ಬೆಂಗಳೂರು (ಮಾ. 23): ಇಂದು ವಿಧಾನಸಭಾ ಅಧಿವೇಶನದಲ್ಲಿ ಮತ್ತೆ ಸಿ.ಡಿ ಗದ್ದಲ ಉಂಟಾಗಿದ್ದು, ವಿಪಕ್ಷದವರನ್ನು ಮನವೊಲಿಸಿ, ಕಲಾಪ ನಡೆಸಲು ಅವಕಾಶ ನೀಡುವಂತೆ ಮಾಡಲು ಸಿಎಂ ಬಿಎಸ್. ಯಡಿಯೂರಪ್ಪ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವು ನಾಯಕರು ಪ್ರಯತ್ನಿಸಿ, ವಿಫಲರಾದರು. ವಿರೋಧಪಕ್ಷದ ನಾಯಕರು ಸಿಡಿ ಹಿಡಿದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಸರ್ಕಾರದ ವಿರುದ್ಧ ಕಿಡಿ ಕಾರಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ನಿಂದ ತಡೆಯಾಜ್ಞೆ ತಂದಿರುವ ಸಚಿವರು ಕೂಡ ರಾಜೀನಾಮೆ ನೀಡಬೇಕು. ರಮೇಶ್ ಜಾರಕಿಹೊಳಿ ಮೇಲೆ ಅತ್ಯಾಚಾರದ ಕೇಸ್ ದಾಖಲಿಸಿ, ಸಂತ್ರಸ್ತೆಗೆ ರಕ್ಷಣೆ ನೀಡಬೇಕು. ಅಲ್ಲಿಯವರೆಗೂ ನಾವು ಧರಣಿಯನ್ನು ಮುಂದುವರೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಧಿವೇಶನದಲ್ಲಿ ಧರಣಿ ಮುಂದುವರೆಸಲು ಕಾಂಗ್ರೆಸ್ ನಾಯಕರು ನಿರ್ಧಾರ ಮಾಡಿದ್ದು, ಮತ್ತೆ ಇಂದು ಸದನದಲ್ಲಿ ಸಿಡಿ ಗದ್ದಲ ಮುಂದುವರೆಯಿತು. ಕಾಂಗ್ರೆಸ್ ಸದಸ್ಯರ ಧರಣಿಯನ್ನು ವಿರೋಧಿಸಿ ಆಡಳಿತ ಪಕ್ಷದ ಸದಸ್ಯರು ಸದನದಲ್ಲಿ ಧಿಕ್ಕಾರ ಕೂಗಿದರು. ಕಾಂಗ್ರೆಸ್ ನಾಯಕರ ಬಿಜೆಪಿ ಶಾಸಕ ರೇಣುಕಾಚಾರ್ಯ ಧಿಕ್ಕಾರ ಕೂಗಿದರು. ಇದರಿಂದ ಸದನದಲ್ಲಿ ಗದ್ದಲ ಹೆಚ್ಚಾಯಿತು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಆರು ಸಚಿವರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿದೆಯಾ? ಎಂಬ ಅನುಮಾನ ಮತ್ತೊಮ್ಮೆ ವ್ಯಕ್ತವಾಗಿದೆ. ಮೈತ್ರಿ ಸರ್ಕಾರ ಬೀಳಿಸಿ, ಪಕ್ಷಕ್ಕೆ ದ್ರೋಹ ಮಾಡಿದ್ದ ಸಚಿವರ ಮೇಲೆ ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ ಎನ್ನಲಾಗುತ್ತಿದೆ. ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿದ್ದ ಸಚಿವರ ತಲೆದಂಡಕ್ಕೆ ಕೈ ನಾಯಕರ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಅದಕ್ಕಾಗಿಯೇ ಸದನದಲ್ಲಿ ಆರು ಸಚಿವರ ವಿರುದ್ದ ಕಾಂಗ್ರೆಸ್ ಧರಣಿ ನಡೆಸುತ್ತಿದೆ.
ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ 6 ಸಚಿವರು ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದರು. ಅದನ್ನೇ ಮುಂದಿಟ್ಟುಕೊಂಡು ಸದನದಲ್ಲಿ ಆರು ಸಚಿವರ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು ಹಿಡಿದಿದೆ. ಬಿಜೆಪಿ ಸರ್ಕಾರದ ಸಚಿವರಾದ ಎಸ್.ಟಿ. ಸೋಮಶೇಖರ್, ನಾರಾಯಣ ಗೌಡ, ಶಿವರಾಮ್ ಹೆಬ್ಬಾರ್, ಡಾ. ಕೆ. ಸುಧಾಕರ್, ಬಿ.ಸಿ ಪಾಟೀಲ್, ಭೈರತಿ ಬಸವರಾಜ್ ರಾಜೀನಾಮೆ ನೀಡುವವರೆಗೂ ಧರಣಿ ನಡೆಸುವುದಾಗಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಇಂದಿನ ಸದನದ ಆರಂಭದಲ್ಲೇ ಸಿಡಿ ವಿಷಯ ತೆಗೆದು, ಗಲಾಟೆ ಮಾಡಿದ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸದನದ ಕಲಾಪ ನಡೆಯಲು ಬಿಡಿ. ನೀವು ಏನೇ ಚಟುವಟಿಕೆ ಮಾಡುವುದಿದ್ದರೂ ಅದನ್ನು ಸದನದಿಂದ ಹೊರಗಡೆ ನಡೆಸಿ. ಆದರೆ ಇಲ್ಲಿ ಧರಣಿ ಮಾಡೋದು ಸರಿಯಲ್ಲ. ಸದನ ಬರೀ ವಿಪಕ್ಷ ಸದಸ್ಯರಿಗೆ ಮಾತ್ರ ಸೀಮಿತವಲ್ಲ, ಎಲ್ಲರಿಗೂ ಸೀಮಿತ. ಹೀಗಾಗಿ ಉಳಿದವರಿಗೆ ಮಾತನಾಡಲು ಬಿಡಿ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ