ಮೋದಿ 20 ಲಕ್ಷ ಕೋಟಿ ಪ್ಯಾಕೇಜ್ ದೊಡ್ಡ ಜೋಕ್; ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಬಿಎಸ್​ವೈ ನಮ್ಮ ನಾಯಕ ಅಲ್ಲ. ಮೋದಿ, ಅಮಿತ್ ಶಾ ನಮ್ಮ ನಾಯಕರು ಅಂತ ಯತ್ನಾಳ್ ಹೇಳಿದ್ದಾರೆ. ಬಿಜೆಪಿ ಆಂತರಿಕ ವಿಚಾರಕ್ಕೆ ನಾವು ಕೈ ಹಾಕಲ್ಲ. ಅವರಾಗೆ ಕಚ್ಚಾಡಿಕೊಂಡು ಬಿದ್ದು ಹೋದ್ರೆ ನಾವು ಏನೂ ಮಾಡೋಕಾಗಲ್ಲ ಎಂದರು.

news18-kannada
Updated:May 30, 2020, 3:32 PM IST
ಮೋದಿ 20 ಲಕ್ಷ ಕೋಟಿ ಪ್ಯಾಕೇಜ್ ದೊಡ್ಡ ಜೋಕ್; ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಸಿದ್ದರಾಮಯ್ಯ.
  • Share this:
ಬೆಂಗಳೂರು: ದೇಶದ ಅಭಿವೃದ್ಧಿ ಆಧಾರದಲ್ಲಿ ಒಬ್ಬ ವ್ಯಕ್ತಿಯ ನಾಯಕತ್ವ ಅಳೆಯಬೇಕು.  ಭಾವಾನಾತ್ಮಕ ವಿಚಾರಗಳನ್ನು ಇಟ್ಟುಕೊಂಡು ನಾಯಕತ್ವ ಮಾಡೋದಲ್ಲ. ದೇಶ ಆರ್ಥಿಕವಾಗಿ ದಿವಾಳಿಯಾಗುತ್ತಿದೆ. ಯುವಕರು ಭವಿಷ್ಯ ರೂಪಿಸಿಕೊಳ್ಳಲು ಆಗದೆ ಬೀದಿಪಾಲಾಗುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಶನಿವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಮೇ 30, 2019ರಲ್ಲಿ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಮಂತ್ರಿ ಆಗಿ ಒಂದು ವರ್ಷ ಪೂರೈಸಿದ್ದಾರೆ. ಪತ್ರಿಕೆಗಳಲ್ಲಿ ಸುಮಾರು 20 ಪುಟಗಳ ಜಾಹೀರಾತು ಬಂದಿವೆ. ದೇಶದ ಜನರು ಮೋದಿ ಅವರ ಮೇಲೆ ವಿಶ್ವಾಸವಿಟ್ಟು, ನಂಬಿಕೆ ಇಟ್ಟು ಎರಡನೇ ಅವಧಿಗೆ ಅವಕಾಶ ನೀಡಿದರು. ಮೋದಿ ಸರ್ಕಾರ ಮೊದಲ ಅವಧಿಯಲ್ಲೇ ಸಂಪೂರ್ಣವಾಗಿ ವೈಫಲ್ಯ ಕಂಡಿತು. ಮೋದಿಯವರು ಮೊದಲ ಐದು ವರ್ಷಗಳಲ್ಲಿ ಜನರಿಗೆ ಕೊಟ್ಟಿದ್ದ ಪ್ರಮುಖ ಭರವಸೆಗಳನ್ನು ಈಡೇರಿಸಲೇ ಇಲ್ಲ. ಮತ್ತೆ ಕಳೆದ ಒಂದು ವರ್ಷದಲ್ಲೂ ಅವರ ಸುಳ್ಳುಗಳು ಮುಂದುವರೆದಿವೆ. ಇದೇ ಅವರ ಒಂದು ವರ್ಷದ ಸಾಧನೆ. ನಿನ್ನೆ 135 ಕೋಟಿ ಜನರಿಗೆ ಒಂದು ಪತ್ರ ಬರೆದಿದ್ದಾರೆ. ಅದರಲ್ಲಿ ಪ್ರಮುಖವಾಗಿ ಆರ್ಟಿಕಲ್ 370 ರದ್ದು, ಅಯೋಧ್ಯೆ ವಿಚಾರದಲ್ಲಿ ನಮಗೆ ಜಯ ಸಿಕ್ಕಿದೆ. ತ್ರಿವಳಿ ತಲಾಖ್ ರದ್ದು ಮಾಡಿದ್ವಿ, ದೇಶದ ರೈತರಿಗೆ ವರ್ಷಕ್ಕೆ 6 ಸಾವಿರ ಕೋಟಿ ನೀಡಿದ್ದೇವೆ ಅಂತಾ ಹೇಳಿಕೊಂಡಿದ್ದಾರೆ. ಅಯೋಧ್ಯೆ ವಿಚಾರ ಸುಪ್ರೀಂ ತೀರ್ಪು. ಅದು ಮೋದಿ ಸರ್ಕಾರದ ಸಾಧನೆ ಅಲ್ಲ ಎಂದು ಮೋದಿ ವಿರುದ್ಧ ಹರಿಹಾಯ್ದರು.

ಸ್ವಾತಂತ್ರ್ಯ ನಂತರದಲ್ಲಿ ರಾಜ ಹರಿಸಿಂಗ್ ವಿಶೇಷ ಸ್ಥಾನಮಾನ ನೀಡದಿದ್ದರೆ ಪಾಕಿಸ್ತಾನಕ್ಕೆ ಸೇರುತ್ತೇವೆ ಅಂತಾ ಹಠ ಹಿಡಿದರು. ಆಗ ಶೇಖ್ ಅಬ್ದುಲ್ಲಾ ಭಾರತ ಸೇರುತ್ತೇವೆ ಅಂದ್ರು.  ಆಗಿನ ಸಂದರ್ಭವೇ ಬೇರೆ ಇತ್ತು. ಇವತ್ತಿನ ಪರಿಸ್ಥಿತಿ ಬಗ್ಗೆ ಮೋದಿ ಮಾತಾಡಿಲ್ಲ. ಬಡತನ, ನಿರುದ್ಯೋಗ, ಜಿಡಿಪಿ ಯಾವುದರ ಬಗ್ಗೆಯೂ ಮಾತನಾಡಿಲ್ಲ. ಜಿಡಿಪಿ ಶೇ.4.2 ಆಗಿದೆ, 11 ವರ್ಷಗಳಷ್ಟು ಹಿಂದೆ ಹೋಗಿದೆ. ಪಾಕಿಸ್ತಾನ, ಬಾಂಗ್ಲಾ, ನೇಪಾಳ ದೇಶಕ್ಕಿಂತ ಕೆಳಗೆ ಹೋಗಿದ್ದೇವೆ. 2020-21 ಕ್ಕೆ ಜಿಡಿಪಿ ನಕಾರಾತ್ಮಕ ಬೆಳವಣಿಗೆ ಆಗಲಿದೆ. 50 ವರ್ಷದಲ್ಲೇ ಅಧಿಕ ಉದ್ಯೋಗ ನಷ್ಟವಾಗಿದೆ. ಕಳೆದ ವರ್ಷಗಳಲ್ಲಿ ಎಷ್ಟು ಉದ್ಯೋಗ ಕೊಟ್ಟಿದ್ದೇವೆ, ಕೃಷಿ ಕ್ಷೇತ್ರದಲ್ಲಿ ಎಷ್ಟು ಅಭಿವೃದ್ಧಿ ಆಗಿದೆ, ರಫ್ತು ಎಷ್ಟು ಹೆಚ್ಚಾಗಿದೆ, ಕೈಗಾರಿಕಾ ಬೆಳವಣಿಗೆ ಏನಾಗಿದೆ ಇದರ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.

ಬಿಎಸ್​ವೈ ಅಧಿಕಾರಕ್ಕೆ ಬಂದು ಹತ್ತು ತಿಂಗಳಾಯ್ತು. ನೆರೆ ಪರಿಹಾರ ಕೊಟ್ಟಿಲ್ಲ. ಮನೆ ಕಟ್ಟಿ ಕೊಟ್ಟಿಲ್ಲ. ಒಂದು ಲಕ್ಷ ಕೋಟಿ ನಷ್ಟ ಆಗಿದೆ. ಪ್ರವಾಹ ಬಂದು ನೊಂದವರಿಗೆ ಕೇಂದ್ರ ಸರ್ಕಾರ ಸಹಾಯ ಮಾಡಲಿಲ್ಲ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ಕಳೆದ ಬಾರಿಯ 11 ಸಾವಿರ ಕೋಟಿ ರೂಪಾಯಿಯನ್ನು ಕೇಂದ್ರ ಕೊಟ್ಟಿಲ್ಲ ಎಂದು  ಸಿದ್ದರಾಮಯ್ಯ ಆರೋಪಿಸಿದರು.

ರಾಜ್ಯಗಳ ಮೇಲೆ ಕೇಂದ್ರ ಅಧಿಕಾರ ಕಬಳಿಕೆ ಮಾಡುತ್ತಿದೆ. ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುತ್ತಿದೆ. ರೈತರ ಜುಟ್ಟನ್ನು ಹಣ ಉಳ್ಳವರ ಕೈಗೆ ಕೊಟ್ಟಿದ್ದಾರೆ. ಕಾರ್ಮಿಕರ ಮೇಲೂ ಶೋಷಣೆ ನಡೆಯುತ್ತಿದೆ. 80 ಜನ ಕೊರೋನಾ ಹಿನ್ನೆಲೆಯಲ್ಲಿ ಆರ್‌ಪಿಎಫ್ ಸಿಬ್ಬಂದಿ ಮರಣ ಹೊಂದಿದ್ದಾರೆ. ಈ ಸಾವಿಗೆ ಯಾರು ಹೊಣೆ? ಮೋದಿ ಹೊಣೆ ಅಲ್ವಾ? ಎಂದು ಪ್ರಶ್ನಿಸಿದರು.

ಮೋದಿ 20 ಲಕ್ಷ ಕೋಟಿ ಪ್ಯಾಕೇಜ್ ದೊಡ್ಡ ಜೋಕ್. ಖಜಾನೆಯಿಂದ ಒಟ್ಟು ನಗದು ಎಷ್ಟು ಹೊರಬಂದಿದೆ. ಮೋದಿ ಇದನ್ನು ಬಹಿರಂಗಪಡಿಸಲಿ. 2 ‌ಲಕ್ಷ ರೂ. ಕೂಡ ಪರಿಹಾರ ಖಜಾನೆಯಿಂದ ಹೊರಬಂದಿಲ್ಲ. ಜಿಡಿಪಿಯ ಶೇ. 1 ಹಣ ‌ಕೂಡ ಬಂದಿಲ್ಲ. ಬೇರೆ ದೇಶಗಳು ಜಿಡಿಪಿಯ ಶೇ.20-30 ಹಣವನ್ನು ಕೋವಿಡ್‌ ಪರಿಹಾರಕ್ಕೆ ನೀಡಿದ್ದಾರೆ. ಕಾರ್ಮಿಕರ, ಶ್ರಮಿಕರಿಗೆ ದುಡ್ಡು ಕೊಡಿ. ಅವರು ಖರ್ಚು ಮಾಡಿದರೆ ತಾನೆ ಹಣದ ಹರಿವು ಆಗೋದು.  ಬಿರ್ಲಾ ಹಣ ಖರ್ಚು ಮಾಡಲ್ಲ, ಸಾಮಾನ್ಯ ಜನ ಖರ್ಚಿಗೆ ಬೇಕು. ವೃತ್ತಿಪರ ಸಮುದಾಯಗಳಿಗೆ ಹಣ ನೀಡಿ. ಬಜೆಟ್‌ನಲ್ಲಿ‌ಎಷ್ಟು ಖರ್ಚು ‌ಮಾಡಿದ್ದೀರಿ ಮೋದಿಜಿ?  ರಾಜ್ಯದ 2.37 ಲಕ್ಷ ಕೋಟಿ ಬಜೆಟ್‌ನಲ್ಲಿ ಎಷ್ಟು ಖರ್ಚು ಮಾಡಿದ್ದೀರಿ? 53ಸಾವಿರ ಕೋಟಿ ಈ ವರ್ಷದ ರಾಜ್ಯದ ಸಾಲ ಎಂದು ಪ್ರಶ್ನೆ ಮಾಡಿದರು.

ಕೊರೋನಾ ತಡೆಯಲು ಮೋದಿ ವಿಫಲರಾಗಿದ್ದಾರೆ. ಪಿಪಿಇ ಕಿಟ್ ಅತ್ಯಂತ ವಿಳಂಬವಾಗಿ ಬಂದಿದೆ. ಜಾಗಟೆ ಬಾರಿಸಿ, ದೀಪ ಹಚ್ಚೋದು ಇವರ ಸಾಧನೆ. ಕೇರಳದಲ್ಲಿ ಫೆಬ್ರವರಿಯಲ್ಲಿ ಕೊರೋನಾ ಬಂದಿತ್ತು. ಮಾರ್ಚ್ ಆರಂಭದಲ್ಲೇ ವಿಮಾನಗಳ ರದ್ದು ಮಾಡಬೇಕಿತ್ತು.  ಟ್ರಂಪ್ ನ ದೇಶಕ್ಕೆ ಯಾಕೆ ಆಹ್ವಾನ ಕೊಟ್ಟಿದ್ದೀರಿ? ತಬ್ಲಿಘಿಗಳಿಗೆ ಅವಕಾಶ ಕೊಟ್ಟಿದ್ದು ಯಾಕೆ? ನಿಮ್ಮ‌ ಇಂಟಲಿಜೆನ್ಸ್ ಎಲ್ಲಿತ್ತು? ನಿಮಗೆ ಗೊತ್ತಿರಲಿಲ್ವಾ? ಸಂಕಷ್ಟದ ಸಮಯದಲ್ಲಿ ರಾಜಕೀಯ ಮಾಡಲು ನಾಚಿಕೆ ಆಗಲ್ವಾ? ತಬ್ಲಿಘಿಗಳಿಂದಲೇ ಕೊರೋನಾ ಬಂದಿದೆ ಅಂತ ಅಪಪ್ರಚಾರ ಮಾಡುತ್ತಿದ್ದಿರಲ್ಲಾ, ಇಂಗ್ಲೆಂಡ್, ಸ್ಪೇನ್, ಇಟಲಿ, ಅಮೆರಿಕಾದಲ್ಲಿ ಯಾವ ತಬ್ಲಿಘಿಗಳು ಇದ್ರು? ಎಂದು ಪ್ರಶ್ನಿಸಿದರು.ಬಿಜೆಪಿ ಭಿನ್ನಮತ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ ಅವರು, ರಮೇಶ್ ಜಾರಕಿಹೊಳಿ ಸುಳ್ಳು ಹೇಳ್ತಾರೆ. ಭಿನ್ನಮತೀಯರ ಸಭೆ ನಡೆಸಿದ್ದಾರೆ. ಅದಕ್ಕೆ ಕೌಂಟರ್ ಆಗಿ ರಮೇಶ್ ಜಾರಕಿಹೊಳಿ ಸುಳ್ಳು ಹೇಳಿದ್ದಾರೆ. ಕಾಂಗ್ರೆಸ್ ನವರು ಸಂಪರ್ಕದಲ್ಲಿದ್ದಾರೆ ಎಂದು ಸುಳ್ಳು ಹೇಳ್ತಿದ್ದಾರೆ. ಮಹೇಶ್ ಕುಮಟಳ್ಳಿ ಬಿಟ್ಟು ಬೇರೆಯವರು ಯಾರು ಹೋದರು? ಕುಮಟಳ್ಳಿ ಬಿಟ್ಟು ರಮೇಶ್ ಜೊತೆ ಯಾರೂ ಇಲ್ಲ. ಬಿಜೆಪಿಯಲ್ಲಿ ಬೆಂಕಿ ಹತ್ತಿಕೊಂಡಿದೆ. ಯಡಿಯೂರಪ್ಪ ನಮ್ಮ‌ ಲೀಡರ್ ಅಲ್ಲ ಅಂತ ಯತ್ನಾಳ್ ಹೇಳಿದ್ದಾರೆ.  ಜೆ.ಪಿ.ನಡ್ಡಾ, ಅಮಿತ್ ಶಾ ನಮ್ಮ ನಾಯಕರು ಎಂದಿದ್ದಾರೆ. ಯತ್ನಾಳ್ ಮಾತಿನಿಂದ ಏನು ಸಂದೇಶ ಹೋಗುತ್ತದೆ. ಅಲ್ಲಿ ಎಲ್ಲಿಯೂ ಯಡಿಯೂರಪ್ಪ ನಾಯಕ ಅಲ್ಲ. ಇದೊಂದು ಕೆಟ್ಟ ಸರ್ಕಾರ, ದರಿದ್ರ ಸರ್ಕಾರ. ಬಿಜೆಪಿ ಆಂತರಿಕ ವಿಚಾರಕ್ಕೆ ನಾವು ಕೈ ಹಾಕಲ್ಲ. ಅವರಾಗೆ ಕಚ್ಚಾಡಿಕೊಂಡು ಬಿದ್ದು ಹೋದ್ರೆ ನಾವು ಏನೂ ಮಾಡೋಕಾಗಲ್ಲ. ಉಮೇಶ್ ಕತ್ತಿ ನಮ್ಮನ್ನು ಭೇಟಿ ಮಾಡಿಲ್ಲ. ನಮಗೆ ಅದರ ಬಗ್ಗೆ ಆಸಕ್ತಿ ಇಲ್ಲ. ರಾಜ್ಯದ, ಜನರ ಹಿತದೃಷ್ಟಿಯಿಂದ ಈ ಸರ್ಕಾರ ಹೋಗಬೇಕು ಎಂದರು.

ಇದನ್ನು ಓದಿ: ಬಿಜೆಪಿಯೊಳಗಿನ ಹೊಸ ಬಂಡಾಯ ಪರ್ವದ ಮಾಸ್ಟರ್​ಮೈಂಡ್ ಮಾಜಿ ಸಿಎಂ?

ಎಷ್ಟು ಪರ್ಸೆಂಟ್ ಸರ್ಕಾರ ಅನ್ನೋದನ್ನು ಭಿನ್ನಮತೀಯರನ್ನು ಕೇಳಿ, ಅಧಿಕಾರಿಗಳನ್ನು ಕೇಳಿ. ಕಲ್ಬುರ್ಗಿ ಬಿಸಿಎಂ ಅಧಿಕಾರಿ ಎತ್ತಂಗಡಿ, ಎಂಎಲ್ಎ ಕಿಟ್ ಹಂಚೋಕೆ ಅಧಿಕಾರಿ ಬಳಿ ದುಡ್ಡು ಕೇಳಿದ್ದಾನೆ. ಇದು ಬಿಜೆಪಿಯವರ ಮುಖ. ರಾಜ್ಯಸಭಾ ಚುನಾವಣೆ
ನಾವೆಲ್ಲೂ ಚರ್ಚೆ ಮಾಡಿಲ್ಲ. ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡದೆ ನಾನೇನು ಮಾತಾಡಲ್ಲ. ರಾಜ್ಯಸಭೆ ಚುನಾವಣೆ ಬಗ್ಗೆ ಇನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗಿಲ್ಲ ಎಂದರು.
First published: May 30, 2020, 3:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading