Siddaramaiah: ಸಿಎಂ ಯಡಿಯೂರಪ್ಪ ಸೇರಿ ಬಿಜೆಪಿಗರ ವೈವಾಹಿಕ ಸಂಬಂಧವೂ ಬಹಿರಂಗವಾಗಲಿ; ಏಕಪತ್ನಿವ್ರತಸ್ಥ ಹೇಳಿಕೆಗೆ ಸಿದ್ದರಾಮಯ್ಯ ಸವಾಲು

ಸಚಿವ ಡಾ. ಸುಧಾಕರ್ ಅವರ ಹೇಳಿಕೆ ಬಿಜೆಪಿ ಪಕ್ಷದವರಿಗೂ ಅನ್ವಯವಾಗುವ ಕಾರಣ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಎಲ್ಲ ಶಾಸಕರೂ ತಮ್ಮ ವೈವಾಹಿಕ ಸಂಬಂಧವನ್ನು ಬಹಿರಂಗಪಡಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
    ಬೆಂಗಳೂರು (ಮಾ. 25): ಯಾವೆಲ್ಲ ಸಚಿವರು, ಶಾಸಕರು ಏಕಪತ್ನಿವ್ರತಸ್ಥರು ಎಂಬುದು ಗೊತ್ತಾಗಲಿ. ಎಲ್ಲ ಶಾಸಕರದ್ದೂ ತನಿಖೆಯಾಗಲಿ ಎನ್ನುವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನೇ ಅಸ್ತ್ರವಾಗಿಸಿಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್​ ಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯುತ್ತಿವೆ. ಈ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವಿಟ್ಟರ್​ನಲ್ಲಿ ಮತ್ತೆ ಕಿಡಿ ಕಾರಿದ್ದು, ಡಾ. ಸುಧಾಕರ್ ಅವರ ಹೇಳಿಕೆ ಬಿಜೆಪಿ ಪಕ್ಷದವರಿಗೂ ಅನ್ವಯವಾಗುವ ಕಾರಣ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಎಲ್ಲ ಶಾಸಕರೂ ತಮ್ಮ ವೈವಾಹಿಕ ಸಂಬಂಧವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

    ರಾಜ್ಯದ ಯಾವ ಶಾಸಕರೂ ಏಕಪತ್ನಿವೃತಸ್ಥರಲ್ಲ ಎಂಬ ಸಚಿವ ಡಾ. ಕೆ. ಸುಧಾಕರ್ ಅವರ ಹೇಳಿಕೆ ಬಿಜೆಪಿ ಶಾಸಕರಿಗೂ ಅನ್ವಯವಾಗುತ್ತದೆ. ಹೀಗಾಗಿ, ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಎಲ್ಲರೂ ತಕ್ಷಣ ತಮ್ಮ ವೈವಾಹಿಕ ಸಂಬಂಧವನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ತಮ್ಮ ಸರಣಿ ಟ್ವೀಟ್​ನಲ್ಲಿ #ಏಕಪತ್ನಿವ್ರತಸ್ಥ ಎಂಬ ಟ್ಯಾಗ್​ ಬಳಸಿದ್ದಾರೆ.



    ಸಚಿವ ಸುಧಾಕರ್ ಅವರ ಹೇಳಿಕೆಯನ್ನು ಬಿಜೆಪಿ ಶಾಸಕರು ವಿರೋಧಿಸುವುದಾಗಿದ್ದರೆ ನಮ್ಮ ಪಕ್ಷದ ಶಾಸಕರೆಲ್ಲರೂ ಸ್ವ ಇಚ್ಛೆಯಿಂದ ತನಿಖೆಗೆ ಒಳಪಡಲು ನಿರ್ಧರಿಸಿದಂತೆ ಅವರೂ ಕೂಡ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ತಕ್ಷಣ ಪತ್ರ ಬರೆದು ತಮ್ಮ ಬಗ್ಗೆ ಕೂಡ ತನಿಖೆ ನಡೆಯಬೇಕೆಂದು ಮನವಿ ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.



    ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರ ಹೇಳಿಕೆಯನ್ನು ಬಿಜೆಪಿ ಶಾಸಕರು ಒಪ್ಪಿಕೊಳ್ಳುವುದಾದರೆ, ರಾಜ್ಯ ಸರ್ಕಾರ ತಕ್ಷಣ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 494 ಮತ್ತು 495ರ ಅನ್ವಯ ಕಾನೂನು ಕ್ರಮ ಕೈಗೊಳ್ಳಬೇಕು. 1955ರ ಹಿಂದೂ ವಿವಾಹ ಕಾಯ್ದೆಯಡಿ ಬಹುಪತ್ನಿತ್ವ ಕಾನೂನು ಪ್ರಕಾರ ಅಪರಾಧವಾಗಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.



    ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ನೀಡಿರುವ ನಿಂದನಾತ್ಮಕ ಹೇಳಿಕೆಯಿಂದ ರಾಜ್ಯದ 225 ಶಾಸಕರ ಮಾನಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಸಿ.ಡಿ ಹಗರಣದ ಜೊತೆ ಈ ಆರೋಪದ ಬಗ್ಗೆಯೂ ಹೈಕೋರ್ಟ್ ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಿ ಸತ್ಯಸಂಗತಿಯನ್ನು ಬಯಲಿಗೆಳೆಯಬೇಕು ಎಂದಿದ್ದಾರೆ.

    ಕಾನೂನಿನ ಹೋರಾಟದ ಮೂಲಕ ಈ ಪ್ರಕರಣವನ್ನು ಎದುರಿಸಲು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸುತ್ತಿದ್ದೇವೆ. ಇಂತಹ ಮಾನಹಾನಿಕರ ಹೇಳಿಕೆ ನೀಡಿರುವ ಸಚಿವ ಡಾ.ಸುಧಾಕರ್ ವಿರುದ್ದ ಪ್ರತ್ಯೇಕವಾಗಿ ಮಾನನಷ್ಟ ಮೊಕದ್ದಮೆ ಹಾಕಬೇಕು ಎಂದು ಕೆಲವು ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳುತ್ತೇವೆ. ಸಚಿವ ಸುಧಾಕರ್ ಒಬ್ಬ ಸಾಮಾನ್ಯ ವ್ಯಕ್ತಿ ಅಲ್ಲ, ಅವರೊಬ್ಬ ಜವಾಬ್ದಾರಿಯುತ ಜನಪ್ರತಿನಿಧಿ. ಇಂತಹವರು ನಾಲಿಗೆ ಸಡಿಲು ಬಿಟ್ಟು ಬೇರೆ ಜನಪ್ರತಿನಿಧಿಗಳನ್ನು ನಿಂದಿಸಿರುವುದು ಸ್ಪಷ್ಟವಾಗಿ ಸದಸ್ಯರ ವಿಶೇಷ ರಕ್ಷಣೆಯ (Privilege) ಉಲ್ಲಂಘನೆಯಾಗಿದೆ. ಸುಧಾಕರ್ ಸ್ಥಿತಿ ತಾ ಕಳ್ಳ ಇತರರನ್ನು ನಂಬ ಎಂಬಂತಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.



    ಸಮಾಜದಲ್ಲಿ ಪುರುಷ ಶಾಸಕರು ಇಂತಹ ಆರೋಪಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಲ್ಲರು. ಆದರೆ ಮಹಿಳಾ ಶಾಸಕರಿಗೆ ಇಂತಹ ಸುಳ್ಳು ಆರೋಪಗಳು ಬಹಳ ಹಾನಿ ಉಂಟುಮಾಡುತ್ತದೆ. ಅವರು ತಮ್ಮ ಕುಟುಂಬದವರನ್ನು ಹೇಗೆ ಎದುರಿಸಬೇಕು? ಇಂತಹ ಕೀಳು ಮಟ್ಟದ ಪುರುಷ ರಾಜಕಾರಣಿಗಳ ಕಾರಣದಿಂದಾಗಿಯೇ ರಾಜಕೀಯ ಪ್ರವೇಶಕ್ಕೆ ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

    ಯಾವ್ಯಾವ ಮುಖ್ಯಮಂತ್ರಿಗಳು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದರು ಎಲ್ಲವೂ ತನಿಖೆ ಆಗಲಿ ಎಂದು ಸಲಹೆ ನೀಡಿದ್ದಾರೆ. ಯಾರಿಗೆಲ್ಲಾ ಅನೈತಿಕ ಸಂಬಂಧ ಇದೆ ಎಂಬುದು ತಿಳಿಯಲಿ. ಎಲ್ಲಾ ಮಂತ್ರಿಗಳದ್ದು, ವಿರೋಧ ಪಕ್ಷಗಳವರದ್ದು ತನಿಖೆ ಅಗಲಿ. ಎಲ್ಲಾ 224 ಶಾಸಕರದ್ದೂ ತನಿಖೆ ಆಗಿ ಹೋಗಲಿ. ಯಾರು ಎಂಥವರು ಎಂಬ ಸತ್ಯ ಜನರಿಗೆ ಗೊತ್ತಾಗಲಿ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಕುಮಾರಣ್ಣ ಅವರೆಲ್ಲಾ ಸತ್ಯ ಹರಿಶ್ಚಂದ್ರರು. ರಮೇಶ್ ಕುಮಾರ್ ಕೂಡ ಸತ್ಯ ಹರಿಶ್ಚಂದ್ರರಿದ್ದಾರೆ. ಇವರೆಲ್ಲರೂ ಏಕಪತ್ನಿ ವ್ರತವನ್ನ ಬಹಳ ಮಾಡುತ್ತಿದ್ದಾರೆ. ಎಲ್ಲಾ 224 ಶಾಸಕರದ್ದು ತನಿಖೆ ಆಗಲಿ ಎಂಬ ನನ್ನ ಪ್ರಸ್ತಾಪವನ್ನು ಇವರು ಒಪ್ಪಿಕೊಳ್ಳಲಿ ಎಂದು ಸಚಿವ ಡಾ. ಕೆ. ಸುಧಾಕರ್ ಸವಾಲು ಹಾಕಿದ್ದರು.
    Published by:Sushma Chakre
    First published: