ನೆರೆ ಪರಿಹಾರದ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಎಸಗಿದೆ; ಸದನದಲ್ಲಿ ಕಿಡಿಕಾರಿದ ಸಿದ್ದರಾಮಯ್ಯ

2009ರ ಪ್ರವಾಹದ ಸಂತ್ರಸ್ತರಿಗೆ ನಿರ್ಮಾಣ ಮಾಡಿದ್ದ ಮನೆಗಳು ಸುಸಜ್ಜಿತವಾಗಿಲ್ಲ. ಎಲ್ಲಾ ಮನೆಗಳು ಪಾಳು ಬಿದ್ದಿವೆ ಈಗ ಸುಸಜ್ಜಿತವಾದ ಮನೆಗಳನ್ನು ನಿರ್ಮಿಸಿ ಕೊಡಬೇಕು. ಎಲ್ಲರಿಗೂ ಶೀಘ್ರದಲ್ಲಿ ಸೂಕ್ತ ಪರಿಹಾರ ನೀಡಬೇಕು ಎಂದು ಸದನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

MAshok Kumar | news18-kannada
Updated:October 10, 2019, 5:51 PM IST
ನೆರೆ ಪರಿಹಾರದ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಎಸಗಿದೆ; ಸದನದಲ್ಲಿ ಕಿಡಿಕಾರಿದ ಸಿದ್ದರಾಮಯ್ಯ
ಸಿದ್ದರಾಮಯ್ಯ
  • Share this:
ಬೆಂಗಳೂರು (ಅಕ್ಟೋಬರ್ 10); ನೆರೆ ಪರಿಹಾರದ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಎಸಗಿದೆ, ನೆರೆಯಿಂದ 38 ಸಾವಿರ ಕೋಟಿ ನಷ್ಟವಾಗಿದೆ ಎಂದು ಹೇಳಿದರೂ ಕೇಂದ್ರ ಸರ್ಕಾರ ಕೇವಲ 1,200 ಕೋಟಿ ಮಾತ್ರ ಬಿಡುಗಡೆ ಮಾಡಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

ಇಂದಿನ ಚಳಿಗಾಲದ ಅಧಿವೇಶನದಲ್ಲಿ ನಿಲುವಳಿ ಸೂಚನೆಯ ಮೇಲೆ ನೆರೆ ಪರಿಹಾರ ಕುರಿತ ಚರ್ಚೆಯ ವೇಳೆ ಆಡಳಿತರೂಢ ಪಕ್ಷದ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, “ಉತ್ತರ ಕರ್ನಾಟಕದ ನೆರೆಗೆ ಜನ ತತ್ತರಿಸಿಹೋಗಿದ್ದಾರೆ. ಅಂದಾಜು 1 ಲಕ್ಷ ಕೋಟಿ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ. ಸ್ವತಃ ಸಿಎಂ ಯಡಿಯೂರಪ್ಪನವರೇ 52 ಸಾವಿರ ಕೋಟಿ ನಷ್ಟ ಆಗಿದೆ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಆದರೂ, ಕೇಂದ್ರಕ್ಕೆ 38 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂದು ವರದಿ ಸಲ್ಲಿಸಿದ್ದಾರೆ.

ರಾಜ್ಯದಿಂದ 38 ಸಾವಿರ ಕೋಟಿ ನಷ್ಟವಾಗಿದೆ ಎಂದು ವರದಿ ಕೈಗೆ ಸೇರಿದ್ದರೂ ಸಹ ಕೇಂದ್ರ ಸರ್ಕಾರ ಕೇವಲ 1,200 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ಈ ಪೈಕಿ 350 ಕೋಟಿ ರಾಜ್ಯದ ಎಸ್​ಟಿಆರ್​ಎಫ್​ ಹಣ. ಅದನ್ನೂ ಸೇರಿಸಿ ಪರಿಹಾರ ಎಂದು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ರಾಜ್ಯಕ್ಕೆ ಅನ್ಯಾಯ ಎಸೆಗಿದ್ದಾರೆ. ಈ ಹಣದಿಂದ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಸಾಧ್ಯವಿಲ್ಲದಂತಹ ಸ್ಥಿತಿ ಉಂಟಾಗಿದೆ. ರಾಜ್ಯದಲ್ಲೂ ಬಿಜೆಪಿ ಸರ್ಕಾರವೇ ಇದ್ದಾಗ್ಯೂ ಕರ್ನಾಟಕಕ್ಕೆ ಅನ್ಯಾಯವಾಗಿರುವುದು ದುರದೃಷ್ಟಕರ” ಎಂದು ಅವರು ವಿಷಾಧ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ 2005 ಹಾಗೂ 2009ರಲ್ಲೂ ಪ್ರವಾಹ ಬಂದಿತ್ತು. ಈ ವೇಳೆ 2005 ಕೇವಲ ಪೋನ್ ಕರೆಯಲ್ಲೇ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ತತಕ್ಷಣಕ್ಕೆ 500 ಕೋಟಿ ಹಣ ರಾಜ್ಯಕ್ಕೆ ಬಿಡುಗಡೆ ಮಾಡಿದ್ದರು. 2009ರ ನೆರೆಯಲ್ಲಿ ಅಂದಾಜು 7 ಸಾವಿರ ಕೋಟಿ ನಷ್ಟ ಉಂಟಾಗಿತ್ತು. ಅಂದು ಸಿಎಂ ಯಡಿಯೂರಪ್ಪ. ಆದರೂ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ 1 ಸಾವಿರ ಕೋಟಿ ಹಣ ಬಿಡುಗಡೆ ಮಾಡಿದ್ದರು. ಆದರೆ, ಇಂದು ಹಣದ ಮೌಲ್ಯ ಅಧಿಕವಾಗಿದೆ, ನಷ್ಟ 5 ಪಟ್ಟು ಹೆಚ್ಚಾಗಿದೆ. ಅಲ್ಲದೆ, ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದ್ದು ಕೇವಲ 1200 ಕೋಟಿ ಪರಿಹಾರ ಹಣ ಬಿಡುಗಡೆ ಮಾಡ್ತಾರೆ ಎಂದರೆ ಏನು ಅರ್ಥ? ಎಂದು ಪ್ರಶ್ನೆ ಮಾಡುವ ಮೂಲಕ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದರು.

ಸಂತ್ರಸ್ತರನ್ನು ಸ್ಥಳಾಂತರಿಸಿ, ಸೂಕ್ತ ಪರಿಹಾರ ನೀಡಿ; ಸಿದ್ದರಾಮಯ್ಯ ಒತ್ತಾಯ

ನೆರೆ ಸಂತ್ರಸ್ತರ ಕುರಿತು ಮಾತನಾಡಿದ ಸಿದ್ದರಾಮಯ್ಯ, “ಉತ್ತರ ಕರ್ನಾಟಕದ ಹಲವಾರು ಗ್ರಾಮಗಳು ಪದೇ ಪದೇ ನೆರೆಗೆ ತುತ್ತಾಗುತ್ತಿದೆ, ಅಲ್ಲಿನ ಜನ ನೆರೆಯಿಂದ ಬೇಸತ್ತಿದ್ದಾರೆ. ನನ್ನ ಕ್ಷೇತ್ರದ ಬಾದಾಮಿಯ ಪಟ್ಟದಕಲ್ಲು ಗ್ರಾಮದ ಜನ ಸಂಪೂರ್ಣವಾಗಿ ತಮ್ಮನ್ನು ಅಲ್ಲಿಂದ ಸ್ಥಳಾಂತರಿಸುವಂತೆ ಮನವಿ ಮಾಡಿದ್ದಾರೆ. ಇನ್ನೂ ಹಲವಾರು ಗ್ರಾಮಗಳು ಇಂತಹ ಪರಿಸ್ಥಿತಿಯಲ್ಲಿದೆ. ಹೀಗಾಗಿ ಪದೇ ಪದೇ ನೆರೆಗೆ ಒಳಗಾಗುವ ಹಳ್ಳಿಗಳನ್ನು ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸಿ.

2009ರ ಪ್ರವಾಹದ ಸಂತ್ರಸ್ತರಿಗೆ ನಿರ್ಮಾಣ ಮಾಡಿದ್ದ ಮನೆಗಳು ಸುಸಜ್ಜಿತವಾಗಿಲ್ಲ. ಎಲ್ಲಾ ಮನೆಗಳು ಪಾಳು ಬಿದ್ದಿವೆ ಈಗ ಸುಸಜ್ಜಿತವಾದ ಮನೆಗಳನ್ನು ನಿರ್ಮಿಸಿ ಕೊಡಬೇಕು. ಎಲ್ಲರಿಗೂ ಶೀಘ್ರದಲ್ಲಿ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.ಇದನ್ನೂ ಓದಿ : ನೆರೆ ಪರಿಹಾರ ಕುರಿತ ಚರ್ಚೆಗೆ ನಿಲುವಳಿ ಸೂಚನೆ ಕೊಟ್ಟರೂ ಅವಕಾಶ ನೀಡಿಲ್ಲ; ಸಭಾಧ್ಯಕ್ಷ್ಯರ ನಡೆಗೆ ಸಿದ್ದರಾಮಯ್ಯ ಕಿಡಿ

First published: October 10, 2019, 5:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading