'ಸ. ಹಿ. ಪ್ರಾ ಶಾಲೆ ಕಾಸರಗೋಡು' ವೀಕ್ಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

Precilla Olivia Dias
Updated:August 26, 2018, 3:59 PM IST
'ಸ. ಹಿ. ಪ್ರಾ ಶಾಲೆ ಕಾಸರಗೋಡು' ವೀಕ್ಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
Precilla Olivia Dias
Updated: August 26, 2018, 3:59 PM IST
ಪ್ರೆಸಿಲ್ಲಾ ಒಲಿವಿಯಾ ಡಾಯಸ್​, ನ್ಯೂಸ್​ 18 ಕನ್ನಡ

ಮಾಜಿ ಸಿಎಂ ಸಿದ್ದರಾಮಯ್ಯ ಅಪ್ಪಟ ಕನ್ನಡಾಭಿಮಾನಿ. ಕನ್ನಡ ಅಸ್ಮಿತೆಯ ವಿಚಾರ ಬಂದಾಗ ಯಾರನ್ನೇ ಎದುರಿಸಲು ಹಿಂಜರಿಯುವುದಿಲ್ಲ. ಸಿದ್ದರಾಮಯ್ಯರ ಈ ಗುಣ ಇಡೀ ರಾಜ್ಯದ ಜನತೆಗೆ ಅಚ್ಚು ಮೆಚ್ಚು. ಇನ್ನು ಸಿಎಂ ಆಗಿದ್ದಾಗ ಒಂದಿಲ್ಲೊಂದು ಕೆಲಸದಲ್ಲಿ ಬ್ಯುಸಿಯಾಗಿರುತ್ತಿದ್ದ ಸಿದ್ದರಾಮಯ್ಯನವರು, ಈಗ ತಮ್ಮ ಕೆಲಸದ ನಡುವೆ ಬಿಡುವು ಮಾಡಿಕೊಂಡು ಸಿನಿಮಾ ವೀಕ್ಷಿಸುತ್ತಿದ್ದಾರೆ. ಈ ಮೂಲಕ, ತಾವೊಬ್ಬ ಸಿನಿಮಾ ಪ್ರೇಮಿ ಎಂಬುವುದನ್ನೂ ಬಹಿರಂಗಪಡಿಸಿದ್ದಾರೆ. ಇದೀಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾ ವೀಕ್ಷಿಸುವ ಮೂಲಕ ಮತ್ತೆ ಸದ್ದು ಮಾಡಿದ್ದಾರೆ.

ಹೌದು ಚುನಾವಣೆ ಬಳಿಕ ರಾಷ್ಟ್ರಪ್ರಶಸ್ತಿ ಪಡೆದಿರುವ ಸಿನಿಮಾ 'ಹೆಬ್ಬೆಟ್ಟು ರಾಮಕ್ಕ' ಸಿನಿಮಾವನ್ನು ವೀಕ್ಷಿಸಿದ್ದ ಸಿದ್ದರಾಮಯ್ಯರವರು, ಬಳಿಕ ಕವಿತಾ ಲಂಕೇಶ್​ ನಿರ್ದೇಶನದಲ್ಲಿ ಮೂಡಿ ಬಂದಿದ್ದ 'ಸಮ್ಮರ್​ ಹಾಲಿಡೇಸ್​' ಸಿನಿಮಾವನ್ನು ವೀಕ್ಷಿಸಿದ್ದರು. ಈ ಸಿನಿಮಾದಲ್ಲಿ ಖುದ್ದು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವರು ಮುಖ್ಯಮಂತ್ರಿ ಪಾತ್ರ ನಿರ್ವಹಿಸಿದ್ದರು.

ಇದೀಗ ರಿಷಬ್​ ಶೆಟ್ಟಿ ನಿರ್ದೇಶನದಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಉಳಿವಿನ ಹೋರಾಟದ ಸಿನಿಮಾ ಮೂಡಿ ಬಂದಿದೆ. ಕನ್ನಡ ಭಾಷೆ, ನಾಡು-ನುಡಿ ವಿಚಾರವನ್ನೇ ಕೇಂದ್ರವಾಗಿರಿಸಿ ಮಾಡಿರುವ 'ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾವನ್ನು ಸಿದ್ದರಾಮಯ್ಯರವರು ವೀಕ್ಷಿಸಿದ್ದಾರೆ.

ಕಾಸರಗೋಡಿನಲ್ಲಿರುವ ಕನ್ನಡಿಗರ ಸಮಸ್ಯೆಯನ್ನು ಇಲ್ಲಿ ತೋರಿಸಿದ್ದಾರೆ. ಅಲ್ಲೂ ಕನ್ನಡ ಮಾತನಾಡುವ ಜನರಿದ್ದಾರೆ. ಕನ್ನಡ ಭಾಷೆ ಅಲ್ಲಿ ಉಳಿಯಬೇಕು. ಕಾಸರಗೋಡು ಯಾವತ್ತಿದ್ದರೂ ಕರ್ನಾಟಕದ ಭಾಗ. ಅದು ಕರ್ನಾಟಕಕ್ಕೇ ಸೇರಬೇಕು ಎಂಬುವುದು ಕನ್ನಡಿಗರ ಆಸೆ ಮತ್ತು ಅಪೇಕ್ಷೆ. ನಾನೂ ಎಸ್​ಎಸ್​ಎಲ್​ಸಿವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಪಡೆದಿದ್ದೇನೆ. ಒಟ್ಟಾರೆಯಾಗಿ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ


ಸಿನಿಮಾ ವಿಶೇಷತೆ: ಮಲಯಾಳಿ ಪ್ರಭಾವ ಜಾಸ್ತಿ ಇರುವ ಕಾಸರಗೋಡಿನ ಗಡಿ ಭಾಗದಲ್ಲಿರುವ ಕನ್ನಡ ಶಾಲೆಯನ್ನು ಉಳಿಸಿಕೊಳ್ಳಲು ನಡೆಸುವ ಹೋರಾಟವನ್ನು ಸಿನಿಮಾದಲ್ಲಿ ತೋರಿಸಲಾಗಿದ್ದು, ಈಗಾಗಲೇ ಇದು ಕನ್ನಡಿಗರ ಮನಗೆದ್ದಿದೆ.
Loading...

ಜಯಲಕ್ಷ್ಮೀಪುರಂನಲ್ಲಿರುವ ಡಿಆರ್'ಸಿ ಮಲ್ಟಿಪ್ಲೆಕ್ಸನಲ್ಲಿ 'ಸ. ಹಿ. ಪ್ರಾ ಶಾಲೆ ಕಾಸರಗೋಡು' ಸಿನಿಮಾ ವೀಕ್ಷಿಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ


ಇದು ಕೇವಲ ಗಡಿನಾಡಲ್ಲಿರುವ ಕನ್ನಡ ಶಾಲೆಗಳ ಪರಿಸ್ಥಿತಿಯನ್ನು ತೋರಿಸಿಲ್ಲ, ಬದಲಾಗಿ ಇಡೀ ರಾಜ್ಯದ ಕನ್ನಡ ಶಾಲೆಗಳ ಸ್ಥಿತಿಗತಿಯನ್ನು ತೋರಿಸಿಕೊಟ್ಟಿದೆ ಎಂಬುವುದು ಪ್ರೇಕ್ಷಕರ ಅಭಿಪ್ರಾಯ. ಇನ್ನು ಅಪ್ಪಟ ಕನ್ನಡಾಭಿಮಾನಿಯಾಗಿರುವ ಸಿದ್ದರಾಮಯ್ಯರು ತಮ್ಮ ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ನಡುವೆಯೂ ಮೈಸೂರಿನ ಡಿ.ಆರ್.ಸಿ ಚಿತ್ರಮಂದಿರದಲ್ಲಿ ಚಲನಚಿತ್ರ ವೀಕ್ಷಿಸಿದ್ದಾರೆ.

ಸಿದ್ದರಾಮಯ್ಯನವರು ಚಿತ್ರ ಮಂದಿರಕ್ಕೆ ತೆರಳಿ ಸಿನಿಮಾ ನೋಡಲಾರಂಭಿಸಿದ ಬಳಿಕವೇ ನಮಗೆ ಈ ವಿಚಾರ ಗೊತ್ತಾಗಿದ್ದು. ಸಿದ್ದರಾಮಯ್ಯರವರು ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ನಮ್ಮ ಪ್ರಯತ್ನವನ್ನು ಶ್ಲಾಘಿಸಿದ್ದಾರೆ, ಅಲ್ಲದೇ ಇದು ತಮ್ಮ ಬಾಲ್ಯದ ದಿನಗಳನ್ನು ಮತ್ತೆ ನೆನಪಿಸಿದೆ ಎಂದೂ ತಿಳಿಸಿದ್ದಾರೆ.
-ರಿಷಬ್ ಶೆಟ್ಟಿ, ನಿರ್ದೇಶಕ


ಡಾ. ರಾಜ್​ ಅಪ್ಪಟ​ ಅಭಿಮಾನಿ: ಡಾ. ರಾಜ್​ಕುಮಾರ್​ರವರ ಅಭಿಮಾನಿಯಾಗಿರುವ ಸಿದ್ದರಾಮಯ್ಯರವರು ಈ ಹಿಂದೆ ಪುನೀತ್​ ರಾಜ್​ಕುಮಾರ್​ ನಾಯಕ ನಟಿಸಿ ಯಶಸ್ಸು ಗಳಿಸಿದ್ದ 'ರಾಜಕುಮಾರ' ಸಿನಿಮಾ ವೀಕ್ಷಿಸಿದ್ದರು. ಪುನೀತ್​ ರಾಜ್​ಕುಮಾರ್​ ನಟನೆಯನ್ನು ಹಾಡಿ ಹೊಗಳಿದ್ದ ಅವರು ಡಾ. ರಾಜ್​ಕುಮಾರ್​​ರನ್ನೇ ಬೆಳ್ಳಿ ಪರದೆಯ ಮೇಲೆ ನೋಡಿದಂತಾಯ್ತು ಎಂದಿದ್ದರು.

ಕಾಲೇಜು ದಿನಗಳಿಂದಲೇ ಸಿನಿಮಾಸಕ್ತಿ: ಕೆಲ ಸಮಯದ ಹಿಂದೆ ದೆಹಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯರವರು, ತಮ್ಮ ಮಾತಿನ ನಡುವೆ ಸಿನಿಮಾ ಕುರಿತಾಗಿ ತಮಗಿರುವ ಆಸಕ್ತಿಯನ್ನು ಬಿಚ್ಚಿಟ್ಟಿದ್ದರು.

ಇದೇ ಸಂದೆರ್ಭದಲ್ಲಿ ಕಾಲೇಜು ದಿನಗಳನ್ನು ನೆನಪಿಸಿಕೊಂಡಿದ್ದ ಅವರು ಆ ದಿನಗಳಲ್ಲಿ ತಾನು ದೇವಾನಂದ್ ಶಮ್ಮಿ ಕಪೂರ್, ಶಶಿ ಕಪೂರ್ ಅಭಿಮಾನಿಯಾಗಿದ್ದೆ, ಬಾಲಿವುಡ್​ನ ರಾಜ್​ಕುಮಾರ್​ ಕೂಡಾ ತನಗಿಷ್ಟವಾದ ಸಿನಿಮಾ ಎಂದಿದ್ದರು. ಕಾಲಕೇಜು ದಿನಗಳಲ್ಲಿ ವಾರಕ್ಕೊಂದು ಕನ್ನಡ, ಹಾಗೂ ಒಂದು ಹಿಂದಿ ಸಿನಿಮಾ ನೋಡುತ್ತಿದ್ದ ವಿಚಾರವನ್ನೂ ತಿಳಿಸಿದ್ದರು.
First published:August 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ