news18-kannada Updated:July 22, 2020, 12:26 PM IST
ಸಿದ್ದರಾಮಯ್ಯ-ಹೆಚ್.ಡಿ. ಕುಮಾರಸ್ವಾಮಿ.
ಬೆಂಗಳೂರು (ಜುಲೈ 22); ರಾಜ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ಪತನವಾಗಿದ್ದು ಇಂದಿಗೆ ಮುಗಿದು ಹೋದ ಕಥೆ. ಈ ಕುರಿತು ಮಾತನಾಡಿ ಏನೂ ಪ್ರಯೋಜನವಿಲ್ಲ. ಆದರೆ, ಹೆಚ್.ಡಿ. ಕುಮಾರಸ್ವಾಮಿ ಅವರು ಈ ವಿಚಾರವನ್ನು ಯಾಕೆ ರೀಕಾಲ್ ಮಾಡಿಕೊಳ್ಳುತ್ತಿದ್ದಾರೋ? ನನಗಂತೂ ಗೊತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ 2018ರ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ರಚಿಸಿದ್ದ ಮೈತ್ರಿ ಸರ್ಕಾರ ಪತನವಾಗಿ ನಾಳೆಗೆ ಒಂದು ವರ್ಷವಾಗಲಿದೆ. ಈ ಸಂದರ್ಭದಲ್ಲಿ ಮತ್ತೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ವಿರುದ್ಧ ಇಂದು ಪತ್ರ ಬರೆಯುವ ಮೂಲಕ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದರು. ಅಲ್ಲದೆ, "ತಮ್ಮ ಸರ್ಕಾರ ಉರುಳಲು ಸಿದ್ಧೌಷಧವೇ ಕಾರಣ" ಎಂದು ಸಿದ್ದರಾಮಯ್ಯ ವಿರುದ್ಧ ನೇರಾ ನೇರ ಟೀಕೆ ಮಾಡಿದ್ದರು.
ಇದಕ್ಕೆ ಅಷ್ಟೇ ಲೇವಡಿಯಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, " ಮೈತ್ರಿ ಸರ್ಕಾರ ಪತನವಾಗಿದ್ದು ಇಂದಿಗೆ ಮುಗಿದು ಹೋದ ಕಥೆ. ಇದನ್ನು ಕುಮಾರಸ್ವಾಮಿ ಮತ್ತೆ ಮತ್ತೆ ಏಕೆ ರೀಕಾಲ್ ಮಾಡಿಕೊಳ್ತಾರೋ ಗೊತ್ತಿಲ್ಲ? ಪ್ರಸ್ತುತ ಬಿಜೆಪಿ ಪಕ್ಷ ಅಧಿಕಾರದಲ್ಲಿದೆ. ಇವರ ಬಗ್ಗೆ ಮಾತಾಡೋದು ಬಿಟ್ಟು ಕುಮಾರಸ್ವಾಮಿ ಬಗ್ಗೆ ನಾನ್ಯಾಕೆ ಮಾತಾಡಲಿ? ಅವರ ತಾತ್ಪರ್ಯವೆಲ್ಲ ನಂಗೆ ಅರ್ಥವಾಗಲ್ಲ. ಇನ್ನೂ ಅವರು ಬರೆದಿರೋ ಕನ್ನಡವೂ ನನಗೆ ಅರ್ಥವಾಗಲ್ಲ" ಎಂದು ಅಪಹಾಸ್ಯ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ "ಲೆಕ್ಕ ಕೇಳುವ ಕಾಂಗ್ರೆಸ್ ನವರಿಗೆ ಕೆಲಸ ಇಲ್ಲ" ಎಂಬ ಸಚಿವ ಸುಧಾಕರ್ ಹೇಳಿಕೆಗೂ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, "ಪ್ರಜಾಪ್ರಭುತ್ವ ದಲ್ಲಿ ಎಲ್ಲಾ ಲೆಕ್ಕವನ್ನು ಜನರಿಗೆ ನೀಡಬೇಕು. ಜನಪ್ರತಿನಿಧಿಗಳು ಜನರಿಗೆ ಉತ್ತರ ಕೊಡಲೇಬೇಕು. ಸಚಿವ ಸುಧಾಕರ್ ಹೆಂಗಾದ್ರೂ ಮಾತಾಡಲಿ, ಆದರೆ ಸರ್ಕಾರ ಉತ್ತರದಾಯಿತ್ವ. ನಾನು ವಿಪಕ್ಷ ನಾಯಕನಾಗಿ ಸರ್ಕಾರಕ್ಕೆ ಲೆಕ್ಕ ಕೊಡಿ ಅಂತ ಕೇಳಿದ್ದೇನೆ. ನಾನು ಮೂರು ಸರಿ ಪತ್ರ ಬರೆದಿದ್ದೀನಿ, ಉತ್ತರ ಕೊಟ್ಟಿದ್ದಾರಾ? ಎಂದು ಪ್ರಶ್ನೆ ಮಾಡಿರುವ ಸಿದ್ದರಾಮಯ್ಯ,
ಇದನ್ನೂ ಓದಿ : ಕೈ-ತೆನೆ ಮೈತ್ರಿ ಸರ್ಕಾರ ಪತನವಾಗಿ ನಾಳೆಗೆ ಒಂದು ವರ್ಷ; ಪತ್ರದ ಮೂಲಕ ಮನದಿಂಗಿತ ವ್ಯಕ್ತಪಡಿಸಿದ ಕುಮಾರಸ್ವಾಮಿ
ಕೊರೋನಾದಂತಹ ಸಂದಿಗ್ಧ ಸಂದರ್ಭದಲ್ಲಿ ಜನರ ಜೀವ ಉಳಿಸಲು ನಮ್ಮ ಸಹಕಾರ ಇದೆ. ಆಡಳಿತ ಪಕ್ಷದ ಜೊತೆಗೆ ಒಳ್ಳೆಯ ಕೆಲಸ ಮಾಡಲು ನಾವೂ ಸಿದ್ದರಿದ್ದೇವೆ. ಆದರೆ, ಇಂತಹ ಸಂದರ್ಭದಲ್ಲೂ ದುಡ್ಡು ಹೊಡೆಯುವುದರಲ್ಲಿ ನಮ್ಮ ಸಹಕಾರ ಇಲ್ಲ" ಎಂದು ಕಿಡಿಕಾರಿದ್ದಾರೆ.
Published by:
MAshok Kumar
First published:
July 22, 2020, 12:26 PM IST