ವಿಜಯಪುರ(ಫೆ. 25): ಗುಮ್ಮಟ ನಗರಿ ವಿಜಯಪುರ ಬೃಹತ್ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಕೇಂದ್ರ ಸರಕಾರ ಜಾರಿಗೆ ತಂದಿರುವ ಸಿಎಎ, ಎನ್ಆರ್ಸಿ ಮತ್ತು ಎನ್ಪಿಆರ್ ವಿರೋಧಿಸಿ ವಿಜಯಪುರ ಜಿಲ್ಲೆಯ ಜುಮಾನಳ ಬಳಿ ಸುಮಾರು 50 ಎಕರೆ ಪ್ರದೇಶದಲ್ಲಿ ಸಂವಿಧಾನ ಉಳಿಸಿ ಜನಾಂದೋಲನ ಕಾರ್ಯಕ್ರಮ ನಡೆಯಿತು. ಲಕ್ಷಾಂತರ ಜನ ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ, ಸಿಎಎ ವಿರುದ್ಧದ ಪ್ರತಿಭಟನೆಗಳನ್ನು ಸ್ವಾತಂತ್ರ್ಯ ಹೋರಾಟದ ಕಾಲಕ್ಕೆ ಹೋಲಿಸಿದರು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಈ ಥರ ಹೋರಾಟಗಳು ನಡೆಯುತ್ತಿದ್ದವು. ಭಾರತೀಯ ಪೌರತ್ವ ಕಾಯ್ದೆಗೆ ತಿದ್ದುಪಡಿಯಾದಾಗಿನಿಂದ ದೇಶಾದ್ಯಂತ ಜನ ಸಿಡಿದೆದ್ದಿದ್ದಾರೆ. ಜನರು ಸಾಮೂಹಿಕವಾಗಿ ಹೋರಾಟ ನಡೆಸುತ್ತಿದ್ದಾರೆ. ಇದನ್ನು ನೋಡಿದರೆ ಈಗ ಮತ್ತೊದು ಸ್ವಾತಂತ್ರ್ಯ ಹೋರಾಟ ನಡೆಯುತ್ತಿದೆ ಎಂದೆನಿಸುತ್ತದೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ವಾಗ್ದಾಳಿ ನಡೆಸಿದರು.
ಸಂವಿಧಾನ ರದ್ದು ಮಾಡಲು ಬಿಜೆಪಿ ಕೈ ಹಾಕಿದರೆ ದೇಶದಲ್ಲಿ ರಕ್ತಕ್ರಾಂತಿ ನಡೆಯಲಿದೆ ಎಂದು ಎಚ್ಚರಿಕೆ ನೀಡಿದ ಅವರು, ವಾಜಪೇಯಿ ಪ್ರಧಾನಿಯಾಗಿದ್ದರೂ ಹಿಡನ್ ಅಜೆಂಡಾ ಜಾರಿ ಮಾಡಲಿಲ್ಲ. ಆದರೆ, ಇಂದು ಮೋದಿ, ಶಾ ಹಿಡನ್ ಅಜೆಂಡಾ ಜಾರಿ ಮೂಲಕ ಸಂವಿಧಾನ ಬುಡಮೇಲು ಮಾಡಲು ಹೊರಟಿದ್ದಾರೆ. ಸಂವಿಧಾನ ಪರ ಮತ್ತು ವಿರೋಧಿಗಳ ನಡುವೆ ಈಗ ಹೋರಾಟ ನಡೆಯುತ್ತಿದೆ. ಬಿಜೆಪಿಯವರು ಪರಿವರ್ತನೆ ವಿರೋಧಿಗಳು. ಶ್ರೀಮಂತರು, ಬಡವರ ಮಧ್ಯೆ ಅಂತರ ಹಾಗೆಯೇ ಮುಂದುವರೆಯಲಿ. ಧರ್ಮ ಸಂಘರ್ಷ ನಡೆಯಲಿ ಎಂಬುದು ಬಿಜೆಪಿಯವರ ಉದ್ದೇಶವಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಕಮ್ಯೂನಿಸ್ಟ್, ಸೆಕ್ಯೂಲರಿಸ್ಟ್ ನಂಬಿಕೊಂಡ್ರೆ ಏನು ಸಾಧಿಸುತ್ತೀರಿ? ದಂಗೆ ಏಳಿ ಎಂದು ಮುಸ್ಲಿಮರಿಗೆ ಕರೆ ನೀಡಿದ ಕಾಶ್ಮೀರೀ ಉಗ್ರ ಸಂಘಟನೆ
ಮಂಗಳೂರಿನಲ್ಲಿ ಪೊಲೀಸರು ದುರುದ್ದೇಶದಿಂದ ಇಬ್ಬರು ಅಮಾಯಕ ಯುವಕರನ್ನು ಕೊಂದುಹಾಕಿದರು. ಇದು ಸರಕಾರ ಪ್ರಾಯೋಜಿತ ಗೋಲಿಬಾರ್. ಇದು ಕರ್ನಾಟಕ ಮಾತ್ರವಲ್ಲ, ದೇಶಾದ್ಯಂತ ನಡೆಯುತ್ತಿದೆ. ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ಈವರೆಗೆ ದೇಶಾದ್ಯಂತ 100 ಜನ ಸಾವಿಗೀಡಾಗಿದ್ದಾರೆ ಎಂದು ಅವರು ಆರೋಪಿಸಿದರು.
![People at rally against CAA in Kalburgi]()
ಕಲಬುರ್ಗಿಯಲ್ಲಿ ಸಿಎಎ ವಿರೋಧಿ ಸಮಾವೇಶಕ್ಕೆ ಸೇರಿದ್ದ ಜನರು
ಬೀದರ್ನ ಶಾಹೀನ್ ಸಂಸ್ಥೆಯಲ್ಲಿ ವಿಡಂಬನಾತ್ಮಕ ನಾಟಕದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೊಪ್ಪಳದಲ್ಲಿ ಕವಿತೆ ಓದಿದ ಸಿರಾಜ್, ಮೈಸೂರಿನಲ್ಲಿ ಫ್ರೀ ಕಾಶ್ಮೀರ ಭಿತ್ತಿಪತ್ರ ಹಿಡಿದ ಹುಡುಗಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಲ್ಲಿ ಉಳಿದಿದೆ ಪ್ರಜಾಪ್ರಭುತ್ವ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಈ ದೇಶದಲ್ಲಿ ಸಂವಿಧಾನ ಪಾಲನೆಯಾಗುತ್ತಿದೆಯಾ? ಸಂಸದ ಅನಂತಕುಮಾರ್ ಹೆಗಡೆ ನಾವು ಅಧಿಕಾರಕ್ಕೆ ಬಂದಿರೋದೇ ಸಂವಿಧಾನ ಬದಲಿಸೋಕೆ ಅಂತಾರೆ. ಬೆಂಗಳೂರಿನಲ್ಲಿ ಸೂರ್ಯ ಅಲ್ಲ, ಅಮವಾಸೆ ಎಂಬಾತ (ತೇಜಸ್ವಿ ಸೂರ್ಯರನ್ನು ಕುರಿತು) ಸಂವಿಧಾನದ ಪ್ರತಿಯನ್ನು ಸುಟ್ಟುಹಾಕಬೇಕು ಎನ್ನುತ್ತಾನೆ. ಸಾಮಾಜಿಕ ನ್ಯಾಯ, ಮೀಸಲಾತಿ ಎಲ್ಲಿಯವರೆಗೆ ಕೊಡಬೇಕು ಎಂದು ಭಾಗವತ್(ಆರೆಸ್ಸೆಸ್ ಮುಖ್ಯಸ್ಥ) ಕೇಳುತ್ತಾರೆ. ಸಂವಿಧಾನವನ್ನು ವಿರೋಧಿಸುವ ಇವರನ್ನು ದೇಶಪ್ರೇಮಿಗಳೆನ್ನಬೇಕೋ, ದೇಶದ್ರೋಹಿಗಳೆನ್ನಬೇಕೋ ಎಂದು ಎಸ್. ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಜೆಡಿಎಸ್ ಪರ ರಣತಂತ್ರ ಹೆಣೆಯಲಿರುವ ಪ್ರಶಾಂತ್ ಕಿಶೋರ್, 2023ರಲ್ಲಿ ಜೆಡಿಎಸ್ ಅಧಿಕಾರಕ್ಕೆ; ಹೆಚ್.ಡಿ.ಕುಮಾರಸ್ವಾಮಿ
ಶಾಂತಿಯುತ ಹೋರಾಟ ಮುಂದುವರಿಯಲಿ: ಸಿನ್ಹ
ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಮಾತನಾಡಿ, ದೇಶದಲ್ಲಿ ಪ್ರತಿದಿನ ನಡೆಯುತ್ತಿರುವ ಘಟನೆಯನ್ನು ನೋಡಿದರೆ ದೇಶ ಹಾಳಾಗುತ್ತಿದೆ ಎನಿಸುತ್ತಿದೆ. ನಾನು ಇಲ್ಲಿಗೆ ಬಂದು ಭಾಷಣ ಮಾಡುವುದನ್ನು ನೋಡಿದರೆ ಆಡಳಿತ ಪಕ್ಷದವರು ನನ್ನನ್ನು ಹಿಯಾಳಿಸಬಹುದು. ನಾನು ತುಕ್ಡೆ ಗ್ಯಾಂಗ್, ಖಾನ್ ಮಾರ್ಕೆಟ್, ದೇಶದ್ರೋಹಿ, ಪಾಕಿಸ್ತಾನಕ್ಕೆ ಹೋಗಿ ಎನ್ನಬಹುದು. ಕೇಂದ್ರ ಸರಕಾರ ಸಂವಿಧಾನ ವಿರೋಧಿ ಕಾನೂನನ್ನು ಜಾರಿಗೆ ತಂದಿದೆ. ಕಾಶ್ಮೀರದಲ್ಲಿ ಪರಿಸ್ಥಿತಿ ಬಗ್ಗೆ ಸುಪ್ರೀಂ ಕೋರ್ಟ್ ಏನೂ ಮಾಡುತ್ತಿಲ್ಲ. ಸಿಎಎ, ಎನ್ಆರ್ಸಿ, ಎನ್ಪಿಆರ್ ಬಗ್ಗೆ ಕೂಡ ಸುಪ್ರೀಂ ಕೋರ್ಟ್ ಏನು ಹೇಳುತ್ತೆ ಎಂಬುದು ಗೊತ್ತಿಲ್ಲ. ಆದರೆ, ಸರಕಾರ ಈ ಕಾನೂನನ್ನು ಹಿಂಪಡೆಯುವ ತನಕ ನಾವು ಶಾಂತಿಯುತವಾಗಿ ಈ ಹೋರಾಟ ಮುಂದುವರೆಸೋಣ ಎಂದು ಕರೆ ನೀಡಿದರು.
ಎನ್ಆರ್ಸಿ ಬಡವರ ವಿರೋಧಿ: ಖರ್ಗೆ
ಕೇಂದ್ರ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಸಿಎಎ, ಎನ್ಆರ್ಸಿ, ಎನ್ಪಿಆರ್ನಿಂದಾಗಿ ಜನಸಾನಾನ್ಯರಿಂದ ಹಿಡಿದು ಎಲ್ಲರಿಗೂ ತೊಂದರೆಯಿದೆ. ಅಮಾಯಕ, ಬಡ, ಹಿಂದುಳಿದವರು, ದಲಿತರ ಮತದ ಹಕ್ಕನ್ನು ಕಿತ್ತುಕೊಳ್ಳುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಆತಂಕಪಟ್ಟರು. ಎಂ.ಬಿ. ಪಾಟೀಲರು ತಮ್ಮ ತಂದೆಯ ಜನ್ಮ ಸ್ಥಳ, ದಿನಾಂಕ ದಾಖಲೆ ಒದಗಿಸಬಹುದು. ಆದರೆ, ನಾನು, ಸಿದ್ಧರಾಮಯ್ಯ ನಮ್ಮಪ್ಪನ ದಾಖಲೆಯನ್ನು ಹೇಗೆ ಒದಗಿಸಲು ಸಾಧ್ಯ? ಎಂದು ಖರ್ಗೆ ಪ್ರಶ್ನಿಸಿದರು.
ಹಿಂದೂ ಮುಸ್ಲಿಮರ ಐಕ್ಯತೆಯೇ ಭಾರತ: ಯಚೂರಿ
ಸಿಪಿಎಂ ಮುಖಂಡ ಸೀತಾರಾಮ ಯಚೂರಿ ಮಾತನಾಡಿ, ನಮ್ಮನ್ನು ಮೋದಿ, ಶಾ ದೇಶ ವಿರೋಧಿ ಎನ್ನುವುದು ಮಾಮೂಲಾಗಿದೆ. ಆದರೆ, ಇಂದು ಸಿಎಎ, ಎನ್ಆರ್ಸಿ, ಎನ್ಪಿಆರ್ ವಿರೋಧಿಸುವವರನ್ನು ದೇಶವಿರೋಧಿಗಳೆನ್ನುವುದು ಯಾಕೆ? ದೆಹಲಿಯಲ್ಲಿ ಹಿಂಸಾಚಾರ ಯಾಕೆ ನಡೆಯುತ್ತಿದೆ? ಟ್ರಂಪ್ ಭಾರತಕ್ಜೆ ಬರುತ್ತಿರುವ ಈ ಸಂದರ್ಭದಲ್ಲಿ ಯಾಕೆ ಹಿಂಸಾಚಾರ ನಡೆದಿದೆ? ಎಂದು ಕೇಳಿದರು.
ದೇಶಭಕ್ತರು ಹಾಗೂ ಸಂವಿಧಾನ ಉಳಿಸುವವರ ಮಧ್ಯೆ ನಡೆಯುತ್ತಿರುವ ಹೋರಾಟ ಇದಾಗಿದೆ. ಹಿಂದೂ-ಮುಸ್ಲಿಮರು ಒಂದಾಗಿ ಬಾಳುವುದೇ ನಿಜವಾದ ಭಾರತ. ಆದರೆ, ಇಂದು ಧರ್ಮದ ಹೆಸರಿನಲ್ಲಿ ವಿಭಜನೆ ನಡೆಯುತ್ತಿದೆ. ಎನ್ಆರ್ಸಿ, ಎನ್ಪಿಆರ್ ಜಾರಿ ಮಾಡುವುದಿಲ್ಲ ಎಂದು 13 ರಾಜ್ಯಗಳು ಸ್ಪಷ್ಟಪಡಿಸಿವೆ. ದೇಶದಲ್ಲಿ ಪ್ರಮುಖ ವಿಷಯಗಳ ಗಮನವನ್ನು ಬೇರೆಡೆ ಸೆಳೆಯಲು ಈ ರೀತಿ ಮಾಡಲಾಗುತ್ತಿದೆ ಎಂದು ಸಿಪಿಎಂ ಮುಖಂಡರು ಆಪಾದಿಸಿದರು.
ಅಮೆರಿಕದ ಕಂಪನಿಗಳು ಭಾರತಕ್ಕೆ ಬಂದು ಹಗಲು ದರೋಡೆ ನಡೆಸಲು ಟ್ರಂಪ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ದೇಶದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯಿಂದ ಪಾರಾಗಲು ಟ್ರಂಪ್ ಸೇರಿದಂತೆ ವಿದೇಶಗಳೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡು ದೇಶದ ಸಂಪತನ್ನು ಮಾರಾಟ ಮಾಡಲಾಗುತ್ತಿದೆ. ಒಂದು ಸಮುದಾಯವನ್ನು ಮುಖ್ಯ ವಾಹಿನಿಯಿಂದ ದೂರವಿಟ್ಟರೆ ದೇಶದಲ್ಲಿ ಹಾಹಾಕಾರ ಉಂಟಾಗಲಿದೆ. ಮೋದಿ, ಶಾ ಸಾವಧಾನ, ಹಮ್ ಬಚಾಯೆಂಗೆ ಸಂವಿಧಾನ ಎಂದು ಸೀತಾರಾಮ ಯಚೂರಿ ಸಾರ್ವಜನಿಕರಿಂದ ಘೋಷಣೆ ಹಾಕಿಸಿದರು.
ಇದನ್ನೂ ಓದಿ: ಕೆಜಿಎಫ್ನಲ್ಲಿ ಜೀವಂತ ಕೋಳಿಯ ರಕ್ತ ಕುಡಿದ ಕಾಳಿ ಆರಾಧಕ; ಎಲ್ಲಿ ಹೋಯ್ತು ಮೌಢ್ಯ ಪ್ರತಿಬಂಧಕ ಕಾಯ್ದೆ?
ಮುಸ್ಲಿಮರನ್ನು ಹತ್ತಿಕ್ಕಲು ಸಾಧ್ಯವಿಲ್ಲ: ಇಬ್ರಾಹಿಂ
ಕೇಂದ್ರ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಮಾತನಾಡಿ, ಮುಸ್ಲಿಮರನ್ನು ಹತ್ತಿಕ್ಜಲು ಯಾರಿಂದಲೂ ಸಾಧ್ಯವಿಲ್ಲ. ರಷ್ತಾ ಖುರಾನ್ಗೆ ಅವಮಾನ ಮಾಡಿತು. ಈಗ ಆ ದೇಶ ವಿಭಜನೆಯಾಗಿ ಹೋಗಿದೆ. ಚೀನಾ ಪ್ರಧಾನಿ ಬುರ್ಖಾ ನಿಷೇಧಿಸಿದರು. ಈಗ ಚೀನಾದಲ್ಲಿ ಕೊರೋನಾದಿಂದಾಗಿ ಎಲ್ಲರೂ ಬುರ್ಖಾ ಹಾಕುವಂತಾಗಿದೆ. ಯಾವುದೇ ಶತ್ರು ರಾಷ್ಟ್ರಗಳು ಭಾರತದ ಮೇಲೆ ಧಾಳಿ ಮಾಡಿದರೆ ಭಾರತೀಯ ಮುಸ್ಲಿಮರು ಸೈನಿಕರಿಗಿಂತಲೂ ಮುಂಚೆ ಯುದ್ಧಕ್ಜೆ ನಿಲ್ಲುತ್ತಾರೆ. ಈಗ ಗೋಡ್ಸೆ ಮಕ್ಕಳು ಗಾಂಧಿ ಮಧ್ಯೆ ಹೋರಾಟ ನಡೆಯುತ್ತಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಹಿಳೆ ರೋಶನ್ ಅರಾ ಕಡಿಮೆ ರಕ್ತದೊತ್ತಡದಿಂದ ಸಾವಿಗೀಡಾದ ಘಟನೆ ನಡೆಯಿತು. ಈ ಮಧ್ಯೆ ಕಾರ್ಯಕ್ರಮದ ಸಂದರ್ಭದಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಉಂಟಾದ ಹಿನ್ನೆಲೆಯಲ್ಲಿ ಎರಡು ಆ್ಯಂಬುಲೆನ್ಸ್ಗಳು ಸಿಲುಕಿಕೊಂಡ ಘಟನೆಯೂ ನಡೆಯಿತು.
ಒಟ್ಟಾರೆ ಲಕ್ಷಾಂತರ ಜನ ಸೇರುವ ಮೂಲಕ ಕೇಂದ್ರದ ನೂತನ ಕಾಯಿದೆಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಸಿಎಎ, ಎನ್ಆರ್ಸಿ ಮತ್ತು ಎನ್ಪಿಆರ್ ಹಿಂಪಡೆಯುವವರೆಗೂ ಹೋರಾಟ ನಡೆಸಲು ಈ ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕರಾದ ಎಂ.ಬಿ. ಪಾಟೀಲ, ಶಿವಾನಂದ ಎಸ್. ಪಾಟೀಲ, ಯಶವಂತರಾಯಗೌಡ ವಿ. ಪಾಟೀಲ, ಮಾಜಿ ಶಾಸಕರಾದ ಸಿ.ಎಸ್. ನಾಡೌಗಡ, ವಿಜಯಾನಂದ ಕಾಶಪ್ಪನವರ, ಮುಸ್ಲಿಂ ಧರ್ಮಗುರು ತನ್ವೀರ್ ಪೀರಾ ಹಾಶ್ಮಿ, ಕಾಂಗ್ರೆಸ್ ಮುಖಂಡ ಹಮೀದ ಮುಶ್ರಿಫ್ ಸೇರಿದಂತೆ ನೂರಾರು ಜನ ಮುಖಂಡರು ಪಾಲ್ಗೋಂಡಿದ್ದರು.
ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ