HOME » NEWS » State » SIDI UTSAVA CELEBRATION IN THE MIDST OF A BAN ON SILENCE AN INHUMANE INCIDENT AT KALBURGI SAK HK

ನಿಷೇಧದ ನಡುವೆಯೇ ಸಿಡಿ ಆಚರಣೆ - ಸಮಗ್ರ ತನಿಖೆಗೆ ಸಾರ್ವಜನಿಕರ ಆಗ್ರಹ

ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಅದರಲ್ಲಿ ಸಿಡಿ, ಮಡೆಸ್ನಾನ ಸೇರಿದಂತೆ ಅನೇಕ ಆಚರಣೆಗಳನ್ನು ನಿಷೇಧಿಸಲಾಗಿದೆ. ಇಷ್ಟಾದರೂ ಕಲಬುರ್ಗಿ ಜಿಲ್ಲೆಯಲ್ಲಿ ಮೌಢ್ಯಾಚರಣೆಗಳಿಗೆ ಬ್ರೇಕ್ ಬಿದ್ದಿಲ್ಲ

news18-kannada
Updated:February 25, 2020, 7:21 AM IST
ನಿಷೇಧದ ನಡುವೆಯೇ ಸಿಡಿ ಆಚರಣೆ - ಸಮಗ್ರ ತನಿಖೆಗೆ ಸಾರ್ವಜನಿಕರ ಆಗ್ರಹ
ಕಂಬಕ್ಕೆ ಮಹಿಳೆಯನ್ನು ಜೋತು ಹಾಕಿರುವುದು
  • Share this:
ಕಲಬುರ್ಗಿ(ಫೆ.25) : ಮೌಢ್ಯ ನಿಷೇಧದ ನಡುವೆಯೂ ಸಿಡಿ ಆಚರಣೆ ಮಾಡಿದ ಘಟನೆ ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ಹಿರೋಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಅವ್ವಮ್ಮ ಎಂಬ ಮಹಿಳೆ ಭಾಗಮ್ಮ ದೇವಿಗೆ ಹರಕೆ ತೀರಿಸಲು ಸಿಡಿ ಆಡಿದ್ದಾಳೆ. ಚಕ್ಕಡಿಗೆ ಕಟ್ಟಿದ ಉದ್ದನೆಯ ಕಂಬಕ್ಕೆ ಮಹಿಳೆಯನ್ನು ಜೋತು ಹಾಕಿ ಹರಕೆ ತೀರಿಸಲಾಗಿದೆ. ಆದರೆ, ಈ ಕ್ರಿಯೆಗೆ ಇದೀಗ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ಸಿಡಿ ಆಚರಣೆ ಮರುಕಳಿಸಿರುವ ಕುರಿತು ತನಿಖೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಅದರಲ್ಲಿ ಸಿಡಿ, ಮಡೆಸ್ನಾನ ಸೇರಿದಂತೆ ಅನೇಕ ಆಚರಣೆಗಳನ್ನು ನಿಷೇಧಿಸಲಾಗಿದೆ. ಇಷ್ಟಾದರೂ ಕಲಬುರ್ಗಿ ಜಿಲ್ಲೆಯಲ್ಲಿ ಮೌಢ್ಯಾಚರಣೆಗಳಿಗೆ ಬ್ರೇಕ್ ಬಿದ್ದಿಲ್ಲ. ಜಿಲ್ಲೆಯ ಆಳಂದ ತಾಲೂಕಿನ ಹಿರೋಳ್ಳಿ ಗ್ರಾಮದಲ್ಲಿ ಸಿಡಿ ಆಚರಣೆ ಪುನರಾವರ್ತನೆಗೊಂಡಿದೆ.

ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಈ ಗ್ರಾಮದ ಗಡಿಯಲ್ಲಿ ಭಾಗಮ್ಮ ದೇವಿಯ ದೇವಸ್ಥಾನವಿದೆ. ಭಾಗಮ್ಮ ದೇವಿಗೆ ಹರಕೆ ಹೊತ್ತು ಮಹಿಳೆಯರು ಸಿಡಿ ಆಚರಣೆ ಮಾಡುವುದು ಇಲ್ಲಿ ಸಾಮಾನ್ಯದ ಸಂಗತಿಯಾಗಿದೆ. ಅದೇ ಗ್ರಾಮದ ಅಂಬವ್ವ ಎಂಬ ದಲಿತ ಮಹಿಳೆ ಸಿಡಿ ಏರಿದ್ದಾಳೆ. ತನ್ನ ಮನದಿಂಗಿತಗಳು ಪೂರೈಕೆಯಾಗಲೆಂದು ಹರಕೆ ತೀರಿಸಲು ಮಹಿಳೆ ಸಿಡಿ ಆಚರಣೆ ಮಾಡಿದ್ದಾಳೆ. ಚಕ್ಕಡಿಗೆ ಕಟ್ಟಲಾದ ದೊಡ್ಡ ಕಂಬಕ್ಕೆ ಮಹಿಳೆಯನ್ನು ಜೋತು ಹಾಕಿ, ಸಿಡಿ ಆಚರಣೆ ನಡೆಸಲಾಗಿದೆ.

ಈ ಹಿಂದೆ ಹತ್ತಾರು ವರ್ಷಗಳಿಂದ ಬೆನ್ನಿಗೆ ಕಬ್ಬಿಣದ ರಾಡು, ಕೊಂಡಿ ಹಾಕಿ ಮಹಿಳೆಯನ್ನು ಕಂಬಕ್ಕೆ ನೇತು ಹಾಕಿ ಸಿಡಿ ಆಚರಣೆ ಮಾಡಲಾಗುತ್ತಿತ್ತು. ಘತ್ತರಗಿಯಲ್ಲಿ ನಡೆಯುತ್ತಿದ್ದ ಈ ಆಚರಣೆ ಅಮಾನವೀಯ ಎಂಬ ಕಾರಣಕ್ಕೆ ನಿಷೇಧಿಸಲಾಗಿತ್ತು. ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದ್ದ ಆಚರಣೆಗೆ ಕೆಲ ವರ್ಷಗಳಿಂದ ಬ್ರೇಕ್​ ಬಿದ್ದಿತ್ತು. ಘತ್ತರಿಯಲ್ಲಿ ಸ್ಥಗಿತಗೊಂಡಿದ್ದ ಈ ಆಚರಣೆ ಹಿರೋಳ್ಳಿಯಲ್ಲಿ ಇದೀಗ ಮತ್ತೆ ಮರುಕಳಿಸಿದೆ.

ಬೆಲ್ಟ್ ಕಟ್ಟಿ ಮಹಿಳೆಯನ್ನು ಕಂಬಕ್ಕೆ ಜೋತು ಹಾಕಿ ಸಿಡಿ ಆಚರಣೆ ಮಾಡಲಾಗಿದೆ ಎನ್ನಲಾಗುತ್ತಿದೆ. ಆದರೆ ದೊಡ್ಡದಾದ ಕಂಬಕ್ಕೆ ನೇತು ಹಾಕಿ, ಚಕ್ಕಡಿಯನ್ನು ಎಳೆದುಕೊಂಡು ಹೋಗುವುದು ಅಮಾನವೀಯ. ನೇತು ಹಾಕಿದ ಮಹಿಳೆ ಬಿದ್ದು ಸತ್ತರೆ ಯಾರು ಹೊಣೆ? ಎಂಬ ಪ್ರಶ್ನೆ ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಸಿಡಿ ಆಚರಣೆ ಕುರಿತು ತನಿಖೆ ನಡೆಸಬೇಕು. ಸಿಡಿ ಆಚರಣೆ ಆಯೋಜಕರ ಮೇಲೆ ಕ್ರಮ ಕೈಗೊಳ್ಳಬೇಕು. ಅಮಾನವೀಯ ಆಚರಣೆಗೆ ಕಡಿವಾಣ ಹಾಕಬೇಕೆಂದು ಪ್ರಗತಿಪರ ಹೋರಾಟಗಾರ ಬಿ.ವಿ.ಚಕ್ರವರ್ತಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಆಯುಧ ಹಿಡಿದ ಕೈಯಲ್ಲಿ ಸ್ಟೆತಸ್ಕೋಪ್ - ಕೊಲೆ ಶಿಕ್ಷೆಗೆ ಗುರಿಯಾದಾತ ಈಗ ಜೀವದಾತ ವೈದ್ಯ

ಮೌಢ್ಯ ನಿಷೇಧ ಕಾನೂನು ಜಾರಿಗೆ ತಂದಿರುವುದಾಗಿ ರಾಜ್ಯ ಸರ್ಕಾರ ಹೇಳುತ್ತಿರುವ ಸಂದರ್ಭದಲ್ಲೇ ಇಂತಹ ಘಟನೆ ನಡೆದಿರುವುದು ಅಚ್ಚರಿಗೆ ಕಾರಣವಾಗಿದೆ. ಮೌಢ್ಯಾಚರಣೆಗಳ ತವರೂರು ಎನಿಸಿದ ಕಲ್ಯಾಣ ಕರ್ನಾಟಕದಲ್ಲಿ ಈ ಘಟನೆ ನಡೆದಿದ್ದು, ಇದಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ.
First published: February 25, 2020, 7:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading