ತುಮಕೂರು(ಅ.09): ಶಿರಾ ಉಪಸಮರದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಬಿಜೆಪಿಗೆ ಅಭ್ಯರ್ಥಿ ಆಯ್ಕೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಸ್ಥಳೀಯ ಮುಖಂಡರ ದೊಡ್ಡ ವಿರೋಧ ಸಹ ಎದುರಿಸುತ್ತಿದೆ. ಇನ್ನು ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಗೆ ಕೊರೋನಾ ಪಾಸಿಟಿವ್ ಆಗಿದ್ದು, ಕಾರ್ಯಕರ್ತರ ಉತ್ಸಾಹ ಕುಂದಿದೆ. ಈ ನಡುವೇ ಸಖತ್ ಆಕ್ಟೀವ್ ಆಗಿರೋ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಶಿರಾ ಉಪಚುನಾವಣೆಯ ನಾಮಪತ್ರ ಸಲ್ಲಿಕೆ ದಿನಾಂಕ ಸಮೀಪಿಸುತ್ತಿದೆ. ಈ ನಡುವೇ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳನ್ನ ಘೋಷಿಸಿದೆ. ಬಿಜೆಪಿ ಮಾತ್ರ ಇನ್ನೂ ಅಭ್ಯರ್ಥಿ ಘೋಷಿಸದೇ, ಇರೋ ಅಸಮಾಧಾನಗಳನ್ನ ಶಮನಗೊಳಿಸೋಕೆ ಪ್ರಯತ್ನ ನಡೆಸುತ್ತಿದೆ. ಬಿಜೆಪಿ ಅಭ್ಯರ್ಥಿಯಾಗಿ ರಾಜೇಶ್ ಗೌಡ ಬಹುತೇಕ ಖಚಿತ ಎಂದು ಹೇಳಲಾಗ್ತಿದ್ದು, ಇದೇ ವಿಚಾರ ಶಿರಾ ಬಿಜೆಪಿ ವಲಯದಲ್ಲಿ ಸಾಕಷ್ಟು ಅಸಮಾಧಾನ ಸೃಷ್ಟಿಸಿದೆ.
ಸ್ಥಳೀಯ ಆಕಾಂಕ್ಷಿಗಳು ಇದ್ದರೂ ಸಹ ಹೊರಗಿನಿಂದ ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ನೀಡ್ತಿದ್ದಾರೆ ಅಂತಾ ಶಿರಾ ಕಾರ್ಯಕರ್ತರು ಈಗಾಗಲೇ ಪ್ರತಿಭಟನೆಯನ್ನು ಸಹ ನಡೆಸಿದ್ದಾರೆ. ಟಿಕೆಟ್ ಆಕಾಂಕ್ಷಿಗಳಾದ ಎಸ್.ಆರ್.ಗೌಡ ಹಾಗೂ ಬಿ.ಕೆ.ಮಂಜುನಾಥ್ ಸಹ ವರಿಷ್ಠರ ಮೇಲೆ ಮುನಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಇವರನ್ನು ಸಮಾಧಾನಪಡಿಸುವಲ್ಲಿ ಬಿಜೆಪಿ ಹೈಕಮಾಂಡ್ ಪ್ರಯತ್ನಪಡುತ್ತಿದೆ. ಸದ್ಯಕ್ಕೆ ಇದೇ ಅಸಮಾಧಾನ ಬಿಜೆಪಿಗೆ ದೊಡ್ಡ ತಲೆನೋವಾಗಿದ್ದು, ಅಭ್ಯರ್ಥಿಯ ಹೇಸರೇಳದೇ ಪ್ರಚಾರ ಕಾರ್ಯದಲ್ಲಿ ತೊಡಗಿದೆ.
ಇನ್ನು ಜೆಡಿಎಸ್ ಪಕ್ಷ ದಿವಂಗತ ಸತ್ಯನಾರಾಯಣ್ ಪತ್ನಿ ಅಮ್ಮಾಜಮ್ಮಗೆ ಟಿಕೆಟ್ ಘೋಷಿಸಿದ್ದರೂ ಕಾರ್ಯಕರ್ತರಲ್ಲಿ ಮಾತ್ರ ಹುರುಪು ಮೂಡಿಸಿಲ್ಲ. ಟಿಕೆಟ್ ಘೋಷಿಸಿದ ದಿನವೇ ಅಮ್ಮಾಜಮ್ಮಾಗೆ ಕೊರೋನಾ ಪಾಸಿಟಿವ್ ಬಂದು ಆಸ್ಪತ್ರೆಗೆ ದಾಖಲಾಗಿದ್ದು, ಅಭ್ಯರ್ಥಿ ಇಲ್ಲದೇ ಕಾರ್ಯಕರ್ತರು ಪರಿತಪಿಸುವಂತಾಗಿದೆ.
ಸರಳ ದಸರಾಗ್ಯಾಕೆ 15 ಕೋಟಿ? ಮೈಸೂರಿನಲ್ಲಿ ಸರ್ಕಾರದ ದುಂದುವೆಚ್ಚಕ್ಕೆ ಸಾರ್ವಜನಿಕರ ಆಕ್ರೋಶ
ಇನ್ನು ಬಹುತೇಕ ಕಾರ್ಯಕರ್ತರು ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್, ಬಿಜೆಪಿ ಸೇರುತ್ತಿದ್ದಾರೆ. ಇದು ಜೆಡಿಎಸ್ ಪ್ರಚಾರದ ಮೇಲೂ ಪರಿಣಾಮ ಬೀರಿದೆ. ಶಿರಾದಲ್ಲಿ ಕಾಂಗ್ರೆಸ್ ಸೂಪರ್ ಸ್ಪೀಡ್ ನಲ್ಲಿ ಹೋಗ್ತಿದ್ದು, ದಿನನಿತ್ಯ ಟಿ.ಬಿ.ಜಯಚಂದ್ರ ಬಿಡುವಿಲ್ಲದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಜೆಡಿಎಸ್, ಬಿಜೆಪಿಯ ಅಸಮಾಧಾನಗಳನ್ನೇ ಬಂಡವಾಳ ಮಾಡಿಕೊಂಡು, ಎರಡೂ ಪಕ್ಷಗಳ ಪ್ರಭಾವಿ ಮುಖಂಡರಿಗೆ ಗಾಳ ಹಾಕಿ ಕಾಂಗ್ರೆಸ್ ಗೆ ಸೆಳೆಯುತ್ತಿದೆ. ಜೊತೆಗೆ ಅಲ್ಪಸಂಖ್ಯಾತರ ಮತಗಳನ್ನ ಸಂಪೂರ್ಣ ಕ್ರೂಢೀಕರಿಸುವಲ್ಲಿ ಕಾರ್ಯತಂತ್ರ ರೂಪಿಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ