ಉಪಚುನಾವಣೆಯಲ್ಲಿ ಸೋಲಲು ಬಿಜೆಪಿಯ ಕೆಲ ನಾಯಕರೂ ಕಾರಣ; ಕೃತಜ್ಞತಾ ಸಭೆಯಲ್ಲಿ ಎಚ್.ವಿಶ್ವನಾಥ್ ಆರೋಪ

ಕರ್ನಾಟಕವನ್ನು ಮಾರಾಟ ಮಾಡುವವರನ್ನು ಕಿತ್ತೊಗೆಯಲು ರಾಜೀನಾಮೆ ನೀಡಿದೆವು. ಹೆಚ್.ಡಿ.ರೇವಣ್ಣ 700 ಇಂಜಿನಿಯರ್‌ಗಳನ್ನು ಅಕ್ರಮವಾಗಿ ನೇಮಿಸಲು ಮುಂದಾಗಿದ್ದರು. 1750 ಇಂಜಿನಿಯರ್‌ಗಳ ವರ್ಗಾವಣೆ ಮಾಡಲು ಸಿದ್ಧತೆ ನಡೆದಿತ್ತು. ಮೈಮುಲ್‌ನಲ್ಲಿರುವ 170 ಸೀಟುಗಳನ್ನು ತಲಾ 50 ಲಕ್ಷ ರೂ.ಗಳಿಗೆ ಮಾರಾಟ ಮಾಡುತ್ತಿದ್ದೀರಿ. ಇದನ್ನು ತಪ್ಪಿಸುವ ಸಲುವಾಗಿ ನಾವು ರಾಜೀನಾಮೆ ನೀಡಿದೆವು ಎಂದು ಆರೋಪ ಮಾಡಿದರು.

news18-kannada
Updated:December 19, 2019, 4:56 PM IST
ಉಪಚುನಾವಣೆಯಲ್ಲಿ ಸೋಲಲು ಬಿಜೆಪಿಯ ಕೆಲ ನಾಯಕರೂ ಕಾರಣ; ಕೃತಜ್ಞತಾ ಸಭೆಯಲ್ಲಿ ಎಚ್.ವಿಶ್ವನಾಥ್ ಆರೋಪ
ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಎಚ್.ವಿಶ್ವನಾಥ್.
  • Share this:
ಹುಣಸೂರು: ಉಪಚುನಾವಣೆಯಲ್ಲಿ ಸೋತ ಬಳಿಕ ಎಚ್.ವಿಶ್ವನಾಥ್ ಅವರು ಸೋಲಿನ ಆತ್ಮವಲೋಕನ ಸೇರಿ ಹಲವು ವಿಚಾರಗಳನ್ನು ಚರ್ಚೆ ಮಾಡಲು ಪಟ್ಟಣದ ಪುಟ್ಟಸ್ವಾಮಪ್ಪ ಕಲ್ಯಾಣಮಂಟಪದಲ್ಲಿ ಕೃತಜ್ಞತಾ ಸಭೆ ಆಯೋಜಿಸಿದ್ದರು. ಈ ವೇಳೆ ಜೆಡಿಎಸ್ ಅಭ್ಯರ್ಥಿಯೇ ಕಾಂಗ್ರೆಸ್​ಗೆ ಮಾರಾಟವಾದರು ಎಂದು ಗಂಭೀರ ಆರೋಪ ಮಾಡಿದರು.

ಬಿಜೆಪಿ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಬಿಜೆಪಿ ಪರಾಜಿತ ಅಭ್ಯರ್ಥಿ ಎಚ್.ವಿಶ್ವನಾಥ್, ನನ್ನನ್ನು ಮಾರಿಕೊಂಡವನು ಎನ್ನುತ್ತೀರಿ.‌ ಪಾಪ, ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಅವರನ್ನು ಕಾಂಗ್ರೆಸ್‌ಗೆ ಮಾರಾಟ ಮಾಡಿದವರು ಯಾರು?  ಸೋಮಶೇಖರ್ ತನ್ನ ಮನೆ ದುಡ್ಡು ತಂದು ಚುನಾವಣೆ ಮಾಡಿದರು. ಅವರನ್ನು ಕಾಂಗ್ರೆಸ್‌ಗೆ ಮಾರಾಟ ಮಾಡಿದರು. ನನ್ನನ್ನು ನಾನು ಮಾರಿಕೊಂಡಿಲ್ಲ. ನೀವು ರಾಜ್ಯ ಮಾರಿದ್ದೀರಿ, ಜಾತಿಯನ್ನೂ ಮಾರಿದ್ದೀರಿ. ಒಕ್ಕಲಿಗ ವಿರೋಧಿ ನಾನೋ? ನೀವೋ ಈಗ ಹೇಳಿ ಎಂದು ಜೆಡಿಎಸ್ ಮುಖಂಡರ ವಿರುದ್ಧ ಹರಿಹಾಯ್ದರು.

ನನ್ನ ಸೋಲಿಗೆ ಕೆಲ ಬಿಜೆಪಿ ನಾಯಕರೂ ಕಾರಣ ಎಂದು ಬಹಿರಂಗವಾಗಿ ಹೇಳಿದ ವಿಶ್ವನಾಥ್, ಕಾಂಗ್ರೆಸ್ ನಾಯಕರು, ಜೆಡಿಎಸ್ ನಾಯಕರು ಒಟ್ಟಾಗಿ ಸೇರಿಕೊಂಡರು.  ನನ್ನನ್ನು ಸೋಲಿಸಲು ಕೆಲ ಬಿಜೆಪಿ ನಾಯಕರೂ ಸೇರಿಕೊಂಡರು. ಇದೆಲ್ಲವನ್ನೂ ಅನಿವಾರ್ಯವಾಗಿ ಹೇಳಲೇಬೇಕಿದೆ ಎಂದು ಅಸಮಾಧಾನ ಹೊರಹಾಕಿದರು.

ಇದನ್ನು ಓದಿ: ನಾನು ಸೋತಿದ್ದೇನೆ, ಹಾಗಂತ ಸತ್ತಿಲ್ಲ; ವಿಶ್ವನಾಥ್​ ಗುಡುಗು

ಸೋಲಿನ ಬಳಿಕವೂ ಜಿಲ್ಲೆಯ ಪ್ರಸ್ತಾಪ ಮುಂದುವರಿಸಿದ ವಿಶ್ವನಾಥ್, ಹುಣಸೂರನ್ನು ಜಿಲ್ಲೆ ಮಾಡುತ್ತೇನೆ ಎಂದು ಹೇಳಿದ್ದೆ. ನಾನು ಸೋತಿರಬಹುದು. ನಮ್ಮ ಕನಸುಗಳು ಸತ್ತಿಲ್ಲ. ನಮ್ಮದೇ ಜಿಲ್ಲಾಧಿಕಾರಿ ಬರಬೇಕು, ಎಸ್ಪಿ, ಇಂಜಿನಿಯರಿಂಗ್ ಕಾಲೇಜು ಬರಬೇಕು. ನನ್ನ ಕನಸುಗಳನ್ನು ಸೋಲಲು ನಾನು ಬಿಡುವುದಿಲ್ಲ. ಉಪಚುನಾವಣೆಯಲ್ಲಿ ನನ್ನ ವಿರುದ್ಧ ಅಪಪ್ರಚಾರ ನಡೆಯಿತು. ಮಾರಿಕೊಂಡವರು ಅಂತ ಹೇಳಿದರು. ನಾವು ಮಾರಿಕೊಳ್ಳಲಿಲ್ಲ. ಕರ್ನಾಟಕವನ್ನು ಮಾರಾಟ ಮಾಡುವವರನ್ನು ಕಿತ್ತೊಗೆಯಲು ರಾಜೀನಾಮೆ ನೀಡಿದೆವು. ಹೆಚ್.ಡಿ.ರೇವಣ್ಣ 700 ಇಂಜಿನಿಯರ್‌ಗಳನ್ನು ಅಕ್ರಮವಾಗಿ ನೇಮಿಸಲು ಮುಂದಾಗಿದ್ದರು. 1750 ಇಂಜಿನಿಯರ್‌ಗಳ ವರ್ಗಾವಣೆ ಮಾಡಲು ಸಿದ್ಧತೆ ನಡೆದಿತ್ತು. ಮೈಮುಲ್‌ನಲ್ಲಿರುವ 170 ಸೀಟುಗಳನ್ನು ತಲಾ 50 ಲಕ್ಷ ರೂ.ಗಳಿಗೆ ಮಾರಾಟ ಮಾಡುತ್ತಿದ್ದೀರಿ. ಇದನ್ನು ತಪ್ಪಿಸುವ ಸಲುವಾಗಿ ನಾವು ರಾಜೀನಾಮೆ ನೀಡಿದೆವು ಎಂದು ಆರೋಪ ಮಾಡಿದರು.
First published:December 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ