ಬೆಂಗಳೂರು: ಸದನದಲ್ಲಿ ಇಂದು ಸಿಡಿ ವಿಷಯವಾಗಿ ಕೋರ್ಟ್ನಿಂದ ಸ್ಟೇ ತಂದ ಆರು ಸಚಿವರ ನಡೆಯ ಬಗ್ಗೆ ಭಾರೀ ಚರ್ಚೆ ನಡೆಯಿತು. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಈ ಬಗ್ಗೆ ವಿಷಯ ಮಂಡಿಸಿ, ಕುಂಬಳ ಕಾಯಿ ಕಳ್ಳ ಅಂದರೆ ಇವರು ಯಾಕೆ ಹೆಗಲು ಮುಟ್ಟಿಕೊಂಡರು ಎಂದು ಆರು ಸಚಿವರ ನಡೆಯನ್ನು ಟೀಕಿಸಿದರು. ಸಿದ್ದರಾಮಯ್ಯ ಅವರು ಟೀಕೆಗೆ ಸಚಿವರು ಮುಗಿಬಿದ್ದು, ತಮ್ಮ ನಡೆಯನ್ನು ಸಮರ್ಥನೆ ಮಾಡಿಕೊಳ್ಳಲು ಮುಂದಾದರು.
ಭೋಜನ ವಿರಾಮದ ನಂತರ ವಿಧಾನಸಭೆ ಕಲಾಪ ಆರಂಭವಾದ ನಂತರ ನಿಯಮ 69ರ ಅಡಿಯಲ್ಲಿ ಸಿಡಿ ಬಗ್ಗೆ ಸಿದ್ದರಾಮಯ್ಯ ಚರ್ಚೆ ಆರಂಭಿಸಿದರು. ಸ್ವಾತಂತ್ರ್ಯ ಬಂದ ಮೇಲೆ ಯಾವೊಬ್ಬ ಸಚಿವರು ಈ ರೀತಿ ಕೋರ್ಟ್ಗೆ ಹೋಗಿ ಸ್ಟೇ ತಂದಿಲ್ಲ. ಈವರೆಗೂ ಇತಿಹಾಸದಲ್ಲಿ ನಾಲ್ವರು ಸಚಿವರು ಮಾತ್ರ ರಾಜೀನಾಮೆ ಕೊಟ್ಟಿದ್ದಾರೆ. ಆ ಮೇಲೆ ಇವಾಗ ಈ ಆರು ಜನ ಮಂತ್ರಿಗಳು ಕೋರ್ಟ್ ಗೆ ಹೋಗಿ ಸ್ಟೇ ತಂದು ರಕ್ಷಣೆಯಲ್ಲಿರೋದು ಇವರೇ. ಶಾಸಕರು ಅಂದರೆ ನಿಮ್ಮ ಪಕ್ಷದವರಾದ ರೋಣದವರು ಕೂಡ ತಗೊಂಡವ್ರೇ. 19 ಸಚಿವರು ಸಿಡಿ ಇದೆ ಅಂತಾರಲ್ಲ. ಇವರಿಗೆ ಹೇಗೆ ಗೊತ್ತು ಅದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದರು.
ಸಿದ್ದರಾಮಯ್ಯ ಮಾತಿನ ವೇಳೆ ಸಚಿವ ಬಸವರಾಜ ಬೊಮ್ಮಾಯಿ ಮಧ್ಯ ಪ್ರವೇಶಿಸಿ, ಎಚ್.ವೈ. ಮೇಟಿ ವಿಚಾರ ಪ್ರಸ್ತಾಪ ಮಾಡಿದರು. ಆಗ ಸಿದ್ದರಾಮಯ್ಯ ಅವರು ಸರಿ ಆಗಿದ್ರೆ ಗೋಪಾಲಯ್ಯ ಸೇರಿದಂತೆ ಉಳಿದವರು ಯಾಕೆ ಸ್ಟೇ ತಂದಿಲ್ಲ. ನನಗೂ ಹೇಳಿ..? ನಾನೇನು ಕೋರ್ಟ್ ಗೆ ಹೋಗಿ ಸ್ಟೇ ತಂದಿದ್ದೀನಾ..? ಮಾಧ್ಯಮಗಳು ಗೋಪಾಲಯ್ಯ ಅವರನ್ನು ಕೇಳಿದ್ರು, ಅವಾಗ ಅವರು ನಂದು ಯಾವುದು ಸಿಡಿ ಇಲ್ಲ, ಅದಕ್ಕೆ ನಾನು ತಂದಿಲ್ಲ ಅಂತಾ ಹೇಳಿದ್ದಾಗಿ ಸಿದ್ದರಾಮಯ್ಯ ತಿಳಿಸಿದರು. ಈ ವೇಳೆ ಮಧ್ಯಪ್ರವೇಶಿದ ಗೋಪಾಲಯ್ಯ ಅವರು, ನಾವೆಲ್ಲರೂ 17 ಜನ ಒಟ್ಟಾಗಿ ಇದ್ದೇವೆ. ನಮ್ದು ಯಾವುದು ಸಿಡಿ ಇಲ್ಲ. ಅಂದು ನಾನು ಅವರ ಜೊತೆಯಲ್ಲಿ ಇರಲಿಲ್ಲ. ನಾವೆಲ್ಲ ಸಹೋದ್ಯೋಗಿಗಳು ಜೊತೆಯಲ್ಲಿ ಇದ್ದೇವೆ ಎಂದು ಉತ್ತರಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಆರು ಜನ ಸಚಿವರು ಸ್ಟೇ ತಂದಿದ್ದಾರೆ. 19 ಸಿಡಿಗಳು ಇರಬಹುದು ಎಂದಿದ್ದಾರೆ. ಇವರಿಗೆ 19 ಸಿಡಿಗಳು ಇರೋದು ಗೊತ್ತಿರಬಹುದು. ಗೋಪಾಲಯ್ಯ ಯಾಕೆ ಸ್ಟೇ ತರಲಿಲ್ಲ. ಎಂಟಿಬಿ ನಾಗರಾಜ್ ಯಾಕೆ ತರಲಿಲ್ಲ. ಅವರು ಏನೂ ಮಾಡಿಲ್ಲ, ಅದಕ್ಕೆ ತರಲಿಲ್ಲ? ರಮೇಶ್ ಜಾರಕಿಹೊಳಿಗೆ ಆದಂತೆ, ನಮಗೂ ಷಡ್ಯಂತ್ರ ಆಗುತ್ತೆ ಅಂತಾರೆ. ಯಾಕೆ ಹೀಗೆ ಬಾಂಬೆಗೆ ಹೋದವರೇ ಅಂದ್ಕೊಬೇಕು. ಉಳಿದವರು, ಸೋಮಣ್ಣ, ಬೊಮ್ಮಾಯಿ, ಕತ್ತಿ, ಶೆಟ್ಟರ್ ಯಾಕೆ ಹೀಗೆ ಅಂದುಕೊಳ್ಳಲಿಲ್ಲ. ಮಂತ್ರಿ ಸ್ಥಾನಕ್ಕಾಗಿ ಸಿಪಿ ಯೋಗೇಶ್ವರ್ 9 ಕೋಟಿ ಖರ್ಚು ಮಾಡಿದ್ದಾರೆ. ಎಂಟಿಬಿ ನಾಗರಾಜ್ ಬಳಿ ಸಾಲ ಪಡೆದಿದ್ದಾರೆ ಅಂತಾ ರಮೇಶ್ ಜಾರಕಿಹೊಳಿ ಹೇಳ್ತಾರೆ. ಹಾಗಾದರೆ ದುಡ್ಡು ಖರ್ಚು ಮಾಡಿಯೇ ಮೈತ್ರಿ ಸರ್ಕಾರ ಕೆಡವಿದ್ದಾ..? ಎಂದು ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದರು.
ಇದನ್ನು ಓದಿ: ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡಂತಾಯಿತು ಸ್ಟೇ ತಂದ 6 ಸಚಿವರ ಪರಿಸ್ಥಿತಿ; ಸದನದಲ್ಲಿ ಸಿದ್ದರಾಮಯ್ಯ ಟೀಕೆ
ಆಗ ಮಾತನಾಡಿದ ಎಂಟಿಬಿ ನಾಗರಾಜ್, ಇದೆಲ್ಲಾ ಹಸಿ ಸುಳ್ಳು. ನಾನು ಯಾವುದೇ ಸಾಲ ಕೊಟ್ಟಿಲ್ಲ ಎಂದು ಹೇಳಿದರು. ಈ ವೇಳೆ ಆರು ಸಚಿವರು ಸಿದ್ದರಾಮಯ್ಯ ಮೇಲೆ ಪ್ರತಿದಾಳಿಗೆ ಮುಂದಾದರು. ನಾರಾಯಣಗೌಡ, ಸೋಮಶೇಖರ್, ಶಿವರಾಮ್ ಹೆಬ್ಬಾರ್ ತಮ್ಮ ನಡೆ ಸಮರ್ಥನೆ ಮಾಡಿಕೊಂಡರು. ನಿಮ್ಮ ಕಾಲದಲ್ಲಿ ಸಚಿವರ ಮೇಲೆ ಆರೋಪ ಬಂದ್ಮೇಲೆ ರಾಜೀನಾಮೆ ಕೊಟ್ಟಿಲ್ವೇನ್ತೀ..? ಎಂದು ತಿರುಗೇಟು ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ