ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (IAS Officer Rohini Sindhuri) ಪತಿ ವಿರುದ್ದ ಅಕ್ರಮ ಭೂ ಕಬಳಿಕ ಆರೋಪ ಕೇಳಿ ಬಂದಿದ್ದು, ಖ್ಯಾತ ಹಾಸ್ಯನಟ ಮಹಮೂದ್ ಅಲಿ ಪುತ್ರ ಲಕ್ಕಿ ಅಲಿ (Lucky Ali) ಈ ಸಂಬಂಧ ದೂರು ದಾಖಲಿಸಿದ್ದಾರೆ. ಟ್ವೀಟ್ ಮೂಲಕ ಅಲಿ ಅವರು ಬೆಂಗಳೂರು ಪೊಲೀಸ್ ಆಯುಕ್ತ ಡಿಜಿಪಿ ಪ್ರವೀಣ್ ಸೂದ್ (Praveen Sood) ಅವರಿಗೆ ಟ್ವೀಟ್ ಮಾಡಿದ್ದು, ಸುಧೀರ್ ರೆಡ್ಡಿ ಹಾಗೂ ಮಧು ರೆಡ್ಡಿ ಎಂಬುವವರಿಂದ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಲಕ್ಕಿ ಆಲಿ ಆರೋಪಿಸಿದ್ದಾರೆ.
ಕಾನೂನು ಬಾಹಿರ ಚಟುವಟಿಕೆ
ಈ ಕುರಿತು ಸರಣಿ ಟ್ವೀಟ್ಗಳನ್ನು ಮಾಡಿರುವ ಲಕ್ಕಿ ಆಲಿ, ಇದು ಟ್ರಸ್ಟ್ಗೆ ಸೇರಿದ ಆಸ್ತಿಯಾಗಿದೆ ಹಾಗೂ ಬೆಂಗಳೂರು ಭೂಮಾಫಿಯಾದ ಮೂಲಕ ಸುಧೀರ್ ರೆಡ್ಡಿ (ಹಾಗೂ ಮಧು ರೆಡ್ಡಿ) ತಮ್ಮ ಪತ್ನಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರ ಸಹಾಯದೊಂದಿಗೆ ತಮ್ಮ ಆಸ್ತಿಯನ್ನು ಅಕ್ರಮವಾಗಿ ಅತಿಕ್ರಮಿಸಿದ್ದಾರೆ. ಇಂತಹ ಕಾನೂನು ಬಾಹಿರ ಚಟುವಟಿಕೆಯನ್ನು ನಿಲ್ಲಿಸುವಂತೆ ಲಕ್ಕಿ ಆಲಿ ಕರ್ನಾಟಕ ಪೊಲೀಸ್ ನಿರ್ದೇಶಕರನ್ನು ಒತ್ತಾಯಿಸಿದ್ದಾರೆ.
ತಮ್ಮ ವೈಯಕ್ತಿಕ ಲಾಭಕ್ಕಾಗಿ ರಾಜ್ಯದ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿದ್ದು ಬಲವಂತವಾಗಿ ಹಾಗೂ ಕಾನೂನು ಬಾಹಿರವಾಗಿ ತಮ್ಮ ಜಮೀನೊಳಗೆ ಆಗಮಿಸಿದ್ದಾರೆ ಹಾಗೂ ಸಂಬಂಧಿತ ದಾಖಲೆಗಳನ್ನು ತೋರಿಸಲು ನಿರಾಕರಿಸುತ್ತಿದ್ದಾರೆ ಎಂದು ಆಲಿ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ. ಈ ಕುರಿತು ಸಂಬಂಧಿತ ಸಹಾಯಕ ಪೊಲೀಸ್ ಆಯುಕ್ತರಿಗೆ ದೂರು ನೀಡಿರುವುದಾಗಿ ತಿಳಿಸಿರುವ ಲಕ್ಕಿ ಆಲಿ ತಿಳಿಸಿದ್ದು, ಜೊತೆಗೆ ಸ್ಥಳೀಯ ಪೊಲೀಸರು ಯಾವುದೇ ನೆರವು ನೀಡುತ್ತಿಲ್ಲ ಎಂದು ಆಪಾದಿಸಿದ್ದಾರೆ.
ತಮ್ಮ ಹೆಸರಿಗೆ ಮಸಿ ಬಳಿಯುವ ಕೃತ್ಯ; ರೋಹಿಣಿ ಸಿಂಧೂರಿ
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರು ಲಕ್ಕಿ ಆಲಿಯವರು ತಮ್ಮ ಮೇಲೆ ಹೊರಿಸಿರುವ ಆಪಾದನೆ ಸುಳ್ಳು ಎಂದು ತಿಳಿಸಿದ್ದು, ಈ ವಿವಾದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಹಾಗೂ ಗಾಯಕನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ. ಲಕ್ಕಿಯವರ ವಿರುದ್ಧ ತಡೆಯಾಜ್ಞೆ ಇದ್ದು (ಆಸ್ತಿಯ ಮೇಲಿನ ಅವರ ಹಕ್ಕು) ಆತನ ಹೇಳಿಕೆಗಳು ಅವಹೇಳನಕಾರಿಯಾಗಿವೆ ಎಂದು ಸಿಂಧೂರಿ ಸುದ್ದಿಪತ್ರಿಕೆಗೆ ತಿಳಿಸಿದ್ದಾರೆ. ತಮ್ಮ ಹೆಸರಿಗೆ ಮಸಿ ಬಳಿಯುವ ಪಿತೂರಿಯನ್ನು ಲಕ್ಕಿ ಆಲಿ ನಡೆಸುತ್ತಿದ್ದು, ಯಾವುದೇ ಹುರುಳಿಲ್ಲದೆ ಸುಖಾಸುಮ್ಮನೆ ದೋಷಾರೋಪಣೆ ಮಾಡುತ್ತಿದ್ದಾರೆ ಎಂದು ಸಿಂಧೂರಿ ತಿಳಿಸಿದ್ದಾರೆ.
ಜಮೀನಿನ ತೀರ್ಪು ನ್ಯಾಯಾಲಯ ಮಾಡಲಿದೆ
ಬೆಂಗಳೂರಿನ ಯಲಹಂಕದ ಬಳಿ ಇರುವ ಮೂರು ಎಕರೆ ಜಮೀನಿನ ಮಾಲೀಕತ್ವವನ್ನು ಸಾಬೀತುಪಡಿಸಲು ತಮ್ಮ ಬಳಿ ದಾಖಲೆಗಳಿವೆ ಎಂದು ರೋಹಿಣಿ ಸಿಂಧೂರಿಯವರ ಮೈದುನ ಮಧುಸೂಧನ್ ರೆಡ್ಡಿ ತಿಳಿಸಿದ್ದಾರೆ. ತಮ್ಮ ತಂದೆಯ ನಿಧನದ ನಂತರ ಈ ಆಸ್ತಿ ತಮಗೆ ಪಿತ್ರಾರ್ಜಿತವಾಗಿ ಬಂದಿರುವುದಾಗಿ ರೆಡ್ಡಿ ತಿಳಿಸಿದ್ದು, ಆಸ್ತಿಯ ಕುರಿತಾಗಿ ಮಾರಾಟ ಪತ್ರ, ಸ್ವಾಧೀನ ಪತ್ರ ಹಾಗೂ ಸಂಬಂಧಿತ ಎಲ್ಲಾ ದಾಖಲೆಗಳನ್ನು ತಾವು ಸಲ್ಲಿಸಿರುವುದಾಗಿ ಮಧುಸೂಧನ್ ರೆಡ್ಡಿ ತಿಳಿಸಿದ್ದು ಈ ಸಂಬಂಧಿತವಾಗಿ ಪೊಲೀಸರ ಬಳಿ ಕೂಡ ದಾಖಲೆಗಳಿವೆ ಎಂದು ಹೇಳಿದ್ದಾರೆ. ಜಮೀನು ಯಾರ ಮಾಲೀಕತ್ವದಲ್ಲಿದೆ ಎಂಬುದನ್ನು ನ್ಯಾಯಾಲಯ ನಿರ್ಧರಿಸುತ್ತದೆ ಎಂದು ಮಧು ರೆಡ್ಡಿ ತಿಳಿಸಿದ್ದಾರೆ.
ಗಾಯಕನ ಬೆಂಬಲಿಗರಿಂದ ಹಲ್ಲೆ
ಮಧುಸೂಧನ್ ರೆಡ್ಡಿ ನವೆಂಬರ್ 28 ರಂದು ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಲಕ್ಕಿ ಅಲಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಲಕ್ಕಿ ಆಲಿ ಸಹೋದರ ಮನ್ಸೂರ್ ಆಲಿಯಿಂದ ಏಪ್ರಿಲ್ 30, 2012 ರಂದು ಆಸ್ತಿಯನ್ನು ಖರೀದಿಸಿರುವುದಾಗಿ ರೆಡ್ಡಿ ಎಫ್ಐಆರ್ನಲ್ಲಿ ದಾಖಲಿಸಿದ್ದು, ತಮಗೆ ಸೇರಿದ ಆಸ್ತಿಯ ವೀಕ್ಷಣೆಗೆ ಹೋದ ಸಂದರ್ಭದಲ್ಲಿ ಲಕ್ಕಿ ಆಲಿ ಬೆಂಬಲಿಗರು ತಮಗೆ ಹಾಗೂ ತಮಗೆ ಸಂಬಂಧಪಟ್ಟವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
Siddaramaiah-BJP: ಸಿದ್ದರಾಮಯ್ಯಗೆ ಸಿದ್ರಾಮುಲ್ಲಾ ಖಾನ್ ಎಂದು ಕರೆಯೋದ್ಯಾಕೆ? ಬಿಜೆಪಿ ನೀಡಿದೆ 8 ಕಾರಣ!
ರೆಡ್ಡಿಯವರು ಹಂಚಿಕೊಂಡ ದಾಖಲೆಗಳ ಪ್ರಕಾರ ಫಿರ್ಯಾದುದಾರರ ಸ್ವಾಧೀನದಲ್ಲಿ ಹಸ್ತಕ್ಷೇಪ ಮಾಡದಂತೆ ಲಕ್ಕಿ ಆಲಿ ವಿರುದ್ಧ 2016 ರಲ್ಲಿ ತಡೆಯಾಜ್ಞೆ ನೀಡಲಾಗಿದೆ. ಸೈಟ್ಗೆ ಭೇಟಿ ನೀಡಿದ ವಿಡಿಯೋಗಳನ್ನು ಹಂಚಿಕೊಂಡಿರುವ ರೆಡ್ಡಿ, ಸಸಿಗಳನ್ನು ನೆಡಲು ತನ್ನ ತಾಯಿಯೊಂದಿಗೆ ಹೋದಾಗ ಆಲಿಯು ಬಂದೂಕುಧಾರಿಯನ್ನು ರೆಡ್ಡಿಯವರ ಜಮೀನಿನಲ್ಲಿ ನಿಯೋಜಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ