ಅಧಿವೇಶನದಲ್ಲಿ ಹಿಗ್ಗಾಮುಗ್ಗ ತರಾಟೆ ತಗೋರಿ ಎಂದ ಸಿದ್ದರಾಮಯ್ಯ; ಸುಮ್ನೆ ಬಿಟ್ಟಿಲ್ಲ ಎಂದ ಇಬ್ರಾಹಿಂ

Siddaramaiah to CM Ibrahim: ನಿನ್ನೆ ಸದನದಲ್ಲಿ ರೋಲೆಕ್ಸ್ ವಾಚ್ ಪ್ರಕರಣ ಪ್ರಸ್ತಾಪಿಸಿ ಹರಿಹಾಯ್ದಿದ್ದ ಕೆಎಸ್ ಈಶ್ವರಪ್ಪ ವಿರುದ್ಧ ಸಿದ್ದರಾಮಯ್ಯ ಆಕ್ರೋಶಗೊಂಡಿದ್ದಾರೆ. ಪರಿಷತ್​ನಲ್ಲಿ ಅವರನ್ನ ಹಿಗ್ಗಾಮುಗ್ಗ ಝಾಡಿಸಿ ಎಂದು ಇಬ್ರಾಹಿಂಗೆ ವಿಪಕ್ಷ ನಾಯಕ ಸೂಚನೆ ನೀಡಿದ್ಧಾರೆ.

ಸಿದ್ದರಾಮಯ್ಯ, ಸಿ.ಎಂ. ಇಬ್ರಾಹಿಂ ಮತ್ತಿತರರು

ಸಿದ್ದರಾಮಯ್ಯ, ಸಿ.ಎಂ. ಇಬ್ರಾಹಿಂ ಮತ್ತಿತರರು

  • Share this:
ಬೆಳಗಾವಿ: ಪರಿಷತ್ ಕಲಾಪದಲ್ಲಿ ಜಾಡಿಸಿ ಬೀಸಾಡಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Opposition leader Siddaramaiah) ಸಲಹೆ ಕೊಟ್ಟಿದ್ದಾರೆ. ಸುವರ್ಣ ಸೌಧದಲ್ಲಿ ನಡೆದ ಕಾಂಗ್ರೆಸ್ ಸಿ.ಎಲ್.ಪಿ. ಸಭೆ ಸಂದರ್ಭದಲ್ಲಿ ಸಿದ್ಧರಾಮಯ್ಯ ಮತ್ತು ಸಿ.ಎಂ. ಇಬ್ರಾಹಿಂ (C.M. Ibrahim) ನಡುವೆ ಮಾತುಕತೆ ನಡೆಯಿತು. ವಿಧಾನ ಪರಿಷತ್ ನಲ್ಲಿ (Karnataka Legislative Council) ನಿನ್ನೆ ನಡೆದ ಘಟನೆ ಪ್ರಸ್ತಾಪಿಸಿದ ಸಿದ್ಧರಾಮಯ್ಯ, ಆ ಈಶ್ವರಪ್ಪನಿಗೆ (K S Eshwarappa) ಜಾಡಿಸಿ ಅಂತ ಸಿ ಎಂ ಇಬ್ರಾಹಿಂ ಗೆ ಸೂಚನೆ ಕೊಟ್ಟರು.  ಇದಕ್ಕೆ ಉತ್ತರಿಸಿದ ಇಬ್ರಾಹಿಂ, ನಿನ್ನೆಯೇ ಜಾಡಿಸಿದ್ದೇನೆ. ನೀನು ಚಡ್ಡಿ ಹಾಕುತ್ತಿದ್ದಾಗಲೇ ನಾನು ಶಾಸಕನಾಗಿದ್ದೆ. ನೀನೇನು ನನಗೆ ಹೇಳ್ತೀಯಾ ಎಂದು ಝಾಡಿಸಿದ್ದೇನೆ ಎಂದಿದ್ದೇನೆ. ನಾನೂ ಸುಮ್ಮನೆ ಬಿಡಲ್ಲ ಎಂದರು.

ನಿನ್ನೆ ವಿಧಾನಪರಿಷತ್ ಕಲಾಪದಲ್ಲಿ ರೋಲ್ಯಾಕ್ಸ್ ವಾಚ್ ಪ್ರಕರಣ (Rolex Watch case) ಪ್ರಸ್ತಾಪಿಸಿದ್ದ ಈಶ್ವರಪ್ಪ, ಪ್ರಶ್ನೆ ಕೇಳೋಕೆ ನಿಮಗೇನು ನೈತಿಕತೆಯಿದೆ ಎಂದಿದ್ದರು. ಇದಕ್ಕೆ ಸಿ ಎಂ ಇಬ್ರಾಹಿಂ ತಿರುಗೇಟು ನೀಡಿದ್ದರು. ಹೌದು ಹಿಗ್ಗಾಮುಗ್ಗ ತರಾಟೆಗೆ ತಗೊಂಡ್ರಿ ಅಂತ ಗೊತ್ತಾಯಿತು ಎಂದು ಸಿದ್ಧರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಏನೇ ಡೈವರ್ಟ್ ಮಾಡೋಕೆ ಹೋದ್ರೂ ನಮ್ಮ ಹೋರಾಟ ಮಾಡ್ತೇವೆ...

ಜನ ಸಾಮಾನ್ಯರನ್ನು ತತ್ತರಗೊಳಿಸಿರುವ ಬೆಲೆ ಏರಿಕೆ, ಕುಸಿದಿರುವ ಕಾನೂನು ಸುವ್ಯವಸ್ಥೆ, ನೆರೆ ಪರಿಹಾರ, ಅಧೋಗತಿಗೆ ಇಳಿದಿರುವ ರಾಜ್ಯದ ಹಣಕಾಸು ಪರಿಸ್ಥಿತಿ, ಉತ್ತರ ಕರ್ನಾಟಕದ ಭಾಗದ ಜ್ವಲಂತ ಸಮಸ್ಯೆಗಳು ಸೇರಿದಂತೆ ಮತ್ತಿತರ ವಿಷಯಗಳನ್ನು ಅಸ್ತ್ರವಾಗಿ ಮಾಡಿಕೊಂಡು ವಿಧಾನ ಮಂಡಲದ ಉಭಯ ಸದನಗಳಲ್ಲಿ ಪರಿಣಾಮಕಾರಿ ಹೋರಾಟ ನಡೆಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಿರ್ಧರಿಸಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ವೇಸ್ಟ್ ಬಾಡಿ, ಕೆಲವೇ ದಿನಗಳಲ್ಲಿ ಡಿಕೆಶಿ ವಿರುದ್ಧ ಕಠೋರ ಮಾತು: ರಮೇಶ್ ಜಾರಕಿಹೊಳಿ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಅಧ್ಯಕ್ಷತೆಯಲ್ಲಿ ಸುವರ್ಣಸೌಧದ ಸಭಾಗೃಹದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ, ಸದನದಲ್ಲಿ ಕೈಗತ್ತಿಕೊಳ್ಳಬೇಕಾದ ವಿಷಯಗಳು, ಹಾಗೂ ವಿಧಾನ ಪರಿಷತ್ ಚುನಾವಣೆ ಫಲಿತಾಂಶದ ಕುರಿತಾಗಿ ಚರ್ಚೆ ನಡೆಸಲಾಯಿತು.

ಡಿಕೆಶಿ ಹೇಳಿಕೆ:

ಸಭೆಯ ನಂತರ ಮಾತನಾಡಿದ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕಾಂಗ ಸಭೆಯಲ್ಲಿ ಸರ್ಕಾರದ ವಿಫಲತೆಗಳನ್ನು ಚರ್ಚಿಸಲಾಗಿದೆ. ರೈತರಿಗೆ ಅತಿವೃಷ್ಠಿಯಿಂದ ಆದ ಬೆಳೆ ಹಾನಿ ಪರಿಹಾರ, ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್​ನ ಸಾಧನೆ ಬಗ್ಗೆ ಮಾತನಾಡಿದ್ದೇವೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಎಲ್ಲ‌ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ. ಅಲ್ಲದೇ ನೂತನವಾಗಿ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರಿಗೆ ಗೆಲುವಿಗೆ ಕಾರಣರಾದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದ್ದೇವೆ ಎಂದರು.

ಇದನ್ನೂ ಓದಿ: ಇದಕ್ಕೆಲ್ಲಾ ಕಾರಣ ಆ ಇಬ್ಬರು, ಏನು ಮಾಡಬೇಕು ಸರ್: BSY ಜೊತೆ ಸಿಎಂ ಬೊಮ್ಮಾಯಿ ರಹಸ್ಯ ಚರ್ಚೆ

ಗುತ್ತಿಗೆದಾರರ ಪತ್ರದ ವಿಚಾರವಾಗಿ ಮಾತನಾಡಿದ ಅವರು, ದೇಶದಲ್ಲಿಯೇ ಆಶ್ಚರ್ಯಕರವಾದ ಪತ್ರ ಗುತ್ತಿಗೆದಾರರದ್ದಾಗಿದೆ. ಹಾಗಾಗಿ ಭ್ರಷ್ಟಾಚಾರದ ಕುರಿತು ಸದನದಲ್ಲಿ ಆದ್ಯತೆಯ ವಿಷಯಗಳ ಮೆರೆಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಮತಾಂತರ ನಿಷೇಧಕ್ಕೆ ಹೊಸ ಕಾಯ್ದೆ ಅಗತ್ಯ ಇಲ್ಲ:

ಮತಾಂತರ ನಿಷೇಧ ಕಾಯಿದೆಯನ್ನು ಕಾಂಗ್ರೆಸ್ ವಿರೋಧಿಸುತ್ತದೆ. ಈಗಾಗಲೇ ಸಂವಿಧಾನದಲ್ಲಿ ಮತಾಂತರಕ್ಕೆ ಸಂಬಂಧಿಸಿದಂತೆ ಹೇಳಲಾಗಿದೆ. ಅದಕ್ಕೆ ಹೊಸ‌ ಕಾಯಿದೆ ಅಗತ್ಯವಿಲ್ಲ. ಈ ವಿಷಯವನ್ನು ಬಿಜೆಪಿಯವರು ಸದ್ಯ ಸದನಕ್ಕೆ ತರುವುದಿಲ್ಲ. ಹಾಗಾಗಿ ನಾವು ಈಗಾಗಲೇ ಸದನ ಹೊರಗಡೆ ಮತ್ತೆ ಒಳಗಡೆ ಕಾಯಿದೆಯ ಮಂಡನೆ ಕೈ ಬಿಡುವಂತೆ ಹೋರಾಟ ಮಾಡಲಾಗುವುದು. ಬಿಟ್ ಕಾಯಿನ್ ವಿಚಾರದಲ್ಲಿ ಹಿಟ್ ಆ್ಯಂಡ್‌ ರನ್ ಮಾಡುತ್ತಿಲ್ಲ, ಅದನ್ನು ಚರ್ಚಿಸುತ್ತೇವೆ ಎಂದರು.

ಸಭೆಯಲ್ಲಿ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ,  ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಎಚ್.ಕೆ. ಪಾಟೀಲ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸಿ.ಎಂ. ಇಬ್ರಾಹಿಂ, ಬಿ.ಕೆ. ಹರಿಪ್ರಸಾದ್, ಪ್ರಸನ್ನಕುಮಾರ್, ನಾರಾಯಣಸ್ವಾಮಿ, ಮುಖ್ಯ ಸಚೇತಕ ಅಜಯ್ ಸಿಂಗ್, ಅಂಜಲಿ ನಿಂಬಾಳ್ಕರ್, ಕುಸುಮಾ ಶಿವಳ್ಳಿ, ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ವರದಿ: ಶಿವರಾಮ ಅಸುಂಡಿ
Published by:Vijayasarthy SN
First published: