ಕರ್ನಾಟಕಕ್ಕೂ ಉಚಿತ ಕೊರೋನಾ ಲಸಿಕೆ ಕೊಡಿಸುವ ಧಮ್ ನಿಮಗಿದೆಯೇ?; ನಳಿನ್ ಕುಮಾರ್​ಗೆ ಸಿದ್ದರಾಮಯ್ಯ ಸವಾಲು

ನಮ್ಮ ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರ ಮನವೊಲಿಸಿ, ಕನ್ನಡಿಗರಿಗೆ ಕೊರೋನಾ ಲಸಿಕೆಯನ್ನು ಉಚಿತವಾಗಿ ಕೊಡಿಸುವ ಧಮ್ ನಿಮಗೆ ಇದೆಯೇ? ಎಂದು ಸಿದ್ದರಾಮಯ್ಯ ನಳಿನ್ ಕುಮಾರ್ ಕಟೀಲ್ ಅವರಿಗೆ ಪ್ರಶ್ನೆ ಮಾಡಿದ್ದಾರೆ.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಬೆಂಗಳೂರು (ಅ. 23): ಬಿಹಾರದಲ್ಲಿ ಇನ್ನು 5 ದಿನಗಳಲ್ಲಿ ವಿಧಾನಸಭಾ ಚುನಾವಣೆ ಇರುವುದರಿಂದ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಬಿಹಾರಕ್ಕೆ ಉಚಿತ ಕೊರೋನಾ ಲಸಿಕೆ ನೀಡುವುದಾಗಿ ಘೋಷಿಸಿದೆ. ವಿಶ್ವವನ್ನೇ ಕಾಡುತ್ತಿರುವ ಕೊರೋನಾಗೆ ಬಿಹಾರದ ಜನರಿಗೆ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿರುವ ಬಿಜೆಪಿಯ ನಡೆಗೆ ಸಾಕಷ್ಟು ವಿರೋಧ, ಟೀಕೆಗಳು ವ್ಯಕ್ತವಾಗಿವೆ. ಈ ಬಗ್ಗೆ ಕರ್ನಾಟಕದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದು, ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಇಲ್ಲವೆಂದ ಮಾತ್ರಕ್ಕೆ ಕನ್ನಡಿಗರಿಗೆ ಉಚಿತವಾಗಿ ಕೊರೋನಾ ಲಸಿಕೆ ನೀಡದಿರಲು ಸಾಧ್ಯವೇ? ನಮ್ಮ ರಾಜ್ಯದಿಂದ 25 ಸಂಸದರು ಆಯ್ಕೆಯಾಗಿದ್ದಾರಲ್ಲ ಅವರು ಉಚಿತ ಕೊರೋನಾ ಲಸಿಕೆಗೆ ಬೇಡಿಕೆ ಇಡಲಿ ಎಂದು ಟ್ವೀಟ್ ಮಾಡಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಿಹಾರದಲ್ಲಿ ಪ್ರಚಾರದ ವೇಳೆ ಉಚಿತ ಕೊರೋನಾ ಲಸಿಕೆ ನೀಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಅವರು ಕೊರೋನಾವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇಡೀ ದೇಶದ ಜನರು ಕೊರೋನಾದಿಂದ ನಲುಗುತ್ತಿರುವಾಗ ಕೇಂದ್ರ ಸರ್ಕಾರ ಈ ರೀತಿ ಚುನಾವಣೆಗಾಗಿ ತಾರತಮ್ಯ ಮಾಡುವುದು ಸರಿಯೇ? ಈ ರೀತಿಯ ಘೋಷಣೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಏನು ಹೇಳಲು ಹೊರಟಿದ್ದಾರೆ? ಜನರ ಆರೋಗ್ಯ, ಜೀವಕ್ಕಿಂತಲೂ ಬಿಜೆಪಿಗೆ ಮತವೇ ಹೆಚ್ಚಾಯಿತೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.ಕರ್ನಾಟಕದಿಂದ 25 ಸಂಸದರು ಆಯ್ಕೆಯಾಗಿದ್ದಾರೆ. ಆ ಸಂಸದರು, ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರ್ನಾಟಕಕ್ಕೂ ಉಚಿತ ಕೊರೋನಾ ಲಸಿಕೆ ವಿತರಿಸಲು ಬೇಡಿಕೆ ಇಡಬೇಕು. ಸರ್ಕಾರದಿಂದ ಕರ್ನಾಟಕಕ್ಕೆ ಕೂಡ ಉಚಿತ ಕೊರೋನಾ ಲಸಿಕೆ ಘೋಷಿಸುವುದಕ್ಕೆ ಕನ್ನಡಿಗರು ಕಾಯುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಬದಲಾಗಿ ರಾಜ್ಯ ಸರ್ಕಾರ ಈ ಬಗ್ಗೆ ಭರವಸೆ ನೀಡುತ್ತದಾ? ಎಂದು ಸಿದ್ದರಾಮಯ್ಯ ಸಿಎಂ ಯಡಿಯೂರಪ್ಪನವರ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.ನಮ್ಮ ರಾಜ್ಯದ ರಾಜ್ಯಸಭಾ ಸದಸ್ಯೆ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಾಣರಕ್ಷಕ ಕೊರೋನಾ ಲಸಿಕೆಯನ್ನು ಬಿಹಾರ ರಾಜ್ಯಕ್ಕೆ ಉಚಿತವಾಗಿ ನೀಡುವ ಭರವಸೆ ನೀಡಿದ್ದಾರೆ. ಅವರ ಈ ಔದಾರ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು ನಳಿನ್ ಕುಮಾರ್ ಕಟೀಲ್ ಅವರೇ? ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ಉಚಿತ ಕೋವಿಡ್​ ಲಸಿಕೆ ಭರವಸೆ; ಟ್ರೋಲ್​ಗೆ ಒಳಗಾಗುತ್ತಿರುವ ಬಿಹಾರದ ಬಿಜೆಪಿ ಚುನಾವಣಾ ಪ್ರಣಾಳಿಕೆ!

ನಮ್ಮ ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರ ಮನವೊಲಿಸಿ, ನಿಮ್ಮದೇ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಕೊರೋನಾದಿಂದ ಭೀತಿಗೊಳಗಾಗಿರುವ ಜನರಿಗೆ ಕೊರೋನಾ ಲಸಿಕೆಯನ್ನು ಉಚಿತವಾಗಿ ಕೊಡಿಸುವ ಧಮ್ ನಿಮಗೆ ಇದೆಯೇ? ಎಂದು ಸಿದ್ದರಾಮಯ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಪ್ರಶ್ನೆ ಮಾಡಿದ್ದಾರೆ.ಅಕ್ಟೋಬರ್ 28ರಿಂದ ಆರಂಭವಾಗಲಿರುವ ಬಿಹಾರ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಗುರುವಾರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರಣಾಳಿಕೆಯಲ್ಲಿ ಬಿಹಾರದ ಎಲ್ಲರಿಗೂ ಉಚಿತ ಕೊರೋನಾ ವೈರಸ್ ಲಸಿಕೆ ನೀಡುವ ಭರವಸೆ ನೀಡಿದೆ. ಇದರ ಜೊತೆಗೆ ಬಿಹಾರದ ಕಾರ್ಮಿಕರಿಗೆ ಬಿಹಾರ ರಾಜ್ಯದಲ್ಲಿಯೇ ಉದ್ಯೋಗ ಸೃಷ್ಟಿಸುವುದಕ್ಕೆ ಮೊದಲ ಆದ್ಯತೆಯನ್ನು ನೀಡುವುದಾಗಿ ತಿಳಿಸಿದೆ. ಕೊರೋನಾ ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅನುಮೋದಿಸಿದ ಕೂಡಲೇ ಬಿಹಾರದ ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ ನೀಡುವುದು ನಮ್ಮ ಸಂಕಲ್ಪವಾಗಿದೆ. ಲಸಿಕೆಗೆ ಅನುಮತಿ ದೊರಕಿದ ಕೂಡಲೇ ಪ್ರತಿಯೊಬ್ಬರಿಗೂ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಪ್ರಣಾಳಿಕೆಯಲ್ಲಿ ಇದು ನಾವು ನೀಡುತ್ತಿರುವ ಮೊದಲ ಭರವಸೆಯಾಗಿದೆ ಎಂದು ನಿನ್ನೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು.

ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್ 28ರಂದು 16 ಜಿಲ್ಲೆಗಳ 71 ಕ್ಷೇತ್ರಗಳಿಗೆ 31,000 ಮತಗಟ್ಟೆಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 3ರಂದು 17 ಜಿಲ್ಲೆಗಳಲ್ಲಿ 94 ಕ್ಷೇತ್ರಗಳಿಗೆ 42,000 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 7ರಂದು 78 ಕ್ಷೇತ್ರಗಳಿಗೆ 15 ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಹೊರ ಬೀಳಲಿದೆ.
Published by:Sushma Chakre
First published: