗಮಿಸಿದ ಚಿಕ್ಕಜಾಲ ವೃತ್ತದ ಉಪ ತಹಶೀಲ್ದಾರ್ ಮಹೇಶ್ ಮರ ಕಡೆಯುತಿದ್ದ ಮುನಿರಾಜು, ರಾಮಚಂದ್ರ ಬುದ್ಧಿ ಹೇಳಿ ದಾಖಲೆ ಪರಿಶೀಲನೆ ನಡೆಸುವ ವರೆಗೆ ಯಾವುದೆ ಜಮೀನಿನಲ್ಲಿ ಯಾವುದೇ ಕೆಲಸ ಮಾಡದಂತೆ ಹೇಳಿ ಹೊರಗೆ ಕಳುಹಿಸಿದ್ದಾರೆ. ನಖಲಿ ದಾಖಲೆ ಸೃಷ್ಠಿ ಮಾಡಿ ಭೂಮಿ ಕಬಳಿಸಲು ಕೆಲವರು ಹೊಂಚು ಹಾಕುತಿದ್ದು ಸಾರ್ವಜನಿಕ ಆಸ್ತಿಗಳನ್ನ ಕಾಪಾಡಲು ಯಾವುದೇ ನಿರ್ಧಾರಕ್ಕೂ ನಾನು ಸಿದ್ದ ಎಂದು ಪಟ್ಟದ ಪರ್ವತರಾಜ ಶಿವಾಚಾರ್ಯ ಸ್ವಾಮೀಜಿ ಭೂಗಳ್ಳರಿಗೆ ಎಚ್ಚರಿಕೆ ನೀಡಿದ್ದಾರೆ.
ಏರ್ಪೋರ್ಟ್ ರಸ್ತೆ, ಯಲಹಂಕ, ಚಿಕ್ಕಜಾಲ, ದೇವನಹಳ್ಳಿ ಭಾಗಗಳಲ್ಲಿ ಭೂಮಿಗಳ ಬೆಲೆ ಗಗನಕ್ಕೇರಿದೆ. ಹೀಗಾಗಿ, ಇಲ್ಲಿರುವ ಸರ್ಕಾರಿ, ಮಠ, ದೇವಸ್ಥಾನ, ದಲಿತರ ಜಮೀನುಗಳ ಮೇಲೆಯೆ ಭೂಗಳ್ಳರ ಕಣ್ಣುಗಳು ಬೀಳುತ್ತಿದೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ