ಅಭಿಪ್ರಾಯ: ವಿಪಕ್ಷ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದು ಬಿಜೆಪಿಯ ನಿಜವಾದ ಗೆಲುವು!

ಇಷ್ಟು ದಿನ ಮಾಡಿಕೊಳ್ಳದ ಆತ್ಮಾವಲೋಕನವನ್ನು ಈಗ ಮಾಡಿಕೊಳ್ಳಲೇಬೇಕಾಗಿದೆ. ಏಕೆಂದರೆ ಈಗ ಬಿಜೆಪಿ ಉಪ ಚುನಾವಣೆಗಳನ್ನು ಗೆದ್ದು ಗದ್ದುಗೆಯನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾತ್ರ ಮಾಡಿಲ್ಲ. ಬಿಜೆಪಿಯ ನಿಜವಾದ ಸಾಧನೆ ಸಿದ್ದರಾಮಯ್ಯ ಅವರಿಂದ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದ್ದು!

news18-kannada
Updated:December 11, 2019, 7:38 AM IST
ಅಭಿಪ್ರಾಯ: ವಿಪಕ್ಷ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದು ಬಿಜೆಪಿಯ ನಿಜವಾದ ಗೆಲುವು!
ಸಿದ್ದರಾಮಯ್ಯ ಹಾಗೂ ಸಿಎಂ ಯಡಿಯೂರಪ್ಪ
  • Share this:
ಉಪ ಚುನಾವಣಾ ಫಲಿತಾಂಶ ಸರ್ಕಾರವನ್ನು ಗಟ್ಟಿಗೊಳಿಸಿದೆ‌. ಇದರಿಂದಾಗಿ ಫಲಿತಾಂಶದ ಬಳಿಕ ಏನೇನೋ ಆಗಿಬಿಡಬಹುದೆಂದು ಅದಕ್ಕನುಗುಣವಾಗಿ ಮಾಡಿಕೊಂಡಿದ್ದ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗಿವೆ. ಹೀಗೆ ಮಾಡಬೇಕೆಂದು ಹಾಕಿಕೊಂಡಿದ್ದ ಪಟ್ಟಿಗಳ ಪೈಕಿ ಯಾವ ಪಕ್ಷವೂ ಆತ್ಮಾವಲೋಕನ ಎಂಬುದನ್ನು ಸೇರಿಸಿಕೊಂಡಿರಲಿಲ್ಲ. ಇದ್ದುದರಲ್ಲಿ ಬಿಜೆಪಿ ವಾಸಿ. ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳುವ ಸಾಹಸವನ್ನು ಮಾಡಿಯೇ ಇಲ್ಲ. ಆ ಪಕ್ಷಗಳ ಯಾರಾದರೂ ನಾಯಕರು ಆತ್ಮವಾಲೋಕನ ಮಾಡಿಕೊಂಡಿದ್ದೇವೆ ಎಂದು ಹೇಳಿದರೆ ಅದು ಅವರ ಆತ್ಮವಂಚನೆಯಷ್ಟೇ.

ಇಷ್ಟು ದಿನ ಮಾಡಿಕೊಳ್ಳದ ಆತ್ಮಾವಲೋಕನವನ್ನು ಈಗ ಮಾಡಿಕೊಳ್ಳಲೇಬೇಕಾಗಿದೆ. ಏಕೆಂದರೆ ಈಗ ಬಿಜೆಪಿ ಉಪ ಚುನಾವಣೆಗಳನ್ನು ಗೆದ್ದು ಗದ್ದುಗೆಯನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾತ್ರ ಮಾಡಿಲ್ಲ. ಬಿಜೆಪಿಯ ನಿಜವಾದ ಸಾಧನೆ ಸಿದ್ದರಾಮಯ್ಯ ಅವರಿಂದ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದ್ದು!

ಸಿದ್ದರಾಮಯ್ಯ ರಾಜೀನಾಮೆಗೆ ಇರುವ ಪ್ರಾಮುಖ್ಯತೆ ತಿಳಿಯಲು ಸ್ವಲ್ಪ ಹಿಂದೆ ಹೋಗಿ ಚುನಾವಣಾ ಪ್ರಚಾರ ವೈಖರಿ ನೋಡಬೇಕು. ಚುನಾವಣೆ ಉದ್ದಕ್ಕೂ ಬಿಜೆಪಿ 'ಸಿದ್ದರಾಮಯ್ಯ ಏಕಾಂಗಿ' ಎಂಬ ಅಸ್ತ್ರವನ್ನು ಬಳಸಿತ್ತು. ಆ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿಲ್ಲ ಎಂದು ಸಾರಿ ಹೇಳಿತು. ಅದಕ್ಕೂ ಮಿಗಿಲಾಗಿ 'ಸಿದ್ದರಾಮಯ್ಯ ಅವರೇ ಏಕಮಾತ್ರ ವೈರಿ' ಎಂಬುದನ್ನು ಬಹಳ ಸ್ಪಷ್ಟವಾಗಿ ರವಾನಿಸಿತ್ತು.

ನಿಜ, ಕರ್ನಾಟಕ ಬಿಜೆಪಿಯ ನಿಜವಾದ ಸವಾಲು ಸಿದ್ದರಾಮಯ್ಯ ಅವರೇ! ಇದು ಇನ್ನಷ್ಟು ಮನದಟ್ಟಾಗಬೇಕಾದರೆ ಇನ್ನಷ್ಟು ಹಿಂದಕ್ಕೆ ನೋಡಬೇಕು. 2018ರ ವಿಧಾನಸಭಾ ಚುನಾವಣೆಯಲ್ಲಿ 'ಸಿದ್ದರಾಮಯ್ಯ ಸಮಾಜವಿಘಟಕ' ಎಂದು ಬಿಂಬಿಸಲಾಯಿತು. ಲಿಂಗಾಯತ ಮತ್ತು ವೀರಶೈವ ಸಮಾಜ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಸಂದೇಶ ರವಾನಿಸಲಾಯಿತು. 2019ರ ಲೋಕಸಭಾ ಚುನಾವಣೆ ವೇಳೆ ಕುಟುಂಬ ರಾಜಕಾರಣವೇ ದೊಡ್ಡ ವಿಷಯವಾಗಿದ್ದರೂ 'ಸಿದ್ದರಾಮಯ್ಯ ಸಂಚು' ಎಂಬ ಸಂದೇಶವನ್ನೂ ಅಂದರೆ 'ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸಲು ಸಿದ್ದರಾಮಯ್ಯ ಅವರೇ ಸಂಚು ರೂಪಿಸಿದ್ದಾರೆ' ಎಂಬ ಸಂಗತಿಯನ್ನೂ ಸರಿದಾಡುವಂತೆ ಮಾಡಲಾಯಿತು.

ಇದನ್ನೂ ಓದಿ: ಸಿಎಂಗೆ ಕಗ್ಗಂಟಾದ ಸಂಪುಟ ವಿಸ್ತರಣೆ; ಬೆಳಗಾವಿಯ ಐವರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕಾದ ಸಂಕಟದಲ್ಲಿ ಬಿಎಸ್​ವೈ

'ಸಿದ್ದರಾಮಯ್ಯ ಏಕಾಂಗಿ', 'ಸಿದ್ದರಾಮಯ್ಯ ಸಮಾಜವಿಘಟಕ', 'ಸಿದ್ದರಾಮಯ್ಯ ಸಂಚು'... ಹೀಗೆ ಪ್ರತಿ ಬಾರಿ ಸಿದ್ದರಾಮಯ್ಯ ಮಾತ್ರ ಬಿಜೆಪಿಯ ಏಕಮೇವ ವೈರಿ. ಸಿದ್ದರಾಮಯ್ಯ ಅವರನ್ನು ಮಣಿಸಿದರೆ ಮಾತ್ರ ಕಾಂಗ್ರೆಸ್ ಅನ್ನು ಅಣಿಯ ಬಹುದೆಂಬುದು ಬಿಜೆಪಿಗೆ ಬಹಳ ಸ್ಪಷ್ಟವಾಗಿ ಗೊತ್ತಿದೆ. ಅದಕ್ಕಾಗಿ ಸಿದ್ದರಾಮಯ್ಯ ಕೇಂದ್ರೀಕೃತವಾಗಿಯೇ ತಂತ್ರ ಹೂಡಿ ಚುನಾವಣೆ ಗೆಲ್ಲುತ್ತಿದೆ.

ಇನ್ನೂ ಬಿಜೆಪಿ ಪ್ರತಿ ಬಾರಿಯೂ ಸಿದ್ದರಾಮಯ್ಯ ವಿರುದ್ಧ ಮಾತ್ರವೇ ಸೆಣಸಾಡುವುದಕ್ಕೂ ನಿಚ್ಛಳವಾದ ಕಾರಣವಿದೆ. ಏಕೆಂದರೆ ಸಿದ್ದರಾಮಯ್ಯ ಮಾತ್ರ ಪ್ರತಿ ಬಾರಿಯೂಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿರುವ ನಾಯಕ. ಬೇಕಿದ್ದರೆ ಸಿದ್ದರಾಮಯ್ಯ ಅವರನ್ನು ಹೊರತು ಪಡಿಸಿ ಬೇರೊಬ್ಬ ನಾಯಕನನ್ನು ಕಲ್ಪಿಸಿಕೊಳ್ಳಿ. ಕಾಂಗ್ರೆಸ್ ಮಾತ್ರವಲ್ಲ ಜೆಡಿಎಸ್ ಪಕ್ಷದಲ್ಲೂ. ರಾಜಕೀಯವಾಗಿ ಅಥವಾ ಸೈದ್ದಾಂತಿಕವಾಗಿ ಸಿದ್ದರಾಮಯ್ಯ ಅವರಷ್ಟು ಖಚಿತವಾಗಿ, ನಿಶ್ಚಿತವಾಗಿ ಬಿಜೆಪಿಯನ್ನು ಮತ್ತು ಅದರ ಮಾತೃ ಸಂಸ್ಥೆ ಆರ್ ಎಸ್ ಎಸ್ ಅನ್ನು ವಿರೋಧಿಸುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ.

ಬಿಜೆಪಿ ಪಾಲಿಗೆ ಸಿದ್ದರಾಮಯ್ಯ ಸೈದ್ದಾಂತಿಕವಾಗಿ ಎದುರಿಸಲಾರದ ಶತ್ರು. ಎದುರಿಸಲೇಬೇಕಾದ ಶತ್ರು. ಪ್ರಬಲ ಸಮುದಾಯವೊಂದರ ಬಲ ಇರುವ ನಾಯಕ. ಅದೇ ಕಾರಣಕ್ಕೆ ಸಿದ್ದರಾಮಯ್ಯ ವಿಷಯದಲ್ಲಿ ಎಷ್ಟೇ ವಿರೋಧವಿದ್ದರೂ ಅಳೆದು-ತೂಗಿಯೇ ಅಸ್ತ್ರ ಹೂಡಬೇಕಾಗಿದೆ. ರಾಜಕೀಯವಾಗಿ ದೇವೇಗೌಡರಷ್ಟೇ ಆಳ-ಅಗಲ ಗೊತ್ತಿರುವ ನಾಯಕ. ಹಾಗಾಗಿ ರಾಜಕೀಯವಾಗಿ ಕೂಡ ಸಿದ್ದರಾಮಯ್ಯ ಕೆಡವಲು ಎಣಿಸೆಣಿಸಿಯೇ ಹೆಜ್ಜೆ ಹೂಡಬೇಕು.

ಈಗ ಗೆದ್ದಿರುವ 12 ಅಲ್ಲ, ಅದರ ಅರ್ಧದಷ್ಟು ಸೀಟು ಗೆದ್ದಿದ್ದರೂ ಸರ್ಕಾರಕ್ಕೇನೂ ಸಂಚಕಾರ ಇರಲಿಲ್ಲ. ಆದರೆ ಕಾಂಗ್ರೆಸ್ ಗೌರವಯುತವಾಗಿ ಸೋತುಬಿಟ್ಟಿದ್ದರೆ ಸಿದ್ದರಾಮಯ್ಯ ಹುರುಪಿಗೇನೂ ಕೊರತೆ ಇರುತ್ತಿರಲಿಲ್ಲ. ಬಿಜೆಪಿ ಮತ್ತು ಯಡಿಯೂರಪ್ಪ ವಿರುದ್ಧ ಅದೇ ಹುಮ್ಮಸ್ಸಿನಲ್ಲಿ ಹೋರಾಡುತ್ತಿದ್ದರು. ಸಂಪುಟ ಪುನರ್ ರಚನೆ ಬಳಿಕ ಸರ್ಕಾರ ಮತ್ತು ಪಕ್ಷದೊಳಗೆ ನಿಧಾನವಾಗಿ ಆಗುವ ಸಂಚಲನಗಳು ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ಆಹಾರ ಒದಗಿಸುತ್ತಿದ್ದವು. ಇದರಿಂದಾಗಿ ಈಗಿನ ಸೀಟುಗಳ ಗೆಲುವಿಗಿಂತ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಕೊಡಿಸುವುದರಲ್ಲಿ ಸಿಕ್ಕಿರುವ ಜಯ ಬಿಜೆಪಿ ಪಾಲಿಗೆ ಬಹಳ ದೊಡ್ಡದು.

ಕಾಂಗ್ರೆಸಿಗೆ ಎಚ್ಚರಿಕೆಯ ಗಂಟೆ
ಒಬ್ಬನೇ ನಾಯಕನನ್ನು ನೆಚ್ಚಿಕೊಂಡರೆ ಎಂಥ ಫಲಿತಾಂಶ ಬರಬಹುದು ಎಂಬ ವಿಷಯದಲ್ಲಿ ಈ ಉಪ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಬಹಳ ದೊಡ್ಡ ಪಾಠ. ಸಿದ್ದರಾಮಯ್ಯ ಇಂದು ಪಕ್ಷದ ಆಸ್ತಿ, ಸಾಮರ್ಥ್ಯವೇ ಇರಬಹುದು‌. ಎಂದೆಂದೂ ಹೀಗೇ ಇರುವುದಿಲ್ಲ. ಏಕವ್ಯಕ್ತಿಯ ಆರಾಧನೆ, ಅವಲಂಬನೆ ಎಂದಿಗೂ ಸಾಧುವಲ್ಲ. ಪರ್ಯಾಯ ಹುಡಿಕೊಳ್ಳದಿದ್ದರೆ ಇದಕ್ಕಿಂತಲೂ ಕೆಟ್ಟ ಫಲಿತಾಂಶ ಕಟ್ಟಿಟ್ಟ ಬುತ್ತಿ.
First published:December 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ