ವಿಜಯಪುರ: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Elections 2023) ಭರ್ಜರಿ ಸಿದ್ಧತೆ ನಡೆಸಿರುವ ಜೆಡಿಎಸ್ ನಾಯಕರಿಗೆ ಬಿಗ್ಶಾಕ್ ಎದುರಾಗಿದ್ದು, ಸಿಂದಗಿ ಜೆಡಿಎಸ್ ಘೋಷಿತ ಅಭ್ಯರ್ಥಿ ನಿಧನರಾಗಿದ್ದಾರೆ. ವಿಜಯಪುರ (Vijayapura) ಜಿಲ್ಲೆಯ ಸಿಂದಗಿ (Sindagi) ಮತಕ್ಷೇತ್ರದ ಜೆಡಿಎಸ್ (JDS) ಅಭ್ಯರ್ಥಿಯಾಗಿದ್ದ ಶಿವಾನಂದ ಪಾಟೀಲ್ ಸೋಮಜಾಳ್ (54) ಅವರು ಹೃದಯಾಘಾತದಿಂದ ನಿಧನರಾಗಿದ್ದು, ಸಿಂದಗಿ ಪಟ್ಟಣದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿದ್ದಾರೆ.
ಪಂಚರತ್ನ ಯಾತ್ರೆಯಲ್ಲಿ ಭಾಗಿಯಾಗಿದ್ದ ಶಿವಾನಂದ ಪಾಟೀಲ್ ಸೋಮಜಾಳ್
ನಿನ್ನೆ ಸಂಜೆವರೆಗೂ ಶಿವಾನಂದ ಪಾಟೀಲ್ ಸೋಮಜಾಳ್ ಅವರು ಜೆಡಿಎಸ್ ವರಿಷ್ಠರಾದ ಹೆಚ್ಡಿ ಕುಮಾರಸ್ವಾಮಿ ಅವರೊಂದಿಗೆ ಪಂಚರತ್ನ ಯಾತ್ರೆಯಲ್ಲಿ ಭಾಗಿಯಾಗಿದ್ದರು. ವಿಜಯಪುರ ನಗರ ಹಾಗೂ ನಾಗಠಾಣ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆ ಭರ್ಜರಿಯಾಗಿ ನಡೆದಿತ್ತು.
ಆದರೆ ಯಾತ್ರೆ ಮುಗಿಸಿಕೊಂಡು ಸಂಜೆ ವಾಪಸ್ ಸಿಂದಗಿಗೆ ತೆರಳಿದ ಬಳಿಕ ಶಿವಾನಂದ ಪಾಟೀಲ್ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನವನ್ನು ಬೆಂಬಲಿಗರು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿವಾನಂದ ಪಾಟೀಲ್ ಸೋಮಜಾಳ್ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: HD Kumaraswamy: ಅಧಿಕಾರಕ್ಕೆ ಬಂದರೆ ಈ ಬಾರಿಯೂ ರೈತರ ಸಾಲ ಮನ್ನಾ; ಪಂಚರತ್ನ ಯಾತ್ರೆಯಲ್ಲಿ ಹೆಚ್ಡಿಕೆ ಭರವಸೆ
ಮಾಜಿ ಸೈನಿಕರಾಗಿದ್ದ ಶಿವಾನಂದ ಪಾಟೀಲ್ ಸೋಮಜಾಳ್
ಕಳೆದ ಎರಡು ದಿನಗಳ ಹಿಂದೆ ಅಂದರೆ, ಜನವರಿ 18ರಂದು ಶಿವಾನಂದ ಪಾಟೀಲ್ ಸೋಮಜಾಳ್ ಪರವಾಗಿ ಸಿಂದಗಿಯಲ್ಲಿ ಬೃಹತ್ ಸಮಾವೇಶ ಕಾರ್ಯಕ್ರಮ ಆಯೋಜಿಸಿ ಭರ್ಜರಿ ಪ್ರಚಾರ ಮಾಡಲಾಗಿತ್ತು. ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
16 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಶಿವಾನಂದ ಪಾಟೀಲ್ ಸೋಮಜಾಳ್ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದರು. ಸ್ವತಃ ಕುಮಾರಸ್ವಾಮಿ ಅವರೇ ಶಿವಾನಂದ ಪಾಟೀಲ್ ಅವರನ್ನು ಗುರುತಿಸಿ ಪಕ್ಷದಿಂದ ಟಿಕೆಟ್ ಘೋಷಣೆ ಮಾಡಿದ್ದರು. ಆದರೆ ಕುಮಾರಸ್ವಾಮಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡ ವೇಳೆಯಲ್ಲಿ ಪಕ್ಷದ ಅಭ್ಯರ್ಥಿ ಸಾವನ್ನಪ್ಪಿರುವುದು ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರಿಗೆ ಆಘಾತವನ್ನು ಉಂಟುಮಾಡಿದೆ.
ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸಂತಾಪ
ಸಿಂದಗಿ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಶಿವಾನಂದ ಪಾಟೀಲ್ ಅವರ ಅಕಾಲಿಕ ಮರಣ ನನಗೆ ತೀವ್ರ ಆಘಾತ ಉಂಟು ಮಾಡಿದೆ. ಸೇನೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದ ಪಾಟೀಲರು, ಸಮಾಜ ಸೇವೆಯ ಅದಮ್ಯ ಹಂಬಲ ಹೊಂದಿದ್ದರು.
ಅತ್ಯುತ್ತಮ ಸಂಘಟನಾ ಶಕ್ತಿ, ಕ್ರಿಯಾಶೀಲತೆ ಹೊಂದಿದ್ದ ಅವರು ಪರಿಚಯವಾದ ಅಲ್ಪಕಾಲದಲ್ಲಿಯೇ ನನಗೆ ಅತ್ಯಂತ ಆತ್ಮೀಯರಾಗಿದ್ದರು. ಶಿವಾನಂದ ಪಾಟೀಲರ ಅಗಲಿಕೆ ನನಗೆ ವೈಯಕ್ತಿಕವಾಗಿ ಅತೀವ ದುಃಖ ಉಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಹೆಚ್ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ಸಿಂದಗಿ ವಿಧಾನಸಭೆ ಕ್ಷೇತ್ರದ @JanataDal_S ಪಕ್ಷದ ಅಭ್ಯರ್ಥಿ ಶ್ರೀ ಶಿವಾನಂದ ಪಾಟೀಲ ಅವರ ಅಕಾಲಿಕ ಮರಣ ನನಗೆ ತೀವ್ರ ಆಘಾತ ಉಂಟು ಮಾಡಿದೆ.1/4 pic.twitter.com/JTZL28vjhm
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) January 20, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ