ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಬೆಳಗ್ಗೆ 9.20ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಲಿದ್ದಾರೆ. ದೆಹಲಿಯಲ್ಲಿ ನಡೆಯಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಪುತ್ರನ ವಿವಾಹ ಭಾಗವಹಿಸಲು ಸಿದ್ದರಾಮಯ್ಯ ಅವರು ತೆರಳುತ್ತಿದ್ದಾರೆ. ಮದುವೆ ಮುಗಿಸಿಕೊಂಡು ಇಂದೇ ಬೆಂಗಳೂರಿಗೆ ಮರಳಲಿದ್ದಾರೆ.
ದೆಹಲಿಯಲ್ಲಿ ಮದುವೆ ಮುಗಿದ ಬಳಿಕ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಹಾಗೂ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಈ ವೇಳೆ ಮೈಸೂರು ಮಹಾನಗರ ಪಾಲಿಕೆ ಮೇಯರ್- ಉಪಮೇಯರ್ ಆಯ್ಕೆ ವೇಳೆ ಕಾಂಗ್ರೆಸ್ ಜೆಡಿಎಸ್ ಜೊತೆಗೆ ಮೈತ್ರಿ ವಿಚಾರ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ. ಜೆಡಿಎಸ್ ಜೊತೆ ಮೈತ್ರಿ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೆಗೆದುಕೊಂಡ ಏಕಪಕ್ಷೀಯ ನಿರ್ಧಾರದ ಬಗ್ಗೆ ವಿವರಣೆ ನೀಡಲಿದ್ದಾರೆ. ಹಾಗೂ ಇದರಿಂದ ಪಕ್ಷದ ಮೇಲಾಗುವ ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೈಸೂರು ಮೇಯರ್ ಚುನಾವಣೆ ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿತ್ತು. ಶತಾಯಗತಾಯವಾಗಿ ಅಧಿಕಾರ ಹಿಡಿಯಲು ಬಿಜೆಪಿ ತುದಿಗಾಲಲ್ಲಿ ನಿಂತಿತ್ತು. ಆದರೆ, ಕಾಂಗ್ರೆಸ್ ಸದಸ್ಯರ ಬೆಂಬಲದಿಂದ ಜೆಡಿಎಸ್ ಸದಸ್ಯರು ಮೈಸೂರು ಮೇಯರ್ ಆಗಿ ಆಯ್ಕೆಯಾದರು. ಡಿಕೆ ಶಿವಕುಮಾರ್ ಅವರ ನಿರ್ಧಾರದಂತೆ ಜೆಡಿಎಸ್ ಜೊತೆಗೆ ಮೈತ್ರಿ ನಡೆದಿತ್ತು. ಇದರಿಂದಾಗಿ ಮೈಸೂರು ಭಾಗದ ನಾಯಕರಾದ ಸಿದ್ದರಾಮಯ್ಯ ಅವರಿಗೆ ಬಹಳ ಮುಜುಗರ ಉಂಟಾಗಿತ್ತು. ಇದೀಗ ದೆಹಲಿ ಭೇಟಿ ವೇಳೆ ಈ ವಿಚಾರವನ್ನು ಸಿದ್ದರಾಯ್ಯ ಅವರು ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.
ಇದೇ ವಿಚಾರವಾಗಿ ಎರಡು ದಿನಗಳ ಹಿಂದೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹಿರಿಯ ಮುಖಂಡ ರಮೇಶ್ ಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಡಿಕೆ ಶಿವಕುಮಾರ್ ಅವರ ಏಕಪಕ್ಷೀಯ ತೀರ್ಮಾನದ ವಿರುದ್ಧ ಹರಿಹಾಯ್ದಿದ್ದರು. ಪಕ್ಷದಲ್ಲಿ ಚರ್ಚಿಸದೆ ಹೇಗೆ ನಿರ್ಧಾರ ತೆಗೆದುಕೊಂಡಿರಿ? ನೀವೊಬ್ಬರೆ ನಿರ್ಧಾರ ಮಾಡೋಕೆ ನಾವ್ಯಾಕೆ ಇರಬೇಕು? ಸಿಎಲ್ಪಿ ನಾಯಕರ ಅನುಮತಿ ಪಡೆದುಕೊಂಡ್ರಾ..? ಎಂದು ನೇರವಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪ್ರಶ್ನೆ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ