ಬೆಂಗಳೂರು (ನ. 2): ಆರ್ಆರ್ ನಗರ ಮತ್ತು ಶಿರಾ ಉಪಚುನಾವಣೆಗೆ ಕೇವಲ ಒಂದು ದಿನ ಬಾಕಿ ಉಳಿದಿದೆ. ಈಗಾಗಲೇ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಇಂದು ಎರಡೂ ಕ್ಷೇತ್ರಗಳ ಅಭ್ಯರ್ಥಿಗಳ ಮನೆ ಮನೆ ಪ್ರಚಾರ ನಡೆಸಲಿದ್ದಾರೆ. ಇದರ ನಡುವೆ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಆಯಾ ಪಕ್ಷಗಳ ನಾಯಕರು ಕೊನೆಯ ದಿನದ ಕಸರತ್ತು ನಡೆಸುತ್ತಿದ್ದಾರೆ. ಬಹಿರಂಗ ಪ್ರಚಾರ ನಡೆಸಲು ಅವಕಾಶ ಇಲ್ಲದ ಕಾರಣ ಕಾರ್ಯಕರ್ತರ ಮೂಲಕ ಮತದಾರರಿಂದ ಮತ ಹಾಕಿಸಲು ತಂತ್ರ ರೂಪಿಸಲಾಗುತ್ತಿದೆ. ಶಿರಾದಲ್ಲಿ ಕ್ಷೇತ್ರದ ಹೊರ ಭಾಗದಲ್ಲಿ ಕುಳಿತು ಜೆಡಿಎಸ್, ಕಾಂಗ್ರೆಸ್, ಬಿಜೆಪಿ ನಾಯಕರು ತಂತ್ರ ರೂಪಿಸುತ್ತಿದ್ದಾರೆ. ಇಂದು ಮತ್ತು ನಾಳೆ ಚುನಾವಣಾ ಅಕ್ರಮಗಳು ನಡೆಯುವ ಸಾಧ್ಯತೆ ಇರುವುದರಿಂದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಇಳಿವಯಸ್ಸಿನಲ್ಲಿಯೂ ಶಿರಾದ ಬಳಿ ಇರುವ ಮಧುಗಿರಿಯಲ್ಲಿ ಬೀಡುಬಿಟ್ಟಿದ್ದಾರೆ. ಚುನಾವಣೆ ಮುಗಿದ ಬಳಿಕವೇ ಬೆಂಗಳೂರಿಗೆ ವಾಪಾಸಾಗಲು ಅವರು ನಿರ್ಧರಿಸಿದ್ದಾರೆ.
ಪಕ್ಷದ ಕಾರ್ಯಕರ್ತರಿಗೆ ದೂರವಾಣಿ ಮೂಲಕ ಸೂಚನೆ ನೀಡುತ್ತಾ ಆಯಾ ಪಕ್ಷದ ನಾಯಕರು ತಂತ್ರ ರೂಪಿಸುತ್ತಿದ್ದಾರೆ. ಪ್ರತಿ ಬೂತ್ ನ ಲೀಡರ್ ಗಳಿಗೆ ದೂರವಾಣಿ ಕರೆ ಮಾಡಿ ಮೂರೂ ಪಕ್ಷದ ನಾಯಕರು ಸೂಚನೆ ನೀಡುತ್ತಿದ್ದಾರೆ. ಆ ಲೀಡರ್ ಗಳು ನಾಳೆ ಮತದಾರರಿಂದ ಮತದಾನ ಮಾಡಿಸಬೇಕು. ಬೂತ್ ಗೆ ಯಾರನ್ನು ನೇಮಕ ಮಾಡಿದ್ದಾರೋ ಅವರು ಮತದಾರರಿಂದ ಮತ ಹಾಕಿಸಬೇಕು. ಪಕ್ಷದ ನಾಯಕರು ಕೊಟ್ಟ ಟಾರ್ಗೆಟ್ ರೀಚ್ ಮಾಡಿಸಬೇಕು. ಸ್ಥಳೀಯ ಮುಖಂಡರು ಈ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಸ್ಥಳೀಯ ನಾಯಕರಿಗೆ ಪಕ್ಷದ ಮುಖಂಡರು ಸೂಚನೆ ನೀಡಿದ್ದಾರೆ.
ಬಹಿರಂಗ ಪ್ರಚಾರ ಅಂತ್ಯಗೊಂಡಿರುವುದರಿಂದ ಚುನಾವಣಾ ನೀತಿಸಂಹಿತೆ ಪ್ರಕಾರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರದವರು ಆ ಪ್ರದೇಶದಲ್ಲಿ ಇರುವಂತಿಲ್ಲ. ಹೀಗಾಗಿ, ಮೂರೂ ಪಕ್ಷಗಳ ನಾಯಕರು ಶಿರಾದಿಂದ ಹೊರಗೆ ಇದ್ದುಕೊಂಡೇ ತಂತ್ರ ರೂಪಿಸುತ್ತಿದ್ದಾರೆ. ಈಗಾಗಲೇ ಕ್ಷೇತ್ರದ ಹೊರ ಭಾಗದಲ್ಲಿ ಬೀಡು ಬಿಟ್ಟಿರುವ ನಾಯಕರು ನಾಳೆಯ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ.
ಶಿರಾ ಪಕ್ಕದಲ್ಲಿರುವ ಮಧುಗಿರಿಯಲ್ಲಿ ಬೀಡು ಬಿಟ್ಟಿರುವ ಮಾಜಿ ಪ್ರಧಾನಿ ದೇವೇಗೌಡರ ಜೊತೆಗೆ ಮೊಮ್ಮಗ ಪ್ರಜ್ವಲ್ ರೇವಣ್ಣ ಕೂಡ ಜೊತೆಯಾಗಿದ್ದಾರೆ. ಇಳಿ ವಯಸ್ಸಿನಲ್ಲೂ ಶಿರಾದಲ್ಲಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರನ್ನು ಗೆಲ್ಲಿಸಲು ಹಠಕ್ಕೆ ಬಿದ್ದ ಹೆಚ್ಡಿ ದೇವೇಗೌಡ ಇಷ್ಟು ದಿನ ಬೇರೆ ಯಾವುದೇ ಚುನಾವಣೆ ಆದರೂ ಪ್ರಚಾರ ಮುಗಿಸಿ ಬೆಂಗಳೂರಿಗೆ ವಾಪಾಸಾಗುತ್ತಿದ್ದರು. ಆದರೆ ಈ ಉಪ ಚುನಾವಣೆಗೆ ತಾವೇ ಮುತುವರ್ಜಿ ವಹಿಸಿದ್ದು, ಚುನಾವಣೆ ಮುಗಿಸಿಯೇ ಬೆಂಗಳೂರಿಗೆ ಹೋಗಲು ನಿರ್ಧರಿಸಿದ್ದಾರೆ. ಇಂದು ಹಾಗೂ ನಾಳೆ ಕ್ಷೇತ್ರದಲ್ಲಿ ಅಕ್ರಮ ನಡೆಯುವ ಸಾಧ್ಯತೆ ಇರುವುದರಿಂದ ಅದನ್ನು ತಡೆಯಲು ಹಾಗೂ ಅಭ್ಯರ್ಥಿಯನ್ನು ಗೆಲ್ಲಿಸಲು ಇಲ್ಲೇ ಶಿರಾ ಪಕ್ಕದಲ್ಲೇ ಬೀಡು ಬಿಟ್ಟಿದ್ದಾರೆ. ತಾತ ಮತ್ತು ಮೊಮ್ಮಗ ಪ್ರಜ್ವಲ್ ಇಬ್ಬರೂ ಶಿರಾದಲ್ಲಿ ನಡೆಯುವ ರಾಜಕೀಯ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿದ್ದಾರೆ.
ಇದನ್ನೂ ಓದಿ: ನಿಮ್ಮ ಆಟ ನಡೆಯುತ್ತೋ, ನಮ್ಮ ಆಟ ನಡೆಯುತ್ತೋ ನೋಡೋಣ; ಬಿವೈ ವಿಜಯೇಂದ್ರಗೆ ಹೆಚ್ಡಿ ಕುಮಾರಸ್ವಾಮಿ ಸವಾಲು
ಬೆಳ್ಳೂವಿ ಕ್ರಾಸ್ ನ ತೋಟದ ಮನೆಯಲ್ಲಿರುವ ಸಿಎಂ ಯಡಿಯೂರಪ್ಪನವರ ಮಗ ಬಿವೈ ವಿಜಯೇಂದ್ರ ಶಿರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಪ್ರಚಾರ ಮುಗಿಸಿ, ತಮ್ಮ ತಮ್ಮ ಕ್ಷೇತ್ರಕ್ಕೆ ಮರಳಿರುವ ಕಾಂಗ್ರೆಸ್ ನಾಯಕರು ಅಲ್ಲಿಂದಲೇ ಕಾರ್ಯಕರ್ತರಿಗೆ ಸೂಚನೆಗಳನ್ನು ನೀಡುತ್ತಿದ್ದಾರೆ. ಕೊರಟಗೆರೆಯಲ್ಲಿರುವ ಕಾಂಗ್ರೆಸ್ ನಾಯಕ ಜಿ. ಪರಮೇಶ್ವರ್, ಮಧುಗಿರಿಯಲ್ಲಿರುವ ಮಾಜಿ ಶಾಸಕ ಕೆ.ಎನ್ ರಾಜಣ್ಣ ಶಿರಾದಲ್ಲಿ ತಮ್ಮ ಅಭ್ಯರ್ಥಿಗಳ ಪರ ಕಾರ್ಯಕರ್ತರನ್ನು ಬಿಟ್ಟು, ಈಗ ಕ್ಷೇತ್ರದಿಂದ ದೂರ ಉಳಿದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ