HOME » NEWS » State » SIDDARAMAIAH SAYS YEDIYURAPPA WRONGLY CLAIMING GRAMA PANCHAYATH POLL VICTORY SHTV SNVS

ಗ್ರಾ.ಪಂ. ಚುನಾವಣೆ ಗೆಲುವು ಯಡಿಯೂರಪ್ಪನ ಹಗಲುಗನಸು; ಈಗಲೇ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಲಿ: ಸಿದ್ದರಾಮಯ್ಯ ಸವಾಲು

ಯಡಿಯೂರಪ್ಪ ಅವರ ಸಿಎಂ ಸ್ಥಾನ ಅಲುಗಾಡುತ್ತಿದೆ. ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಗ್ರಾ.ಪಂ. ಚುನಾವಣೆ ಗೆದ್ದಿದ್ದೇವೆಂದು ತಪ್ಪಾಗಿ ಹೇಳಿಕೊಳ್ಳುತ್ತಿದ್ಧಾರೆ ಎಂದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.

news18-kannada
Updated:December 31, 2020, 2:05 PM IST
ಗ್ರಾ.ಪಂ. ಚುನಾವಣೆ ಗೆಲುವು ಯಡಿಯೂರಪ್ಪನ ಹಗಲುಗನಸು; ಈಗಲೇ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಲಿ: ಸಿದ್ದರಾಮಯ್ಯ ಸವಾಲು
ಸಿದ್ದರಾಮಯ್ಯ
  • Share this:
ಬೆಂಗಳೂರು(ಡಿ. 31): ರಾಜ್ಯದ ಶೇ. 60ರಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ ಹೇಳಿಕೆಗೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ. ಇನ್ನೂ ಎಣಿಕೆಯೇ ಪೂರ್ಣಗೊಂಡಿಲ್ಲ. ನಾವೂ ಕೂಡ ನಂಬರ್ ಒನ್ ಅಂತ ಹೇಳಿಕೊಳ್ಳಬಹುದು. ಯಡಿಯೂರಪ್ಪ ಕುರ್ಚಿ ಉಳಿಸಿಕೊಳ್ಳಲು ಹೀಗೆ ಹೇಳುತ್ತಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚು ಗೆದ್ದಿರುವ ಮಾಹಿತಿ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಸಿಎಂ ಸುದ್ದಿಗೋಷ್ಠಿ ಆದ ಬೆನ್ನಲ್ಲೇ ಈ ಇಬ್ಬರು ಕೈ ಮುಖಂಡರು ಸುದ್ದಿಗೋಷ್ಠಿ ನಡೆಸಿ ತಮ್ಮ ವಿಚಾರ ಮಂಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮತ ಎಣಿಕೆ ಇನ್ನೂ ಸಂಪೂರ್ಣ ಮುಗಿದಿಲ್ಲ. ಸ್ಪಷ್ಟ ಚಿತ್ರಣ ಈಗಲೇ ಸಿಗುವುದಿಲ್ಲ. ನಾನೂ ಕೂಡ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಶೇ. 65ರಷ್ಟು ಗೆದ್ದಿದ್ದಾರೆ ಎಂದು ಹೇಳಿದರೆ ಹೇಗಿರುತ್ತದೆ? ಯಡಿಯೂರಪ್ಪ ಇನ್ನೂ ಹಗಲುಗನಸು ಕಾಣುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಅವರು ಜನರನ್ನು ಮಿಸ್​ಲೀಡ್ ಮಾಡುತ್ತಿದ್ದಾರೆ. ಯಡಿಯೂರಪ್ಪ ತಪ್ಪಾಗಿ ಮಾಹಿತಿ ತಿಳಿಸುತ್ತಿದ್ದಾರೆ. ಸಿಎಂ ಆಗಿ ಅವರು ಹಾಗೆ ಮಾಡಿದ್ದು ಸರಿಯಲ್ಲ ಎಂದು ಟೀಕಿಸಿದ್ದಾರೆ.

ಪಕ್ಷದ ಚಿಹ್ನೆ ಮೇಲೆ ಗ್ರಾ.ಪಂ. ಚುನಾವಣೆ ನಡೆಯುವುದಿಲ್ಲ. ಆದರೆ, ಇಲ್ಲಿ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ಕಾರ್ಯಕರ್ತರು ಮತ್ತು ಪಕ್ಷೇತರರು ಸ್ಪರ್ಧಿಸುತ್ತಾರೆ. ಗ್ರಾಮ ಪಂಚಾಯಿತಿಯ ಫಲಿತಾಂಶದ ಬಗ್ಗೆ ನಮ್ಮ ಬ್ಲಾಕ್ ಮತ್ತು ಬೂತ್ ಕಮಿಟಿ ಅಧ್ಯಕ್ಷರು ಹೇಳಬೇಕು. ಆಗ ಸ್ಪಷ್ಟ ಚಿತ್ರಣ ಸಿಗುತ್ತದೆ. ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಕಾಂಗ್ರೆಸ್ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ. ಮೀಸಲಾತಿ ಪ್ರಕಟವಾದ ನಂತರ ಯಾವ ಗ್ರಾಮ ಪಂಚಾಯಿತಿ ಯಾರಿಗೆ ಸಿಗುತ್ತದೆ ಎಂಬುದು ಗೊತ್ತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿಯ ಕೃಷಿಪರ ನೀತಿಗೆ ರೈತರ ಬೆಂಬಲ ಇರುವುದಕ್ಕೆ ಗ್ರಾ.ಪಂ. ಚುನಾವಣೆ ಗೆಲುವು ಸಾಕ್ಷಿ: ಸಿಎಂ ಯಡಿಯೂರಪ್ಪ

ಗ್ರಾ.ಪಂ. ಚುನಾವಣೆ ಫಲಿತಾಂಶ ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು ಯಡಿಯೂರಪ್ಪ ಹೇಳುತ್ತಾರೆ. ಅವರು ಈಗಲೇ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬರಲಿ. ನಾಳೆಯೇ ವಿಧಾನಸಭೆ ಚುನಾವಣೆ ನಡೆದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುರ್ಚಿ ಅಲುಗಾಡುತ್ತಿದೆ.  ತಮ್ಮ ಸಿಎಂ ಕುರ್ಚಿ ಉಳಿಸಿಕೊಳ್ಳಲು ಅವರು ಇಂಥ ಹೇಳಿಕೆ ನೀಡುತ್ತಿದ್ಧಾರೆ ಎಂದೂ ವಿಪಕ್ಷ ನಾಯಕ ಲೇವಡಿ ಮಾಡಿದ್ದಾರೆ.

ಡಿಕೆ ಶಿವಕುಮಾರ್ ಟೀಕೆ:ಯಡಿಯೂರಪ್ಪ ಅವರ ಗ್ರಾ.ಪಂ. ಗೆಲುವಿನ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಗ್ರಾಮ ಪಂಚಾಯಿತಿ ಚುನಾವವಣೆಯಲ್ಲಿ ಅಭ್ಯರ್ಥಿಗಳು ಈ ಪಕ್ಷದವರೇ ಅಂತ ಹೇಗೆ ಗುರುತಿಸುತ್ತೀರಾ? ಸಿಎಂ ಯಡಿಯೂರಪ್ಪಗೆ ನಾನೂ ಪಟ್ಟಿ ಕೊಡಬಲ್ಲೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಫಲಿತಾಂಶದ ಬಗ್ಗೆ ನನಗೆ ಸಮಾಧಾನ ಇದೆ. ಪಕ್ಷದ ಜಿಲ್ಲಾಧ್ಯಕ್ಷರಿಂದ ಸಂಪೂರ್ಣ ವರದಿ ತರಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: Grama Panchayat Result: ರಾಷ್ಟ್ರೀಯ ಪಕ್ಷಗಳ ಹಣ, ಅಧಿಕಾರದ ಹೊರತಾಗಿಯೂ ಜೆಡಿಎಸ್‌ ಗಮನಾರ್ಹ ಸಾಧನೆ ಮಾಡಿದೆ; ಹೆಚ್​.ಡಿ. ಕುಮಾರಸ್ವಾಮಿ

ಮುಂದೆ ಗ್ರಾಮ ಪಂಚಾಯತಿಗಳಲ್ಲಿ ಯಾರು ಅಧಿಕಾರ ಹಿಡಿಯಲಿದ್ದಾರೆ ಎನ್ನೋದು ನಿಮಗೆ ಗೊತ್ತಾಗಲಿದೆ. ಮೀಸಲಾತಿ ಬಳಸಿ ಬಳಸಿ ಗ್ರಾ.ಪಂ.ಗಳನ್ನ ಹಿಡಿಯಲು ಬಿಜೆಪಿ ಮುಂದಾಗಬಾರದು ಎಂದು ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ಧಾರೆ.

ಉಪಚುನಾವಣೆಗಳನ್ನ ಗೆದ್ದಿರುವ ಬಗ್ಗೆ ಯಡಿಯೂರಪ್ಪ ನೀಡಿದ ಹೇಳಿಕೆಗೂ ಡಿಕೆಶಿ ತಿರುಗೇಟು ನೀಡಿದ್ಧಾರೆ. ಆಡಳಿತವಿರುವ ಪಕ್ಷ ಉಪ ಚುನಾವಣೆ ಗೆಲ್ಲುವುದು ಸಹಜ. ನಮ್ಮ ಸರ್ಕಾರ ಇದ್ದಾಗ ಬೈ ಎಲೆಕ್ಷನ್ ಗೆದ್ದಿರುವ ಪಟ್ಟಿ ಕೊಡಲಾ? ಎಂದು ಪ್ರಶ್ನೆ ಮಾಡಿದ ಕೆಪಿಸಿಸಿ ಅಧ್ಯಕ್ಷರು, 2021ರ ವರ್ಷವು ಕಾಂಗ್ರೆಸ್ ಕಾರ್ಯಕರ್ತರಿಗೆ ಹೋರಾಟದ ವರ್ಷವಾಗಿರಲಿದೆ. ಮುಂದೆ ಪಕ್ಷ ಅಧಿಕಾರಕ್ಕೆ ತರಲು ಪಕ್ಷ ಸಂಘಟನಾತ್ಮಕವಾಗಿ ಹೋರಾಟ ಮಾಡಲಿದೆ ಎಂದು ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಸಂತೋಷ, ಶಾಂತಿಯಿಂದ ಮನೆಯಲ್ಲಿ ಇರಲಿ ಎಂದು ವ್ಯಂಗ್ಯ ಮಾಡಿದ್ದಾರೆ.

ವರದಿ: ಸಂಜಯ್ ಎಂ ಹುಣಸನಹಳ್ಳಿ
Published by: Vijayasarthy SN
First published: December 31, 2020, 1:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories