ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಮಠದಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಜ್ಞಾನಯೋಗಾಶ್ರಮದ (Jnanayogashrama) ಸಿದ್ದೇಶ್ವರ ಶ್ರೀಗಳು (Siddeshwara Swamiji) ಸೋಮವಾರ ಸಂಜೆ ಕೊನೆಯುಸಿರೆಳೆದಿದ್ದಾರೆ. ಉತ್ತರ ಕರ್ನಾಟಕದಲ್ಲಿ ನಡೆದಾಡುವ ದೇವರೆಂದೇ ಖ್ಯಾತಿ ಪಡೆದಿದ್ದ ಸ್ವಾಮೀಜಿ ಪ್ರವಚನಕಾರರಾಗಿಯೂ ಪ್ರಸಿದ್ಧಿ ಗಳಿಸಿದ್ದರು. ಇದೇ ಕಾರಣದಿಂದ ಶ್ರೀಗಳ ಆರೋಗ್ಯ ಹದಗೆಟ್ಟ ವಿಚಾರ ತಿಳಿಯುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಇಲ್ಲಿಗೆ ಜನರು ಆಗಮಿಸಲಾರಂಭಿಸಿದ್ದರು ಹಾಗೂ ಸ್ವಾಮೀಜಿಗಳ ಆರೋಗ್ಯ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದರು. ಆದರೆ ಈ ಪ್ರಾರ್ಥನೆ ಫಲಿಸಲಿಲ್ಲ, ಶ್ರೀಗಳು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಸದ್ಯ ಶ್ರೀಗಳ ಪಾರ್ಥಿವ ಶರೀರ ಅಂತಿಮ ದರ್ಶನ ಆರಂಭಗೊಂಡಿದೆ.
ಹೌದು ಜ್ಞಾನಯೋಗಾಶ್ರಮ ಆವರಣದಲ್ಲಿ ಬೆಳಗ್ಗೆ 4.30ರವರೆಗೆ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ವೇದಿಕೆಯಲ್ಲಿ ಶ್ರೀಗಳ ಪಾರ್ಥಿವ ಶರೀರಕ್ಕೆ ಮಂಗಳಾರತಿ ನಡೆಸಲಾಗಿತ್ತು. ಇಲ್ಲಿ ವಿವಿಧ ಸ್ವಾಮೀಜಿಗಳೂ ಉಪಸ್ಥಿತರಿದ್ದರು. ಅಂತಿಮ ದರ್ಶನ ಪಡೆಯಲು ಭಕ್ತರು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದು, ಪೊಲೀಸರಿಗೆ ಭಕ್ತರನ್ನು ನಿಯಂತ್ರಿಸುವುದೇ ಬಹಳ ಕಷ್ಟವಾಗುತ್ತಿದೆ.
ಇದನ್ನೂ ಓದಿ: Siddeshwar Swamiji: ‘ಸರಳ ಸಂತ’ ಸಿದ್ದೇಶ್ವರ ಸ್ವಾಮೀಜಿ ಹೇಗಿದ್ದರು? ‘ಜ್ಞಾನಯೋಗಿ’ಯ ಜೀವನಗಾಥೆ ಇಲ್ಲಿದೆ ಓದಿ
ಸದ್ಯ ಶ್ರೀಗಳ ಪಾರ್ಥಿವ ಶರೀರವನ್ನು ಸೈನಿಕ ಶಾಲಾ ಆವರಣಕ್ಕೆ ಕೊಂಡೊಯ್ಯಲಾಗಿದ್ದು, ಇಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಜ್ಞಾನ ಯೋಗಾಶ್ರದಿಂದ ಸೈನಿಕ ಶಾಲೆವರೆಗೆ ಶ್ರೀ ಗಳ ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ಕೊಂಡೊಯ್ಯಲಾಗಿತ್ತು.
#siddeshwarswamiji #siddeshwaraswamiji #SiddheshwarSwamiji@DeccanChronicle pic.twitter.com/irJ74txezm
— Gururaj A Paniyadi (@paniyadi) January 2, 2023
ಮೂರು ಗಂಟೆಯವರೆಗೆ ಶ್ರೀಗಳ ಅಂತಿಮ ದರ್ಶನ
ಸೈನಿಕ ಶಾಲಾ ಆವರಣದಲ್ಲಿ ಸಂಜೆ ಮೂರು ಗಂಟೆಯವರೆಗೆ ಶ್ರೀಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡಲಾರಂಭಿಸಿದ್ದಾರೆ. ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿದ ಎಂ. ಬಿ. ಪಾಟೀಲ್, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಅಲ್ಲದೇ ಈ ಬಗ್ಗೆ ವಿಜಯಪುರ ಎಸ್ಪಿಯವರಿಂದ ಮಾಹಿತಿಯನ್ನೂ ಪಡೆದಿದ್ದಾರೆ.
ರಾಷ್ಟ್ರಧ್ವಜ ಹೊದಿಸಿ ಶ್ರೀಗಳಿಗೆ ಗೌರವ ಸಮರ್ಪಣೆ
ವಿಜಯಪುರ ಜಿಲ್ಲಾಡಳಿತದ ವತಿಯಿಂದ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜ ಹೊದಿಸಿ ಶ್ರೀಗಳಿಗೆ ಗೌರವ ಸಮರ್ಪಣೆ ಮಾಡಲಾಗಿದೆ. ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನ ವೇಳೆ ಭಕ್ತರು ಅವರನ್ನು ನೆನೆದು ಬಿಕ್ಕಿ ಬಿಕ್ಕಿ ಅಳುತ್ತಲೇ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ