ಅಂದು ಸಿದ್ದರಾಮಯ್ಯ ಮೈಯಲ್ಲಿ ಕಾಂಗ್ರೆಸ್ ರಕ್ತ ಇಲ್ಲ ಎಂದಿದ್ದ ಕೋಳಿವಾಡ; ಇಂದು ಮಾಜಿ ಸ್ಪೀಕರ್ ಪರವಾಗಿ ಟಗರು ಗುಟುರು

ಪ್ರಸ್ತುತ ಕೋಳಿವಾಡ ಪರವಾಗಿ ಸಿದ್ದರಾಮಯ್ಯ ಪ್ರಚಾರ ಮಾಡುತ್ತಿರುವುದು ಅಚ್ಚರಿಯೇನಲ್ಲ. ಆದರೆ, ತನ್ನ ವಿರುದ್ಧ ಬಾಯಿಗೆ ಬಂದತೆ ಮಾತಾಡಿದ ಕೋಳಿವಾಡ ಪರ ಪ್ರಚಾರ ಮಾಡಲು ಬಂದ ಸಿದ್ದರಾಮಯ್ಯ ನಡೆಗೆ ಕಾಂಗ್ರೆಸ್ಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

news18-kannada
Updated:November 29, 2019, 5:12 PM IST
ಅಂದು ಸಿದ್ದರಾಮಯ್ಯ ಮೈಯಲ್ಲಿ ಕಾಂಗ್ರೆಸ್ ರಕ್ತ ಇಲ್ಲ ಎಂದಿದ್ದ ಕೋಳಿವಾಡ; ಇಂದು ಮಾಜಿ ಸ್ಪೀಕರ್ ಪರವಾಗಿ ಟಗರು ಗುಟುರು
ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆ.ಬಿ ಕೋಳಿವಾಡ
  • Share this:
ಬೆಂಗಳೂರು(ನ.29): ಕರ್ನಾಟಕ ಉಪಚುನಾವಣೆಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್​​ 5ನೇ ತಾರೀಕಿನಂದು ನಡೆಯುವ 15 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಬಿಜೆಪಿ ಸರ್ಕಾರದ ಉಳಿಸಲು ಸಿಎಂ ಬಿ.ಎಸ್​​ ಯಡಿಯೂರಪ್ಪಗೆ ಅನಿವಾರ್ಯವಾದರೆ, ಮಾಜಿ ಸಿಎಂ ಸಿದ್ದರಾಮಯ್ಯಗೆ ಪ್ರತಿಷ್ಠೆಯಾಗಿದೆ. ಹಾಗಾಗಿಯೇ ಉಭಯ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಇನ್ನೂ ಸಿದ್ದರಾಮಯ್ಯನವರಂತೂ ತನ್ನ ವಿರೋಧಿಗಳು ಎಂದು ಭಾವಿಸದೆ ಕಾಂಗ್ರೆಸ್​​ ಅಭ್ಯರ್ಥಿ ಯಾರೇ ಆಗಿರಲಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಅಂತೆಯೇ ತನ್ನ ಮೈಯಲ್ಲಿ ಕಾಂಗ್ರೆಸ್​​ ರಕ್ತವೇ ಇಲ್ಲ ಎಂದು ಜರಿದಿದ್ದ ಕೋಳಿವಾಡ ಪರವಾಗಿಯೂ ಸಿದ್ದರಾಮಯ್ಯ ಮತಯಾಚಿಸುತ್ತಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಣೇಬೆನ್ನೂರು ಕ್ಷೇತ್ರದಿಂದ ಕೆಪಿಜೆಪಿ ಅಭ್ಯರ್ಥಿ ಆರ್​​. ಶಂಕರ್​​ ವಿರುದ್ಧ ಮಾಜಿ ಸ್ಪೀಕರ್​​​ ಕೋಳಿವಾಡ ಪರಾಭವಗೊಂಡಿದ್ದರು. ಆರ್​​. ಶಂಕರ್​​​ ಎದುರು ಸುಮಾರು 4,338 ಮತಗಳ ಅಂತರದಿಂದ ಸೋತಿದ್ದರು. ಸೋತ ಬಳಿಕ ತನ್ನ ಸೋಲಿಗೆ ಸಿದ್ದರಾಮಯ್ಯನೇ ಕಾರಣ ಎಂದು ಬಹಿರಂಗವಾಗಿ ಏಕವಚನದಲ್ಲಿ ಟೀಕಿಸಿದ್ದರು. ಆದರೀಗ, ಅದೇ ಕಾಂಗ್ರೆಸ್​ ಅಭ್ಯರ್ಥಿ ಪರ ಸಿದ್ದರಾಮಯ್ಯ ಪ್ರಚಾರ ಮಾಡಿರುವುದು ಗಮನಾರ್ಹ.

ಸಿದ್ದರಾಮಯ್ಯರನ್ನು ಕಾಂಗ್ರೆಸ್​ನಿಂದ ಕಿತ್ತೊಗೆಯಬೇಕು. ಇವರಿಂದ ಕಾಂಗ್ರೆಸ್​ಗೆ ಯಾವುದೇ ಉಪಯೋಗವಿಲ್ಲ. ಕಾಂಗ್ರೆಸ್​ ಹೈಕಮಾಂಡ್​​​​ ಸಿದ್ದರಾಮಯ್ಯರನ್ನು ಪಕ್ಷದಿಂದ ಒದ್ದೋಡಿಸಬೇಕು. ನಾನೇ ರಾಹುಲ್​​ ಗಾಂಧಿಗೆ ಈ ಮಾತನ್ನು ಹೇಳುತ್ತೇನೆ ಎನ್ನುವ ಮೂಲಕ ಸಿದ್ದರಾಮಯ್ಯ ಕೆಂಗಣ್ಣಿಗೆ ಗುರಿಯಾಗಿದ್ದರು. ಬಳಿಕ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಕಾಂಗ್ರೆಸ್​ ಸೋಲಿಗೆ ಸಿದ್ದರಾಮಯ್ಯ ಕಾರಣ ಎಂದು ಕೆ.ಬಿ ಕೋಳಿವಾಡ ಕುಟುಕಿದ್ದರು.

ಇದನ್ನೂ ಓದಿ: ಉಪಚುನಾವಣೆ ವಾಸ್ತವ ವರದಿ | ರಾಣೇಬೆನ್ನೂರಿನಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ, ಹೆಸರಿಗಷ್ಟೇ ಜೆಡಿಎಸ್

ತನ್ನ ವಿರುದ್ಧ ಹೀಗೆಲ್ಲಾ ಕೂಗಾಡಿದ್ದ ಕೋಳಿವಾಡರಿಗೆ ಕಾಂಗ್ರೆಸ್​ ಟಿಕೆಟ್​ ಸಿಗಲು ಸಿದ್ದರಾಮಯ್ಯರೇ ಕಾರಣ. ಇದೇ ಸಿದ್ದರಾಮಯ್ಯ ಈಗ ಕೋಳಿವಾಡ ಪರವಾಗಿ ರಾಣೇಬೆನ್ನೂರಿನಲ್ಲಿ ಭರ್ಜರಿ ಪ್ರಚಾರ ಮಾಡಿದ್ದಾರೆ. ಇಲ್ಲಿನ ಕಾಂಗ್ರೆಸ್​ ಬೃಹತ್​​ ಸಮಾವೇಶದಲ್ಲಿ ಕೋಳಿವಾಡಗೆ ವೋಟ್​ ನೀಡಿ ಗೆಲ್ಲಿಸುವಂತೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಪ್ರಸ್ತುತ ಕೋಳಿವಾಡ ಪರವಾಗಿ ಸಿದ್ದರಾಮಯ್ಯ ಪ್ರಚಾರ ಮಾಡುತ್ತಿರುವುದು ಅಚ್ಚರಿಯೇನಲ್ಲ ಎಂಬುದು ಗೊತ್ತಿರುವ ಸಂಗತಿ. ಆದರೂ, ತನ್ನ ವಿರುದ್ಧ ಬಾಯಿಗೆ ಬಂದತೆ ಮಾತಾಡಿದ ಕೋಳಿವಾಡ ಪರ ಪ್ರಚಾರ ಮಾಡಲು ಬಂದ ಸಿದ್ದರಾಮಯ್ಯ ನಡೆಗೆ ಕಾಂಗ್ರೆಸ್ಸಿಗರು ಮೆಚ್ಚುಗೆ ವ್ಯಕ್ತಪಡಿಸಿರುವುದು ಮಾತ್ರ ಬಹಿರಂಗ.
First published:November 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ