ಬೆಂಗಳೂರು: ಮಾಡಾಳು ವಿರೂಪಾಕ್ಷಪ್ಪ (Madalu Virupakshappa) ಲಂಚದ ಪ್ರಕರಣವನ್ನು ದಿಕ್ಕು ತಪ್ಪಿಸಲು ಬಿಜೆಪಿ (BJP) ಸುಳ್ಳಿನ ಕಾರ್ಖಾನೆ ಹಿಂದೆ ಬಿದ್ದಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಲೂಟಿ ಮಾಡಿದ್ದಾರೆ” ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ (NR Ramesh) ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ದಾಖಲೆ (Documents) ಮೂಲಕವೇ ಉತ್ತರಿಸಿರುವ ಸಿದ್ದರಾಮಯ್ಯ, “ಕಾಫಿ ತಿಂಡಿ ಊಟಕ್ಕೆ ಖರ್ಚಾಗಿದ್ದು 200 ಕೋಟಿ ಅಲ್ಲ, 3 ಕೋಟಿ 26 ಲಕ್ಷ ರೂಪಾಯಿಗಳು ಮಾತ್ರ” ಅಂತ ಸ್ಪಷ್ಟನೆ ನೀಡಿದ್ದಾರೆ. ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದ ಅವಧಿಯಲ್ಲಿ ಕೇವಲ ಕಾಫಿ, ತಿಂಡಿ, ಬಿಸ್ಕೆಟ್ ಗಳ ಹೆಸರಿನಲ್ಲಿ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಲೂಟಿ ಮಾಡಿದ್ದಾರೆ ಅಂತ ಎನ್‌ಆರ್ ರಮೇಶ್ ಆರೋಪಿಸಿದ್ದರು. ಇದಕ್ಕೆ ಸಿದ್ದರಾಮಯ್ಯ ಇದೀಗ ದಾಖಲೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಸಿದ್ದರಾಮಯ್ಯ ಉತ್ತರಿಸಿದ್ದೇನು?
2013-14 ರಿಂದ 2017-18 ರವರೆಗೆ ಕಾಫಿ ತಿಂಡಿ ಸೇರಿದಂತೆ ಮುಖ್ಯಮಂತ್ರಿಗಳ ಕಛೇರಿಯು ಆತಿಥ್ಯಕ್ಕೋಸ್ಕರ ಖರ್ಚು ಮಾಡಿದ ದಾಖಲೆಗಳನ್ನು ಸರ್ಕಾರ ನನಗೆ ನೀಡಿದೆ. 13-5-2013 ರಿಂದ 30-01-2014 ರವರೆಗೆ 85.13 ಲಕ್ಷ ರೂಪಾಯಿಗಳು, 2014-15 ರಲ್ಲಿ 58.45 ಲಕ್ಷ ರೂಪಾಯಿಗಳು, 2015-16 ರಲ್ಲಿ 39.20 ಲಕ್ಷ ರೂಪಾಯಿಗಳು, 2016-17 ರಲ್ಲಿ 66.03 ಲಕ್ಷ ಮತ್ತು 2017-18 ರಲ್ಲಿ 77.26 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ ಅಂತ ಸಿದ್ದರಾಮಯ್ಯ ದಾಖಲೆ ನೀಡಿದ್ದಾರೆ.
“5 ವರ್ಷಗಳಲ್ಲಿ 3.26 ಕೋಟಿ ಖರ್ಚು”
5 ವರ್ಷಗಳ ನಮ್ಮ ಸಕಾರದ ಅವಧಿಯಲ್ಲಿ 3.26 ಕೋಟಿ ರೂಪಾಯಿಗಳನ್ನು ಮಾತ್ರ ಮುಖ್ಯಮಂತ್ರಿಗಳ ಕಚೇರಿಯ ಸಭೆಗಳಿಗೆ, ಜನತಾದರ್ಶನಗಳು ಸೇರಿದಂತೆ ಇತರೆ ಕಾರ್ಯಕ್ರಮಗಳಿಗೆ ಕಾಫಿ, ತಿಂಡಿ ಮತ್ತು ಊಟ ಮುಂತಾದವುಗಳಿಗೆ ಖರ್ಚಾಗಿದೆ ಅಂತ ಸಿದ್ದರಾಮಯ್ಯ ಪತಿಕ್ರಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
“ಬಿಜೆಪಿ ಸುಳ್ಳಿನ ಕಾರ್ಖಾನೆ”
200 ಕೋಟಿ ರೂ ಖರ್ಚು ಮಾಡಿದ್ದಾರೆ ಎಂದು ಸುಳ್ಳನ್ನು ಉತ್ಪಾದಿಸಿ ನಾಡಿನ ಜನತೆಗೆ ಬಿಜೆಪಿ ನಾಯಕು ದ್ರೋಹ ಬಗೆದಿದ್ದಾರೆ ಎಂದಿರುವ ಸಿದ್ದರಾಮಯ್ಯ, ಇದು ಐಪಿಸಿ ಕಲಂ 420 ಗೆ ಅರ್ಹವಾದ ಪ್ರಕರಣ. ಇಡೀ ಬಿಜೆಪಿಯೆ ಸುಳ್ಳಿನ ಕಾರ್ಖಾನೆ ಎಂಬುದನ್ನು ಪದೇ ಪದೇ ಪ್ರೂವ್ ಮಾಡುತ್ತಿದೆ ಅಂತ ಆರೋಪಿಸಿದ್ದಾರೆ.
“ಜನರನ್ನೇನು ಮೂರ್ಖರು ಎಂದುಕೊಂಡಿದ್ದೀರಾ?”
ಇಂದೂ ಸಹ ಮರಿ ಸುಳ್ಳಿನ ಮೆಶೀನ್ ಒಂದು ನಮ್ಮ ಸರ್ಕಾರದ ಅವಧಿಯಲ್ಲಿ ಕಾಫಿ ತಿಂಡಿಗೆಂದು 200 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂಬುದೊಂದು ಸುಳ್ಳನ್ನು ಉತ್ಪಾದಿಸಿ ಮೀಡಿಯಾಗಳಿಗೆ ಬಿಡುಗಡೆ ಮಾಡಿದೆ. ಈ ಬಿಜೆಪಿಗರು ಕರ್ನಾಟಕದ ಜನರನ್ನೇನು ಮೂರ್ಖರು ಎಂದುಕೊಂಡಿದ್ದಾರಾ? ಇವರಿಗೆ ಆತ್ಮಸಾಕ್ಷಿ ಎಂಬುದೇನಾದರೂ ಇದೆಯಾ? ಇವುಗಳೇನೂ ಇಲ್ಲದ ಕಾರಣಕ್ಕೆ ಇವರನ್ನು ಸುಳ್ಳಿನ ಕಾರ್ಖಾನೆಯ ಯಂತ್ರಗಳು ಎಂದು ಕರೆಯುವುದು ಅಂತ ಟೀಕಿಸಿದ್ದಾರೆ.
ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು
40 ಪರ್ಸೆಂಟ್ ಹಗರಣ, ಮಾಡಾಳ್ ವಿರೂಪಾಕ್ಷಪ್ಪನವರ ಹಗರಣದಿಂದ ಕಂಗಾಲಾಗಿರುವ ಬಿಜೆಪಿಯು ಇಂಥ ಸುಳ್ಳುಗಳನ್ನು ಉತ್ಪಾದಿಸಿಕೊಂಡು ಓಡಾಡುತ್ತಿದೆ. ವಾಸ್ತವ ಏನೆಂದರೆ, ಈ ಮಾಹಿತಿ ಬಿಜೆಪಿಯವರಿಗಿದ್ದರೂ ಸಹ ರಾಜ್ಯದ ಜನರಿಗೆ 200 ಕೋಟಿ ಖರ್ಚು ಮಾಡಿದ್ದಾರೆ ಎಂದು ಸುಳ್ಳು ಹೇಳುವ ಮೂಲಕ ನಾಡಿನ ಜನರಿಗೆ ದ್ರೋಹ ಎಸಗಿದ್ದಾರೆ ಅಂತ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ