ಕಾಫಿ ಡೇ ಮಾಲೀಕ ಸಿದ್ಧಾರ್ಥ ಹೆಗ್ಡೆ ಆತ್ಮಹತ್ಯೆಗೆ ತೆರಿಗೆ ಅಧಿಕಾರಿಗಳ ಕಾಟ ಕಾರಣವಲ್ಲವಾ?; ಸಾವಿರಾರು ಕೋಟಿ ಲೆಕ್ಕ ಮಾಯವಾಗಿದ್ದು ಬೆಳಕಿಗೆ

ಸಿದ್ಧಾರ್ಥ್ ಹೆಗ್ಡೆ ವೈಯಕ್ತಿಕ ಒಡೆತನದ ಮೈಸೂರ್ ಅಮಾಲ್ಗಮೇಟೆಡ್ ಕಾಫಿ ಎಸ್ಟೇಟ್ಸ್ (ಎಂಎಸಿಇಎಲ್) ಸಂಸ್ಥೆ ಹಾಗೂ ಕಾಫಿ ಡೇ ಗ್ರೂಪ್ ಸಂಸ್ಥೆಗಳ ಮಧ್ಯೆ ಅನುಮಾನಾಸ್ಪದ ವ್ಯವಹಾರಗಳು ನಡೆದಿರುವ ಬಗ್ಗೆ ತನಿಖಾ ವರದಿಯಲ್ಲಿ ಮಾಹಿತಿ ಇದೆ ಎನ್ನಲಾಗುತ್ತಿದೆ.

ವಿ.ಜಿ. ಸಿದ್ಧಾರ್ಥ್

ವಿ.ಜಿ. ಸಿದ್ಧಾರ್ಥ್

 • Share this:
  ಬೆಂಗಳೂರು(ಜುಲೈ 25): ಕಾಫಿ ಡೇ ಎಂಬ ಬೃಹತ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಸಿದ್ಧಾರ್ಥ್ ಹೆಗ್ಡೆ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ತೆರಿಗೆ ಅಧಿಕಾರಿಗಳ ಒತ್ತಡವನ್ನು ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಸೂಸೈಡ್ ನೋಟ್​ನಲ್ಲಿ ವಿ.ಜಿ. ಸಿದ್ದಾರ್ಥ ಬರೆದಿದ್ದರು. ಅದರಂತೆ ನೂತನವಾಗಿ ರಚಿತವಾದ ಕಾಫಿ ಬೋರ್ಡ್ ಮಂಡಳಿಯು ಇದೇ ಸೂಸೈಡ್ ನೋಟ್ ವಿಚಾರಗಳ ಬಗ್ಗೆ ತನಿಖೆಗೆ ಆದೇಶಿಸಿತ್ತು. ಸಿಬಿಐ ಡಿಐಜಿ ಅಶೋಕ್ ಕುಮಾರ್ ಮಲ್ಹೋತ್ರಾ ನೇತೃತ್ವದ ತಂಡದಿಂದ ತನಿಖೆ ಮುಗಿದಿದ್ದು ಸದ್ಯದಲ್ಲೇ ವರದಿ ಸಲ್ಲಿಸಲು ಸಿದ್ಧವಾಗಿದೆ. ತನಿಖಾ ವರದಿಯಲ್ಲಿರುವ ಕೆಲ ಅಂಶಗಳು ಮಾಧ್ಯಮಗಳಿಗೆ ಸಿಕ್ಕಿವೆ. ಆ ಮಾಹಿತಿ ಪ್ರಕಾರ, ಸಿದ್ಧಾರ್ಥ ಹೆಗ್ಡೆ ಆತ್ಮಹತ್ಯೆಗೆ ತೆರಿಗೆ ಅಧಿಕಾರಿಗಳ ಕಿರುಕುಳ ಕಾರಣವಲ್ಲ ಎಂಬುದು ಸ್ಪಷ್ಟವಾಗಿದೆ. ಮತ್ತೊಂದು ಪ್ರಮುಖ ವಿಚಾರವೆಂದರೆ ಸಿದ್ಧಾರ್ಥ್ ನಿರ್ವಹಿಸುತ್ತಿದ್ದ ಸಂಸ್ಥೆಗಳಲ್ಲಿ ಸುಮಾರು 3500-4000 ಕೋಟಿ ರೂಪಾಯಿಯಷ್ಟು ಲೆಕ್ಕವೇ ಸಿಕ್ಕಿಲ್ಲ. ತಪ್ಪಿಹೋದ ಇಷ್ಟು ಹಣ ಏನಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

  ಸಿದ್ಧಾರ್ಥ್ ಹೆಗ್ಡೆ ವೈಯಕ್ತಿಕ ಒಡೆತನದ ಮೈಸೂರ್ ಅಮಾಲ್ಗಮೇಟೆಡ್ ಕಾಫಿ ಎಸ್ಟೇಟ್ಸ್ (ಎಂಎಸಿಇಎಲ್) ಸಂಸ್ಥೆ ಹಾಗೂ ಕಾಫಿ ಡೇ ಗ್ರೂಪ್ ಸಂಸ್ಥೆಗಳ ಮಧ್ಯೆ ಅನುಮಾನಾಸ್ಪದ ವ್ಯವಹಾರಗಳು ನಡೆದಿರುವ ಬಗ್ಗೆ ತನಿಖಾ ವರದಿಯಲ್ಲಿ ಮಾಹಿತಿ ಇದೆ ಎನ್ನಲಾಗುತ್ತಿದೆ.

  ಸಿದ್ಧಾರ್ಥ ಅವರು ಸಾಲದ ಹಣವನ್ನು ನೇರವಾಗಿ ಎಂಎಸಿಇಎಲ್ ಸಂಸ್ಥೆಗೆ ರವಾನಿಸುತ್ತಿದ್ದರು. ಇದರಿಂದ ಅವರು ಕಾಫಿ ಡೇ ಸಂಸ್ಥೆಯ ದುಬಾರಿ ವೆಚ್ಚದ ಖರೀದಿಗಳು ಹಾಗೂ ಹೂಡಿಕೆದಾರರ ಷೇರುಗಳ ಖರೀದಿಗೆ ಹಣ ವಿನಿಯೋಗಿಸಲು ಸಾಧ್ಯವಾಗುತ್ತಿತ್ತು. ಎಂಎಸಿಇಎಲ್ ಸಂಸ್ಥೆಯು ಸಿದ್ಧಾರ್ಥ ಅವರು ಖಾಸಗಿಯಾಗಿ ನಿರ್ವಹಿಸುವ ಸಂಸ್ಥೆಯಾದ್ದರಿಂದ ಇದರ ವ್ಯವಹಾರ ಯಾರಿಗೂ ಗೊತ್ತಾಗುತ್ತಿರಲಿಲ್ಲವೆನ್ನಲಾಗಿದೆ. ಹೀಗೆ, ಎಂಎಸಿಇಎಲ್ ಮೇಲೆ ಸಾಲದ ಹೊರೆ ಹೆಚ್ಚುತ್ತಾ ಹೋಗಿದೆ. ಸಾಲಗಾರರ ಒತ್ತಡ ಹೆಚ್ಚಾಗಿತ್ತು.

  ಇದನ್ನೂ ಓದಿ: ಕೋವಿಡ್ ವಕ್ಕರಿಸಿದ ಆರಂಭದಲ್ಲಿ ಭಾರತ ಮಾಡಿದ ತಪ್ಪೇನು? ಜ್ವರಲಕ್ಷಣದ ಹಿಂದೆ ಬಿದ್ದದ್ದು ಯಡವಟ್ಟಾಯಿತಾ?

  ಕಾಫಿ ಡೇ ಸಂಸ್ಥೆಯ ಸಮಗ್ರ ಆಡಿಟಿಂಗ್ ಸ್ಟೇಟ್ಮೆಂಟ್ ಪ್ರಕಾರ 2019, ಮಾರ್ಚ್ 31ರ ವೇಳೆಯಲ್ಲಿ ಎಂಎಸಿಇಎಲ್ ಸಂಸ್ಥೆಯಿಂದ ಕಾಫಿಡೇಯ 49 ಉಪಸಂಸ್ಥೆಗಳಿಗೆ ಬರಬೇಕಾದ ಒಟ್ಟು ಹಣ 842 ಕೋಟಿ ರೂ ಎಂದಿದೆ. ಆದರೆ, ತನಿಖೆ ನಡೆಸಿದಾಗ ಎಂಎಸಿಇಎಲ್​ನಿಂದ 3 ಸಾವಿರ ಕೋಟಿಗೂ ಹೆಚ್ಚು ಹಣ ಬಾಕಿ ಉಳಿದುಕೊಂಡಿರುವುದು ಬೆಳಕಿಗೆ ಬಂದಿದೆ. ಇಷ್ಟು ಹಣದ ಲೆಕ್ಕ ಎಲ್ಲಿ ತಪ್ಪಿ ಹೋಯಿತು ಎಂಬುದು ಪ್ರಶ್ನೆ. ಹಾಗೆಯೇ, ಸಿದ್ಧಾರ್ಥ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಹಣಕಾಸು ಒತ್ತಡ ಹೇಗೆ ಸೃಷ್ಟಿಯಾಯಿತು ಎಂಬುದು ಪ್ರಶ್ನೆ.

  ತನಿಖಾ ವರದಿಯಲ್ಲಿರುವ ಅಂಶಗಳ ಪ್ರಕಾರ, ಆದಾಯ ತೆರಿಗೆ ಇಲಾಖೆಯು ಮೈಂಡ್​ಟ್ರೀ ಸಂಸ್ಥೆಯನ್ನು ಮುಟ್ಟುಗೋಲು ಹಾಕಿಕೊಂಡಿದ್ದು ಸಿದ್ಧಾರ್ಥ ಅವರ ಹಣಕಾಸು ಚಲನೆ ಅಸಾಧ್ಯವಾಗುವಂತೆ ಕಟ್ಟಿಹಾಕಿತ್ತು. ಮೈಂಡ್​ಟ್ರೀ ಸಂಸ್ಥೆಯಲ್ಲಿ ಕಾಫಿಡೇ ಪಾಲು ಇತ್ತು. ಆದ್ದರಿಂದ ಐಟಿ ಇಲಾಖೆಯ ಈ ಕ್ರಮದಿಂದ ಸಿದ್ಧಾರ್ಥಗೆ ಪರೋಕ್ಷವಾಗಿ ಬಿಸಿ ತಾಕಿತು. ಅವರಿಗೆ ಹೊಸ ಸಾಲ ಪಡೆಯಲು ಬಹುತೇಕ ಅಸಾಧ್ಯವಾಗಿ ಕೈಕಟ್ಟಿಹಾಕಿದಂತಿತ್ತು. ಹೀಗಾಗಿ ಅವರು ಅಪರಿಮಿತ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ವರದಿಯಲ್ಲಿ ಶಂಕಿಸಲಾಗಿದೆ.

  ಇದನ್ನೂ ಓದಿ: ಕೊರೋನಾ ಖರ್ಚಿನ ಲೆಕ್ಕ ಕೊಡಿ, ಶ್ವೇತ ಪತ್ರ ಹೊರಡಿಸಿ; ಅಂಚೆ ಪತ್ರ ಚಳುವಳಿ ಮೂಲಕ ಯುವ ಕಾಂಗ್ರೆಸ್ ಆಗ್ರಹ

  ಹಾಗೆಯೇ, ಅದಾಯ ತೆರಿಗೆ ಅಥವಾ ಇತರೆ ತನಿಖಾ ಸಂಸ್ಥೆಗಳ ಒತ್ತಡವು ಸಿದ್ಧಾರ್ಥ ಸಾವಿಗೆ ಕಾರಣವಾಯಿತು ಎಂಬ ಅಂಶವನ್ನು ವರದಿಯಲ್ಲಿ ತಳ್ಳಿಹಾಕಿದೆ. ಐಟಿ ಇಲಾಖೆಯಿಂದ ಅಸಹಜ ಕಿರುಕುಳ ಇತ್ತು ಎಂಬುದಕ್ಕೆ ಯಾವುದೇ ದಾಖಲೆಗಳು ಇಲ್ಲ. ಅಲ್ಲದೇ, ಸಿದ್ಧಾರ್ಥ ಅವರು ಮಾಡಿಕೊಂಡ ತಪ್ಪಿಗೆ ಅವರೇ ಹೊಣೆ. ಅವರ ಅನೇಕ ವ್ಯವಹಾರಗಳು ಹಿರಿಯ ಆಡಳಿತಾಧಿಕಾರಿಗಳಿಗಾಗಲೀ, ಆಡಿಟರ್​ಗಳಿಗಾಗಲೀ ಗೊತ್ತಿರಲಿಲ್ಲ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.

  ವಿ.ಜಿ. ಸಿದ್ಧಾರ್ಥ ಅವರು ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಅಳಿಯರಾಗಿದ್ದು, ಡಿಕೆ ಶಿವಕುಮಾರ್ ಮೊದಲಾದವರಿಗೆ ಬಹಳ ಆಪ್ತರಾಗಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಷ್ಟ್ರಾದ್ಯಂತ ದೊಡ್ಡ ಸಂಚಲನ ಸೃಷ್ಟಿಸಿತ್ತು. ಕೇಂದ್ರ ಸರ್ಕಾರ ಐಟಿ, ಇಡಿ ಇತ್ಯಾದಿ ತನಿಖಾ ಸಂಸ್ಥೆಗಳ ಮೂಲಕ ಉದ್ಯಮಿಗಳು, ರಾಜಕಾರಣಿಗಳನ್ನ ಹಿಂಸಿಸುತ್ತಿದೆ ಎಂಬ ಬಲವಾದ ಆರೋಪಗಳು ವ್ಯಕ್ತವಾಗುತ್ತಿದ್ದ ಸಂದರ್ಭ. ಈಗ ಸಿದ್ಧಾರ್ಥ ಹೆಗ್ಡೆ ಅವರ ಸಾವಿನ ಹಿನ್ನೆಲೆ ಮೇಲೆ ಈ ತನಿಖಾ ವರದಿ ಬೆಳಕು ಚೆಲ್ಲುವ ಸಾಧ್ಯತೆ ಇದೆ.

  ಸಿದ್ಧಾರ್ಥ ಅವರ ನಿಧನದ ನಂತರ ಕಾಫಿ ಡೇ ಸಂಸ್ಥೆಗೆ ಹೊಸ ಆಡಳಿತ ಮಂಡಳಿಯನ್ನು ನೇಮಿಸಲಾಗಿದೆ. ಇದರಲ್ಲಿ ಸಿದ್ಧಾರ್ಥ ಅವರ ಪತ್ನಿಯೂ ಈ ಮಂಡಳಿಯಲ್ಲಿದ್ದಾರೆ. ಕೆಫೆ ಕಾಫಿ ಡೇ ಸಂಸ್ಥೆಯ 49 ಅಂಗ ಸಂಸ್ಥೆಗಳ ಆಸ್ತಿಗಳನ್ನ ಮಾರಿ ಸಾಲ ತೀರಿಸುವ ಪ್ರಯತ್ನಗಳಾಗುತ್ತಿವೆ. ಕಳೆದ ಒಂದು ವರ್ಷದಲ್ಲಿ ಸಾಲದ ಪ್ರಮಾಣ ಬಹಳಷ್ಟು ಕಡಿಮೆ ಆಗಿದೆ ಎನ್ನಲಾಗಿದೆ.
  Published by:Vijayasarthy SN
  First published: