ದೇವೇಗೌಡರು ಪ್ರಧಾನಿ ಹುದ್ದೆ ಕಳೆದುಕೊಂಡಿದ್ದು ಹೇಗೆ ಗೊತ್ತಾ?; ರಹಸ್ಯ ಬಿಚ್ಚಿಟ್ಟ ಎಸ್​.ಎಂ. ಕೃಷ್ಣ

ದೇವೇಗೌಡರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿದ್ದು ಯಾರು ಮತ್ತು ಹೇಗೆಂಬ ವಿಷಯವನ್ನು ಮಾಜಿ ಮುಖ್ಯಮಂತ್ರಿ ಎಸ್​.ಎಂ. ಕೃಷ್ಣ ಬಿಚ್ಚಿಟ್ಟಿದ್ದಾರೆ. ತಮ್ಮ 'ಸ್ಮೃತಿ ವಾಹಿನಿ' ಎಂಬ ಆತ್ಮಚರಿತ್ರೆಯಲ್ಲಿ ಈ ಬಗ್ಗೆ ಹೇಳಿರುವ ಎಸ್.ಎಂ. ಕೃಷ್ಣ ಆ ಸಮಯದಲ್ಲಿ ನಡೆದ ಘಟನೆಗಳನ್ನು ವಿವರವಾಗಿ ತಿಳಿಸಿದ್ದಾರೆ.

ಎಚ್​.ಡಿ. ದೇವೇಗೌಡ

ಎಚ್​.ಡಿ. ದೇವೇಗೌಡ

  • Share this:
ಬೆಂಗಳೂರು (ಜ. 4): ಕಾಂಗ್ರೆಸ್ ಬೆಂಬಲದಿಂದ ಪ್ರಧಾನಿಯಾಗಿದ್ದ ಎಚ್.ಡಿ. ದೇವೇಗೌಡರು ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದು ಹೇಗೆ? ದೇವೇಗೌಡರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ಕಾರಣವೇನು? ಕಾಂಗ್ರೆಸ್ ಪಕ್ಷದ ನೆರವಿನಿಂದಲೇ ಪ್ರಧಾನಿ ಭಾಗ್ಯ ಪಡೆದ ದೇವೇಗೌಡರನ್ನು ಕೆಳಗಿಳಿಸಲು ಪ್ರಬಲ ಕಾರಣ ಏನು? ಪ್ರಧಾನಿ ಆಗಿದ್ದ ದೇವೇಗೌಡರು ಕೇವಲ 11 ತಿಂಗಳಿಗೆ ಮಾಜಿ ಪಿಎಂ ಆಗಿದ್ದು ಹೇಗೆಂಬ ರಹಸ್ಯ ಬಯಲಾಗಿದೆ.

1996ನೇ ಇಸವಿಯಲ್ಲಿ ಕನ್ನಡಿಗರೊಬ್ಬರಿಗೆ ದೇಶದ ಪ್ರಧಾನಿ ಆಗೋ ಭಾಗ್ಯ ಲಭಿಸಿತ್ತು. ಹರದನಹಳ್ಳಿಯ ರೈತನ ಮಗ ಹೆಚ್.ಡಿ‌. ದೇವೇಗೌಡರು ದೇಶದ ಪ್ರಧಾನಿಯಾದರು. ಎಐಸಿಸಿ ಅಧ್ಯಕ್ಷರಾಗಿದ್ದ ಸೀತಾರಾಂ ಕೇಸರಿ ಕೃಪಾಕಟಾಕ್ಷದಿಂದ ಹೆಚ್.ಡಿ. ದೇವೇಗೌಡರು ಪ್ರಧಾನಮಂತ್ರಿಯಾದರು. ದೇವೇಗೌಡರು ಪ್ರಧಾನಮಂತ್ರಿಯಾದ 11 ತಿಂಗಳಿಗೆ ಜೀವನದ ಅತಿದೊಡ್ಡ ಪೊಲಿಟಿಕಲ್ ಬ್ಲಂಡರ್ ಒಂದನ್ನು ಮಾಡಿಕೊಂಡರು. ದೇವೇಗೌಡರು ಅಂದು ಕಾಂಗ್ರೆಸ್ ಅಧ್ಯಕ್ಷರಾಗಿದ್ದ , ತಮಗೆ ಬೆಂಬಲ ಕೊಟ್ಟಿದ್ದ ಸೀತಾರಾಂ ಕೇಸರಿಯವರ ವಿರುದ್ಧವೇ ಯಾವುದೋ ಹಳೆಯ ಪ್ರಕರಣದ ಕಡತವನ್ನು ಹುಡುಕಿ ಸಿಬಿಐ ತನಿಖೆಗೆ ಕೊಡಲು ತಯಾರಿ ನಡೆಸಿದ್ದರು. ಸೀತಾರಾಂ ಕೇಸರಿ ವಿರುದ್ಧ ಸಿಬಿಐ ತನಿಖೆಗೆ ಆದೇಶ ನೀಡಿದರೆ ಅವರು ತಾನು ಹೇಳಿದ ಹಾಗೆ ಕೇಳುತ್ತಾರೆ ಎಂಬುದು ದೇವೇಗೌಡರ ಲೆಕ್ಕಾಚಾರವಾಗಿತ್ತು. ಆದರೆ, ಆಗಿದ್ದೇ ಬೇರೆ.

ಹೀಗೆ ದೇವೇಗೌಡರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿದ್ದು ಯಾರು ಮತ್ತು ಹೇಗೆಂಬ ವಿಷಯವನ್ನು ಮಾಜಿ ಮುಖ್ಯಮಂತ್ರಿ ಎಸ್​.ಎಂ. ಕೃಷ್ಣ ಬಿಚ್ಚಿಟ್ಟಿದ್ದಾರೆ. ತಮ್ಮ 'ಸ್ಮೃತಿ ವಾಹಿನಿ' ಎಂಬ ಆತ್ಮಚರಿತ್ರೆಯಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಎಸ್.ಎಂ. ಕೃಷ್ಣ ಆ ಸಮಯದಲ್ಲಿ ನಡೆದ ಘಟನೆಗಳನ್ನು ಸವಿವರವಾಗಿ ತಿಳಿಸಿದ್ದಾರೆ. ಈ ಪುಸ್ತಕವನ್ನು ಬಿ.ಎಲ್. ಶಂಕರ್ ಬರೆದಿದ್ದು, ಎಸ್​.ಎಂ. ಕೃಷ್ಣ ಅವರ ಅನುಭವಗಳನ್ನು ಅಕ್ಷರ ರೂಪಕ್ಕೆ ಇಳಿಸಿದ್ದಾರೆ.

ಇದನ್ನೂ ಓದಿ: ಸೋತ ಅಭ್ಯರ್ಥಿಗಳಿಂದ ಸಚಿವ ಸ್ಥಾನಕ್ಕೆ ಲಾಬಿ; ಬೆಳ್ಳಂಬೆಳಗ್ಗೆ ಸಿಎಂ ಭೇಟಿ ಮಾಡಿದ ಎಂಟಿಬಿ, ಎಚ್. ವಿಶ್ವನಾಥ್

ಕಾಂಗ್ರೆಸ್ ಅಧ್ಯಕ್ಷರ ವಿರುದ್ಧವೇ ದೇವೇಗೌಡರು ಸೀಕ್ರೆಟ್ ಆಗಿ ಸ್ಕೆಚ್ ಹಾಕಿದ್ದರು. ಅಂದಿನ ಎಐಸಿಸಿ ಅಧ್ಯಕ್ಷ ಸೀತಾರಾಂ ಕೇಸರಿ ವಿರುದ್ಧವೇ ಸಿಬಿಐ ತನಿಖೆ ನಡೆಸಲು ನಿರ್ಧರಿಸಿದ್ದ ದೇವೇಗೌಡರ ಸಿಬಿಐ ಅಸ್ತ್ರ ಬಳಸಿ ಪರೋಕ್ಷವಾಗಿ ಎಐಸಿಸಿ ಅಧ್ಯಕ್ಷರನ್ನೇ ಹೆದರಿಸಿದ್ದರು ಎಂಬ ವಿಷಯವನ್ನು ಎಸ್​.ಎಂ. ಕೃಷ್ಣ ತೆರೆದಿಟ್ಟಿದ್ದಾರೆ. ಸೀತಾರಾಂ ಕೇಸರಿಯವರ ಹಳೆಯ ಪ್ರಕರಣವನ್ನು ಕೆದಕಿ ಸಿಬಿಐ ತನಿಖೆ ನಡೆಸಲು ಗೌಡರು ಮುಂದಾಗಿದ್ದರು. ಎಐಸಿಸಿ ಅಧ್ಯಕ್ಷ ಆಗಿದ್ದ ಕೇಸರಿಗೆ ಇದು ಗೊತ್ತಾಗಿರುವ ವಿಷಯ ತಿಳಿದು ಆತಂಕಕ್ಕೊಳಗಾಗಿದ್ದ ದೇವೇಗೌಡರು ಪ್ರಧಾನಿ ಹುದ್ದೆಯನ್ನು ಕಳೆದುಕೊಳ್ಳುವ ಬಗ್ಗೆ ಭಯಗೊಂಡಿದ್ದರು.

ಗೌಡರ ಸಿಬಿಐ ತನಿಖೆಯ ನಿರ್ಧಾರ ಸೀತಾರಾಂ ಕೇಸರಿಯವರನ್ನು ಕೆರಳಿಸಿತ್ತು. ಗೌಡರಿಗೆ ತಕ್ಕಶಾಸ್ತಿ ಮಾಡಲೇಬೇಕೆಂದು ಅವರು ನಿರ್ಧರಿಸಿದ್ದರು. ಗೌಡರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ತೀರ್ಮಾನಿಸಿದ್ದರು. ಇದೇ ಕಾರಣಕ್ಕೆ ರಾಷ್ಟ್ರಪತಿಗಳ ಅನುಮತಿ ಕೂಡ ತೆಗೆದುಕೊಳ್ಳಲಿಲ್ಲ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯನ್ನು ಕರೆದು ಒಪ್ಪಿಗೆ ಪಡೆಯಲಿಲ್ಲ. ಬೆಳ್ಳಂಬೆಳಗ್ಗೆ ರಾಷ್ಟ್ರಪತಿ ಭವನಕ್ಕೆ ಸೀದಾ ಹೋಗಿದ್ದ ಸೀತಾರಾಂ ಕೇಸರಿ ದಿಢೀರನೆ ರಾಷ್ಟ್ರಪತಿಯನ್ನು ಭೇಟಿ ಮಾಡಿದ್ದರು. ದೇವೇಗೌಡರ ನೇತೃತ್ವದ ಜನತಾದಳ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕಾಂಗ್ರೆಸ್ ವಾಪಾಸ್ ಪಡೆದುಕೊಂಡಿದೆ ಎಂದು ಪತ್ರ ಕೊಟ್ಟಿದ್ದರು. ಅಲ್ಲಿಗೆ ದೇವೇಗೌಡರ ಸರ್ಕಾರದ ಕಥೆ ಮುಗಿದಿತ್ತು ಎಂಬ ವಿಷಯವನ್ನು ಕೇಂದ್ರದ ಮಾಜಿ ವಿದೇಶಾಂಗ ಸಚಿವ ಎಸ್​.ಎಂ. ಕೃಷ್ಣ ತಮ್ಮ ಪುಸ್ತಕದ ಮೂಲಕ ತೆರೆದಿಟ್ಟಿದ್ದಾರೆ.

 

 

 
Published by:Sushma Chakre
First published: