Mysore Dasara: ಸಾಂಪ್ರದಾಯಿಕವಾಗಿ ನೇರವೇರಿದ ಆಯುಧಪೂಜೆ; ಜಂಬೂ ಸವಾರಿಗೆ ಭರದ ಸಿದ್ಧತೆ

ಪಾರಂಪರಿಕ ಆಯುಧಗಳಿಗೆ ಯದುವಂಶದ ಮಹಾರಾಜ ಯದುವೀರ್ ಒಡೆಯರ್ ಪೂಜೆ ಸಂಪ್ರದಾಯ ಬದ್ಧವಾದ ಪೂಜೆ‌ ನೆರವೇರಿಸಿದರು.

ಅಂಬಾರಿ ಹೊತ್ತು ತಾಲೀಮು ನಡೆಸಿದ ಗಜಪಡೆ

ಅಂಬಾರಿ ಹೊತ್ತು ತಾಲೀಮು ನಡೆಸಿದ ಗಜಪಡೆ

  • Share this:
ಮೈಸೂರು (ಅ.25): ನಾಡಹಬ್ಬ ದಸರೆಯಲ್ಲಿ ನವರಾತ್ರಿಯ ಕೊನೆ ದಿನದ ಆಯುಧ ಪೂಜೆಯ ಸಂಭ್ರಮ  ಮನೆ ಮಾಡಿತ್ತು. ಅರಮನೆ ಅಂಗಳದಲ್ಲಿ ಆನೆ, ಒಂಟೆ, ಕುದುರೆ, ಹಸು ಹಾಗೂ ಕಾರುಗಳಿಗೆ ವಿಶೇಷ ಪೂಜೆ ನಡೆಸಲಾಯಿತು. ಇದೇ ವೇಳೆ ಪಾರಂಪರಿಕ ಆಯುಧಗಳಿಗೆ ಯದುವಂಶದ ಮಹಾರಾಜ ಯದುವೀರ್ ಒಡೆಯರ್ ಪೂಜೆ ಸಂಪ್ರದಾಯ ಬದ್ಧವಾದ ಪೂಜೆ‌ ನೆರವೇರಿಸಿದರು. ವಿಶ್ವ ವಿಖ್ಯಾತ ಮೈಸೂರು ದಸರಾದ ಜಂಬೂಸವಾರಿಗೆ ಇನ್ನು ಒಂದು ದಿನವಷ್ಟೆ ಬಾಕಿ ಇದೆ.  ಜಿಲ್ಲಾಡಳಿತ ಸಕಲ ಸಿದ್ದತೆ ನಡೆಸಿದ್ದಾರೆ. ಇಂದು ಮುಂಜಾನೆಯಿಂದಲೇ  ಅರಮನೆಯಲ್ಲಿ ಆಯುಧಪೂಜಾ ಕಾರ್ಯಗಳ ಆರಂಭವಾಯಿತು ಮುಂಜಾನೆ 5.38 ರಿಂದ ಆರಂಭವಾದ ಪೂಜಾ ಕಾರ್ಯ ಮಧ್ಯಾಹ್ನದವರೆಗೆ ನಡೆಯಿತು.  ಬೆಳಿಗ್ಗೆ 6.30ಕ್ಕೆ ಕೋಡಿ ಸೋಮೇಶ್ವರ ಸ್ವಾಮಿ ದೇಗುಲಕ್ಕೆ ವಾದ್ಯಗಳ ಸಮೇತವಾಗಿ ತೆರಳಿ ಪೂಜೆ ಸಲ್ಲಿಸಲಾಯಿತು. ಇದಾದ ಬಳಿಕ ಪಟ್ಟದ ಆನೆ, ಕುದುರೆ, ಹಸು, ಒಂಟೆಗಳನ್ನ ಆನೆ ಬಾಗಿಲ ಬಳಿಯಿಂದ ಕೋಡಿ ಸೋಮೇಶ್ವರ ಸ್ವಾಮಿ ದೇಗುಲಕ್ಕೆ ಕರೆತರಲಾಯಿತು. ಈ ವೇಳೆ  ಪಲ್ಲಕಿ ಮೇಲಿದ್ದ ಪಟ್ಟದ ಕತ್ತಿ ಸಮೇತ ರಾಜವಂಶಸ್ಥರು ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕೋಡಿ ಸೋಮೇಶ್ವರ ದೇವಾಲಯದಲ್ಲಿ ಪಟ್ಟದ ಕತ್ತಿ ಗುರಾಣಿ ಆಯುಧಗಳಿಗೆ ರಾಜಪುರೋಹಿತರು ಪೂಜೆ ಸಲ್ಲಿಸಿದರು.

ಇನ್ನು ಅರಮನೆಗೆ ಆಯುಧಗಳನ್ನು ತಂದ ಮೇಲೆ ಅರಮನೆಯ ಕಲ್ಯಾಣ ಮಂಟಪದಲ್ಲಿ ಆಯುಧಗಳಿಗೆ ಯದವೀರ್ ಪೂಜೆ ಸಲ್ಲಿಸಿದರು. ನಂತರ ಸವಾರಿ ತೊಟ್ಟಿಯಲ್ಲಿ ಆನೆ, ಒಂಟೆ, ಕುದುರೆ, ಪಲ್ಲಕಿ, ಕುದುರೆಗಳಿಗೂ ಪೂಜೆ ಸಲ್ಲಿಸಲಾಯಿತು. ಅಷ್ಟೆ ಅಲ್ಲದೆ ತಾವು ಬಳಕೆ ಮಾಡುವ ಕಾರುಗಳಿಗೂ ಯದುವೀರ್ ಪೂಜೆ ಸಲ್ಲಿಸಿದರು. ಕೊರೋನಾ ಕಾರಣಕ್ಕೆ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸರಳವಾಗಿ ಪೂಜೆ ನೆರವೇರಿಸಲಾಯಿತು.

ಇದನ್ನು ಓದಿ: ಆಯುಧ ಪೂಜೆಯಂದು ಎಲ್ಲರ ಗಮನ ಸೆಳೆದ ಎಂಟಿಬಿ ನಾಗರಾಜ್​ರ ಐಷಾರಾಮಿ ಕಾರುಗಳು

ಇವುಗಳ ಮಧ್ಯೆ ಪೊಲೀಸ್ ಇಲಾಖೆ ವತಿಯಿಂದಲೂ ಅರಮನೆಯ ಅಂಗಳದಲ್ಲಿ ಫಿರಂಗಿಗಳಿಗೆ ಪೂಜೆ ಸಲ್ಲಿಸಿದರು.  ಕೊರೋನಾ‌ ನಡುವೆ ನಡೆಯುತ್ತಿರುವ ಜಂಬೂ ಸವಾರಿ ಭದ್ರತೆ ಒಂದು ಸಾವಿರಕ್ಕು ಹೆಚ್ಚು ಪೊಲೀಸರನ್ನು ನಿಯೋಜನೆ‌ ಮಾಡಲಾಗಿದ್ದು, 300 ಜನರನ್ನು ಕಾಯಲು ಸಾವಿರ ಜನ ಪೊಲೀಸರ ಎಂಬ ಪ್ರಶ್ನೆ ಸಹ ಮೂಡಿದೆ.‌ ಇನ್ನು ಇಂದು ನಡೆದ ಪೊಲೀಸರ ರೋಲ್ ಕಾಲ್ ವೇಳೆ ಸಾಮಾಜಿಕ ಅಂತರವನ್ನು ಪೊಲೀಸರ ಮರೆತಿದ್ದು ವಿಪರ್ಯಾಸ ಅನಿಸಿತು.

ಈ‌ ನಡುವೆ‌ ದಸರಾ ಗಜಪಡೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್​ಟಿ ಸೋಮಶೇಖರ್​ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಿದರು. ಅರಣ್ಯ ಇಲಾಖೆಯ ನೇತೃತ್ವದಲ್ಲಿ ನಡೆದ ಪೂಜೆಯಲ್ಲಿ ಹಲವು ಗಣ್ಯರು ಸಹ ಭಾಗಿಯಾದರು. ಒಟ್ಟಾರೆ, ಇಂದು ಅರಮನೆಯಂಗಳದಲ್ಲಿ ಹಲವು ಕಾರ್ಯಕ್ರಮದ ಜೊತೆಗೆ ಆಯುಧ ಪೂಜೆ ಸಾಂಪ್ರದಾಯಿಕವಾಗಿ ನೆರವೇರಿಸಲಾಯಿತು. ಇದರ ಜೊತೆಗೆ ನಾಳೆ ನಡೆಯುವ ಜಂಬೂ ಸವಾರಿಗೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡುಕೊಳ್ಳುತ್ತಿದೆ. ಇದೇ ಮೊದಲ ಬಾರಿಗೆ ಸೀಮಿತ ಸಂಖ್ಯೆಯಲ್ಲಿ ಜಂಬೂಸವಾರಿ ಹೇಗೆ ನಡೆಯಲಿದೆ ಎಂಬು ಕುತೂಹಲ ಮೂಡಿದೆ.
Published by:Seema R
First published: