ಮಂಗಳೂರು (ಮಾರ್ಚ್ 19); ನಿಖರ ಮಾಹಿತಿಯ ಮೇರೆಗೆ ಮಹತ್ವದ ಕಾರ್ಯಾಚರಣೆ ನಡೆಸಿರುವ ಕಂದಾಯ ಇಲಾಖೆ ಗುಪ್ತಚರ ಇಲಾಖೆ ಅಧಿಕಾರಿಗಳು ಮಂಗಳೂರು ರೈಲು ನಿಲ್ದಾಣದಲ್ಲಿ ಇಂದು ಅಕ್ರಮವಾಗಿ ಸಾಗಿಸುತ್ತಿದ್ದ 5.6 ಕೆಜಿ ಚಿನ್ನದ ಗಟ್ಟಿಯನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಲದ ಮಾಸ್ಟರ್ ಮೈಂಡ್ ಉಡುಪಿ ಮೂಲದ ನವೀನ್ ಚಂದ್ರ ಕಾಮತ್, ರೈಲಿನಲ್ಲಿ ಚಿನ್ನದ ಗಟ್ಟಿ ತರುತ್ತಿದ್ದ ಸೈಯದ್ ಮೊಹಮ್ಮದ್, ಅಶೋಕ ಕೆ.ಎಸ್. ಚಿನ್ನ ಪಡೆಯಲು ಮಂಗಳೂರು ರೈಲು ನಿಲ್ದಾಣಕ್ಕೆ ಬಂದಿದ್ದ ಮಂಜುನಾಥ್ ಶೇಟ್ ಸೇರಿದಂತೆ ಒಟ್ಟು 7 ಜನರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಕೇರಳದ ಕ್ಯಾಲಿಕಟ್ ನಿಂದ ಮಂಗಳೂರಿಗೆ ಚಿನ್ನವನ್ನು ಕಳ್ಳ ಸಾಗಾಣಿಕೆ ಮಾಡಲಾಗುತ್ತಿದೆ ಎಂದು ನಿಖರ ಮಾಹಿತಿ ಪಡೆದಿದ್ದ ಕಂದಾಯ ಇಲಾಖೆ ಅಧಿಕಾರಿಗಳು ಮಂಗಳೂರು, ಉಡುಪಿ, ಶಿವಮೊಗ್ಗದಲ್ಲಿ ಜಂಟಿ ಕಾರ್ಯಾಚರಣೆ ನಡೆಸುವ ಮೂಲಕ ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವೇಳೆ ಚಿನ್ನ ಅಲ್ಲದೆ ಚಿನ್ನದ ಸಾಗಾಟಕ್ಕೆ ಬಳಸುತ್ತಿದ್ದ ಎರಡು ಇಟಿಯೋಸ್ ಕಾರು ಹಾಗೂ 82 ಲಕ್ಷ ನಗದು ಹಣವನ್ನೂ ವಶಕ್ಕೆ ಪಡೆಯಲಾಗಿದೆ. ಇಂದು ಕರಾವಳಿ ಭಾಗದ ವಿವಿಧ ಕಡೆ ದಾಳಿ ನಡೆಸಿರುವ ಅಧಿಕಾರಿಗಳು ಒಟ್ಟು 4 ಕೋಟಿ ಮೌಲ್ಯದ 9.3 ಕೆಜಿ ಚಿನ್ನ, 5.2 ಕೆಜಿ ಬೆಳ್ಳಿ, 84 ಲಕ್ಷ ನಗದು ವಶಕ್ಕೆ ಪಡೆದಿದ್ದಾರೆ. 40 ಅಧಿಕಾರಿಗಳಿಂದ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಕೊಡಗಿಗೆ ಬಂದಿದ್ದ ವ್ಯಕ್ತಿಗೆ ಕೊರೋನಾ ಸೋಂಕು ಖಚಿತ; ಬೆಚ್ಚಿಬಿದ್ದ ಮದ್ದೂರಿನ ಜನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ