ಬೆಂಗಳೂರು: ಪ್ರಧಾನಿ ಮೋದಿ (PM Modi) ಮುಂದೆ ಸಿಎಂ ಬೊಮ್ಮಾಯಿ ನಾಯಿ ಮರಿ ರೀತಿ ಆಡ್ತಾರೆ ಅಂದಿದ್ದ ಸಿದ್ದರಾಮಯ್ಯ ಹೇಳಿಕೆ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ಹೊರಹಾಕ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ನಾಯಿ ನಿಯತ್ತಿನ ಪ್ರಾಣಿ, ಜನರಿಗೆ ನಾನು ನಿಯತ್ತಾಗಿ ಕೆಲಸ ಮಾಡ್ತಿದ್ದೀನಿ, ನಿಯತ್ತಿನ ಗುಣವನ್ನ ಜನರ ಪರವಾಗಿ ಉಳಿಸಿಕೊಂಡಿದ್ದೇನೆ ಅಂತ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಇನ್ನು ಸಿದ್ದರಾಮಯ್ಯ ವಿರುದ್ಧ ಸಚಿವ ಶ್ರೀರಾಮುಲು ಕೂಡ ಕಿಡಿಕಾರಿದ್ದಾರೆ.
'ಸೋನಿಯಾ ಎದುರು ಸಿದ್ದರಾಮಯ್ಯ ಇಲಿ, ಬೆಕ್ಕು, ಜಿರಳೆ ಹಾಗೆ!'
ರಾಜ್ಯದ ಮುಖ್ಯಮಂತ್ರಿಯನ್ನ ನಾಯಿಮರಿ ಅಂತ ಕರೆದಿರುವುದು ಸಿದ್ದರಾಮಯ್ಯ ಅವರ ಸಂಸ್ಕೃತಿ ತೋರಿಸುತ್ತದೆ. ಮುಂದಿನಪೀಳಿಗೆಗೆ ಮಾದರಿಯಾಗಬೇಕಿದ್ದ ಸಿದ್ದರಾಮಯ್ಯ ಈ ರೀತಿ ಮಾತನಾಡಿರುವುದು ದುರದೃಷ್ಟಕರ ಅಂತ ಶ್ರೀರಾಮುಲು ಹೇಳಿದ್ದಾರೆ. ಸಿದ್ದರಾಮಯ್ಯ ಬಹಿರಂಗವಾಗಿ ಬಿಜೆಪಿಯ ಕ್ಷಮೆ ಕೇಳಬೇಕು. ಸೋನಿಯಾ ಗಾಂಧಿ ಮುಂದೆ ಸಿದ್ದರಾಮಯ್ಯ ಇಲಿ. ಬೆಕ್ಕು. ಜಿರಳೆ ಹಾಗೆ ಇರುತ್ತಾರೆ ಅಂತ ನಾವು ಹೇಳಲ್ಲ ಅಂತಾ ಕಾಲೆಳೆದಿದ್ದಾರೆ.
ನಾಯಿ ಬಗ್ಗೆ ನನಗೆ ಗೌರವವಿದೆ ಎಂದ ಡಿಕೆ ಶಿವಕುಮಾರ್
ಇನ್ನೊಂದ್ಕಡೆ ಸಿದ್ದರಾಮಯ್ಯನವರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.. ಸಿದ್ದರಾಮಯ್ಯ ಮುಖ್ಯಮಂತ್ರಿಯನ್ನ ನಾಯಿ ಮರಿಗೆ ಹೋಲಿಸಿ ಮಾತನಾಡಿರೋದು ನನಗೆ ಗೊತ್ತಿಲ್ಲ. ಆದ್ರೆ ನಮ್ಮ ಮನೆಯಲ್ಲೂ ನಾಯಿ ಇದೆ. ನಾಯಿ ಬಗ್ಗೆ ನನಗೆ ಗೌರವ ಇದೆ. ಕಳ್ಳರನ್ನ ಹಿಡಿಯೋಕೆ ರಕ್ಷಣೆಗೆ ನಾಯಿಬೇಕು. ಕಷ್ಟ ಸುಖಕ್ಕೆ ನಾಯಿ ಬೇಕು. ನಾಯಿ ಬಹಳ ಪ್ರಿಯವಾದ ಪ್ರಾಣಿ ಅಂತ ಹೇಳಿದ್ದಾರೆ..
ಸಿದ್ದರಾಮಯ್ಯ ಏನು ಹೇಳಿದ್ರು?
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಏರ್ಪಡಿಸಿದ್ದ ಮಾಲವಿ ಜಲಾಶಯದ ವಿಜಯೋತ್ಸವ ಹಾಗೂ ಸಾರ್ಥಕ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಪರೇಷನ್ ಕಮಲ ಮೂಲಕ ನೀವು ಅಧಿಕಾರಕ್ಕೆ ಬಂದಿದ್ದೀರಿ. ಸಿಎಂ ಬೊಮ್ಮಾಯಿ ಅವರೇ ನಿಮಗೆ ತಾಕುತ್ತು ಇದ್ದರೆ, ರಾಜ್ಯಕ್ಕೆ ನೀಡಬೇಕಾಗಿರುವ 5,495 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ತೆಗೆದುಕೊಂಡು ಬನ್ನಿ. ಆದರೆ ರಾಜ್ಯದಿಂದ ಆಯ್ಕೆಯಾಗಿರುವ 25 ಜನ ಸಂಸದರಿದ್ದರೂ ಏನು ಪ್ರಯೋಜನ ಆಗುತ್ತಿಲ್ಲ. ನಿಮಗೆ ಧಮ್ ಇದ್ರೆ, ತಾಖತ್ ಇದ್ರೆ ಅನುದಾನ ತೆಗೆದುಕೊಂಡು ಬನ್ನಿ. ಬಸವರಾಜ ಬೊಮ್ಮಾಯಿ, ನರೇಂದ್ರ ಮೋದಿ ಅವರ ಮುಂದೇ ನಾಯಿ ಮರಿ ತರಾ ಇರುತ್ತೀರಿ. ಗಢಗಢ ಅಂತ ನಡುಗುತ್ತೀರಿ ಎಂದು ಕಿಡಿಕಾರಿದ್ದರು.
ಇದನ್ನೂ ಓದಿ: Belagavi Border Dispute: ನಮ್ಮ ಸಿಎಂ ಬೊಮ್ಮಾಯಿ ಬಹಳ ವೀಕ್ ಇದ್ದಾರೆ-ಮಾಜಿ ಸಿಎಂ ಸಿದ್ದರಾಮಯ್ಯ ಕಟು ಟೀಕೆ
ಬಿಜೆಪಿ ಸರ್ಕಾರ ಎಲ್ಲಾ ನೀರಾವರಿ ಯೋಜನೆಗಳನ್ನು ನಿರ್ಲಕ್ಷ್ಯ ಮಾಡಿದೆ. 2020ರ ಫೆಬ್ರವರಿಯಲ್ಲೇ ಮಹದಾಯಿ ಯೋಜನೆಯ ಗೆಟೆಟ್ ನೋಟಿಫಿಕೇಶನ್ ಆಗಿತ್ತು, ಆಗ 93 ಕೋಟಿ ರೂಪಾಯಿ ಇದ್ದ ಯೋಜನಾ ವೆಚ್ಚ ಈಗ 1,677 ಕೋಟಿ ರೂಪಾಯಿ ಏರಿದೆ. ನಮ್ಮ ಪಕ್ಷ ಮುಂದಿನ ಚುನಾವಣೆಯಲ್ಲಿ ಗೆಲುವು ಪಡೆದು ಅಧಿಕಾರಕ್ಕೆ ಬರುತ್ತದೆ. ನಮ್ಮ ಅವಧಿಯಲ್ಲಿ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದರು.
ಇನ್ನು, ತಮ್ಮ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದಂತೆ ಸ್ಪಷ್ಟನೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಸಿಎಂ ಬೊಮ್ಮಾಯಿ ಬಗ್ಗೆ ನಾನು ಲಘುವಾಗಿ ಮಾತನಾಡಿಲ್ಲ ಅಂತ ಸಮಜಾಯಿಷಿ ನೀಡಿದ್ದಾರೆ. ಪ್ರಧಾನಿ ಮುಂದೆ ನಾಯಿಮರಿ ಇದ್ದಂಗೆ ಇರ್ತಾರೆ ಅಂತ ಹೇಳಿದ್ದೇನೆ. ನಮ್ಮ ಹಳ್ಳಿ ಭಾಷೆಯಲ್ಲಿ ಹಾಗೇ ಮಾತನಾಡೋದು, ಅವರು ಧಮ್ ಇದ್ರೆ.. ತಾಕತ್ ಇದ್ರೆ ಅವರು ಮಾತಾಡಲ್ವಾ? ನೀವು ಅಧಿಕಾರಕ್ಕೆ ಬಂದ ಮೇಲೆ ಕೇಂದ್ರದಿಂದ ನಮಗೆ ಬರುವ ಪಾಲು ಕಡಿಮೆ ಆಯ್ತು. ಎಲ್ಲಿ ಹೋಯ್ತು ಬೊಮ್ಮಾಯಿ ನಿಮ್ಮ ತಾಕತ್ತು ಧಮ್ಮು ಎಂದು ಪ್ರಶ್ನಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ