• Home
 • »
 • News
 • »
 • state
 • »
 • Sira By Election: ಜಿಲ್ಲೆಯಲ್ಲಿ ನನ್ನ ಉದಾಸೀನ ಮಾಡಿ ಯಾವನಾದ್ರೂ ಗೆಲ್ತೀನಿ ಅನ್ನಲಿ ನೋಡ್ತೀನಿ; ಕೆ.ಎನ್.ರಾಜಣ್ಣ ರೆಬೆಲ್ ಹೇಳಿಕೆ

Sira By Election: ಜಿಲ್ಲೆಯಲ್ಲಿ ನನ್ನ ಉದಾಸೀನ ಮಾಡಿ ಯಾವನಾದ್ರೂ ಗೆಲ್ತೀನಿ ಅನ್ನಲಿ ನೋಡ್ತೀನಿ; ಕೆ.ಎನ್.ರಾಜಣ್ಣ ರೆಬೆಲ್ ಹೇಳಿಕೆ

ಮಾಜಿ ಶಾಸಕ ಕೆ.ಎನ್.ರಾಜಣ್ಣ

ಮಾಜಿ ಶಾಸಕ ಕೆ.ಎನ್.ರಾಜಣ್ಣ

Sira Bypoll: ಇಡೀ ಜಿಲ್ಲೆಯ 11 ಕ್ಷೇತ್ರದಲ್ಲಿ ನನಗೆ ಶಿರಾದಲ್ಲೇ ಹೆಚ್ಚು ಜನಪ್ರಿಯತೆ ಇರೋದು. ಜಯಚಂದ್ರ ನನ್ನ ಮಗನ ಚುನಾವಣೆಯಲ್ಲಿ ಅವನ ವಿರುದ್ದ ಕೆಲಸ ಮಾಡಿ ಅವನ ಸೋಲಿಗೆ ಕಾರಣ ಆದ. ಶಿರಾದಲ್ಲಿ ಇವನು ಗೆದ್ದರೆ ಅರ್ಧ ಮೀಸೆ ತೆಗೀತೀನಿ ಅಂತಾ ಅವತ್ತೇ ಹೇಳಿದ್ದೆ. ನಾನು ಅಷ್ಟು ಧೈರ್ಯವಾಗಿ ಹೇಳಬೇಕು ಅಂದರೆ, ಅಲ್ಲಿನ ಜನರ ಪ್ರೀತಿ, ವಿಶ್ವಾಸ ನನ್ನ ಮೇಲಿತ್ತು. ಅದಕ್ಕೆ ಅವತ್ತು ಚಾಲೆಂಜ್ ಮಾಡಿದ್ದು ಬಿಟ್ಟರೆ, ಸುಮ್ ಸುಮ್ನೆ ಹಾಗೇ ಹೇಳೋಕೆ‌ ನನಗೆ ಶಕ್ತಿ ಇಲ್ಲ.

ಮುಂದೆ ಓದಿ ...
 • Share this:

  ತುಮಕೂರು(ಸೆ.03): ದಿನದಿಂದ ದಿನಕ್ಕೆ ಶಿರಾ ಉಪಚುನಾವಣೆಯ ಕಾವು ರಂಗೇರುತ್ತಿದೆ. ಈ ಬೈ ಎಲೆಕ್ಷನ್​​ನಲ್ಲಿ ಮಾಜಿ ಶಾಸಕ ಕೆ.ಎನ್​.ರಾಜಣ್ಣ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಶಾಸಕ ಕೆ.ಎನ್​.ರಾಜಣ್ಣ, ಚುನಾವಣೆಗೆ ನಿಲ್ಲುವ ಅಪೇಕ್ಷೆಯಿದೆ ಎಂದು ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ನಾನು ಉಪಚುನಾವಣೆಗೆ ನಿಲ್ಲಬೇಕು ಎನ್ನುವ ಅಪೇಕ್ಷೆ ಇದೆ. ಆದರೆ ಬಿಜೆಪಿಯಿಂದ ಸ್ಪರ್ಧೆ ಮಾಡಲ್ಲ, ಕಾಂಗ್ರೆಸ್​​ನಿಂದಲೇ ಟಿಕೆಟ್​ ಕೇಳುತ್ತೇನೆ. ಯಾಕೆಂದರೆ ಕಾಂಗ್ರೆಸ್​​ನಲ್ಲಿದ್ದು, ಬಿಜೆಪಿಯಿಂದ ನಿಲ್ಲುತ್ತೇನೆ ಅಂತ ಹೇಳೋಕೆ ಆಗಲ್ಲ ಎಂದರು.


  ಮುಂದುವರೆದ ಅವರು, ಅಂತಿಮವಾಗಿ ಸಿದ್ದರಾಮಯ್ಯನವರು ಏನು ಹೇಳ್ತಾರೆ‌ ಹಾಗೇ ಮಾಡುತ್ತೇನೆ.  ವಾಸ್ತವಾಂಶ ಏನಿದೆ ಎಂಬುದನ್ನು ಸಿದ್ದರಾಮಯ್ಯನವರಿಗೆ ಮನದಟ್ಟು ಮಾಡಿದ್ದೇನೆ. ಶಿರಾದಲ್ಲಿ ಸ್ವಾಭಿಮಾನಿ ವೇದಿಕೆ ಅಂತಾ ಪ್ರಾರಂಭಿಸಿ ಸಭೆ ಮಾಡ್ತಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಸೇರಿ ಬಹಳಷ್ಟು ಮಂದಿಯನ್ನ ಕರೆಯುತ್ತಾರೆ. ಆ ಸಭೆಗೆ ನಾನೂ ಕೂಡ ಅತಿಥಿಯಾಗಿ ಭಾಗವಹಿಸ್ತೇನೆ. ಆ ಸಭೆಯಲ್ಲಿ ಅಲ್ಲಿನ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸ್ತಾರೆ. ಸಭೆ ಬಳಿಕ ಮುಂದಿನ ನಡವಳಿಕೆಗಳು ನಡೆಯುತ್ತವೆ. ಪಕ್ಷದಿಂದ ನಿಲ್ಲು ಎಂದರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಕೆ.ಎನ್​. ರಾಜಣ್ಣ ಹೇಳಿದರು.


  ಜಯಚಂದ್ರ ಎರಡು ಬಾರಿ ಎಂ.ಎಲ್.ಎ ಆಗಿದ್ದವರು, ಜೊತೆಗೆ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ.  ಹಾಗಾಗಿ ಪಕ್ಷ ನನಗೆ ಟಿಕೆಟ್ ಕೊಡುತ್ತೆ ಅಂತಾ ಓಡಾಡ್ತಿದ್ದಾರೆ, ಅದರಲ್ಲಿ ತಪ್ಪೇನಿದೆ. ಶಿರಾದಲ್ಲಿ 1978 ರಿಂದಲೂ ಅಹಿಂದ ಸಂಘಟನೆ ಬಲವಾಗಿದೆ. ಹಾಗಾಗಿ ಸಭೆಗೆ ಬಂದ ಮುಖಂಡರು ತಮ್ಮ ಕ್ಷೇತ್ರಕ್ಕೆ ಏನ್ ಬೇಕು ಏನ್ ಬೇಡ ಎಂಬ ಅಭಿಪ್ರಾಯ ತಿಳಿಸ್ತಾರೆ. ಅವರ ಅಭಿಪ್ರಾಯದಂತೆ ಮುಂದಿನ ಹೆಜ್ಜೆ ಇಡ್ತೀವಿ ಎಂದರು. ಇದೇ ವೇಳೆ, ಇಡೀ‌ ಜಿಲ್ಲೆಯಲ್ಲಿ ನನ್ನನ್ನು ಉದಾಸೀನ ಮಾಡಿ ಯಾವಾನಾದ್ರು ಗೆಲ್ತೀನಿ ಅನ್ನಲಿ ನೋಡ್ತೀನಿ ಎಂದು ರಾಜಣ್ಣ ರೆಬೆಲ್ ಆದರು.


  ಶಿರಾ ಉಪಚುನಾವಣೆಯಲ್ಲಿ ಜಯಚಂದ್ರಗೆ ಬೆಂಬಲ ನೀಡುವ ವಿಚಾರವಾಗಿ, ಇಡೀ ಜಿಲ್ಲೆಯ 11 ಕ್ಷೇತ್ರದಲ್ಲಿ ನನಗೆ ಶಿರಾದಲ್ಲೇ ಹೆಚ್ಚು ಜನಪ್ರಿಯತೆ ಇರೋದು. ಜಯಚಂದ್ರ ನನ್ನ ಮಗನ ಚುನಾವಣೆಯಲ್ಲಿ ಅವನ ವಿರುದ್ದ ಕೆಲಸ ಮಾಡಿ ಅವನ ಸೋಲಿಗೆ ಕಾರಣ ಆದ. ಶಿರಾದಲ್ಲಿ ಇವನು ಗೆದ್ದರೆ ಅರ್ಧ ಮೀಸೆ ತೆಗೀತೀನಿ ಅಂತಾ ಅವತ್ತೇ ಹೇಳಿದ್ದೆ. ನಾನು ಅಷ್ಟು ಧೈರ್ಯವಾಗಿ ಹೇಳಬೇಕು ಅಂದರೆ, ಅಲ್ಲಿನ ಜನರ ಪ್ರೀತಿ, ವಿಶ್ವಾಸ ನನ್ನ ಮೇಲಿತ್ತು. ಅದಕ್ಕೆ ಅವತ್ತು ಚಾಲೆಂಜ್ ಮಾಡಿದ್ದು ಬಿಟ್ಟರೆ, ಸುಮ್ ಸುಮ್ನೆ ಹಾಗೇ ಹೇಳೋಕೆ‌ ನನಗೆ ಶಕ್ತಿ ಇಲ್ಲ. ಆದರೆ ಶಿರಾಗೆ ಸಂಬಂಧಿಸಿದಂತೆ ಗೆಲ್ಲಿಸುವ, ಸೋಲಿಸುವ ಶಕ್ತಿ ನನ್ನಲ್ಲಿದೆ. ಅವತ್ತು ಜಯಚಂದ್ರ ಮಂತ್ರಿ, ನಾನು ಶಾಸಕ, ಆದ್ರೂ ನಾನು ಚಾಲೆಂಜ್ ಮಾಡಿದ್ದೆ ಎಂದರು. ಇನ್ನೂ ಉಪಚುನಾವಣೆ ನವೆಂಬರ್, ಡಿಸೆಂಬರ್​​ನಲ್ಲಿದೆ. ಅಷ್ಟರಲ್ಲಿ ರಾಜಕೀಯವಾಗಿ ಬಹಳಷ್ಟು ಬೆಳವಣಿಗೆಗಳು ಆಗುತ್ತವೆ ಅಂದುಕೊಂಡಿದ್ದೇವೆ ಎಂದು ಹೇಳಿದರು.


  ಕೆ.ಎನ್​. ರಾಜಣ್ಣ ವಿರೋಧದ ನಡುವೇ ಜಯಚಂದ್ರ ಸ್ಪರ್ಧೆಗಿಳಿಯುವ ವಿಚಾರವಾಗಿ, ಅವರು ಮಾಜಿ ಮಂತ್ರಿ, ನಂ.2, ಅವರು ಮುಂದೆ ಮುಖ್ಯಮಂತ್ರಿ ಆಗುವ ಅಭ್ಯರ್ಥಿ. ಅವರು ಗೆಲ್ಲೋಕೆ ಆಗಲ್ಲಾ ಅಂದ್ರೇ ಏನ್ ಅರ್ಥ. ನನ್ನಂತ ನೂರು ಜನ ವಿರೋಧ ಮಾಡಿದರೂ ಅವರು ಗೆಲ್ಲುತ್ತಾರೆ. ರಾಜಕಾರಣದಲ್ಲಿ ಇವತ್ತು ಇದಿದ್ದು ನಾಳೆ ಇರಲ್ಲ. ಗೆಲ್ಲುವಾಗ ಎಲ್ಲಾ ನನ್ನ ಬಳಸಿಕೊಳ್ತಾರೆ, ನಮಗ್ಯಾರು ಸಹಾಯ ಮಾಡಲ್ಲ. ಅದು ಈ ಜಿಲ್ಲೆಯ ದುರಂತ. ಜಯಚಂದ್ರ ಮಯ ಮಾಡ್ತಾರೆ. ದೇವೇಗೌಡರ ಮಯ ಮಾಡೋಕೆ ಹೋದೆವು. ಆದರೆ ಮಾಯ ಆಗೋದ್ರು, ನಾವೇನು ಮಾಡೋಣ ಎಂದರು.


  ನಮ್ಮಪ್ಪ ಹೆಬ್ಬೆಟ್ಟು, ನಮ್ಮಮ್ಮ ಹೆಬ್ಬೆಟ್ಟು,ಅಂತದ್ರಲ್ಲಿ ನಮಗೆ ವಿದ್ಯೆ ಕೊಟ್ರು.ಇವತ್ತು ನಾನು ಕೋ ಆಪರೇಟೀವ್ ಮೂಲಕ ಬಡವರಿಗೆ ರೈತರಿಗೆ ಸಹಾಯ ಮಾಡಿ ಅವರ ಆಶೀರ್ವಾದದಿಂದ ಬೆಳೆದಿದ್ದೇವೆ. ಇಡೀ‌ ಜಿಲ್ಲೆಯಲ್ಲಿ ರಾಜಣ್ಣನನ್ನ ಉದಾಸೀನ ಮಾಡಿ ಯಾವಾನಾದ್ರು ಗೆಲ್ತೀನಿ ಅನ್ನಲಿ ನೋಡ್ತೀನಿ. ಆ ರೀತಿಯ ಶಕ್ತಿ ಇದೆ ಅಂದರೆ, ಅದು ಬಡವರ ಶಕ್ತಿ ಎಂದು ಹೇಳಿದರು.


  Gold Price Today: ಅಲ್ಪ ಏರಿಕೆ ಕಂಡ ಚಿನ್ನದ ದರ; ವಿವಿಧ ನಗರಗಳಲ್ಲಿನ ಇಂದಿನ ಬೆಲೆ ಇಲ್ಲಿದೆ


  ಮೈತ್ರಿ ಸರ್ಕಾರ ಬೀಳಿಸೋಕೆ ಡ್ರಗ್ಸ್ ಹಣ ಬಳಕೆ‌ ಮಾಡಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಕೆ.ಎನ್.ರಾಜಣ್ಣ ಪ್ರತಿಕ್ರಿಯೆ ನೀಡಿದರು. ಸರ್ಕಾರ ಬೀಳಿಸೋಕೆ ಅವರು ಮಾಡವ್ರೇ ,ಉಳಿಸೋಕೆ ಇವ್ರು ಎಷ್ಟು ಮಾಡವ್ರೇ? ಇವ್ರೇನ್ ಸತ್ಯಹರಿಶ್ಚಂದ್ರನ ಮೊಮ್ಮಕ್ಕಳಾ..? ಇವತ್ತಿನ ದೃಷ್ಟಿಯಲ್ಲಿ ಲಂಚ ಎನ್ನುವುದನ್ನು ಯಾರೂ ಚರ್ಚೇನೆ ಮಾಡಬಾರದು. ಚರ್ಚೆ ಮಾಡಿದರೆ ಅವನು ಅಯೋಗ್ಯ. ಲಂಚ ತಗೊಳ್ಳದೇ ಇರೋರು ಯಾರಿದ್ದಾರೆ ತೋರಿಸಿ ನೋಡೋಣ. ಸ್ವಾಮಿಜಿಗಳಿಗೆ ಕಾಣಿಕೆ, ದಕ್ಷಿಣೆ ಅಂತೀವಿ, ಲಾಯರ್​ಗಳಿಗೆ ಫೀಸು ಅಂತೀವಿ. ಅಧಿಕಾರಿಗಳಿಗೆ ಕೊಟ್ರೆ ಲಂಚ ಅಂತೀವಿ, ರಾಜಕಾರಣಿಗಳಿಗೆ ಕೊಟ್ರೆ ಲಂಚ ಅಂತೀವಿ. ಹೀಗೆ ಎಲ್ಲದರಲ್ಲೂ ಮಯ ಅದು.. ಡ್ರಗ್ಸ್ ದುಡ್ಡಲ್ಲಿ ಸರ್ಕಾರ ಕೆಡುವಿದರು ಅಂದರೆ, ಅದೇ ಥರದ ದುಡ್ಡಲ್ಲಿ ಇವ್ರು ಸರ್ಕಾರ ಉಳಿಸಿಕೊಳ್ಳೋಕೆ ಯಾರಿಗೂ ದುಡ್ಡು ಕೊಟ್ಟೇ ಇಲ್ವಾ..? ಯಾರಿಗೇನು ಆಸೆ ಆಮಿಷ ತೋರಿಸೇ ಇಲ್ವಾ..? ಎಂದು ಪ್ರಶ್ನಿಸಿದ ಅವರು, ನಾನಂತೂ ಸರ್ಕಾರ ಹೋಗಬೇಕು ಅಂತಿದ್ದವನು, ಅದರಲ್ಲಿ ಅನುಮಾನವೇ ಇಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿದರು.


  ಎಐಸಿಸಿ ಅಧ್ಯಕ್ಷರ ನೇಮಕ ವಿಚಾರವಾಗಿ, ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ. ಒಂದು ಕಾಲದಲ್ಲಿ ಬಂದು ಬೂತ್​ಗೆ ಪೂಜೆ ಮಾಡಿ ಕಾಂಗ್ರೆಸ್​ಗೆ ಓಟ್ ಹಾಕ್ತಿದ್ದವ್ರನ್ನ ನೋಡಿದ್ದೀವಿ. ಇವತ್ತು ಕಾಂಗ್ರೆಸ್ ಅಂದ್ರೇ ಅಷ್ಟೇ ಬಯ್ಯೋರು, ಟೀಕೆ ಮಾಡೋರು ಇದ್ದಾರೆ. ಪಕ್ಷದಲ್ಲಿ ಬಹಳ ನಿಷ್ಟಾವಂತರು, ದೇಶಕ್ಕೆ ತ್ಯಾಗ ಮಾಡಿ ಹೋಗಿರುತ್ತಾರೆ. ನೆಹರೂ ಕುಟುಂಬದವರು ಅಲಹಬಾದ್ ನ ಆನಂದ್ ಭವನ ಎಲ್ಲವನ್ನೂ‌‌ ಪಕ್ಷಕ್ಕೆ ಬರೆದುಕೊಟ್ಟು ಹೋದ್ರು. ಇವತ್ತು ದೇಶ ಒಗ್ಗಟ್ಟಾಗಿರಬೇಕಂದ್ರೇ ಕಾಂಗ್ರೆಸ್ ಪಾರ್ಟಿ ಬೇಕೇ ಬೇಕು. ಇಲ್ಲವಾದರೆ ಪ್ರಾದೇಶಿಕ ಪಕ್ಷಗಳು ಬಂದು ಒಂದೊಂದೇ ಪ್ರದೇಶ ಬೇಕು ಅನ್ನೋ ಭಾವನೆಗಳು ಬಂದುಬಿಡುತ್ತೆ ಎಂದರು.


  ಕಾಂಗ್ರೆಸ್ ಪಾರ್ಟಿ ಒಗ್ಗಟ್ಟಾಗಿ ಇರಬೇಕು ಅಂದ್ರೇ ನೆಹರು ಕುಟುಂಬ ಇರಬೇಕು. ದೇವೇಗೌಡರು ಪ್ರಧಾನಿ ಆಗಿದ್ದು ಕಾಂಗ್ರೆಸ್ ಪಾರ್ಟಿಯಿಂದಲೇ.. ಕುಮಾರಸ್ವಾಮಿ ಮುಖ್ಯಮಂತ್ರಿ ಅಗಿದ್ದು ಕಾಂಗ್ರೆಸ್ ನಿಂದಲೇ.. ಅವ್ರು ಕಾಂಗ್ರೆಸನ್ನೇ ಮುಗಿಸ್ತೀನಿ ಅಂತಾ ಹೋಗ್ತಾರೆ. ಇದು ಒಬ್ಬೊಬ್ಬರ ಜಾಯಮಾನ, ನಡವಳಿಕೆ ಅಂತಾ ನಾವೆಲ್ಲಾ ತಿಳಿದುಕೊಳ್ಳಬೇಕು. ದೇವೇಗೌಡರು ನಮ್ಮ ಮನೆ ಪಕ್ಕದಲ್ಲೇ ಹೋಗ್ತಾರೆ, ನಾನು ಮನೆಯಲ್ಲೇ‌ ಇರ್ತೀನಿ. ಬಾರಯ್ಯ ಅಂತಾ ಕೂಗಿದ್ರೇ ನಾನು ಪ್ರಚಾರ ಮಾಡ್ತಿರಲಿಲ್ವಾ.. ನನಗು ಒಂದ್ಸಾರಿ ದೇವೇಗೌಡರು ಎಂ.ಎಲ್.ಎ ಮಾಡಿದ್ದಾರೆ, ಅವ್ರ ಋಣ ನನ್ನ ಮೇಲಿದೆ. ಇಲ್ಲೇ ಒಡಾಡಿದ್ರು,ಯಾರ್ದೋ ಮಾತು ಕೇಳಿಕೊಂಡು ಬರ್ಲೇ ಇಲ್ಲಾ.. ಅಂತವ್ರಿಗೆ ಓಟ್ ಹಾಕ್ಸೋದು ಏನ್ ಇತ್ತು ನನಗೆ. ನನ್ನಿಂದ ಅವ್ರಿಗೆ ಏನು ಸಹಾಯ ಆಗಿಲ್ಲ, ಅವ್ರ ನಡವಳಿಕೆಯಿಂದ ನಾನು ಸಹಾಯ ಮಾಡಿಲ್ಲ ಎಂದು ಹೇಳಿದರು.


  ಜಿ.ಎಸ್.ಬಸವರಾಜು ದಿನಾ ನಮ್ಮ ಮನೆಗೆ ಬಂದು ಕುಳಿತುಕೊಳ್ಳೋರು, ಇನ್ನು ಈಗಲೇ ಏನು ಮಾತು ಕೊಡಲ್ಲಾ ಅಂತಾ ಹೇಳಿ‌ ವಾಪಸ್ ಕಳಿಸಿದ್ದೆ. ಯಾವಾಗ ದೇವೇಗೌಡ್ರು ಇಲ್ಲೇ ಓಡಾಡಿ ನಮ್ಮ ಮನೆಗೆ ಬರ್ದೇ ಹೋದ್ರೋ. ಇವ್ರಿಗೆ ಏನಾದ್ರು ಮಾಡಿ ಬುದ್ದಿ ಕಲಿಸಬೇಕು ಅಂತಾ ನಮ್ಮದೇ ತೀರ್ಮಾನ ಮಾಡಬೇಕಾಯ್ತು ಎಂದು ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಸೋಲಿನ ಕುರಿತು ಕೆ.ಎನ್.ರಾಜಣ್ಣ ಮಾತನಾಡಿದರು.

  Published by:Latha CG
  First published: