ದೆಹಲಿಯಿಂದ ಸಿಎಂ ಯಡಿಯೂರಪ್ಪ ಎಷ್ಟು ಅನುದಾನ ತರ್ತಾರೆ ನೋಡೋಣ: ಸಿದ್ದರಾಮಯ್ಯ

ಪ್ರವಾಹ ಪರಿಹಾರ ಹಂಚಿಕೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಆಗಿದೆ. ಅದನ್ನು ಕೇಳುವ ಬದಲು ಸಿಎಂ ಯಡಿಯೂರಪ್ಪನವರು ಕೇಂದ್ರ ಹೇಳಿದ್ದಕ್ಕೆಲ್ಲಾ ಬಸವನ ತರ ತಲೆ ಅಲ್ಲಾಡಿಸುತ್ತಾರೆ. ರಾಜ್ಯಕ್ಕೆ ಆಗಿರುವ ಅನ್ಯಾಯದ ಕುರಿತು ಸಿಎಂ ಧ್ವನಿ ಎತ್ತಬೇಕು ಎಂದು ಸಿದ್ದರಾಮಯ್ಯ ಹೇಳಿದರು

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

  • Share this:
ಮೈಸೂರು (ಸೆ.18): ಕರ್ನಾಟಕ ರಾಜ್ಯಕ್ಕೆ ಪರಿಹಾರ ತೆಗೆದುಕೊಂಡು ಬರುತ್ತೇನೆ ಎಂದು ದೆಹಲಿಗೆ ಹೋಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಎಷ್ಟು ತರುತ್ತಾರೆ ಎಂಬ ಕುತೂಹಲ ಇದೆ. ಇದಕ್ಕಾಗಿ ಕಾದು ನೋಡುತ್ತೇವೆ. ಈ ಹಿಂದೆಯೇ ಅವರು ಪರಿಹಾರ ತರುವಲ್ಲಿ ವಿಫಲರಾಗಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ನಗರದಲ್ಲಿ ಮಾತನಾಡಿರುವ ಅವರು, ರಾಜ್ಯದಲ್ಲಿ ಸರ್ಕಾರ ಸಂಪೂರ್ಣ ಸತ್ತು ಹೋಗಿದೆ. ಇನ್ನು ಸಚಿವರು ಕ್ರಿಯಾಶೀಲರಾಗಿದ್ದಾರೆ ಎನ್ನುವ ಪ್ರಶ್ನೆಯೇ ಇಲ್ಲ. ರಾಜ್ಯ ಮಾತ್ರವಲ್ಲ ಕೇಂದ್ರ ಸರ್ಕಾರ ಕೂಡ ಆಡಳಿತದಲ್ಲಿ ವಿಫಲವಾಗಿದೆ. ಅದನ್ನೇ ಈ ಮುಂಚಿನಿಂದಲೂ ನಾನು ಹೇಳುತ್ತಿರುವುದು ಎಂದು ಅವರು ತಿಳಿಸಿದರು.  ಜಿಎಸ್ ಟಿ ಪರಿಹಾರವನ್ನು ಇದುವರೆಗೂ ಕೊಟ್ಟಿಲ್ಲ. ಇದನ್ನು ತುಂಬಿಕೊಳ್ಳಲು ಆರ್ ಬಿ ಐನಿಂದ ಸಾಲ ಪಡೆಯಲು ನಿರ್ಧರಿಸಿ ರಾಜ್ಯದ ಜನತೆಯನ್ನು ಸಾಲಗಾರರನ್ನಾಗಿ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಪ್ರವಾಹ ಪರಿಹಾರ ಹಂಚಿಕೆ ಮಾಡಿರುವ  ಕೇಂದ್ರ ಸರ್ಕಾರ, ನಾವು ಕೇಳಿದ ಹಣದಲ್ಲಿ ಶೇ.10 ರಷ್ಟು ಮಾತ್ರ ನೀಡಿದೆ. ಈ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಅದನ್ನು ಕೇಳುವ ಬದಲು ಅವರು ಹೇಳಿದ್ದಕ್ಕೆಲ್ಲಾ ಬಸವನ ತರ ತಲೆ ಅಲ್ಲಾಡಿಸುತ್ತಾರೆ. ರಾಜ್ಯಕ್ಕೆ ಆಗಿರುವ ಅನ್ಯಾಯದ ಕುರಿತು ಸಿಎಂ ಧ್ವನಿ ಎತ್ತಬೇಕು ಎಂದರು.

ಅಧಿವೇಶನಕ್ಕೆ ಸಕಲ ಸಿದ್ಧತೆ:

ಸೆ. 21ರಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯದ ಅತಿವೃಷ್ಟಿ, ಕೊರೋನಾ ಸೋಂಕು ನಿರ್ವಹಣೆ, ನೆರೆ ಪರಿಹಾರ, ಡಿಜೆ ಹಳ್ಳಿ ಪ್ರಕರಣ ಸೇರಿದಂತೆ ರಾಜ್ಯ ಸರ್ಕಾರದ ವೈಫಲ್ಯಗಳ ಕುರಿತು ಚರ್ಚೆಗೆ ಸಿದ್ದವಾಗಲಾಗಿದೆ. ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಒಂದು ಯಡಿಯೂರಪ್ಪ ಆದರೆ, ಮತ್ತೊಂದು ಅವರ ಮಗ ವಿಜಯೇಂದ್ರ. ಈ ಬಗ್ಗೆ ಕೂಡ ಸದನದಲ್ಲಿ ಗಮನಸೆಳೆಯಲಾಗುವುದು ಎಂದರು.

ಹಲವು ಮಸೂದೆಗಳ ಚರ್ಚೆ ನಡೆಸಬೇಕಿದ್ದು, 10ದಿನಗಳ ಸದನವನ್ನು ವಿಸ್ತರಣೆ ಮಾಡುವಂತೆ ಈ ಹಿಂದೆ ಸಿದ್ದರಾಮಯ್ಯ ಮನವಿ ಮಾಡಿದ್ದರು. ಆದರೆ, ಅವಧಿ ವಿಸ್ತರಣೆಗೆ ನಕಾರ ಸಿಕ್ಕ ಹಿನ್ನಲೆ ಸಿಗುವ ಸಮಯದಲ್ಲಿ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕುವ ಎಲ್ಲಾ ವಿಷಯಗಳ ಚರ್ಚೆಗೆ ಕಾಂಗ್ರೆಸ್​ ಸಜ್ಜಾಗಿದೆ. ಈಗಾಗಲೇ ಈ ಕುರಿತು ಸಭೆ ನಡೆಸಿರುವ ಸಿದ್ದರಾಮಯ್ಯ ಎಲ್ಲಾ ಕಾಂಗ್ರೆಸ್​ ಶಾಸಕರೊಂದಿಗೆ ಚರ್ಚೆ ನಡೆಸಿದ್ದು, ಅಧಿವೇಶನದಲ್ಲಿ ಪ್ರಸ್ತಾವಿಸ ಬೇಕಾದ  ವಿಚಾರ ಕುರಿತು ಚರ್ಚೆ ನಡೆಸಿದ್ದಾರೆ.

ಮೋದಿ ವಿರುದ್ಧ ವಾಗ್ದಾಳಿ

ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಪ್ರಧಾನಿ ಯುವಜನತೆಯನ್ನು ನಿರುದ್ಯೋಗಿಯನ್ನಾಗಿದ್ದಾರೆ. ಎಲ್ಲೂ ಅಭಿವೃದ್ಧಿಯಾಗಿಲ್ಲ. 6 ವರ್ಷದಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ, ಯುವಜನತೆಗೆ ಕೆಲಸವಿಲ್ಲದಂತೆ ಆಗಿದೆ. ಇದೇ ಕಾರಣ ಯುವಕರು ಅವರ ಹುಟ್ಟುಹಬ್ಬದಂದು ನಿರುದ್ಯೋಗ ದಿನ ಆಚರಿಸಿದ್ದಾರೆ ಎಂದರು.
Published by:Seema R
First published: