ರಾಜ್ಯ ವಿಧಾನಸಭಾ ಚುನಾವಣೆ (Karnataka assembly elections) ಹತ್ತಿರ ಬರುತ್ತಿದೆ. ಮತದಾರರ (Voters) ಮನ ಸೆಳೆಯಲು ಎಲ್ಲಾ ಪಕ್ಷಗಳು ಶತ ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ ಪ್ರಣಾಳಿಕೆಯಲ್ಲಿ (manifesto) ಬಜರಂಗದಳ (Bajrang Dal) ನಿಷೇಧದ ಬಗ್ಗೆ ಪ್ರಸ್ತಾಪಿಸಿ ಕಾಂಗ್ರೆಸ್ (Congress) ಕೈಸುಟ್ಟಿಕೊಂಡಿದೆ. ಇದು ಕಾಂಗ್ರೆಸ್‌ಗೆ ಹೊಡೆತ ಅಂತಾನೇ ವಿಶ್ಲೇಷಿಸಲಾಗುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ನಾನೇ ಸಿಎಂ’ ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪುನರುಚ್ಚರಿಸುತ್ತಲೇ ಇದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಂದಿನ ಯಾರಾಗುತ್ತಾರೆ ಎಂಬ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರೇ ಉತ್ತರಿಸಿದ್ದಾರೆ. ನ್ಯೂಸ್ 18 ಪ್ರತಿನಿಧಿ ಹರೀಶ್ ಉಪಾಧ್ಯ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಈ ಬಾರಿ 130ಕ್ಕೂ ಅಧಿಕ ಸ್ಥಾನ ಗೆಲ್ಲುವ ವಿಶ್ವಾಸದ ಮಾತನ್ನಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ನ್ಯೂಸ್ 18 ಪ್ರತಿನಿಧಿ ಹರೀಶ್ ಉಪಾಧ್ಯ ನಡೆಸಿದ ಎಕ್ಸ್‌ಕ್ಲೂಸಿವ್ ಸಂದರ್ಶನದ ಪೂರ್ಣ ವಿವರ ಇಲ್ಲಿದೆ ಓದಿ…
ರಿಪೋರ್ಟರ್: ನೀವು ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೀರಿ. ಎಲ್ಲಾ ಕಡೆ ಹೇಗಿದೆ ಜನರ ರೆಸ್ಪಾನ್ಸ್?
ಸಿದ್ದರಾಮಯ್ಯ: ನಾನು ಹೋದಲ್ಲೆಲ್ಲಾ 15000ದಿಂದ 20000 ಜನ ಸೇರುತ್ತಾರೆ. ಬಿಜೆಪಿಯವರು ಹಣ ಕೊಟ್ಟು ಕರೆತರುತ್ತಿದ್ದಾರೆ, ಆದ್ರೆ ನಾನು ಹೋದ ಕಡೆ ಜನರು ಸ್ವಯಂಪ್ರೇರಿತರಾಗಿ ಬರುತ್ತಿದ್ದಾರೆ. ಈ ಬಾರಿ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಲು ಮತ್ತು ಕಾಂಗ್ರೆಸ್ ಅನ್ನು ಬಹುಮತದೊಂದಿಗೆ ಮರಳಿ ತರಲು ನಿರ್ಧರಿಸಿದ್ದಾರೆ ಎಂದು ಇದರಲ್ಲೇ ಗೊತ್ತಾಗುತ್ತೆ.
ರಿಪೋರ್ಟರ್: ಯೋಗಿ ಆದಿತ್ಯ ನಾಥ್ ಸೇರಿದಂತೆ ಬಿಜೆಪಿಯ ಹಲವು ರಾಷ್ಟ್ರೀಯ ನಾಯಕರು ಇಲ್ಲೇ ಠಿಕಾಣಿ ಹೂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾನೂನು ಬಲವಾಗಿರೋದ್ರಿಂದ ಅಲ್ಲಿ ಯಾವುದೇ ಗಲಭೆ ಇಲ್ಲ ಅಂತ ಯೋಗಿ ಹೇಳ್ತಾರೆ. ಇದಕ್ಕೆ ನಿಮ್ಮ ರಿಯಾಕ್ಷನ್ ಏನು?
ಸಿದ್ದರಾಮಯ್ಯ: ಇದಕ್ಕೆ ನಗಬೇಕು ಅನಿಸ್ತಿದೆ! ಯುಪಿಯಲ್ಲಿ ಯೋಗಿ ಸಿಎಂ ಆದ ಅವ್ರದ್ದೇ ಸಚಿವರ ಮಗ 6 ರೈತರ ಸಾವಿಗೆ ಕಾರಣನಾದ. ಇಂಥಾದ್ರಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಚೆನ್ನಾಗಿದೆ ಎಂದು ಅವರು ಹೇಳಬಹುದೇ?
ಇದನ್ನೂ ಓದಿ: Siddaramaiah: ಹಲವು 'ಭಾಗ್ಯ'ಗಳ ಸರದಾರ ಸಿದ್ದರಾಮಯ್ಯ! ಮಾಸ್ ಲೀಡರ್ ಹೆಜ್ಜೆ ಗುರುತು ಇಲ್ಲಿದೆ
ರಿಪೋರ್ಟರ್: ಮೋದಿ, ಅಮಿತ್ ಶಾ ಪ್ರಚಾರ ಗೇಮ್ ಜೇಂಜ್ ಆಗಲಿದೆ ಅಂತ ಬಿಜೆಪಿ ಹೇಳುತ್ತಿದೆ. ನೀವೇನಂತೀರಿ?
ಸಿದ್ದರಾಮಯ್ಯ: ಮೊದಲನೆಯದಾಗಿ ಮೋದಿಯವರು ಜನರ ಆಲೋಚನೆಯನ್ನು ಹೇಗೆ ಬದಲಾಯಿಸುತ್ತಾರೆ? ಈ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಜನರು ಎಲ್ಲೆಡೆ ಚರ್ಚಿಸುತ್ತಿದ್ದಾರೆ. ಇದು ಅತ್ಯಂತ ಭ್ರಷ್ಟ ಸರ್ಕಾರವಾಗಿದ್ದು, ಸರ್ಕಾರದ ಭ್ರಷ್ಟಾಚಾರ, ದುರಾಡಳಿತ ಮತ್ತು ಕಾರ್ಯವೈಖರಿಯಿಂದ ಜನರು ಬೇಸತ್ತಿದ್ದಾರೆ. ಇದು ಡಬಲ್ ಎಂಜಿನ್ ಸರ್ಕಾರ ಎಂದು ಅವರು ಹೇಳುತ್ತಾರೆ. ಡಬಲ್ ಇಂಜಿನ್ ಸರ್ಕಾರ ಎಲ್ಲಿದೆ? ಮೋದಿಯವರು ಸುಳ್ಳು ಹೇಳುತ್ತಿದ್ದಾರೆ. ಪ್ರಧಾನಿಯಾಗುವ ಮುನ್ನ ಅವರು ಏನೇ ಭರವಸೆ ನೀಡಿದ್ದರೂ ಒಂದೇ ಒಂದು ಪ್ರಮುಖ ಭರವಸೆಯನ್ನು ಈಡೇರಿಸಿಲ್ಲ.
ರಿಪೋರ್ಟರ್: ಧರ್ಮದ ಆಧಾರದ ಮೇಲೆ ಮೀಸಲಾತಿ ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಎಂದು ಅಮಿತ್ ಶಾ ಹೇಳುತ್ತಾರೆ. ಇದಕ್ಕೆ ನೀವೇನು ಹೇಳುತ್ತೀರಿ?
ಸಿದ್ದರಾಮಯ್ಯ: ಧಾರ್ಮಿಕ ನೆಲೆಯಲ್ಲಿ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ನೀವು ಭಾವಿಸಿದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬೇಕಿತ್ತು. ನೀವು ಅದನ್ನು ನ್ಯಾಯಾಲಯದಲ್ಲಿ ಏಕೆ ಪ್ರಶ್ನಿಸಿಲ್ಲ? ಬಿಜೆಪಿಯವರು ಸಾಮಾಜಿಕ ನ್ಯಾಯಕ್ಕೆ ಎಂದಿಗೂ ಬದ್ಧರಾಗಿಲ್ಲ, ಅವರು ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಗೆ ವಿರುದ್ಧವಾಗಿದ್ದಾರೆ. ವಿಪಿ ಸಿಂಗ್ ಅವರು ಮಂಡಲ್ ಆಯೋಗದ ವರದಿಯನ್ನು ಜಾರಿಗೆ ತರಲು ನಿರ್ಧಾರ ತೆಗೆದುಕೊಂಡಾಗ ಅದನ್ನು ವಿರೋಧಿಸಿದವರು ಯಾರು? 73 ಮತ್ತು 74 ನೇ ತಿದ್ದುಪಡಿಗಳು ಅಸ್ತಿತ್ವಕ್ಕೆ ಬಂದವು, ಹಿಂದುಳಿದ ಸಮುದಾಯಗಳಿಗೆ ಮತ್ತು ಮಹಿಳೆಯರಿಗೆ ಮೀಸಲಾತಿ, ಎಸ್‌ಸಿ ಮತ್ತು ಎಸ್‌ಟಿ ಮತ್ತು ಉಪಾಧ್ಯಕ್ಷ ಸ್ಥಾನಗಳಲ್ಲಿ ಮೀಸಲಾತಿ, ಇದನ್ನು ನ್ಯಾಯಾಲಯದಲ್ಲಿ ವಿರೋಧಿಸಿದವರು ಯಾರು? ಇದನ್ನು ವಿರೋಧಿಸಿದವರು ಬಿಜೆಪಿಯವರು. ಅದರ ಅರ್ಥವೇನು? ಅವರು ಮೀಸಲಾತಿ ವಿರೋಧಿಗಳು.
ರಿಪೋರ್ಟರ್: ನೀವು 5 ಗ್ಯಾರಂಟಿಗಳನ್ನು ನೀಡಿದ್ದೀರಿ. ಆದ್ರೆ ಕಾಂಗ್ರೆಸ್ ರಾಜ್ಯದ ಬೊಕ್ಕಸವನ್ನು ದಿವಾಳಿತನಕ್ಕೆ ತಳ್ಳುತ್ತದೆ ಎಂದು ಬಿಜೆಪಿ ಆರೋಪಿಸ್ತಿದೆಯಲ್ಲಾ?
ಸಿದ್ದರಾಮಯ್ಯ: ನಾನು 13 ಬಜೆಟ್ ಮಂಡಿಸಿದ್ದು, ರಾಜ್ಯದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಯಾವ ಕಾರ್ಯಕ್ರಮಗಳನ್ನು ಜಾರಿಗೊಳಿಸಬಹುದು, ಎಷ್ಟು ಹಣ ಬೇಕು ಎಂದು ಸುದೀರ್ಘವಾಗಿ ಚರ್ಚಿಸಿದ್ದೇವೆ. ಆ ಎಲ್ಲಾ ವಿಷಯಗಳನ್ನು ನಾವು ಚರ್ಚಿಸಿದ್ದೇವೆ ಮತ್ತು ಆ 5 ಖಾತರಿಗಳನ್ನು ಜಾರಿಗೆ ತರಲು ನಾವು ಬದ್ಧರಾಗಿದ್ದೇವೆ.
ರಿಪೋರ್ಟರ್: ನಿಮ್ಮ ವಿರುದ್ಧ ವಿ. ಸೋಮಣ್ಣ ಸ್ಪರ್ಧಿಸುತ್ತಿದ್ದಾರೆ. ನಿಮ್ಮನ್ನು ವರುಣಾದಲ್ಲಿ ಕಟ್ಟಿಹಾಕ್ತೀವಿ ಅಂತ ಬಿಜೆಪಿಯವ್ರು ಹೇಳ್ತಿದ್ದಾರಲ್ಲ?
ಸಿದ್ದರಾಮಯ್ಯ: ಎಲ್ಲಿ ಕಟ್ಟಿದರು? ನಾನು ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಇನ್ನೆರಡು ದಿನ ನಾನು ಅಲ್ಲಿಗೆ ಹೋಗುತ್ತಿದ್ದೇನೆ. ನನಗೇನೂ ಭಯವಿಲ್ಲ.
ರಿಪೋರ್ಟರ್: ಸರ್, ಈಗ ಮುಂದಿನ ಮುಖ್ಯಮಂತ್ರಿ ಚರ್ಚೆಗೆ ಬರೋಣ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರು?
ಸಿದ್ದರಾಮಯ್ಯ: ನಾವು ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಹೋಗುತ್ತೇವೆ, ಚುನಾಯಿತ ಶಾಸಕರು ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆ ಮಾಡಬೇಕಾಗುತ್ತದೆ. ಆ ನಂತರ ಹೊಸದಾಗಿ ಆಯ್ಕೆಯಾದ ಶಾಸಕರ ಅಭಿಪ್ರಾಯದ ಮೇರೆಗೆ ಸಿಎಂ ಯಾರು ಅಂತ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕು.
ರಿಪೋರ್ಟರ್: ನಿಮ್ಮ ಮತ್ತು ಡಿಕೆ ಶಿವಕುಮಾರ್ ನಡುವೆ ಸಿಎಂ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಹೈಕಮಾಂಡ್ ಚರ್ಚೆ ನಡೆಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದು ನಿಜಾನಾ?
ಸಿದ್ದರಾಮಯ್ಯ: ಆ ಬಗ್ಗೆ ಚರ್ಚೆ ಮಾಡಿಲ್ಲ, ಅದೇನಿದ್ದರೂ ಹೊಸದಾಗಿ ಆಯ್ಕೆಯಾದ ಶಾಸಕರಿಗೆ ಬಿಡುತ್ತೇವೆ.
ರಿಪೋರ್ಟರ್: ನಿಮ್ಮ ಮೊಮ್ಮಗನ ಬಗ್ದೆ ಹೇಳಿ
ಸಿದ್ದರಾಮಯ್ಯ: ಆತ ಇನ್ನೂ ಸೆಕೆಂಡ್ ಪಿಯುಸಿಯಲ್ಲಿದ್ದಾನೆ. ಇನ್ನೂ 8-9 ವರ್ಷ ರಾಜಕೀಯಕ್ಕೆ ಬರಲು ಸಾಧ್ಯವಿಲ್ಲ. ಶಿಕ್ಷಣದ ನಂತರ ಆತನಿಗೆ ಆಸಕ್ತಿ ಇದ್ದರೆ ರಾಜಕೀಯಕ್ಕೆ ಬರಲಿ. ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾಧಿಕಾರಿಗಳ ಮುಂದೆ ನಾಮಪತ್ರ ಸಲ್ಲಿಕೆ ಹೇಗೆ, ಏನು ಅಂತ ತಿಳಿಯುವ ಕುತೂಹಲದಿಂದ ವರುಣಾ ಕ್ಷೇತ್ರಕ್ಕೆ ಮೊಮ್ಮಗ ಬಂದಿದ್ದಾನೆ.
ಇದನ್ನೂ ಓದಿ: V Somanna: ಸಿದ್ದರಾಮಯ್ಯ ವಿರುದ್ಧ ಗೆದ್ದು ಬೀಗುತ್ತಾರಾ ಸೋಮಣ್ಣ? ಲಿಂಗಾಯತ ನಾಯಕನ ಏಳುಬೀಳು ಹೇಗಿತ್ತು?
ರಿಪೋರ್ಟರ್: ಜೆಡಿಎಸ್ ಅಪ್ಪ-ಮಗನ ಪಕ್ಷ ಎನ್ನುವ ನೀವು ಈಗ ಮೊಮ್ಮಗನನ್ನು ಪ್ರಚಾರಕ್ಕೆ ತರುತ್ತೀರಿ ಅಂತ ವಿರೋಧಿಗಳು ಹೇಳ್ತಿದ್ದಾರಲ್ಲ?
ಸಿದ್ದರಾಮಯ್ಯ: ಆತ ಇನ್ನೂ 17 ವರ್ಷದ ಹುಡ್ಗ, ಪಿಯು ಪರೀಕ್ಷೆ ಎದುರಿಸುತ್ತಿದ್ದಾನೆ. ಈಗಲೇ ಹೀಗೆಲ್ಲ ಹೇಳೋದು ಸರಿಯಲ್ಲ, ಬಿಜೆಪಿಯವರು
ರಿಪೋರ್ಟರ್: ಫೈನಲ್ ಆಗಿ ಹೇಳಿ, ಈ ಬಾರಿ ನಿಮ್ಮ ಪ್ರಕಾರ ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲುತ್ತೆ?
ಸಿದ್ದರಾಮಯ್ಯ: ಈ ಬಾರಿ ಕಾಂಗ್ರೆಸ್ ಕನಿಷ್ಠ 130 ಸ್ಥಾನಗಳನ್ನು ಗೆಲ್ಲಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ