ಬೆಂಗಳೂರು (ಮಾ. 29): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸೆಕ್ಸ್ ಸಿಡಿ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸಿಡಿ ಯುವತಿಯ ಪೋಷಕರು ಇದೆಲ್ಲದರ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೈವಾಡವಿದೆ ಎಂದು ನೇರವಾಗಿ ಆರೋಪ ಮಾಡಿದ್ದಾರೆ. ಆದರೆ, ಆ ಯುವತಿ ಇದಕ್ಕೂ ಡಿಕೆ ಶಿವಕುಮಾರ್ಗೂ ಸಂಬಂಧವಿಲ್ಲ ಎಂದು ವಿಡಿಯೋ ಸಂದೇಶ ಕಳುಹಿಸುತ್ತಿದ್ದಾಳೆ. ಆಕೆ ಎಸ್ಐಟಿ ಅಥವಾ ನ್ಯಾಯಾಧೀಶರ ಮುಂದೆ ಪ್ರತ್ಯಕ್ಷವಾಗಿ ಹೇಳಿಕೆ ನೀಡುವವರೆಗೂ ಈ ಪ್ರಕರಣದ ಗೊಂದಲ ಬಗೆಹರಿಯುವ ಸಾಧ್ಯತೆಗಳು ಕಾಣುತ್ತಿಲ್ಲ. ಆರಂಭದಿಂದಲೂ ಆ ಯುವತಿಯ ಪರವಾಗಿ ಬ್ಯಾಟಿಂಗ್ ಮಾಡುತ್ತಿರುವ ಕಾಂಗ್ರೆಸ್ ಆಕೆಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸುತ್ತಲೇ ಇದ್ದಾರೆ. ಇಂದು ಮತ್ತೆ ಈ ಬಗ್ಗೆ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಸಿಡಿ ಪ್ರಕರಣದ ಯುವತಿಗೆ ರಮೇಶ್ ಜಾರಕಿಹೊಳಿಯಿಂದ ಜೀವ ಬೆದರಿಕೆಯಿದ್ದು, ಆಕೆಗೆ ಏನೇ ಆದರೂ ಅದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ರಾಜ್ಯ ಸರ್ಕಾರವೇ ಜವಾಬ್ದಾರಿ ಎಂದು ಎಚ್ಚರಿಸಿದ್ದಾರೆ.
ಜಾರಕಿಹೊಳಿ ಸಿಡಿ ಪ್ರಕರಣದ ಯುವತಿ ತನಗೆ ಪ್ರಾಣ ಭಯ ಇದೆ ಎಂದು ರಾಜ್ಯದ ಹೈಕೋರ್ಟ್ ಮುಖ್ಯನ್ಯಾಯಾಧೀಶರಿಗೆ ಬರೆದಿದ್ದಾರೆನ್ನಲಾದ ಪತ್ರ ಗಾಬರಿ ಹುಟ್ಟಿಸುವಂತಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ರಾಜ್ಯದಲ್ಲಿ ನಿಮ್ಮ ಸರ್ಕಾರ ಅಸ್ತಿತ್ವದಲ್ಲಿದೆಯೇ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸಂತ್ರಸ್ಥ ಯುವತಿ ಪ್ರಾರಂಭದ ಆಡಿಯೋದಲ್ಲಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದೆ ಎಂದು ಹೇಳಿದ್ದಳು, ಈಗ ತನಗೆ ಪ್ರಾಣಭಯ ಇದೆ ಎಂದು ಪತ್ರ ಬರೆದಿದ್ದಾಳೆ. ಆ ಯುವತಿಯ ಪ್ರಾಣಕ್ಕೇನಾದರೂ ಅಪಾಯ ಎದುರಾದರೆ ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಇಡೀ ಬಿಜೆಪಿ ಸರ್ಕಾರವೇ ಅದಕ್ಕೆ ನೇರ ಹೊಣೆಯಾಗುತ್ತದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಹೈಕೋರ್ಟ್ ಮುಖ್ಯನ್ಯಾಯಾಧೀಶರಿಗೆ ಸಂತ್ರಸ್ಥೆ ಯುವತಿ ಬರೆದ ಪತ್ರದಲ್ಲಿ ಎಸ್.ಐ.ಟಿ ಮೇಲೆಯೇ ಅಪನಂಬಿಕೆ ವ್ಯಕ್ತಪಡಿಸಿರುವುದು ಮಾತ್ರವಲ್ಲ, ಅವರು ಸಾಕ್ಷ್ಯನಾಶ ಮಾಡುತ್ತಿದ್ದಾರೆ, ತನ್ನ ವಿರೋಧಿಗಳ ಜೊತೆ ಷಾಮೀಲಾಗಿದ್ದಾರೆ ಎಂದೆಲ್ಲ ಆರೋಪಿಸಿರುವುದು ಗಂಭೀರವಾದ ವಿಷಯ. ಸಂತ್ರಸ್ಥ ಯುವತಿ ನಿರಂತರವಾಗಿ ವಿಡಿಯೋ, ಪತ್ರಗಳನ್ನು ಬಿಡುಗಡೆ ಮಾಡುತ್ತಿದ್ದರೆ, ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಪೊಲೀಸರು ನಿರಂತರವಾಗಿ ಸಭೆ ನಡೆಸುತ್ತಿದ್ದಾರೆ. ಇದರ ಫಲಿತಾಂಶ ಏನು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸಿಡಿ ಬಹಿರಂಗಗೊಂಡು 27 ದಿನಗಳು ಕಳೆದರೂ ಹಗರಣದ ಕೇಂದ್ರವ್ಯಕ್ತಿಯಾದ ಸಂತ್ರಸ್ತ ಯುವತಿಯ ವಿಚಾರಣೆ ನಡೆಸಲು ಸಾಧ್ಯವಾಗದ ಪೊಲೀಸರ ವೈಫಲ್ಯಕ್ಕೆ ಯಾರು ಹೊಣೆ ? ಬಿಜೆಪಿ ಸರ್ಕಾರದ ಮೇಲೆ ಪ್ರಭಾವ ಬೀರುತ್ತಿರುವವರು ಯಾರು? ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕುಸಿದು ಬಿದ್ದಿರುವುದಕ್ಕೆ ಬೇರೆ ಸಾಕ್ಷಿ ಬೇಕೇ? ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಅಜ್ಞಾತ ಸ್ಥಳದಿಂದಲೇ 5 ವಿಡಿಯೋ ಸಂದೇಶ ಕಳುಹಿಸಿರುವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿ ಇಂದು ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗುವ ಸಾಧ್ಯತೆಯಿದೆ. ಎಸ್ಐಟಿಯಿಂದ ನೋಟಿಸ್ ನೀಡಿದರೂ ವಿಚಾರಣೆಗೆ ಬಾರದೆ ತಲೆಮರೆಸಿಕೊಂಡಿರುವ ಯುವತಿ ತನ್ನ ವಕೀಲರ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಿದ್ದಾರೆ. ನನ್ನ ತಂದೆ-ತಾಯಿ ಎದುರು ಎಸ್ಐಟಿಯವರ ಮುಂದೆ ವಿಚಾರಣೆಗೆ ಹಾಜರಾಗುತ್ತೇನೆ, ನಡೆದ ವಿಷಯವನ್ನು ಹೇಳುತ್ತೇನೆ ಎಂದು ವಿಡಿಯೋದಲ್ಲಿ ಹೇಳಿದ್ದ ಯುವತಿ ಮತ್ತೆ ಇದ್ದಕ್ಕಿದ್ದಂತೆ ವರಸೆ ಬದಲಿಸಿದ್ದರು. ನ್ಯಾಯಾಧೀಶರ ಎದುರು ನಾನು ನನ್ನ ಹೇಳಿಕೆ ನೀಡುತ್ತೇನೆ, ಅದಕ್ಕೆ ಅವಕಾಶ ಮಾಡಿಕೊಡಿ ಎಂದು ತನ್ನ 5ನೇ ವಿಡಿಯೋದಲ್ಲಿ ಮನವಿ ಮಾಡಿದ್ದರು. ಅದರಂತೆ ಆಕೆ ಇಂದು ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ, ಹೇಳಿಕೆ ದಾಖಲಿಸುವ ಸಾಧ್ಯತೆಯಿದೆ.
ಇದರ ನಡುವೆ, ಅಶ್ಲೀಲ ಸಿಡಿ ಪ್ರಕರಣದ ಯುವತಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಬರೆದ ಪತ್ರವೊಂದು ವೈರಲ್ ಆಗುತ್ತಿದೆ. ನಿಮ್ಮ ಮೇಲುಸ್ತುವಾರಿಯಲ್ಲಿ ಎಸ್ಐಟಿ ತನಿಖೆ ಆಗಬೇಕು. ರಮೇಶ್ ಜಾರಕಿಹೊಳಿ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಪೋಷಕರಿಂದ ಬಲವಂತವಾಗಿ ಹೇಳಿಕೆ ಪಡೆಯಲಾಗಿದೆ. ಅವರು ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಾರೆಂದು ಇ-ಮೇಲ್ ಮೂಲಕ ಹೈಕೋರ್ಟ್ ನ್ಯಾಯಾಧೀಶರಿಗೆ ಯುವತಿ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ