ಪತ್ರವೊಂದು ಎರಡು ಟ್ವೀಟ್​: ಸಿಎಂಗೆ ಸಿದ್ದರಾಮಯ್ಯ ಬರೆದ ಪತ್ರ ಏನು ಹೇಳುತ್ತಿದೆ?

news18
Updated:July 11, 2018, 10:33 PM IST
ಪತ್ರವೊಂದು ಎರಡು ಟ್ವೀಟ್​: ಸಿಎಂಗೆ ಸಿದ್ದರಾಮಯ್ಯ ಬರೆದ ಪತ್ರ ಏನು ಹೇಳುತ್ತಿದೆ?
news18
Updated: July 11, 2018, 10:33 PM IST
ನ್ಯೂಸ್​ 18 ಕನ್ನಡ

ಬೆಂಗಳೂರು (ಜುಲೈ 11):  ಕಾಂಗ್ರೆಸ್​- ಜೆಡಿಎಸ್​ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತು ಸರ್ಕಾರ ರಚನೆಯಾದ ಮಾರನೇ ದಿನದಿಂದಲೇ ಕೇಳಿಬರುತ್ತಿದೆ. ಅದಕ್ಕೆ ಸಮಜಾಯಿಷಿಯನ್ನೂ ಎರಡು ಪಕ್ಷಗಳು ನೀಡಿವೆ.

ಆದರೆ, ಬಜೆಟ್​ ಘೋಷಣೆಯಾದ ನಂತರ ಜುಲೈ 9ರಂದು ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿ ನೀಡುತ್ತಿದ್ದ ಅಕ್ಕಿಯ ಪ್ರಮಾಣವನ್ನು ತಲಾ 7 ಕೆಜಿಯಿಂದ 5 ಕೆಜಿಗೆ ಇಳಿಸಿರುವ ಬಗ್ಗೆ ಮರುಪರಿಶೀಲನೆ ಮಾಡುವಂತೆ ಆಗ್ರಹಿಸಿದ್ದಾರೆ.
ಇದಕ್ಕೆ ಬಿಜೆಪಿ ನಾಯಕರು ಲೇವಡಿ ಮಾಡಿದ್ದು, ಸಮ್ಮಿಶ್ರ ಸರ್ಕಾರವೆಂಬುದು ಭ್ರಮೆಯಷ್ಟೆ. ಅವರವರ ನಡುವೆ ಯಾವುದೇ ಹೊಂದಾಣಿಕೆಯಿಲ್ಲ.

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಈ ವರ್ಷದ ಬಜೆಟ್​ ಯಾವ ಜೋಕ್​ಗೂ ಕಡಿಮೆಯಿಲ್ಲ ಎಂದುಕೊಂಡಿದ್ದಾರೆ. ಅಂದಮೇಲೆ ರಾಜ್ಯದ ಜನ ಹೇಗೆ ಅದನ್ನು ಒಪ್ಪಲು ಸಾಧ್ಯ? ಅಧಿಕಾರ, ಗೌರವದ ಕಾರಣಕ್ಕೆ ಹೊಂದಾಣಿಕೆ ಮಾಡಿಕೊಂಡಂತೆ ನಾಟಕವಾಡುತ್ತಿರುವ ಸಮ್ಮಿಶ್ರ ಸರ್ಕಾರದ ಕಾರಣದಿಂದ ಕನ್ನಡಿಗರು ತೊಂದರೆ ಅನುಭವಿಸುವಂತಾಗಿದೆ ಎಂದು ಬಿಜೆಪಿಯ ಅಧಿಕೃತ ಟ್ವಿಟ್ಟರ್​ ಖಾತೆಯ ಮೂಲಕ ಟ್ವೀಟ್​ ಮಾಡಿದ್ದಾರೆ. ಇದರ ಜೊತೆಗೆ ಸಿದ್ದರಾಮಯ್ಯನವರು ಕುಮಾರಸ್ವಾಮಿಯವರಿಗೆ ಬರೆದಿರುವ ಪತ್ರವನ್ನೂ ಲಗತ್ತಿಸಿದ್ದಾರೆ.

 

ಇನ್ನು, ಅದೇ ಪತ್ರವನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಅಪ್​ಲೋಡ್​ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅನ್ನಭಾಗ್ಯದ ಬಗ್ಗೆ ಮರುಪರಿಶೀಲನೆ ಮಾಡುವಂತೆ ಸೂಚಿಸಿದ್ದೇನೆ. ಹಾಗೇ, ಪೆಟ್ರೋಲ್​, ಡೀಸೆಲ್​ ದರ ಏರಿಕೆ ಮಾಡಿರುವ ಬಗ್ಗೆಯೇ ಇನ್ನೊಮ್ಮೆ ಯೋಚನೆ ಮಾಡುವಂತೆ ತಿಳಿಸಿದ್ದೇನೆ ಎಂದು ಬರೆದುಕೊಂಡಿರುವ ಅವರಿಗೆ ಬಜೆಟ್​ ಬಗ್ಗೆ ಅಸಮಾಧಾನವಿದೆ ಎಂಬುದನ್ನು ಸೂಚಿಸುತ್ತಿದೆ.

 

ಪತ್ರದಲ್ಲೇನಿದೆ?
ಈ ಬಾರಿಯ ಬಜೆಟ್​ನ ಒಟ್ಟು ಪ್ರಮಾಣವನ್ನು ಗಮನಿಸಿದರೆ ಅನ್ನಭಾಗ್ಯ ಯೋಜನೆ ದುಬಾರಿಯೇನಲ್ಲ. 5 ವರ್ಷದ ಅವಧಿಯಲ್ಲಿ ಈ ಯೋಜನೆಗೆ ನಮ್ಮ ಸರ್ಕಾರ 11,564 ಕೋಟಿ ರೂ. ಮೀಸಲಿಟ್ಟಿತ್ತು. 3.85 ಕೋಟಿ ಜನ ಇದರ ಫಲಾನುಭವಿಗಳಾಗಿದ್ದಾರೆ. ಆದರೆ, ಈ ಬಾರಿಯ ಬಜೆಟ್​ನಲ್ಲಿ ಈ ಯೋಜನೆಯಡಿ ನೀಡುವ ಅಕ್ಕಿಯ ಪ್ರಮಾಣವನ್ನು ಇಳಿಸಿದ್ದು ನೋಡಿ ನನಗೆ ಅಚ್ಚರಿಯಾಗಿದೆ. ಎರಡು ಕೆಜಿ ಅಕ್ಕಿಯನ್ನು ಕಡಿಮೆ ಮಾಡುವುದರಿಂದ ಹೆಚ್ಚೆಂದರೆ 600-700 ಕೋಟಿ ಹಣ ಉಳಿತಾಯ ಮಾಡಬಹುದು.

ಆದರೆ, ಈ ಕಡಿತದಿಂದ ಬಡವರ ಕಷ್ಟ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ನೀಡುವ ಅಕ್ಕಿಯನ್ನು 7 ಕೆಜಿಯಿಂದ 5 ಕೆಜಿಗೆ ಇಳಿಕೆ ಮಾಡುವ ನಿಮ್ಮ ನಿರ್ಧಾರವನ್ನು ಮರು ಪರಿಶೀಲಿಸಿ ಹಳೆಯ ಪದ್ಧತಿಯನ್ನೇ ಮುಂದುವರಿಸಿಕೊಂಡು ಹೋಗಬೇಕೆಂದು ಕೋರುತ್ತೇನೆ.

ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆಯ ವಿರುದ್ಧ ಕಾಂಗ್ರೆಸ್​ ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸುತ್ತಿದೆ. ತೈಲ ಬೆಲೆ ಏರಿಕೆಯನ್ನೇ ಮುಂದಿಟ್ಟುಕೊಂಡು ನಮ್ಮ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಟ ನಡೆಸಿತ್ತು. ಹೀಗಿರುವಾಗ ನಮ್ಮ ರಾಜ್ಯದಲ್ಲಿ ಬೆಲೆ ಏರಿಕೆ ಮಾಡುವುದರಿಂದ ಜನಸಾಮಾನ್ಯರ ಮೇಲೆ ಪರಿಣಾಮ ಬೀರುತ್ತದೆ. ಅದನ್ನೂ ಮರು ಪರಿಶೀಲಿಸಿ ಎಂದು ಸಿದ್ದರಾಮಯ್ಯ ಸಿಎಂಗೆ ಪತ್ರ ಬರೆದಿದ್ದಾರೆ.
First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...