New ITI courses- ಈ ವರ್ಷದಿಂದಲೇ ಆರು ಹೊಸ ಕೋರ್ಸ್​ಗಳ ಪ್ರವೇಶಾತಿಗೆ ಅವಕಾಶ

ಉದ್ಯಮಗಳಿಗೆ ಪೂರಕವಾದ ಕೌಶಲಗಳಿರುವ ನೌಕರರನ್ನು ನಿರ್ಮಿಸುವ ದೃಷ್ಟಿಯಿಂದ ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್, ಇಂಡಸ್ಟ್ರಿಯಲ್ ರೋಬೋಟಿಕ್ಸ್ ಸೇರಿದಂತೆ ಆರು ಹೊಸ ಕೋರ್ಸ್​ಗಳನ್ನ ರಾಜ್ಯದ 150 ಐಟಿಐ ಕಾಲೇಜುಗಳಲ್ಲಿ ಪರಿಚಯಿಸಲಾಗುತ್ತಿದೆ.

ಕೌಶಲ್ಯಾಭಿವೃದ್ಧಿ ಸಚಿವ ಡಾ. ಅಶ್ವತ್ಥ ನಾರಾಯಣ ಅವರಿಂದ ಸಭೆ

ಕೌಶಲ್ಯಾಭಿವೃದ್ಧಿ ಸಚಿವ ಡಾ. ಅಶ್ವತ್ಥ ನಾರಾಯಣ ಅವರಿಂದ ಸಭೆ

  • Share this:
ಬೆಂಗಳೂರು: ಟಾಟಾ ಕಂಪನಿಯ ಸಹಯೋಗದಲ್ಲಿ ರಾಜ್ಯದ 150 ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಉನ್ನತೀಕರಿಸುವ ಕಾರ್ಯಕ್ರಮದಡಿ ಈಗಿನ ಬೇಡಿಕೆಗಳನ್ನು ಗಮನದಲ್ಲಿರಿಸಿಕೊಂಡು 6 ಹೊಸ ಕೋರ್ಸ್​ಗಳಿಗೆ ರಾಜ್ಯ ವೃತ್ತಿಶಿಕ್ಷಣ ಪರಿಷತ್ (ಎಸ್.ವಿ.ಸಿ.ಟಿ.) ಮಂಗಳವಾರ ಅನುಮೋದನೆ ನೀಡಿದೆ. ಉನ್ನತ ಶಿಕ್ಷಣ ಸಚಿವ ಹಾಗೂ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯಗಳ ಇಲಾಖೆ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ನಿರ್ಣಯವು ಎಲ್ಲಾ 150 ಐ.ಟಿ.ಐ.ಗಳಿಗೆ ಅನ್ವಯವಾಗುತ್ತದೆ. ಈ ಸಾಲಿನಿಂದಲೇ ವಿದ್ಯಾರ್ಥಿಗಳ ಪ್ರವೇಶಾತಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು. ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ (Battery Electric Vehicle) 2 ವರ್ಷ, ಬೇಸಿಕ್ಸ್ ಆಫ್ ಡಿಜೈನ್ ಅಂಡ್ ವರ್ಚ್ಯುಯಲ್ ವೆರಿಫಿಕೇಷನ್ (Basics off-design and Virtual Verfication) 2 ವರ್ಷ, ಅಡ್ವಾನ್ಸ್ಡ್ ಮ್ಯಾನಫ್ಯಾಕ್ಚರಿಂಗ್ (Advanced Manufacturing) 1 ವರ್ಷ, ಆರ್ಟಿಸಾನ್ ಯೂಸಿಂಗ್ ಅಡ್ವಾನ್ಸ್ಡ್ ಟೂಲ್ಸ್  (Artisan Using Advanced Tools) 1 ವರ್ಷ, ಇಂಡಸ್ಟ್ರಿಯಲ್ ರೊಬೊಟಿಕ್ಸ್ ಅಂಡ್ ಡಿಜಿಟಲ್ ಮ್ಯಾನಫ್ಯಾಕ್ಚರ್ (Industriial Robotics and Digital Manufacture) 1 ವರ್ಷ, ಮ್ಯಾನಫ್ಯಾಕ್ಚರಿಂಗ್ ಪ್ರೊಸೆಸ್ ಕಂಟ್ರೋಲ್ ಆಟೊಮೇಷನ್ (Manufacturing Process Control Automation) 1 ವರ್ಷ, ಈ 6 ಸಂಯೋಜನೆಗಳು ಐ.ಟಿ.ಐ.ಗೆ ಸೇರ್ಪಡೆಯಾಗುತ್ತವೆ ಎಂದು ಸಚಿವರು ವಿವರಿಸಿದರು.

ಅಂತಿಮವಾಗಿ ಈ ಸಂಯೋಜನೆಗಳಿಗೆ ರಾಷ್ಟ್ರೀಯ ವೃತ್ತಿಶಿಕ್ಷಣ ತರಬೇತಿ ಪರಿಷತ್ (ಎನ್.ಸಿ.ವಿ.ಇ.ಟಿ.) ಮಾನ್ಯತೆ ಕೊಡಬೇಕು. ಅದಕ್ಕೆ ಪೂರಕವಾಗಿ ಈ 6 ಸಂಯೋಜನೆಗಳಿಗಾಗಿ ಸಿದ್ಧಪಡಿಸಲಾಗಿರುವ ಪಠ್ಯಕ್ರಮಕ್ಕೆ ನವದೆಹಲಿಯ ತರಬೇತಿ ಮಹಾನಿರ್ದೇಶನಾಲಯದಿಂದ (ಡಿ.ಜಿ.ಟಿ.) ಅನುಮೋದನೆ ಪಡೆಯಬೇಕಾಗಿರುತ್ತದೆ. ಈಗ ರಾಜ್ಯ ಸರ್ಕಾರವು ಈ ಸಂಯೋಜನೆಗಳ ಪಠ್ಯಕ್ರಮವನ್ನು ಡಿ.ಜಿ.ಟಿ.ಗೆ ಸಲ್ಲಿಸಿದ್ದು, ಅದು ಪ್ರಕ್ರಿಯೆಯಲ್ಲಿದೆ. ಆದರೆ, ವಿದ್ಯಾರ್ಥಿಗಳ ಪ್ರವೇಶಾತಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಎನ್.ಸಿ.ವಿ.ಇ,ಟಿ.ಯಿಂದ ಈ 6 ಸಂಯೋಜನೆಗಳಿಗೆ ಮಾನ್ಯತೆ ಪಡೆಯುವ ಷರತ್ತಿಗೊಳಪಟ್ಟು ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದೂ ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದರು.

ಇದೇ ಸಭೆಯಲ್ಲಿ, 3 ತಿಂಗಳ ಅವಧಿಯ 23 ಅಲ್ಪಾವಧಿ ಸರ್ಟಿಫೈಡ್ ಕೋರ್ಸ್​ಗಳಿಗೆ  ಕೂಡ ಎಸ್.ವಿ.ಸಿ.ಟಿ.ಯು ಅನುಮೋದನೆ ನೀಡಿದೆ ಎಂದು ಸಚಿವರು ಹೇಳಿದರು. ಕೌಶಲಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಆಯುಕ್ತ ಡಾ. ಹರೀಶ್ ಕುಮಾರ್ ಕೆ. ಮತ್ತಿತರರು ಇದ್ದರು.

ಇದನ್ನೂ ಓದಿ: Rape- ನಗ್ನ ವಿಡಿಯೋ ಮಾಡಿ ಅಪ್ರಾಪ್ತೆಗೆ ಬ್ಲ್ಯಾಕ್​ಮೇಲ್; ಚಿಕ್ಕಮಗಳೂರಲ್ಲಿ ನಿರಂತರ ಅತ್ಯಾಚಾರ

ರಾಷ್ಟ್ರೀಯ ಶಿಕ್ಷಣ ನೀತಿಗೆ ಪದವಿ ಕಾಲೇಜುಗಳಿಂದ ಉತ್ತಮ ಬೆಂಬಲ:

ಗುಣಮಟ್ಟದ ಶಿಕ್ಷಣವೂ ಗುಣಮಟ್ಟದ ಜೀವನದ ತಳಹದಿ. ರಾಷ್ಟ್ರೀಯ ಶಿಕ್ಷಣ ನೀತಿಯು ಈ ನಿಟ್ಟಿನಲ್ಲಿ ಸಮಾಜಕ್ಕೆ ಒಳ್ಳೆ ಪರಿಹಾರವಾಗಿದೆ.  ನೂತನ ಶಿಕ್ಷಣ ನೀತಿ ಜಾರಿ ಬಗ್ಗೆ ಎಲ್ಲಾ ಪದವಿ ಕಾಲೇಜುಗಳು ಉತ್ತಮ ಸಹಕಾರ ನೀಡುತ್ತಿವೆ. ವಿದ್ಯಾರ್ಥಿಗಳಿಂದ ಕೂಡ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ನೀತಿಯನ್ನು ಮತ್ತಷ್ಟು ಹುರುಪಿನಿಂದ ಜಾರಿ ಮಾಡಲು ಸರಕಾರಕ್ಕೆ ಇನ್ನಷ್ಟು ಶಕ್ತಿ ಬಂದಿದೆ ಎಂದು ಸಚಿವರು ಹೇಳಿದರು.

ಸಮಾಜದ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಶಿಕ್ಷಣ ಮಾತ್ರ ಸಹಕಾರಿ. ನಮ್ಮ ದೇಶ ಅಭಿವೃದ್ಧಿ ಹೊಂದಿದ ದೇಶವಾಗಿ ಬದಲಾಗಲು ನೂತನ ಶಿಕ್ಷಣ ನೀತಿ ಅತಿ ದೊಡ್ಡ ಮಾರ್ಗವಾಗಿದೆ ಎಂದು ಅವರು ನುಡಿದರು. ಈಗಾಗಲೇ ನೀತಿ ಜಾರಿಗೆ ಶೈಕ್ಷಣಿಕ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಉಳಿದ ಸುಧಾರಣೆಗಳನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು. ಗುಣಮಟ್ಟದ ಶಿಕ್ಷಣದಿಂದ ಎಲ್ಲಾ  ಕ್ಷೇತ್ರಗಳಲ್ಲೂ ಬದಲಾವಣೆ ಆಗಲಿದೆ ಎಂದು ಅವರು ತಿಳಿಸಿದರು.

ವರದಿ: ಶರಣು ಹಂಪಿ
Published by:Vijayasarthy SN
First published: