Assembly Election 2023: ವಿಧಾನಸಭಾ ಚುನಾವಣೆಗೆ ಐದು ತಿಂಗಳು ಇರುವಾಗಲೇ ರಾಜ್ಯ ರಾಜಕಾರಣದಲ್ಲಿ (Karnataka Politics) ಹೊಸ ಮುಖಗಳ ಎಂಟ್ರಿ ಆಗುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಒಂದು ಪ್ರಾದೇಶಿಕ ಪಕ್ಷ ಚುನಾವಣಾ (Election Campaign) ಅಖಾಡಕ್ಕೆ ಧುಮುಕಿವೆ. ಮತ್ತೊಂದೆಡೆ ಚುನಾವಣೆ ಟಿಕೆಟ್ ಆಕಾಂಕ್ಷಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಮಿಂಚಿನ ಸಂಚಾರ ನಡೆಸುತ್ತಿದ್ದಾರೆ. ಇದರ ಜೊತೆಗೆ ಮತದಾರರನ್ನು (Voters) ಸೆಳೆಯಲು ಬಗೆ ಬಗೆಯ ಗಿಫ್ಟ್ಗಳನ್ನು ನೀಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ರಾಜಧಾನಿ ಚುನಾವಣೆ ರಣಕಣಕ್ಕೆ ಮಾಜಿ ರೌಡಿಯ ಆಗಮನ ಆಗಲಿದೆ ಎಂಬ ಮಾತುಗಳು ಸಿಲಿಕಾನ್ ಸಿಟಿಯಲ್ಲಿ ಕೇಳುತ್ತಿವೆ.ಇನ್ನು ಈ ಮಾಜಿ ರೌಡಿ ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿರೋದು ಕಾಂಗ್ರೆಸ್ (Congress MLA) ಪಕ್ಷದ ಪವರ್ಫುಲ್ ಮತ್ತು ಮಾಜಿ ಸಿಎಂ ಒಬ್ಬರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವರಾಗಿದ್ದಾರೆ.
ಹೌದು, ಚುನಾವಣೆಯ ರಣ ಭೂಮಿಗೆ ಎಂಟ್ರಿ ಕೊಡಲು ಸಿದ್ಧತೆ ನಡೆಸುತ್ತಿರೋದು ಬೆಂಗಳೂರು ಅಂಡರ್ ವರ್ಲ್ಡ್ ಲೋಕದ ಸೈಲೆಂಟ್ ಸುನೀಲ್ (Silent Sunil). ಬೆಂಗಳೂರು ಅಂಡರ್ ವರ್ಲ್ಡ್ ಲೋಕದ ಲೀಡರ್ಗಳ ದೊಡ್ಡ ದೊಡ್ಡವರ ಪಟ್ಟಿಯಲ್ಲಿ ಈ ಸೈಲೆಂಟ್ ಸುನೀಲ್ ಹೆಸರು ಸಹ ಸೇರುತ್ತದೆ.
ಇಷ್ಟು ದಿನ ಸೈಲೆಂಟ್ ಆಗಿದ್ದ ಸುನೀಲ್ ನಾಳೆ ಬೆಂಗಳೂರಿಗೆ ಬಹು ದೊಡ್ಡ ಕಾರ್ಯಕ್ರಮದ ಮೂಲಕ ಎಂಟ್ರಿ ಕೊಡುತ್ತಿದ್ದಾನೆ. ಸೈಲೆಂಟ್ ಸುನೀಲ್ ವೈಲೆಂಟ್ ರಾಜಕರಣಿಯ ಎದೆ ನಡುಗಿಸಲು ಹೊರಟಿದ್ದಾನೆ. ಸೈಲೆಂಟ್ ಸುನೀಲ್ ಎಂಟ್ರಿ ಬೆಂಗಳೂರಿನ ಈ ಪಾಪುಲರ್ ಲೀಡರ್ ನಿದ್ದೆಗೆಡಿಸಲು ನಾಳೆಯಿಂದಲೇ ಪ್ಲಾನ್ ಮಾಡಿಕೊಂಡಿರುವ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.
ಯಾವ ರಾಜಕಾರಣಿಗೆ ಶುರುವಾಗಿದೆ ಟೆನ್ಷನ್?
ಸೈಲೆಂಟ್ ಸುನೀಲ್ ರಾಜಕೀಯಕ್ಕೆ ಬರುವ ಸುಳಿವನ್ನ ಆತನ ಅತ್ಯಾಪ್ತ ಬಳಗ ಖಚಿತಪಡಿಸುತ್ತಿದೆ. 2023ರ ವಿಧಾನಸಭಾ ಚುನಾವಣೆಗೆ ಸೈಲೆಂಟ್ ಸುನೀಲ್ ಆಯ್ಕೆ ಮಾಡಿಕೊಂಡಿರೋದು ಚಾಮರಾಜಪೇಟೆ ಕ್ಷೇತ್ರ ಎನ್ನಲಾಗುತ್ತಿದೆ. ಹಾಲಿ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಅಪ್ತ ಜಮೀರ್ ಅಹ್ಮದ್ ಖಾನ್ (MLA Zameer Ahmed Khan) ವಿರುದ್ಧ ಸ್ಪರ್ಧೆ ಮಾಡಲು ಸೈಲೆಂಟ್ ಸುನೀಲ್ ಪ್ಲಾನ್ ಮಾಡಿಕೊಂಡಿರುವ ಮಾಹಿತಿ ತಿಳಿದು ಬಂದಿದೆ.
ಜಮೀರ್ ಸೋಲಿಸಲು ಜೆಡಿಎಸ್ ರಣತಂತ್ರ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಜಮೀರ್ ಅಹ್ಮದ್ ಖಾನ್ ಸಮಯ ಸಿಕ್ಕಾಗೆಲ್ಲ ದಳಪತಿಗಳ ವಿರುದ್ಧ ವಾಗ್ದಾಳಿ ನಡೆಸೋದನ್ನು ಮರೆಯಲ್ಲ. ಇದೇ ಕಾರಣಕ್ಕೆ ಜಮೀರ್ ಅಹ್ಮದ್ ಅವರನ್ನು ಸೋಲಿಸಲು ಜೆಡಿಎಸ್ ಸಹ ತನ್ನದೇ ರಣತಂತ್ರವನ್ನು ರಚಿಸುತ್ತಿದೆ.
ಜಮೀರ್ ಅಹ್ಮದ್ ವಿರುದ್ಧ ಕಮಲ ಕೆಂಡ
ಇನ್ನು ಚಾಮರಾಜಪೇಟೆ ಈದ್ಗಾ ಮೈದಾನ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಈ ವೇಳೆ ಬಿಜೆಪಿ ಮತ್ತು ಜಮೀರ್ ಅಹ್ಮದ್ ನಡುವೆ ಶೀತಲ ಸಮರವೇ ಏರ್ಪಟ್ಟಿತ್ತು. ಇದೇ ಈದ್ಗಾ ಮೈದಾನದ ವಿವಾದದ ವಿಷಯವನ್ನು ಮುಂದಿಟ್ಟುಕೊಂಡು ಚಾಮರಾಜಪೇಟೆಯಲ್ಲಿ ಬಿಜೆಪಿ ಚುನಾವಣಾ ರಣಕಹಳೆ ಮೊಳಗಿಸೋದು ಬಹುತೇಕ ಖಚಿತವಾಗಿದೆ.
ಎರಡೂ ಪಕ್ಷಗಳ ಟಿಕೆಟ್ ಆಕಾಂಕ್ಷಿಯಂತೆ ಸೈಲೆಂಟ್ ಸುನೀಲ್!
ಬಿಜೆಪಿ ಮತ್ತು ಜೆಡಿಎಸ್ ಜಮೀರ್ ಅಹ್ಮದ್ ಖಾನ್ ಅವರಿಗೆ ಸೋಲಿನ ರುಚಿ ತೋರಿಸಲು ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿವೆ. ನಾಳೆ ಚಾಮರಾಜಪೇಟೆಗೆ ಎಂಟ್ರಿ ಕೊಡುತ್ತಿರುವ ಸೈಲೆಂಟ್ ಸುನೀಲ್ ಎರಡೂ ಪಕ್ಷಗಳ ಚುನಾವಣಾ ಟಿಕೆಟ್ ಆಕಾಂಕ್ಷಿಯಂತೆ. ಇಬ್ಬರಲ್ಲಿ ಯಾರೇ ಟಿಕೆಟ್ ನೀಡಿದ್ರೂ ಸೈಲೆಂಟ್ ಸುನೀಲ್ ಒಪ್ಪಿಕೊಳ್ಳುವ ಸಾಧ್ಯತೆಗಳಿವೆ.
ನಾಳೆ ಚಾಮರಾಜಪೇಟೆಗೆ ಎಂಟ್ರಿ
ಇಷ್ಟು ದಿನ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಸೈಲೆಂಟ್ ಸುನೀಲ್ ನಾಳೆ ಚಾಮರಾಜಪೇಟೆಯಲ್ಲಿ ಆಯೋಜನೆ ಮಾಡಲಾಗಿರುವ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ರಾಜ್ಕುಮಾರ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳೋದು ಖಚಿತವಾಗಿದೆ.
ಸುನೀಲ್ ಕುಮಾರ್ ಸಾರಥ್ಯದಲ್ಲಿ ರಾಷ್ಟ್ರೋತ್ಥಾನ ರಕ್ತಕೇಂದ್ರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಆಯೋಜನೆ ಸಹ ಮಾಡಲಾಗಿದೆ. ಸುಮಾರು ಎರಡು ಸಾವಿರ ಜನರು ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ.
ಬಿಜೆಪಿ ನಾಯಕರಿಗೆ ಆಹ್ವಾನ
ಚಾಮರಾಜಪೇಟೆಯ ಬಿಎಸ್ ವೆಂಕಟರಾಮ್ ಕಲಾಭವನದಲ್ಲಿ ನಾಳೆ ಬೆಳಗ್ಗೆ 9 ಗಂಟೆಗೆ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ, ಬಿಜೆಪಿ ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಶಾಸಕರಾದ ಉದಯ ಗರುಡಾಚಾರ್, ಎನ್.ರಮೇಶ್ ಅವರನ್ನು ಆಹ್ವಾನಿಸಲಾಗಿದೆ.
ಸೈಲೆಂಟ್ ಸುನೀಲ್ ಅಧಿಕೃತ ರಾಜಕೀಯ ಎಂಟ್ರಿಗೆ ಬಿಜೆಪಿ ನಾಯಕರು ಸಾಥ್ ನೀಡುವ ಸಾಧ್ಯತೆಗಳಿವೆ. ಒಂದು ವೇಳೆ ಎರಡೂ ಪಕ್ಷಗಳು ಟಿಕೆಟ್ ನೀಡದಿದ್ರೆ, ಜಮೀರ್ ವಿರೋಧಿಗಳ ಪರೋಕ್ಷ ಬೆಂಬಲ ಪಡೆದು ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಗಳು ಸಹ ಇವೆ.
ಇದನ್ನೂ ಓದಿ: Hubballi Riots: ಹುಬ್ಬಳ್ಳಿ ಗಲಭೆ ನಾಲ್ಕು ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ
ಚಾಮರಾಜಪೇಟೆಯೇ ಏಕೆ?
ಸೈಲೆಂಟ್ ಸುನೀಲ್ ಚಾಮರಾಜಪೇಟೆಯೇ ರಾಜಕೀಯ ಎಂಟ್ರಿಗೆ ಸುಲಭದ ಕ್ಷೇತ್ರ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ. ಹಾಲಿ ಶಾಸಕ ಜಮೀರ್ ವಿರುದ್ಧ ಹಿಂದೂ ಮತದಾರರು ಒಂದಾಗಬಹುದು, ಈದ್ಗಾ ವಿಚಾರದಲ್ಲಿ ಜಮೀರ್ ವಿರುದ್ಧ ಹಿಂದೂ ವಿರೋಧಿ ಅಭಿಪ್ರಾಯ ವ್ಯಕ್ತವಾಗಿದೆ. ಇದು ಸೈಲೆಂಟ್ ಸುನೀಲ್ಗೆ ಪ್ಲಸ್ ಪಾಯಿಂಟ್ ಆಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ