ನವದೆಹಲಿ (ಜೂನ್ 3): ದಿಢೀರ್ ಬೆಳವಣಿಗೆಯಲ್ಲಿ ದೆಹಲಿಗೆ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ. ಇದೇ ವೇಳೆ 'ಬಂಡಾಯಗಾರ' ಎಂದೇ ಹೆಸರುವಾಸಿಯಾಗಿರುವ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ಧ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ. ಜೂನ್ 1ರಂದು ದಿಢೀರನೆ ದೆಹಲಿಗೆ ಬಂದಿದ್ದ ವಿಜಯೇಂದ್ರ ಅಂದೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಆಗಿದ್ದರು. ಅರುಣ್ ಸಿಂಗ್ ಭೇಟಿ ಸಂದರ್ಭದಲ್ಲೂ ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ಧ ದೂರು ನೀಡಿದ್ದಾರೆ ಎಂದು ಕೇಳಿಬಂದಿತ್ತು.
ಇದಾದ ಮೇಲೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡ ಅವರನ್ನು ಭೇಟಿ ಮಾಡಲೆಂದೇ ಮೂರು ದಿನಗಳಿಂದ ವಿಜಯೇಂದ್ರ ದೆಹಲಿಯಲ್ಲೇ ಠಾಕಾಣಿ ಹೂಡಿದ್ದರು. ಇದೀಗ ಗುರುವಾರ ಭೇಟಿ ಮಾಡಿದ್ದಾರೆ. ಅಲ್ಲದೆ, ಜೆ.ಪಿ. ನಡ್ಡ ಭೇಟಿ ಆಗಿರುವ ಬಗ್ಗೆ ಟ್ವೀಟ್ ಮಾಡಿ ಫೋಟೋ ಸಮೇತ ಅಧಿಕೃತವಾಗಿ ತಿಳಿಸಿದ್ದಾರೆ. ಜೆ.ಪಿ. ನಡ್ಡ ಭೇಟಿ ಅವರ ಬಳಿಯೂ ಸಿ.ಪಿ. ಯೋಗೇಶ್ವರ್ ವಿರುದ್ಧ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಸಿ.ಪಿ. ಯೋಗೇಶ್ವರ್ ರಾಜ್ಯದಲ್ಲಿ ಮೂರು ಪಕ್ಷಗಳ ಸರ್ಕಾರ ಇದೆ ಎಂದಿದ್ದರು. ಯೋಗೇಶ್ವರ್ ಅವರ ಇದೇ ಹೇಳಿಕೆಯನ್ನು ಆಧಾರವಾಗಿ ಇಟ್ಟುಕೊಂಡು ವಿಜಯೇಂದ್ರ ದೂರು ನೀಡಿದ್ದಾರೆ.
ಸಿ.ಪಿ. ಯೋಗೇಶ್ವರ್ ಕೊರೋನಾ ಕಾಲದಲ್ಲಿ ರಾಜಕೀಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಇವರಿಂದ ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆ ಆಗುತ್ತಿದೆ. ಆದುದರಿಂದ ಸಚಿವ ಸಂಪುಟದಿಂದ ಯೋಗೇಶ್ವರ್ ಅವರನ್ನು ಕೈಬಿಡಲು ಅವಕಾಶ ಕೊಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪರವಾಗಿ ವಿಜಯೇಂದ್ರ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಜೆ.ಪಿ. ನಡ್ಡ ಭೇಟಿ ಬಳಿಕ ಮಾಡಿರುವ ಟ್ವೀಟ್ ನಲ್ಲಿ "ಇಂದು ನಮ್ಮ ಪಕ್ಷದ ಹೆಮ್ಮೆಯ ರಾಷ್ಟ್ರೀಯಅಧ್ಯಕ್ಷರಾದ ಮಾನ್ಯ ಜೆ.ಪಿ. ನಡ್ಡಾ ಜೀಯವರನ್ನು ಭೇಟಿಯಾದ ವೇಳೆ ‘ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಕಾರ್ಯಕರ್ತರು ಜನರ ದುಃಖ-ದುಮ್ಮಾನಗಳಿಗೆ ಸ್ಪಂದಿಸಬೇಕಾದ ರೀತಿಯ ಕುರಿತು ಅವರಿಂದ ಪಡೆದ ಸಲಹೆ, ಮಾರ್ಗದರ್ಶನ ನನ್ನಲ್ಲಿ ಇನ್ನಷ್ಚು ಉತ್ಸಾಹ ಹಾಗೂ ಆತ್ಮವಿಶ್ವಾಸ ಹೆಚ್ಚಿಸಿದೆ" ಎಂದು ವಿಜಯೇಂದ್ರ ತಿಳಿಸಿದ್ದಾರೆ.
ಈ ನಡುವೆ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಬಿಎಸ್‌ವೈ ನಾಯಕತ್ವ ಬದಲಾವಣೆ ಸಂಬಂಧ ಹೈಕಮಾಂಡ್ ನಲ್ಲಿ ಮಹತ್ವದ ಚರ್ಚೆ ನಡೆದಿದೆ.
ಸದ್ಯಕ್ಕೆ ನಾಯಕತ್ವ ಬದಲಾವಣೆ ಮಾಡದಿರಲು ಹೈಕಮಾಂಡ್ ಚಿಂತನೆ ನಡೆಸಿದ್ದು, ಬಿಎಸ್‌ವೈ ಮುಂದುವರಿಸಲು, ಶೇಕಡಾ 50ರಷ್ಟು ಸಂಪುಟ ಪುನಾರಚನೆಗೆ ಹೈಕಮಾಂಡ್ ಪ್ಲ್ಯಾನ್ ಮಾಡಿದೆ. ಕೊರೋನಾ ಸಂಕಷ್ಟ ಮುಗಿದ ಬಳಿಕ ರಾಜ್ಯ ಸಚಿವ ಸಂಪುಟದಲ್ಲಿ ಭಾರೀ ಬದಲಾವಣೆ ಆಗಲಿದೆ. ಹಿರಿಯ ಸಚಿವರು, ನಿಷ್ಕ್ರಿಯ ಸಚಿವರನ್ನು ಕೈಬಿಡಲು ಹೈಕಮಾಂಡ್ ಚಿಂತನೆ ನಡೆಸಿದೆ.
ಇದನ್ನೂ ಓದಿ: The Family Man 2| ಫ್ಯಾಮಿಲಿ ಮ್ಯಾನ್-2 ವೆಬ್ ಸರಣಿಯ ಬಿಡುಗಡೆ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ1
ಈ ಮೂಲಕ ಹಲವು ಸಚಿವರಿಗೆ ಬಿಜೆಪಿ ಕೊಕ್ ನೀಡಲಿದೆ. 2023ರ ಚುನಾವಣೆ ಹಿನ್ನಲೆಯಲ್ಲಿ ಸಂಪುಟಕ್ಕೆ ಸರ್ಜರಿ ನಡೆಸಲು ಯೋಜನೆ ರೂಪಿಸಲಾಗಿದೆ. 'ವಲಸಿಗರ' ಪೈಕಿ ಕೆಲವರಿಗೆ ಕೊಕ್ ನೀಡಲಾಗುವುದು ಎಂದು ಕೂಡ ಕೇಳಿಬರುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ