ಕಲಬುರಗಿ (ಫೆ.8): ಅವರ್ಯಾರು ನನ್ನ ಶಿಷ್ಯರಲ್ಲಾ. ಅವರೆಲ್ಲ ಈಗ ಬಿಜೆಪಿ ನಾಯಕರಾಗಿದ್ದಾರೆ. ಬೇರೆ ಪಕ್ಷದವರು ನನ್ನ ಶಿಷ್ಯರು ಹೇಗಾಗುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಈ ಹಿಂದೆ ಕಾಂಗ್ರೆಸ್ನಲ್ಲಿ ನಿಮ್ಮ ಕಟ್ಟಾ ಶಿಷ್ಯರಂತೆ ಇದ್ದವರು ಈಗ ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಸ್ಥಾನ ಪಡೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅವರೆಲ್ಲಾ ಈಗ ನಮ್ಮ ವಿರೋಧ ಪಕ್ಷದ ನಾಯಕರಾಗಿದ್ದಾರೆ. ನನ್ನ ಶಿಷ್ಯರಲ್ಲ ಎಂದರು.
ಇದೇ ವೇಳೆ ಸರ್ಕಾರದ ವಿರುದ್ಧ ಟೀಕಿಸಿದ ಅವರು, ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಯೊಂದಕ್ಕೂ ಹೈ ಕಮಾಂಡ್ ಅವಲಂಬಿಸಿದ್ದಾರೆ. ಖಾತೆ ಹಂಚಲಾರದಷ್ಟು ಅಸಮರ್ಥರಾಗಿದ್ದಾರೆ. ಪ್ರತಿಯೊಂದಕ್ಕೂ ಹೈಕಮಾಂಡ್ ಅಂತಾರೆ. ಸಚಿವ ಸಂಪುಟ ವಿಸ್ತರಣೆಯೊಂದೇ ಅಲ್ಲದೇ, ಖಾತೆ ಹಂಚಿಕೆಗೂ ಅವಲಂಬಿತರಾಗಿದ್ದಾರೆ. ಮುಖ್ಯಮಂತ್ರಿಗೆ ಯಾವುದೇ ಸ್ವಾತಂತ್ರ್ಯವಿಲ್ಲ. ರಾಜ್ಯದ 13 ಜಿಲ್ಲೆಗಳಿಗೆ ಪ್ರಾತಿನಿಧ್ಯತೆ ಸಿಕ್ಕಿಲ್ಲ. ಕಲ್ಯಾಣ ಕರ್ನಾಟಕ ಸೇರಿ ಪ್ರಾತಿನಿಧ್ಯತೆಯಿಲ್ಲ. ಸಾಮಾಜಿಕ ಸಮಾನತೆ ಕಾಪಾಡಲಾಗಿಲ್ಲ. ಇದರಿಂದ ಅಸಮಾಧಾನ ಹೆಚ್ಚಾಗುತ್ತದೆ. ಸರ್ಕಾರದ ಮೇಲೂ ಪರಿಣಾಮ ಬೀರುತ್ತದೆ ಎಂದರು.
ಕೆಪಿಸಿಸಿ ಅಧ್ಯಕ್ಷರ ನೇಮಕ ಕುರಿತು ಮಾತನಾಡಿದ ಅವರು, ಶೀಘ್ರದಲ್ಲಿ ಅಧ್ಯಕ್ಷರ ನೇಮಕ ಮಾಡಲಾಗುವುದು. ನೇಮಕ ಮಾಡುವಲ್ಲಿ ಸ್ವಲ್ಪ ವಿಳಂಬವಾಗಿದೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದೇವೆ. ಈ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು.
ಇದನ್ನು ಓದಿ: ಯಡಿಯೂರಪ್ಪ ಅತ್ಯಂತ ದುರ್ಬಲ ಸಿಎಂ - ಕೇಂದ್ರದ ಬಳಿ ಹಣ ಕೇಳುವ ತಾಕತ್ತಿಲ್ಲ ; ಸಿದ್ಧರಾಮಯ್ಯ ಕಿಡಿ
ಬಡ್ತಿ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಮಾತನಾಡಿದ ಅವರು, ಬಡ್ತಿ ಮೀಸಲಾತಿ ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟ ವಿಚಾರ. ಬಡ್ತಿ ಮೀಸಲಾತಿ ಕೊಡಬೇಡಿ ಎಂದು ಹೇಳಿಲ್ಲ. ಎಲ್ಲೂ ನಮ್ಮ ಕಾನೂನು ಸ್ಟ್ರಕ್ ಡೌನ್ ಮಾಡಿಲ್ಲ. ನಾವು ಮಾಡಿದ ಕಾನೂನು ಹಾಗೆಯೇ ಇದೆ. ಮೀಸಲಾತಿಯನ್ನು ತೆಗೆದು ಹಾಕಲಾಗಿಲ್ಲ. ಆದೇಶ ಪೂರ್ತಿಯಾಗಿ ಓದಿ ಉತ್ತರಿಸುತ್ತೇನೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ