Siddaramaiah: ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯ ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ; ಸಿಎಂಗೆ ಸಿದ್ದರಾಮಯ್ಯ ಆರ್ಥಿಕ ಸಲಹೆ

ನಾನು ಈ ಮಾತನ್ನು ರಾಜಕೀಯವಾಗಿ ಹೇಳುತ್ತಿಲ್ಲ. ರಾಜ್ಯದ ಹಿತಾಸಕ್ತಿ ದೃಷ್ಟಿಯಿಂದ ಮಾತಾಡ್ತಿದ್ದೇನೆ. ಈಗಲೇ ನೀವು ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯ ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದರು.

ಸಿಎಂ ಬೊಮ್ಮಾಯಿ - ಸಿದ್ದರಾಮಯ್ಯ

ಸಿಎಂ ಬೊಮ್ಮಾಯಿ - ಸಿದ್ದರಾಮಯ್ಯ

 • Share this:
  ಬೆಂಗಳೂರು: ಇಂದು ವಿಧಾನಸಭೆಯಲ್ಲಿ (Assembly Session) ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಸಿಎಂ ಬಸವರಾಜ ಬೊಮ್ಮಾಯಿಗೆ (CM Basavaraja Bommai) ಆರ್ಥಿಕ ಪಾಠ ಮಾಡಿದರು. ಎರಡನೇ ಪೂರಕ ಅಂದಾಜುಗಳ ವೆಚ್ಚದ ಮಂಡನೆ ಬಳಿಕ ಮಾತಾಡಿದ ಸಿದ್ದರಾಮಯ್ಯ ಅವರು, ಸರ್ಕಾರಕ್ಕೆ ಆರ್ಥಿಕತೆ ನಿರ್ವಹಣೆ ಬಗ್ಗೆ ಟಿಪ್ಸ್ ಕೊಟ್ಟರು. ಈಗಲೇ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಆರ್ಥಿಕ ವೆಚ್ಚ ಹೆಚ್ಚಾಗುತ್ತದೆ. ವೆಚ್ಚ ನಿಭಾಯಿಸಲಾಗದೇ ಕಷ್ಟ ಆಗಬಹುದು, ಈಗಲೇ ಮುನ್ನೆಚ್ಚರಿಕೆ ತಗೊಳ್ಳಿ‌ ಎಂದು ಸಿದ್ದರಾಮಯ್ಯ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಲಹೆ ನೀಡಿದರು.

  ಒಟ್ಟು 10,265 ಕೋಟಿ‌ ರೂ. ಗಳ ಪೂರಕ ಅಂದಾಜುಗಳ ವೆಚ್ಚದಲ್ಲಿ ತೋರಿಸಿದ್ದೀರಿ. ಇದರಲ್ಲಿ 6.5 ಸಾವಿರ ಕೋಟಿ ಹಣ ಹೊರಗಿನ ವೆಚ್ಚಗಳಿಗೆ ಖರ್ಚು ಮಾಡ್ತೀವಿ ಅಂದಿದೀರಿ. ಈ 6.5 ಸಾವಿರ ಕೋಟಿ ರೂ. ಹೇಗೆ ಪ್ಯಾಚಪ್ ಮಾಡ್ತೀರಿ? ಎಲ್ಲಿಂದ ತರ್ತೀರಿ? ಜಿಎಸ್​ಟಿ ಪರಿಹಾರದ ಮೇಲೂ ನೀವು ನಂಬಿಕೆ ಇಟ್ಕೊಳ್ಳಕ್ಕಾಗಲ್ಲ. ಕೇಂದ್ರದ ಜಿಎಸ್ಟಿ ಪರಿಹಾರ 2022 ಕ್ಕೆ ನಿಲ್ಲಿಸಿ ಬಿಡ್ತಾರೆ. ಆಗ ಏನ್ ಮಾಡ್ತೀರಿ ಎಂದು ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದರು.

  ಅಬಕಾರಿ ಸುಂಕ ಮಾತ್ರ ನಿರೀಕ್ಷೆಗೆ ತಕ್ಕಂತೆ ಬರ್ತಿದೆ. ಉಳಿದ ಯಾವ ಮೂಲಗಳಿಂದಲೂ ಸಮರ್ಪಕ, ನಿರೀಕ್ಷಿತ ತೆರಿಗೆ ಬರ್ತಿಲ್ಲ. ಯಡಿಯೂರಪ್ಪ ಮಂಡಿಸಿದ ಎರಡೂ ಬಜೆಟ್ ಗಳಲ್ಲೂ ಸಾಲ ಮಾಡೋದಾಗಿ ಹೇಳಿದ್ದಾರೆ. ಒಂದು ಸಲ 70 ಸಾವಿರ ಕೋಟಿ ಮತ್ತೊಂದು ಸಲ 72 ಸಾವಿರ ಕೋಟಿ‌ ರೂ ಸಾಲ ಮಾಡೋದಾಗಿ ಬಜೆಟ್ ನಲ್ಲಿ ತೋರಿಸಿದ್ದಾರೆ. ನಾನು ಈ ಮಾತನ್ನು ರಾಜಕೀಯವಾಗಿ ಹೇಳುತ್ತಿಲ್ಲ. ರಾಜ್ಯದ ಹಿತಾಸಕ್ತಿ ದೃಷ್ಟಿಯಿಂದ ಮಾತಾಡ್ತಿದ್ದೇನೆ. ಈಗಲೇ ನೀವು ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯ ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದರು.

  ಆಡಳಿತಾತ್ಮಕ ವೆಚ್ಚ ಕಡಿವಾಣಕ್ಕೆ ಕ್ರಮ: ಸಿಎಂ ಬೊಮ್ಮಾಯಿ

  ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಜಿಎಸ್​ಟಿಯಲ್ಲೂ ಬೇರೆ ಬೇರೆ ತರಹದ ತೆರಿಗೆ ಕಳ್ಳತನ ನಡೀತಿದೆ. ಈ‌ ನಿಟ್ಟಿನಲ್ಲಿ ರಾಜ್ಯದಲ್ಲಿ ತನಿಖೆ ನಡೆಸ್ತಿದ್ದೇವೆ. ಅಬಕಾರಿ, ಮೋಟಾರ್ ವಾಹನ, ಮುದ್ರಾಂಕ ಸುಂಕಗಳಲ್ಲಿ ಆಗುತ್ತಿರುವ ಸೋರಿಕೆ ತಡೆಯಲು ಕ್ರಮ ತೆಗೆದುಕೊಳ್ಳಲಾಗಿದೆ. ಆಡಳಿತಾತ್ಮಕ ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳುತ್ತಿದ್ದೇವೆ. ಜಿಎಸ್​ಟಿ ಪರಿಹಾರ ಇನ್ನೂ ಮೂರು ವರ್ಷ ವಿಸ್ತರಿಸಲು ಮನವಿ ಮಾಡಲಾಗಿದೆ. ಎರಡು ವರ್ಷದ ಕೋವಿಡ್ ಐದು ವರ್ಷದ ಆರ್ಥಿಕತೆಗೆ ಹೊಡೆತ ಕೊಟ್ಟಿದೆ. ಆದಾಯ ಮೂಲಗಳು ಮಿತಿಯಾದರೆ ಬದ್ಧ ವೆಚ್ಚಗಳ ವಿಚಾರದಲ್ಲಿ ಕೆಲ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ರಾಜ್ಯದ ಆರ್ಥಿಕ‌ ಪರಿಸ್ಥಿತಿಯನ್ನು ಸರಿದಾರಿಗೆ ತರಲು ಎಲ್ಲ ಶ್ರಮ ಹಾಕುತ್ತೇನೆ ಎಂದು ಸದನದಲ್ಲಿ ಆರ್ಥಿಕ ನಿರ್ವಹಣೆ ಬಗ್ಗೆ ಸಿಎಂ ವಿವರಣೆ ನೀಡಿದರು.

  ಇದನ್ನು ಓದಿ: COVID-19 PPE Waste: ಕೋವಿಡ್-19 ಪಿಪಿಇ ತ್ಯಾಜ್ಯದಿಂದ ಉಪಯುಕ್ತ ಉತ್ಪನ್ನ ತಯಾರಿಕೆಗೆ ಜಂಟಿಯಾಗಿ ಕೈ ಜೋಡಿಸಿದ CSIR-NCL and RIL

  ನಾಳೆ ವಿನೂತನ ಪ್ರತಿಭಟನೆಗೆ ಕಾಂಗ್ರೆಸ್ ಸಜ್ಜು

  ನಾಳೆ ಅಧಿವೇಶನ ಮುಕ್ತಯವಾಗಲಿದೆ. ಕೊನೆ ದಿನದ ಅಧಿವೇಶನದಂದು ಕಾಂಗ್ರೆಸ್​ ಮತ್ತೊಂದು ವಿನೂತನ ಪ್ರತಿಭಟನೆಗೆ ಮುಂದಾಗಿದೆ. ನಾಳೆ ಟಾಂಗಾ ಜಾಥಾಕ್ಕೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ನಾಳೆ ಟಾಂಗಾ ಮೂಲಕ ವಿಧಾನಸೌಧಕ್ಕೆ ಕೈ ನಾಯಕರು ಆಗಮಿಸಲಿದ್ದಾರೆ. ಬೆಳಿಗ್ಗೆ 10ಕ್ಕೆ ಕೆಪಿಸಿಸಿ ಕಚೇರಿಯಿಂದ‌ ಸದನಕ್ಕೆ ಟಾಂಗಾದಲ್ಲಿ ಆಗಮಿಸಲಿದ್ದಾರೆ. ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನಾಯಕರು ಟಾಂಗಾ ಜಾಥಾ ನಡೆಸಲಿದ್ದಾರೆ. ಈ ಮೂಲಕ ವಿನೂತನ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಕೈ ಪಡೆ ಸಜ್ಜಾಗಿದೆ. ಅಧಿವೇಶನ ಆರಂಭಕ್ಕೂ ಮುನ್ನ ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್​ ನಾಯಕರು ಸೈಕಲ್ ಜಾಥಾ ನಡೆಸಿದ್ದರು.
  Published by:HR Ramesh
  First published: