news18-kannada Updated:February 25, 2021, 2:34 PM IST
ಕೋಡಿಹಳ್ಳಿ ಚಂದ್ರಶೇಖರ್
ಬೆಂಗಳೂರು: ಸಾರಿಗೆ ನೌಕರರ 9 ಬೇಡಿಕೆಗಳು ಈಡೇರಿಸಿಲ್ಲ. 14 ಡಿಸೆಂಬರ್ 2020 ರಿಂದ ಈವರೆಗೂ ಬೇಡಿಕೆ ಈಡೇರಿಲ್ಲ. 75 ದಿನ ಕಳೆದರೂ ಸರ್ಕಾರ ಸಾರಿಗೆ ನೌಕರರ ಒಂದೇ ಒಂದು ಬೇಡಿಕೆ ಈಡೇರಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂಬಂಧ ಸಾರಿಗೆ ನೌಕರರ ಒಕ್ಕೂಟದಿಂದ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು, ಕಳೆದ ಡಿಸೆಂಬರ್ನಲ್ಲಿ ಸಾರಿಗೆ ನೌಕರರು ನಡೆಸಿದ ಧರಣಿ ವೇಳೆ ಸರ್ಕಾರ ನೌಕರರ ಬೇಡಿಕೆ ಹೊರತುಪಡಿಸಿ ಉಳಿದ ಬೇಡಿಕೆ ಈಡೇರಿಸುತ್ತೇವೆ ಎಂದು ಸರ್ಕಾರ ಹೇಳಿತ್ತು. ಆದರೆ ನಾವು ಕೇಳಿದ ಪ್ರಮುಖ ಬೇಡಿಕೆಗಳನ್ನು ಇದುವರೆಗೆ ಈಡೇರಿಸಿಲ್ಲ ಎಂದು ಆರೋಪಿಸಿದರು.
ನೆರೆಯ ಆಂಧ್ರದಲ್ಲಿ ಸಾರಿಗೆ ನೌಕರರ ಮೂಲ ವೇತನ ಹೆಚ್ಚಿದೆ. ಆದರೆ ನಮ್ಮಲ್ಲಿ ಮೂಲವೇತನವೂ ಶೇ.80ರಷ್ಟು ಕಡಿಮೆಯಿದೆ. ಆರನೇ ವೇತನ ಆಯೋಗ ಸಾರಿಗೆ ನೌಕರರಿಗೂ ವಿಸ್ತರಣೆ ಬೇಡಿಕೆ ಈಡೇರಿಲ್ಲ. ಅವೈಜ್ಞಾನಿಕ ವೇತನ ಪರಿಷ್ಕರಣೆ ಅಗ್ರಿಮೆಂಟ್ ಬಿಟ್ಟುಬಿಡಿ. ವೇತನ ಆಯೋಗ ಶಿಫಾರಸ್ಸು ಮಾಡಿ ಮಾಡಿ ಎಂದು ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು. ಹಾಗೂ ಬಜೆಟ್ ನಲ್ಲಿ ಸಾರಿಗೆಗೆ ಹೆಚ್ಷು ಒತ್ತು ನೀಡುವಂತೆ ಒತ್ತಾಯಿಸಿದರು.
ಸಾರಿಗೆ ನೌಕರರ ಬೇಡಿಕೆಗಳು
* ಆರನೇ ವೇತನ ಆಯೋಗ ಶಿಫಾರಸ್ಸು ಸಾರಿಗೆ ನೌಕರರಿಗೆ ವಿಸ್ತರಿಸುವ ವಿಚಾರ
* ಸರ್ಕಾರಿ ನೌಕರರಿಗೆ ಇರುವಂತಹ ಜ್ಯೋತಿ ಸಂಜೀವಿನಿ ಭಾಗ್ಯ ಏನಾಯ್ತು
* ಸಾರಿಗೆ ನೌಕರರಿಗೆ ಸರ್ಕಾರಿ ಶಿಕ್ಷಕರಂತೆ ಅಂತರ್ ಸುಗಮ ವರ್ಗಾವಣೆ ಪದ್ಧತಿ ಜಾರಿಗೆ ತರುವ ಬೇಡಿಕೆ ಏನಾಯ್ತು?
* ಇಲಾಖೆಗಳಲ್ಲಿ ಮೇಲಾಧಿಕಾರಿಗಳಿಂದ ಕಿರುಕುಳ ಅಲ್ಲಲ್ಲಿ ನಡೆಯುತ್ತಲೇ ಇದೆ* ಬಾಟ ,ಭತ್ಯೆ ಮತ್ತು ಓಟಿ ನೀಡುವಂತೆ ಕೇಳಿದ ಬೇಡಿಕೆ ಈಡೇರಿಲ್ಲ
* ಎನ್ ಐ ಎನ್ ಸಿ ಪದ್ಧತಿ ರದ್ದು ಮಾಡುವಂತೆ ಬೇಡಿಕೆ ಏನಾಯ್ತು?
* ಎಚ್ ಆರ್ ಎಂ ಎಸ್ ಪದ್ಧತಿ ಜಾರಿ ಮಾಡುವುದೇ ಏನಾಯ್ತು?
* ಕೊರೋನಾ ಸೋಂಕಿತನಿಂದ ಮೃತ ಪಟ್ಟಿರುವ ನೌಕರರಿಗೆ 30 ಲಕ್ಷ ಜೀವ ವಿಮೆ ನೀಡುವುದು ಎಲ್ಲಿ ಹೋಯ್ತು?
* ಸಾರಿಗೆ ಸಂಸ್ಥೆಗಳಲ್ಲಿ ಜಾರಿಯಲ್ಲಿರುವ ಎರಡು ವರ್ಷ ತರಬೇತಿ ಅವಧಿಯನ್ನು ಒಂದು ವರ್ಷಕ್ಕೆ ಕಡಿತ ಮಾಡುವ ಬೇಡಿಕೆ ಎಲ್ಲಿ ಹೋಯ್ತು? ಎಂದು ಕೋಡಿಹಳ್ಳಿ ಚಂದ್ರಶೇಖರ್ ಅವರು ಸರ್ಕಾರವನ್ನು ಪ್ರಶ್ನೆ ಮಾಡಿದರು.
ಇದನ್ನು ಓದಿ: ಈ ಒಂದೇ ಶಾಲೆಯ 229 ಮಕ್ಕಳಿಗೆ ಕೊರೋನಾ ಸೋಂಕು; ಬೆಚ್ಚಿಬೀಳಿಸಿದೆ ಕೋವಿಡ್ ಮರು ಅಲೆ
ಸಾರಿಗೆ ಸಚಿವ ಲಕ್ಣ್ಮಣ್ ಸವದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೋಡಿಹಳ್ಳಿ ಚಂದ್ರಶೇಖರ್ ಅವರು, ಈ ಹಿಂದೆ ನನ್ನ ಜೊತೆ ಸಚಿವ ಲಕ್ಷ್ಮಣ ಸವದಿ ಮಾತಾಡಿಲ್ಲ. ಸಾರಿಗೆ ಒಕ್ಕೂಟದ ಮುಖಂಡರ ಜೊತೆ ಮಾತಾಡಿ ಭರವಸೆ ನೀಡಿದ್ದಾರೆ. ಈಗಲೂ ಸಚಿವರು ನಮ್ಮ ಜೊತೆ ಮಾತಾಡೋದು ಬೇಡ. ಆದರೆ ಸಮಸ್ಯೆ ಬಗೆಹರಿಸಲಿ ಎಂದು ಹೇಳಿದರು.
ಸಾರಿಗೆ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ ವರ್ಷ ಡಿಸೆಂಬರ್ನಲ್ಲಿ ಸಾರಿಗೆ ನೌಕರರು ಬೃಹತ್ ಪ್ರತಿಭಟನೆ ನಡೆಸಿದ್ದರು. ಇದರಿಂದಾಗಿ ಸಾರಿಗೆ ಸಂಚಾರ ಸಂಪೂರ್ಣ ನಿಂತಿದ್ದರಿಂದ ಸಾರ್ವಜನಿಕರು ಪರದಾಡುವಂತಾಗಿತ್ತು. ಆ ಬಳಿಕ ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿತ್ತು.
Published by:
HR Ramesh
First published:
February 25, 2021, 2:34 PM IST