ಬೆಂಗಳೂರು: ಸಕ್ಕರೆನಾಡು ಮಂಡ್ಯದಲ್ಲಿ (Mandya) ಪ್ರಧಾನಿ ನರೇಂದ್ರ ಮೋದಿ (PM Modi) ಮೇನಿಯಾ ಜೋರಾಗಿತ್ತು. ಮೈಸೂರು-ಬೆಂಗಳೂರು ದಶಪಥ (Bengaluru Mysuru Expressway) ಹೆದ್ದಾರಿಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಈ ನಡುವೆ ರಾಜ್ಯಕ್ಕೆ ಆಗಮಿಸಿದ ಪ್ರಧಾನಿಗಳಿಗೆ ಸಿದ್ದರಾಮಯ್ಯ (Siddaramaiah) ಅವರು ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಈ ಕುರಿತು ಟ್ವೀಟ್ ಮಾಡಿ ಪ್ರಶ್ನೆ ಮಾಡಿರುವ ಸಿದ್ದರಾಮಯ್ಯ ಅವರು, ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madalu Virupaksha) ಅವರ ಪುತ್ರ ಲೋಕಾಯುಕ್ತ ದಾಳಿ ವೇಳೆ ಸಿಕ್ಕಿಬಿದ್ದ ಹಾಗೂ ಶಾಸಕರ ಮನೆಯಲ್ಲಿ ಪತ್ತೆಯಾದ ಕೋಟಿ ಕೋಟಿ ಹಣದ ವಿಚಾರವನ್ನು ಪ್ರಸ್ತಾಪ ಮಾಡಿ ಕುಟುಕಿದ್ದಾರೆ.
ಸಿದ್ದರಾಮಯ್ಯ ಟ್ವೀಟ್ನಲ್ಲಿ ಏನಿದೆ?
ಭ್ರಷ್ಟ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಮಗನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಲೋಕಾಯುಕ್ತ ಪೊಲೀಸರು ಸಚಿತ್ರವಾಗಿ ಜಗತ್ತಿನ ಮುಂದೆ ಬಿಚ್ಚಿಟ್ಟರೂ ನೀವು ಮಾತ್ರ ಬಾಯಿ ಬಿಚ್ಚುತ್ತಿಲ್ಲ ಯಾಕೆ? ಅವರ ಲೂಟಿಯಲ್ಲಿ ನಿಮಗೂ ಪಾಲಿದೆಯಾ ನರೇಂದ್ರ ಮೋದಿ ಅವರೇ?
ಬಿಜೆಪಿಯ ಸದ್ಯದ ಸರ್ವಶಕ್ತ ನಾಯಕರಾದ ನಿಮ್ಮ ಕೃಪಾಶೀರ್ವಾದ ಇಲ್ಲದೆ, ಭ್ರಷ್ಟ ಶಾಸಕರೊಬ್ಬರು ಕಾನೂನಿಗೆ ಅಂಜದೆ, ಮಾನ-ಮರ್ಯಾದೆಗೆ ಅಳುಕದೆ ಪ್ರಜಾತಂತ್ರ ವ್ಯವಸ್ಥೆಯನ್ನೇ ಅಣಕಿಸುವಂತೆ ಮೆರವಣಿಗೆ ಮಾಡಿಸಿಕೊಳ್ಳಲು ಸಾಧ್ಯವೇ? ನ ಖಾವೂಂಗಾ, ನಾ ಖಾನೆ ದೂಂಗಾ ಎಂಬ ನಿಮ್ಮ ಘೋಷಣೆಯನ್ನು ಈಗ ನೀವು 'ತುಮ್ ಖಾವೋ, ಮುಜೆ ಬಿ ಖಿಲಾವೋ’ (ನೀವು ತಿನ್ನಿ, ನನಗೂ ತಿನ್ನಿಸಿ) ಎಂದು ಬದಲಾಯಿಸಿ ಕೊಂಡಿದ್ದೀರಾ? ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.
Mr. @narendramodi,
Why are you silent despite Lokayukta exposing rampant corruption done by MLA Virupaksha & his son?
Do you also have share in that corrupt money?#AnswerMadiModi
— Siddaramaiah (@siddaramaiah) March 12, 2023
ವಾಜಪೇರಿ ಅಧ್ಯಕ್ಷರಾಗಿದ್ದ ವೇಳೆ ದಲಿತ ನಾಯಕ ರಾಜೀನಾಮೆ
ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಪಕ್ಷದ ಅಧ್ಯಕ್ಷರಾಗಿದ್ದ ಬಂಗಾರು ಲಕ್ಷ್ಮಣ್ ಎಂಬ ದಲಿತ ನಾಯಕರು ಲಂಚ ಪಡೆಯುವಾಗ ಕ್ಯಾಮೆರಾದ ಕಣ್ಣಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ತಕ್ಷಣ ವಾಜಪೇಯಿ ಅವರು ಲಕ್ಷ್ಮಣ್ ಅವರಿಂದ ರಾಜೀನಾಮೆ ಕೊಡಿಸಿಲ್ಲವೇ?
ವಾಜಪೇಯಿ ನೇತೃತ್ವದಲ್ಲಿ ಬಿಜೆಪಿ ಇದ್ದಾಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತ್ರವಲ್ಲ ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ, ಸಂಪಂಗಿ ಮೊದಲಾದವರು ಭ್ರಷ್ಟಾಚಾರದ ಆರೋಪದಲ್ಲಿ ಸಚಿವ ಸ್ಥಾನವನ್ನು ಕಳೆದುಕೊಂಡು ಜೈಲುಪಾಲಾದರಲ್ಲಾ? ಈಗ್ಯಾಕೆ ಹೀಗೆ?
ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಕಿರುಕುಳ ಆರೋಪ
ಸದನದಲ್ಲಿ ಬ್ಲೂಫಿಲ್ಮ್ ನೋಡಿದ್ದ ಕಾರಣಕ್ಕಾಗಿ ಮೂವರು ಬಿಜೆಪಿ ನಾಯಕರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅತ್ಯಾಚಾರದ ಆರೋಪ ಹೊತ್ತಿದ್ದ ಇನ್ನೊಬ್ಬ ಸಚಿವರೂ ರಾಜೀನಾಮೆ ನೀಡಬೇಕಾಯಿತು. ಅದು ವಾಜಪೇಯಿ ಕಾಲ, ಇದು ನರೇಂದ್ರಮೋದಿ ಕಾಲವೇ?
ಕಳೆದ ಬಾರಿಯ ಚುನಾವಣೆಯ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ 10% ಕಮಿಷನ್ ಸರ್ಕಾರ ಎಂದು ಆಧಾರರಹಿತ ಆರೋಪ ಮಾಡಿದ್ದಿರಿ. ಈ ಬಾರಿ ನಿಮ್ಮ ಸರ್ಕಾರ 40% ಕಮಿಷನ್ ಕೇಳಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಗುತ್ತಿಗೆದಾರರು ನಿಮಗೆ ಪತ್ರ ಬರೆದರೂ ಯಾಕೆ ಉತ್ತರಿಸುತ್ತಿಲ್ಲ?
ಆನ್ಸರ್ ಮಾಡಿ ಮೋದಿ ಅಂತ ಪ್ರಶ್ನೆ
ನಾನು ಮುಖ್ಯಮಂತ್ರಿಯಾಗಿದ್ದಾಗ ಸಚಿವ ಸಂತೋಷ್ ಲಾಡ್ ಅವರ ಮೇಲೆ ಅಕ್ರಮ ಗಣಿಗಾರಿಕೆಯ ಆರೋಪ ಕೇಳಿಬಂದಿದ್ದಕ್ಕಾಗಿ ಅವರಿಂದ ರಾಜೀನಾಮೆ ಕೊಡಿಸಿದ್ದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ನಮ್ಮ ಸರ್ಕಾರದ ವಿರುದ್ಧದ ಎಂಟು ಆರೋಪಗಳನ್ನು ಧೈರ್ಯದಿಂದ ಸಿಬಿಐ ತನಿಖೆಗೆ ಒಪ್ಪಿಸಿದ್ದೆ ಗೊತ್ತಾ?
ಇದನ್ನೂ ಓದಿ: Milk Price: ಯುಗಾದಿ ಮುನ್ನವೇ ರೈತರಿಗೆ ಬಂಪರ್ ಗಿಫ್ಟ್; ಹಾಲು ಖರೀದಿ ದರ ₹2.10 ಏರಿಕೆ
ಹಿಂದೆ ಕರ್ನಾಟಕಕ್ಕೆ ಬಂದಿದ್ದ ನೀವು ಕರ್ನಾಟಕದ ಕಾಂಗ್ರೆಸ್ ದೆಹಲಿಯ ಹೈಕಮಾಂಡ್ ಗೆ ಎಟಿಎಂ ಎಂದು ಗೇಲಿ ಮಾಡಿದ್ದೀರಿ. ನಿಮ್ಮ ಸಚಿವರು ಮತ್ತು ಶಾಸಕರು ಕೋಟಿ ಕೋಟಿ ಲೂಟಿ ಮಾಡಿ ನಿರ್ಭೀತಿಯಿಂದ ಇದ್ದಾರೆ ಎಂದರೆ ಕರ್ನಾಟಕ ರಾಜ್ಯ ನಿಮ್ಮ ಪಕ್ಷದ ಎಟಿಎಂ ಎಂದು ಅರ್ಥೈಸಬಹುದಾ?
ನರೇಂದ್ರ ಮೋದಿ ನೇತೃತ್ವದ ಬಿಜೆಪಿಯಲ್ಲಿ ಎಲ್ಲಿಯ ವರೆಗೆ ಲಂಚದ ಹಣದಲ್ಲಿ ಪಾಲು ಬಿಜೆಪಿ ಹೈಕಮಾಂಡ್ ಗೆ ಸಂದಾಯವಾಗುತ್ತೋ ಅಲ್ಲಿಯ ವರೆಗೆ ಭ್ರಷ್ಟರು, ದುಷ್ಟರು ಎಲ್ಲರೂ ಸುರಕ್ಷಿತ ಎಂದು ತಿಳಿದುಕೊಳ್ಳಬಹುದೇ? #AnswerMadiModi ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ