HOME » NEWS » State » SO MANY REASON HAVE TO SELECT DK SHIVAKUMAR AS KPCC PRESIDENT RH

ಪಕ್ಷಕ್ಕಾಗಿ ನಿಷ್ಠೆ ತೋರಿದ ಕನಕಪುರ ಬಂಡೆ ಕೈ ಹಿಡಿದ ಹೈಕಮಾಂಡ್; ಕೆಪಿಸಿಸಿಗೆ ಡಿಕೆಶಿ ಆಯ್ಕೆ ಹಿಂದಿವೆ ಹತ್ತಾರು ಕಾರಣ

ಕೆಪಿಸಿಸಿ ಅಧ್ಯಕ್ಷ ಗಾದಿಗೆ ಡಿ.ಕೆ. ಶಿವಕುಮಾರ್ ಮತ್ತು ಎಂ.ಬಿ. ಪಾಟೀಲ್ ನಡುವೆ ಭಾರೀ ಪೈಪೋಟಿ ನಡೆದಿತ್ತು. ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ಮತ್ತೊಂದು ಬಣದ ಒಳೇಟಿನ ಭಯ ಹೈಕಮಾಂಡ್​ಗೆ ಇದ್ದೇ ಇದೆ. ಹಾಗಾಗಿ ಯಾರ ಆಯ್ಕೆ ಸೂಕ್ತ ಎಂಬುದನ್ನು ನಿರ್ಧರಿಸಲು ಸೋನಿಯಾ ಗಾಂಧಿ ಅವರು ಮಧುಯಾಸ್ಕಿ ಗೌಡ, ವಿಶ್ವನಾಥ್, ಮಾಣಿಕ್ ಠ್ಯಾಗೂರ್, ಶೈಲಜನಾಥ್ ಅವರಿಂದ ಮತ್ತೊಂದು ವರದಿ ಕೂಡ ತರಿಸಿಕೊಂಡಿದ್ದರು. 

HR Ramesh | news18-kannada
Updated:March 11, 2020, 4:40 PM IST
ಪಕ್ಷಕ್ಕಾಗಿ ನಿಷ್ಠೆ ತೋರಿದ ಕನಕಪುರ ಬಂಡೆ ಕೈ ಹಿಡಿದ ಹೈಕಮಾಂಡ್; ಕೆಪಿಸಿಸಿಗೆ ಡಿಕೆಶಿ ಆಯ್ಕೆ ಹಿಂದಿವೆ ಹತ್ತಾರು ಕಾರಣ
ಡಿಕೆಶಿ
  • Share this:
ನವದೆಹಲಿ: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕಸರತ್ತು ಕಡೆಗೂ ಬಗೆಹರಿದಿದ್ದು, ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಗಾದಿಯನ್ನು ರಾಜ್ಯ ರಾಜಕೀಯದಲ್ಲಿ ಟ್ರಬಲ್ ಶೂಟರ್ ಎಂದೇ ಖ್ಯಾತಿ ಪಡೆದಿರುವ ಡಿಕೆ ಶಿವಕುಮಾರ್ ಅವರಿಗೆ ಹೈಕಮಾಂಡ್ ದಯಪಾಲಿಸಿದೆ. ಈ ಮೂಲಕ ಲಿಂಗಾಯತ ಸಮುದಾಯದ ಎಂ.ಬಿ.ಪಾಟೀಲ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಿಸಲು ಶತಪ್ರಯತ್ನ ನಡೆಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಭಾರಿ ಹಿನ್ನಡೆಯಾಗಿದೆ.

ಕೆಪಿಸಿಸಿ ಅಧ್ಯಕ್ಷರ ಆಯ್ಕೆಯಲ್ಲಿ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾದರೂ ಅವರು ನೀಡಿದ ಫಾರ್ಮುಲಾವನ್ನು ಹೈಕಮಾಂಡ್ ಅನುಸರಿಸಿದೆ. ಅದರಂತೆ ಅಧ್ಯಕ್ಷ ಜೊತೆಗೆ ಕೆಪಿಸಿಸಿಗೆ ಮೂವರು ಕಾರ್ಯಾಧ್ಯಕ್ಷರನ್ನು ನೇಮಿಸಿದೆ. ಈಶ್ವರ್​ ಖಂಡ್ರೆ ಜೊತೆಗೆ ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್​ರನ್ನು ಕಾರ್ಯಾಧ್ಯಕ್ಷರಾಗಿ ನೇಮಿಸಲಾಗಿದೆ. ಈ ಮೂಲಕ ಲಿಂಗಾಯತ, ವಾಲ್ಮೀಕಿ, ಅಲ್ಪಸಂಖ್ಯಾತ ಸಮುದಾಯಕ್ಕೆ ಆದ್ಯತೆ ನೀಡುವ ತಂತ್ರಗಾರಿಕೆ ಅನುಸರಿಸಲಾಗಿದೆ. ಅಷ್ಟೇ ಅಲ್ಲದೇ, ಅಲ್ಲದೇ, ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗಕ್ಕೆ ಮೂರು ಕಾರ್ಯಾಧ್ಯಕ್ಷ ಸ್ಥಾನ ದಕ್ಷಿಣ ಕರ್ನಾಟಕಕ್ಕೆ ಹಾಗೂ ಒಕ್ಕಲಿಗ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಪ್ರಾದೇಶಿಕ ಸಮಾನತೆಯನ್ನು ಕಾಯ್ದುಕೊಳ್ಳುವ ಜಾಣತನವನ್ನು ಕೆಪಿಸಿಸಿ ಪ್ರದರ್ಶಿಸಿದೆ.

15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಅವರು ರಾಜೀನಾಮೆ ನೀಡಿದ್ದರು. ಈ ಸ್ಥಾನದ ಮೇಲೆ ಡಿಕೆ ಶಿವಕುಮಾರ್ ಆರಂಭದಿಂದಲೂ ಕಣ್ಣಿಟ್ಟು, ಅದಕ್ಕಾಗಿ ದೆಹಲಿ ಮಟ್ಟದಲ್ಲಿ ಲಾಬಿಯನ್ನೂ ನಡೆಸಿದ್ದರು. ಆದರೆ, ಡಿಕೆಶಿ ಓಟಕ್ಕೆ ತಡೆ ಹಾಕಲು ಮುಂದಾದ ಸಿದ್ದರಾಮಯ್ಯ ಅವರು ಎಂ.ಬಿ.ಪಾಟೀಲ್ ಅವರಿಗೆ ಕೆಪಿಸಿಸಿ ಪಟ್ಟ ಕಟ್ಟಲು ಶತಪ್ರಯತ್ನ ನಡೆಸಿದರು.

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರಲು ಲಿಂಗಾಯತ ಮತಬ್ಯಾಂಕ್​ ಕಾರಣ. ಯಡಿಯೂರಪ್ಪ ಅವರ ಶಕ್ತಿ ಕೂಡ ಇದೇ ಲಿಂಗಾಯತ ಸಮುದಾಯ. ಇಂತಹ ಸಮಯದಲ್ಲಿ ಕೆಪಿಸಿಸಿಗೆ ಲಿಂಗಾಯತ ಸಮುದಾಯದ ಪ್ರಬಲ ವ್ಯಕ್ತಿಯನ್ನು, ಅದರಲ್ಲೂ ಉತ್ತರಕರ್ನಾಟಕ ಭಾಗದವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿದರೆ, ಕಾಂಗ್ರೆಸ್​ ಲಿಂಗಾಯತ ಸಮುದಾಯದ ಒಲವು ಗಳಿಸಿಕೊಳ್ಳಬಹುದು. ಈ ಎಲ್ಲ ದೃಷ್ಟಿಯಿಂದ ನೋಡುವುದಾದರೆ ಎಂ.ಬಿ.ಪಾಟೀಲ್, ಸಮುದಾಯ, ಸಂಪನ್ಮೂಲ, ವರ್ಚಸ್ಸಿನಿಂದ ಸಮರ್ಥ ವ್ಯಕ್ತಿಯಾಗಿದ್ದಾರೆ. ಹೀಗಾಗಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವಂತೆ ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಮನವರಿಕೆ ಮಾಡಿದ್ದರು. ಆದರೆ, ಸಿದ್ದರಾಮಯ್ಯ ಅವರ ಮನವಿಗೆ ಸೊಪ್ಪು ಹಾಕದ ಹೈಕಮಾಂಡ್, ಹಲವು ಸಂದರ್ಭಗಳಲ್ಲಿ ಹಲವು ತೊಂದರೆಗಳನ್ನು ಎದುರಿಸಿ ಪಕ್ಷಕ್ಕೆ ನಿಷ್ಠೆ ತೋರಿರುವ ಡಿಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.

ಡಿಕೆಶಿ ಆಯ್ಕೆ ಏಕೆ?

ಕಾಂಗ್ರೆಸ್ ಪಕ್ಷದಲ್ಲಿ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಡಿಕೆ ಶಿವಕುಮಾರ್, ಹಲವು ಸಂದರ್ಭಗಳಲ್ಲಿ ಪಕ್ಷವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ. ಪಕ್ಷ ನೀಡಿದ ಜವಾಬ್ದಾರಿಗಳನ್ನು ಒಂಚೂರು ಚ್ಯುತಿ ಬಾರದ ಹಾಗೆ ಚಾಚುತಪ್ಪದೆ ಪಾಲಿಸಿದ್ದಾರೆ. ಹಲವು ರಾಜ್ಯಗಳಲ್ಲಿ ರಾಜಕೀಯ ಬಿಕ್ಕಟ್ಟು ಎದುರಾದಾಗ ಕಾಂಗ್ರೆಸ್ ಶಾಸಕರನ್ನು ರಾಜ್ಯದಲ್ಲಿ ಸುರಕ್ಷಿತವಾಗಿ ನೋಡಿಕೊಂಡಿದ್ದಾರೆ. ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಅವರನ್ನು ರಾಜ್ಯಸಭೆಗೆ ಮರುಆಯ್ಕೆ ಮಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೇ, ಈ ಕೆಲಸಗಳಿಗಾಗಿ ಕೇಂದ್ರ ಸರ್ಕಾರದ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಐಟಿ, ಇಡಿ ದಾಳಿಗೂ ಒಳಗಾಗಿ ಜೈಲುವಾಸ ಸಹ ಅನುಭವಿಸಿದ್ದಾರೆ. ಎಂತಹ ಸಂದರ್ಭದಲ್ಲಿಯೂ ಪಕ್ಷದ ವಿರುದ್ಧ ನಡೆದುಕೊಳ್ಳದೆ, ಪಕ್ಷ ತೊರೆಯದೆ ನಿಷ್ಠೆ ತೋರಿರುವುದನ್ನು ಪರಿಗಣಿಸಿ, ಹೈಕಮಾಂಡ್ ಡಿಕೆಶಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕರುಣಿಸಿದೆ.

ಸಂಪನ್ಮೂಲ ಮತ್ತು ವರ್ಚಸ್ವಿ ನಾಯಕ ಡಿಕೆಶಿಪಕ್ಷವನ್ನು ಮುನ್ನಡೆಸಲು ಬೇಕಾದ ವರ್ಚಸ್ಸು ಮತ್ತು ಸಂಪನ್ಮೂಲ ಡಿಕೆಶಿ ಬಳಿ ಹೇರಳವಾಗಿದೆ. ಯಾವುದೇ ಸವಾಲನ್ನು ಲೀಲಾಜಾಲವಾಗಿ ಸ್ವೀಕರಿಸುವ ಡಿಕೆಶಿ ಕಷ್ಟಕಾಲದಲ್ಲಿ ಪಕ್ಷವನ್ನು ಸಮರ್ಥವಾಗಿ ಸಂಘಟಿಸುವ ಶಕ್ತಿ, ಚಾಣಕ್ಷತನವಿದೆ. ಅಷ್ಟೇ ಅಲ್ಲದೇ, ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಡಿಕೆಶಿಗೆ ಅಪಾರ ಪ್ರಮಾಣದ ಬೆಂಬಲಿಗರೂ ಇದ್ದಾರೆ.

ಸಿದ್ದರಾಮಯ್ಯ ಪ್ರಭಾವ ಕುಗ್ಗಿಸಲು ಡಿಕೆಶಿ ಆಯ್ಕೆ?

ಕೆಪಿಸಿಸಿ ಅಧ್ಯಕ್ಷ ಗಾದಿಗೆ ಡಿ.ಕೆ. ಶಿವಕುಮಾರ್ ಮತ್ತು ಎಂ.ಬಿ. ಪಾಟೀಲ್ ನಡುವೆ ಭಾರೀ ಪೈಪೋಟಿ ನಡೆದಿತ್ತು. ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ಇನ್ನೊಂದು ಬಣದ ಒಳೇಟಿನ ಭಯ ಹೈಕಮಾಂಡ್​ಗೆ ಇದ್ದೇ ಇದೆ. ಹಾಗಾಗಿ ಯಾರ ಆಯ್ಕೆ ಸೂಕ್ತ ಎಂಬುದನ್ನು ನಿರ್ಧರಿಸಲು ಸೋನಿಯಾ ಗಾಂಧಿ ಅವರು ಮಧುಯಾಸ್ಕಿ ಗೌಡ, ವಿಶ್ವನಾಥ್, ಮಾಣಿಕ್ ಠ್ಯಾಗೂರ್, ಶೈಲಜನಾಥ್ ಅವರಿಂದ ಮತ್ತೊಂದು ವರದಿ ಕೂಡ ತರಿಸಿಕೊಂಡಿದ್ದರು.

ಆ ವರದಿಯಂತೆ, ಶಾಸಕಾಂಗ ಮತ್ತು ವಿಪಕ್ಷ ನಾಯಕರನ್ನಾಗಿ ಸಿದ್ದರಾಮಯ್ಯ ಅವರನ್ನೇ ಮುಂದುವರಿಸಿ. ಸಿದ್ದರಾಮಯ್ಯ ಅವರು ರಾಜೀನಾಮೆ ಒಪ್ಪಿಕೊಂಡರೆ ರಾಜ್ಯದಲ್ಲಿ ಕಾಂಗ್ರೆಸ್​ಗೆ ಅಪಾಯ ಕಟ್ಟಿಟ್ಟಬುತ್ತಿ. ಇದರಿಂದ ಸಿದ್ದರಾಮಯ್ಯ ಬಣದ ಶಾಸಕರಿಂದ ವಿರೋಧ ವ್ಯಕ್ತವಾಗಿ, ಮತ್ತಷ್ಟು ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಸಿದ್ದರಾಮಯ್ಯ ಅವರೇ ಶಾಸಕಾಂಗ, ವಿಪಕ್ಷ ನಾಯಕರಾಗಿ ಮುಂದುವರಿಯಲೇಬೇಕು. ಆದರೆ ಸಿದ್ದರಾಮಯ್ಯ ಪ್ರಭಾವ ಕಡಿಮೆ ಮಾಡಬೇಕು. ಸಿದ್ದರಾಮಯ್ಯ ಮಾತ್ರ ನಾಯಕ ಎಂದು ಬಿಂಬಿಸಬಾರದು ಎಂದು ಹೇಳಲಾಗಿದೆ. ಹಾಗೆಯೇ ಮುಂದುವರೆದು, ಸಿದ್ದರಾಮಯ್ಯ ಪ್ರಭಾವ ಕುಗ್ಗಿಸಲು ವಿರೋಧಿ ಬಣದವರಿಗೆ ಮಣೆ ಹಾಕುವುದು ಸೂಕ್ತ. ವಿರೋಧಿ ಬಣದವರನ್ನು ಉಪನಾಯಕ ಮತ್ತು ವಿಪ್ ಮಾಡಿ. ಕೆಪಿಸಿಸಿ ಅಧ್ಯಕ್ಷರ ನೇಮಕ ವಿಷಯದಲ್ಲೂ ಇದೇ ತಂತ್ರ ಮಾಡಿ. ಯಾರನ್ನೇ ಅಧ್ಯಕ್ಷರನ್ನಾಗಿ ನೇಮಿಸಿದರೂ ಚೆಕ್ ಮೆಟ್ ಇಡಿ. ಡಿಕೆಶಿ ಮಾಡಿದರೆ ಸಿದ್ದರಾಮಯ್ಯ ಬಣಕ್ಕೆ ಕಾರ್ಯಾಧ್ಯಕ್ಷ ಹುದ್ದೆಗಳನ್ನು ನೀಡಿ. ಎಂಬಿಪಿ ಮಾಡಿದರೆ ಡಿಕೆಶಿ ಮತ್ತಿತರ ಸಲಹೆಯಂತೆ ಕಾರ್ಯಾಧ್ಯಕ್ಷ ಹುದ್ದೆ ನೀಡಿ. ಈ‌ ಸೂತ್ರದಂತೆ ಎರಡೂ ಬಣವನ್ನೂ ನಿರ್ವಹಣೆ ಮಾಡಬಹುದು ಎಂದು ಸೋನಿಯಾ ಗಾಂಧಿಗೆ ಉಸ್ತುವಾರಿಗಳ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು. ಅದರಂತೆ ಸಿದ್ದರಾಮಯ್ಯ ಅವರ ಪ್ರಭಾವ ಕಡಿಮೆ ಮಾಡಲು ಡಿಕೆಶಿ ಅವರಿಗೆ ಮಣೆ ಹಾಕಲಾಗಿದೆ.

ಇದನ್ನು ಓದಿ: KPCC President: ಡಿಕೆ ಶಿವಕುಮಾರ್​ ಕರ್ನಾಟಕ ಕಾಂಗ್ರೆಸ್​ನ ನೂತನ ಸಾರಥಿ, ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕೃತ ಆಯ್ಕೆ

ಸಿಂಧಿಯಾ ರಾಜೀನಾಮೆ ಕೂಡ ಕಾರಣ?

ಎರಡು ದಶಕಗಳ ಕಾಲ ಪಕ್ಷದಲ್ಲಿ ಪ್ರಭಾವಶಾಲಿಯಾಗಿ ಗುರುತಿಸಿಕೊಂಡಿದ್ದ, ರಾಹುಲ್ ಗಾಂಧಿ ಆಪ್ತ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪಕ್ಷದಿಂದ ಯಾವುದೇ ಅಧಿಕಾರ ಸಿಗದ ಕಾರಣಕ್ಕೆ ಅಸಮಾಧಾನಗೊಂಡು ಪಕ್ಷಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇಂತಹ ಸಂದಿಗ್ನ ಪರಿಸ್ಥಿತಿಯಲ್ಲಿ ಡಿಕೆಶಿಗೆ ಅಧಿಕಾರ ನೀಡದಿದ್ದರೆ ಅವರು ಸಹ ಕಾಂಗ್ರೆಸ್ ಬಿಟ್ಟರೆ ಪಕ್ಷದ ಮೇಲೆ ಭಾರಿ ಪೆಟ್ಟು ಬೀಳಲಿದೆ ಎಂಬುದನ್ನು ಅರಿತು ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಹಾಗೆಯೇ ಬಂಡಾಯ ಎದ್ದು, ಬೆಂಗಳೂರಿನ ರೆಸಾರ್ಟ್​ನಲ್ಲಿರುವ ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರನ್ನು ಮನವೊಲಿಸಿ, ಸರ್ಕಾರ ಉಳಿಸುವ ಪ್ರಯತ್ನವನ್ನು ಎಐಸಿಸಿ ಈ ಮೂಲಕ ಮಾಡಿದೆ ಎನ್ನಲಾಗುತ್ತಿದೆ.
First published: March 11, 2020, 4:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories