ಸೆಂಚುರಿಯತ್ತ ದಾಪುಗಾಲಿಟ್ಟಿರುವ ಕುಮಾರಸ್ವಾಮಿ ವಿಕೆಟ್​ ತೆಗೆಯಲು ಯುರೋಪ್​ಗೆ ಹೊರಟರಾ ಸಿದ್ದರಾಮಯ್ಯ?

ದ್ವೇಷ ಸಿದ್ದರಾಮಯ್ಯರನ್ನು ಕುರುಡಾಗಿಸಿದೆ. ದ್ವೇಷದ ಓಟದಲ್ಲಿ ಸಿದ್ದರಾಮಯ್ಯ ಒಂದೋ ಕುಮಾರಸ್ವಾಮಿ ವಿಕೆಟ್​ ತೆಗೆಯುತ್ತಾರೆ, ಇಲ್ಲವಾದರೆ ಹಿಟ್​ವಿಕೆಟ್​ ಆಗುತ್ತಾರೆ..?

news18
Updated:August 27, 2018, 6:21 PM IST
ಸೆಂಚುರಿಯತ್ತ ದಾಪುಗಾಲಿಟ್ಟಿರುವ ಕುಮಾರಸ್ವಾಮಿ ವಿಕೆಟ್​ ತೆಗೆಯಲು ಯುರೋಪ್​ಗೆ ಹೊರಟರಾ ಸಿದ್ದರಾಮಯ್ಯ?
ಸಿದ್ದರಾಮಯ್ಯ, ಕುಮಾರಸ್ವಾಮಿ ಸಾಂದರ್ಭಿಕ ಚಿತ್ರ
news18
Updated: August 27, 2018, 6:21 PM IST
ಡಿ.ಪಿ. ಸತೀಶ್​

ಬೆಂಗಳೂರು: ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಎಚ್​.ಡಿ. ಕುಮಾರಸ್ವಾಮಿ ಇನ್ನೇನು 100 ದಿನ ಮುಟ್ಟಲಿದ್ದಾರೆ. ಹತ್ತು ವರ್ಷಗಳ ನಂತರ ಮತ್ತೆ ಮುಖ್ಯಮಂತ್ರಿ ಹುದ್ದೆಗೇರಿದ್ದ ಕುಮಾರಸ್ವಾಮಿ ಅವರಿಗೆ ಒಂದರ್ಥದಲ್ಲಿ ಇದು ಸಂಭ್ರಮಾಚರಣೆಯ ಕಾಲ. ಆದರೆ ಸಂಭ್ರಮಿಸುವ ಸಂತಸ ಕುಮಾರಸ್ವಾಮಿ ಅವರಲ್ಲಾಗಲೀ ಅಥವಾ ಜೆಡಿಎಸ್​ ಪಕ್ಷದಲ್ಲಾಗಲೀ ಕಾಣುತ್ತಿಲ್ಲ.

ಜೆಡಿಎಸ್​ ಮತ್ತು ಕಾಂಗ್ರೆಸ್​ ಪಕ್ಷದ ನಡುವಿನ ಸಮನ್ವಯದ ಕೊರತೆ ಮತ್ತು ಪರಸ್ಪರ ವಿಶ್ವಾಸದ ಕೊರತೆ ಸಮ್ಮಿಶ್ರ ಸರ್ಕಾರವನ್ನು ಬಹುವಾಗಿ ಕಾಡುತ್ತಿದೆ. ಈ ಕಾರಣಕ್ಕಾಗಿಯೇ 100 ದಿನದ ಸಂಭ್ರಮಾಚರಣೆ ರಾಜ್ಯಾದ್ಯಂತ ನಡೆಯಲಿದೆಯಾ ಎಂಬ ಪ್ರಶ್ನೆ ಎದ್ದಿದೆ. ಅದಲ್ಲಿಂತ ಮುಖ್ಯವಾಗಿ 100 ದಿನಗಳ ನಂತರ ಸರ್ಕಾರ ಉಳಿಯಲಿದೆಯಾ ಎಂಬ ಆತಂಕಗಳೂ ಜೆಡಿಎಸ್​ ಮತ್ತು ಕಾಂಗ್ರೆಸ್​ ಪಾಳಯದಲ್ಲಿ ಕೇಳಿ ಬರುತ್ತಿವೆ.

ಮಾಜಿ ಮುಖ್ಯಮಂತ್ರಿ ಮತ್ತು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಇತ್ತೀಚೆಗೆ ನೀಡುತ್ತಿರುವ ದ್ವಂಧ್ವ ಹೇಳಿಕೆಗಳೂ ಈ ಊಹಾಪೋಹಗಳನ್ನು ಸಮರ್ಥಿಸುವಂತಿದೆ. ಬಹಿರಂಗ ಸಭೆಯೊಂದರಲ್ಲಿ ಮಾತನಾಡಿದ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುವ ಬಯಕೆಯನ್ನು ತಿಳಿಸಿದ್ದರು. ಅದಾದ ನಂತರ ಕಾಂಗ್ರೆಸ್​ ಮತ್ತು ಜೆಡಿಎಸ್​ ಪಕ್ಷದಲ್ಲಿ ನಡುಕ ಆರಂಭವಾಗಿತ್ತು.

ಇದರಿಂದ ಎಚ್ಚೆತ್ತ ಸಿಎಂ ಕುಮಾರಸ್ವಾಮಿ ಪರೋಕ್ಷವಾಗಿ ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ, ಆದರೆ ಅವರು ಸರ್ಕಾರವನ್ನೂ ಏನೂ ಮಾಡಲು ಸಾಧ್ಯವಿಲ್ಲ. ಸುಮ್ಮನೆ ವಿಫಲ ಯತ್ನ ಮಾಡುತ್ತಿದ್ದಾರಷ್ಟೇ ಎಂಬುದಾಗಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಆದರೆ ನೇರವಾಗಿ ಯಾರನ್ನೂ ಹೆಸರಿಸಿರಲಿಲ್ಲ.

ರಾಜಕೀಯ ಪಂಡಿತರ ಪ್ರಕಾರ ಈ ಎಲ್ಲಾ ಬೆಳವಣಿಗೆಗಳೂ ಜೆಡಿಎಸ್​ ಮತ್ತು ಕಾಂಗ್ರೆಸ್​ 'ಮದುವೆ'ಗೆ ಅಕಾಲಿಕ ಡಿವೋರ್ಸ್ ಮಾಡಿಸಲಿದೆ ಎನ್ನಲಾಗುತ್ತಿದೆ. ಎರಡೂ ಪಕ್ಷಗಳ ಹಿರಿಯ ಮುಖಂಡರು ಮಧ್ಯಪ್ರವೇಶಿಸದಿದ್ದರೆ ಸಮ್ಮಿಶ್ರ ಸರ್ಕಾರ ಪಥನವಾಗುವ ಸಾಧ್ಯತೆಯನ್ನು ರಾಜಕೀಯ ವಿಶ್ಲೇಷಕರು ವ್ಯಕ್ತಪಡಿಸುತ್ತಾರೆ. ​

ಮೂಲಗಳ ಪ್ರಕಾರ ಕುಮಾರಸ್ವಾಮಿ ಈಗಲೂ ಬಿಜೆಪಿ ನಾಯಕರ ಜತೆ ನಿರಂತರ ಸಂಪರ್ಕದಲ್ಲಿದ್ದು, ಕಾಂಗ್ರೆಸ್​ ಕಾಲೆಳೆಯುವುದನ್ನು ನಿಲ್ಲಿಸದಿದ್ದರೆ ಬಿಜೆಪಿ ಜತೆಗೂಡಿ ಸರ್ಕಾರ ಸ್ಥಾಪಿಸಲು ಮುಂದಾದರೂ ಆಶ್ಚರ್ಯವಿಲ್ಲ. ಆದರೆ ಕೇವಲ ಸಾಧ್ಯತೆ ಮತ್ತು ಊಹಾಪೋಹಗಳ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರದಿಂದ ಹಿಂದೆ ಸರಿಯುವುದು ಸರಿಯಲ್ಲ ಎಂಬ ಕಾರಣಕ್ಕೆ ಕುಮಾರಸ್ವಾಮಿ ಮತ್ತು ಜೆಡಿಎಸ್​ ನಾಯಕರು ಸುಮ್ಮನಿದ್ದಾರೆ ಎನ್ನಲಾಗಿದೆ.
Loading...

ಬಹುತೇಕ ಕಾಂಗ್ರೆಸ್​ ನಾಯಕರಲ್ಲಿ ಸಮ್ಮಿಶ್ರ ಸರ್ಕಾರ ಕಡೆಯ ಪಕ್ಷ ಲೋಕಸಭೆ ಚುನಾವಣೆಯ ವರೆಗಾದರೂ ಉಳಿಯಲ್ಲಿ ಎಂಬ ಚಿಂತನೆಯಿದೆ. ಆದರೆ ಸಿದ್ದರಾಮಯ್ಯ ಅವರಿಗೆ ಮಾತ್ರ ಲೋಕಸಭೆಯ ವರೆಗೂ ದೇವೇಗೌಡ ಅವರ ಕುಟುಂಬದ ಜತೆ ಒಂದಾಗಿ ಹೆಜ್ಜೆ ಹಾಕುವುದು ಇಷ್ಟವಿಲ್ಲ.

ಕುಮಾರಸ್ವಾಮಿಯವರ ಆಪ್ತರೊಬ್ಬರು ಹೇಳುವ ಪ್ರಕಾರ, "ಸಿದ್ದರಾಮಯ್ಯ ದ್ವೇಷದಿಂದ ಕುದಿಯುತ್ತಿದ್ದಾರೆ. ದ್ವೇಷ ಅವರನ್ನು ಕುರುಡಾಗಿಸಿದೆ ಎಂದರೂ ತಪ್ಪಾಗಲಾರದು. ಅವರ ಮುಂದಿನ ಹೆಜ್ಜೆ ಏನು ಎಂಬುದನ್ನು ಯಾರೂ ಊಹಿಸಲೂ ಸಾಧ್ಯವಾಗುತ್ತಿಲ್ಲ," ಎನ್ನುತ್ತಾರೆ ಎಚ್​ಡಿಕೆ ಆಪ್ತ.

ಸಿದ್ದರಾಮಯ್ಯ ಕುಟುಂಬ ಸಮೇತರಾಗಿ ಇದೇ ಸೆಪ್ಟೆಂಬರ್​ 1ರಂದು ಯುರೋಪ್​ ಪ್ರವಾಸಕ್ಕೆ ಹೊರಡಲಿದ್ದಾರೆ. ಈ ಸಮಯದಲ್ಲಿ ಸಮ್ಮಿಶ್ರ ಸರ್ಕಾರದ ಬುಡ ಅಲುಗಾಡಿಸಲು ತಮ್ಮ ಆಪ್ತರನ್ನು ಸಿದ್ದರಾಮಯ್ಯ ಛೂ ಬಿಡಲಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ತಮ್ಮ ಗೈರಿನಲ್ಲಿ ಕುಮಾರಸ್ವಾಮಿ ಸರ್ಕಾರ ಪತನವಾದರೆ ಸಿದ್ದರಾಮಯ್ಯ ಮೇಲೆ ಯಾರೂ ಬೆರಳು ತೋರಿಸಲು ಸಾಧ್ಯವಿಲ್ಲ. ತಾವು ಯುರೋಪಿನಲ್ಲಿದ್ದಾಗ ಸಮ್ಮಿಶ್ರ ಸರ್ಕಾರದಲ್ಲಿ ಭಿನ್ನಮತ ಕೇಳಿ ಬಂದಿದೆ, ನಾನೇನು ಮಾಡಲಿ ಎಂಬ ಸಮಜಾಯಿಷಿಯನ್ನು ಸಿದ್ದರಾಮಯ್ಯ ನೀಡಬಹುದು.

"ಸಿದ್ದರಾಮಯ್ಯ ಅವರು ದೇಶದಲ್ಲಿ ಇಲ್ಲದಿದ್ದಾಗ, ಕಾಂಗ್ರೆಸ್​ ಶಾಸಕರು ಬಿಜೆಪಿಯನ್ನು ಸೇರಬಹುದು. ಆ ನಂತರ ಸಿದ್ದರಾಮಯ್ಯ, ನಾನಿಲ್ಲದಿದ್ದಾಗ ಈ ದುರಂತವಾಗಿದೆ ಎಂದು ಕೈ ತೊಳೆದಕೊಳ್ಳಬಹುದು," ಎನ್ನುತ್ತಾರೆ ಜೆಡಿಎಸ್​ ಶಾಸಕರೊಬ್ಬರು.

ಆದರೆ ಸಿದ್ದರಾಮಯ್ಯ ಆಪ್ತ ಶಾಸಕರು ಈ ಆರೋಪವನ್ನು ಅಲ್ಲಗಳೆಯುತ್ತಾರೆ. ದೇವೇಗೌಡರ ಕುಟುಂಬ ರಾಜ್ಯವನ್ನು ಆಳುವುದು ಸಿದ್ದರಾಮಯ್ಯಗೆ ಇಷ್ಟವಿಲ್ಲದಿದ್ದರೂ, ಕೋಮು ಭಾವನೆ ಹೊಂದಿರುವ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬ ಕಾರಣಕ್ಕೆ ಸಿದ್ದರಾಮಯ್ಯ ಸುಮ್ಮನಿರುತ್ತಾರೆ ಎನ್ನುತ್ತಾರೆ.

ಕಾಂಗ್ರೆಸ್​ ಶಾಸಕರೊಬ್ಬರ ಹೇಳುವ ಪ್ರಕಾರ "ಸಿದ್ದರಾಮಯ್ಯ ರಾಹುಲ್​ ಗಾಂಧಿಯವರಿಗೆ ವಂಚಿಸುವುದಿಲ್ಲ. 2013ರಲ್ಲಿ ಪಕ್ಷದಲ್ಲಿ ವಿರೋಧಗಳಿದ್ದರೂ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡಿದ್ದು ರಾಹುಲ್​ ಗಾಂಧಿ. ಈ ಕಾರಣಕ್ಕಾಗಿಯೇ ಈಗ ಸಿದ್ದರಾಮಯ್ಯ ಸರ್ಕಾರ ಬೀಳಿಸುವ ಕೆಲಸಕ್ಕೆ ಹೋಗುವುದಿಲ್ಲ."

ಮತ್ತೆ ಮುಖ್ಯಮಂತ್ರಿಯಾಗುವ ಸಿದ್ದರಾಮಯ್ಯ ಬಯಕೆಯ ಬಗ್ಗೆ ಮಾತನಾಡಿದ ಶಾಸಕ, "ಸಿದ್ದರಾಮಯ್ಯ 2023ರ ಚುನಾವಣೆಯ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್​ ಮತ್ತು ಜೆಡಿಎಸ್​ ಮುಂದಿನ ವಿಧಾನ ಸಭೆ ಚುನಾವಣೆಯನ್ನೂ ಒಟ್ಟಿಗೆ ಎದುರಿಸಿದರೆ, ಜೆಡಿಎಸ್​ನವರೇ ಮುಖ್ಯಮಂತ್ರಿ ಅಭ್ಯರ್ಥಿಯಾಗಬೇಕಿಲ್ಲ. ಜತೆಗೆ ಕಾಂಗ್ರೆಸ್​ ಪಕ್ಷದ ಕಾರ್ಯಕರ್ತರಲ್ಲಿ ಜೆಡಿಎಸ್​ ಜತೆಗಿನ ಮೈತ್ರಿಯಿಂದ ಬೇಸರವಾಗಿದೆ. ಅವರ ಬೇಸರವನ್ನು ದೂರ ಮಾಡಿ, ಮತ್ತೆ ಸಂಘಟನೆಗೆ ಸಜ್ಜುಗೊಳಿಸಲು ಸಿದ್ದರಾಮಯ್ಯ ಆ ರೀತಿ ಹೇಳಿದ್ದಾರೇ ಹೊರತು ಬೇರಿನ್ನಾವ ಕಾರಣಗಳಿಗೂ ಅಲ್ಲ," ಎಂದರು.

ನ್ಯೂಸ್​ 18 ಜತೆಗೆ ಮಾತನಾಡಿದ ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​. ವಿಶ್ವನಾಥ್​, ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಬದಲಿಸುವ ವಿಚಾರವೇ ಇಲ್ಲ ಎಂದಿದ್ದಾರೆ. ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ ಎಂದ ಅವರು, ಯಡಿಯೂರಪ್ಪ ಕೂಡ ಮುಖ್ಯಮಂತ್ರಿಯಾಗಬೇಕು ಅಂತ ಕಾಯ್ತಿದ್ದಾರೆ, ಅವರಿಗೆ ಬೆಂಬಲ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಇತ್ತ ಯಡಿಯೂರಪ್ಪ ಅವರ ಸ್ಥಿತಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರಿಗಿಂತ ಹೀನವಾಗಿದೆ. ಇರುವ ಕಡೆಯ ಅವಕಾಶವನ್ನು ಬಳಸಿಕೊಂಡು ಮುಖ್ಯಮಂತ್ರಿಯಾಗಬೇಕು ಎಂಬ ಹಪಹಪಿಗೆ ಯಡಿಯೂರಪ್ಪ ಬಿದ್ದಿದ್ದಾರೆ. ಈಗ ಸಾಧ್ಯವಾಗದಿದ್ದರೆ ಮುಂದೆ ಅವಕಾಶ ಸಿಗುವುದಿಲ್ಲ ಎಂಬ ಸತ್ಯದ ಅರಿವು ಅವರಿಗೆ. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಮತ್ತು ಗೌಡರ ನಡುವಿನ ಭಿನ್ನಾಭಿಪ್ರಾಯವನ್ನೇ ಬಳಸಿಕೊಂಡು ಸಮ್ಮಿಶ್ರ ಸರ್ಕಾರವನ್ನು ಒಡೆಯಲು ಯಡಿಯೂರಪ್ಪ ಯೋಚಿಸುತ್ತಿದ್ದಾರೆ. ಆದರೆ ಅತ್ತ ಬಿಜೆಪಿ ಹೈಕಮಾಂಡ್​ ಲೋಕಸಭೆ ಚುನಾವಣೆಯ ವರೆಗೂ ಕತ್ತಿ, ಗುರಾಣಿ ಕೆಳಗಿಡುವಂತೆ ಯಡಿಯೂರಪ್ಪ ಅವರಿಗೆ ಕೋರಿದ್ದಾರೆ.

ಆದರೆ ಕೆಲವು ರಾಜಕೀಯ ಮುಖಂಡರ ಪ್ರಕಾರ, ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಮಹಾ ಮೈತ್ರಿಯನ್ನು ಮುರಿಯುವುದು ಅನಿವಾರ್ಯವಾಗಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ವೇಳೆ ಮಹಾಮೈತ್ರಿಯ ನಾಯಕರು ಶಕ್ತಿ ಪ್ರದರ್ಶನ ಮಾಡಿದ್ದರು. ಬಿಜೆಪಿ ವಿರುದ್ಧ ಎಲ್ಲಾ ಮಿತ್ರ ಪಕ್ಷಗಳೂ ಒಂದಾಗಿ ಲೋಕ ಸಭಾ ಚುನಾವಣೆ ಎದುರಿಸಲು ನಿರ್ಧಾರ ಮಾಡಿದ್ದವ. ಕರ್ನಾಟಕದಲ್ಲಿನ ಮೈತ್ರಿ ಸರ್ಕಾರವನ್ನು ಬೀಳಿಸಿದರೆ, ಅದು ಮಹಾ ಮೈತ್ರಿಗೆ ನೀಡಿದ ಮೊದಲ ಕೊಡಲಿ ಪೆಟ್ಟು ಎಂಬ ಚಿಂತನೆ ಬಿಜೆಪಿ ಹೈಕಮಾಂಡ್​ಗಿದೆ ಎನ್ನಲಾಗಿದೆ.

ನ್ಯೂಸ್​ 18 ಜತೆ ಮಾತನಾಡಿದ ಬಿ.ಎಸ್. ಯಡಿಯೂರಪ್ಪ ಈ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ. ಬಿಜೆಪಿ ಮುಂದಿನ ಗುರಿ ಇರುವುದು 2019ರ ಲೋಕಸಭಾ ಚುನಾವಣೆಯ ಮೇಲೆ. ಅದನ್ನು ಬಿಟ್ಟು ಸಮ್ಮಿಶ್ರ ಸರ್ಕಾರ ಉರುಳಿಸುವ ಚಿಂತನೆ ತಮಗಿಲ್ಲ ಎಂದಿದ್ದಾರೆ. "ಸರ್ಕಾರ ತಾನಾಗಿ ತಾನೇ ಉರುಳಿ ಬೀಳುತ್ತದೆ. ನಾವೇನು ಮಾಡುವ ಅಗತ್ಯವಿಲ್ಲ. ನಾವ್ಯಾಕೆ ಅನಗತ್ಯವಾಗಿ ತಲೆ ಹಾಕಿ ಸಮಯ ಹಾಳು ಮಾಡಿಕೊಳ್ಳಬೇಕು?" ಎಂದು ಪ್ರಶ್ನಿಸುತ್ತಾರೆ ಯಡಿಯೂರಪ್ಪ.

ಇದೇ ಶುಕ್ರವಾರ ರಾಜ್ಯದ 105 ಸ್ಥಳೀಯ ಸಂಸ್ಥೆಗಳಿಗೆ ಮತದಾನ ನಡೆಯುತ್ತಿದ್ದು, ಸೋಮವಾರ ಫಲಿತಾಂಶ ಹೊರಬೀಳಲಿದೆ. ಸ್ಥಳೀಯವಾಗಿ ಇರುವ ಪರ - ವಿರೋಧದ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಪಕ್ಷಗಳು ಸ್ವತಂತ್ರವಾಗಿ ಚುನಾವಣೆ ಎದುರಿಸುತ್ತಿದೆ. ಎರಡೂ ಪಕ್ಷಗಳಿಂದ 50 % ಕ್ಷೇತ್ರಗಳನ್ನು ಗೆದ್ದರೂ, ಮೈತ್ರಿ ಸರ್ಕಾರದ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿವೆ. ಏನಾದರೂ ಕಡಿಮೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ಬಿಜೆಪಿ ಸಮ್ಮಿಶ್ರ ಸರ್ಕಾರಕ್ಕೆ ಅಂತ್ಯ ಹಾಡಲು ಹೊಸ ತಂತ್ರ ಹೆಣೆಯಲಿದೆ.

ಬಹಳ ಕಾಲಗಳಿಂದ ಕರ್ನಾಟಕದ ರಾಜಕೀಯವನ್ನು ಗಮನಿಸುತ್ತಿರುವವರೊಬ್ಬರು ಹೀಗೆ ಹೇಳುತ್ತಾರೆ. "ಕಾಂಗ್ರೆಸ್​ ಈಗ ಗಾಯಗೊಂಡಿದೆ. ಅದನ್ನು ಎತ್ತಿ ಹಿಡಿಯುವ ತಾಕತ್ತಿರುವುದು ಸಿದ್ದರಾಮಯ್ಯ ಅವರಿಗೆ. ಆದರೆ ಅವರು ಆ ಕೆಲಸವನ್ನು ಬೇಸರದಿಂದ ಮಾಡುತ್ತಿದ್ದಾರೆ. ಈ ಎಲ್ಲದರಿಂದ ಸಿದ್ದರಾಮಯ್ಯ ತಮ್ಮನ್ನು ತಾವೇ ರೇಸ್​ನಿಂದ ಆಚೆ ಕಳಿಸಿಕೊಳ್ಳಬಹುದು, ಅಥವಾ ಕುಮಾರಸ್ವಾಮಿಯವರನ್ನು ಆಚೆ ಹಾಕಬಹುದು."

 
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ